Chikkamagaluru: ಕಾಫಿನಾಡ ಹುಡುಗ, ಚೀನಾ ಹುಡುಗಿ; ಚಿಕ್ಕಮಗಳೂರಲ್ಲಿ ನಡೀತು ಅದ್ಧೂರಿ ಕಲ್ಯಾಣ
ಅಪರೂಪದ ಸನ್ನಿವೇಶಕ್ಕೆ ಕಾಫಿನಾಡು ಸಾಕ್ಷಿಯಾಗಿದ್ದು, ಚೀನಾ ಯುವತಿಯ ಜೊತೆ ಚಿಕ್ಕಮಗಳೂರಿನ ಯುವಕನ ಅದ್ಧೂರಿ ವಿವಾಹ ನೆರವೇರಿದೆ. ಹಿಂದೂ ಸಂಪ್ರದಾಯಂತೆ ಮದುವೆ ಸಮಾರಂಭ ನಡೆದಿದ್ದು, ದೇಶ-ಭಾಷೆಯ ಅಡೆತಡೆ ಮೀರಿ ನಡೆದ ಈ ಪ್ರೇಮ ವಿವಾಹ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಸಾಂಸ್ಕೃತಿಕ ಸಮ್ಮಿಲನಕ್ಕೆ ಸಾಕ್ಷಿಯಾಯಿಗಿದೆ.

ಚಿಕ್ಕಮಗಳೂರು, ಜನವರಿ 23: ಈತ ಕಾಫಿನಾಡು ಚಿಕ್ಕಮಗಳೂರಿನ ಯುವಕ, ಆಕೆ ದೂರದ ಚೀನಾದ ಯುವತಿ. ವಿದೇಶದಲ್ಲಿ ವಿದ್ಯಾಭ್ಯಾಸದ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರ ಕಡೆಯವರ ಪೋಷಕರೂ ಮಕ್ಕಳ ಪ್ರೀತಿಯನ್ನು ಖುಷಿಯಿಂದ ಒಪ್ಪಿದ್ದು, ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನಡೆಸಿದ್ದಾರೆ. ಬಂಧು ಬಾಂಧವರ ಸಮ್ಮುಖದಲ್ಲಿ ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಮದುವೆ ಸಮಾರಂಭ ನೆರವೇರಿದೆ.
ಹಿಂದೂ ಸಂಪ್ರದಾಯದಂತೆ, ಶಾಸ್ತ್ರೋಕ್ತವಾಗಿ ಮದುವೆ
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡಿನ ಯುವಕ ರೂಪಕ್ ಮತ್ತು ಚೀನಾ ಮೂಲದ ಯುವತಿ ಜಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಓದುವಾಗ ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ. ಚೀನಾದಿಂದ ಮಗಳನ್ನ ಕರೆತಂದು ಆಕೆಯ ಹೆತ್ತವರು ರೂಪಕ್ಗೆ ದಾರೆ ಎರೆದು ಕೊಟ್ಟಿದ್ದಾರೆ. ವೀಶೇಷ ಅಂದ್ರೆ ಹಿಂದೂ ಸಂಪ್ರದಾಯದಂತೆ, ಶಾಸ್ತ್ರೋಕ್ತವಾಗಿ ಮದುವೆ ನಡೆದಿದೆ. ಅಪ್ಪಟ ಭಾರತೀಯ ಶೈಲಿಯಲ್ಲಿ ದಂಪತಿ ಕಂಗೊಳಿಸಿದ್ದು, ವರ ರೂಪಕ್ ಪಂಚೆ, ಶರ್ಟ್ನಲ್ಲಿ ಮಿಂಚಿದ್ರೆ, ವಧು ಜಡೆ ಚೀನಾದವಳಾದರೂ ಸೀರೆ ಉಟ್ಟಿದ್ದು ನೆರೆದಿದ್ದವರ ಹುಬ್ಬೇರಿಸಿದೆ.
ಇದನ್ನೂ ಓದಿ: ಬೆಣ್ಣೆ ನಗರಿ ಹುಡುಗಿಗೆ ಮನಸೋತ ನ್ಯೂಜಿಲೆಂಡ್ ಯುವಕ! ಅಪ್ಪಟ ಹಿಂದೂ ಸಂಪ್ರದಾಯದಂತೆ ದಾವಣಗೆರೆಯಲ್ಲಿ ನಡೀತು ಅದ್ದೂರಿ ವಿವಾಹ
ಭಾರತೀಯ ಸಂಪ್ರದಾಯವನ್ನು ಯುವತಿ ಮೆಚ್ಚಿದ್ದು, ಚಿಕ್ಕಮಗಳೂರಿನ ಸೌಂದರ್ಯ ಕಂಡು ಆಕೆ ಮಾರು ಹೋಗಿದ್ದಾಳೆ. ವಧು ರೂಪಕ್ ಚಿಕ್ಕಮಗಳೂರಿನವರಾದರೂ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ. ಯುವತಿಯೂ ಸದ್ಯ ಅಲ್ಲೇ ನೆಲೆಸಿರುವ ಕಾರಣ, ದಂಪತಿಯ ಮುಂದಿನ ಜೀವನವನ್ನು ವಿದೇಶದಲ್ಲಿಯೇ ಕಳೆಯಲ್ಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ಇಂತಹ ಪ್ರೇಮ ವಿವಾಹಗಳು ರಾಜ್ಯದಲ್ಲಿ ಮೇಲಿಂದ ಮೆಲೆ ಸದ್ದು ಮಾಡ್ತಿವೆ. ಕಳೆದ ಡಿಸೆಂಬರ್ನಲ್ಲಿ ದಾವಣಗೆರೆ ಹುಡುಗಿಯೊಬ್ಬಳು ನ್ಯೂಜಿಲೆಂಡ್‌ನ ಯುವಕನ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ವಿಚಾರ ಭಾರಿ ಸುದ್ದಿಯಾಗಿತ್ತು. ಪ್ರೇಮಕ್ಕೆ ದೇಶ-ಭಾಷೆಯೆಂಬ ತಾರತಮ್ಯವಿಲ್ಲವೆಂದು ಮತ್ತೊಮ್ಮೆ ಸಾಭೀತಾಗಿತ್ತಲ್ಲದೆ, ಯುವಕ ವಿದೇಶಿಗನಾದರೂ ಅರಿಶಿಣ ಶಾಸ್ತ್ರ, ಧಾರೆ ಶಾಸ್ತ್ರ ಎಂದು ಅಪ್ಪಟ ಹಿಂದೂ ಸಂಪ್ರದಾಯದಂತೆ ಬೆಣ್ಣೆ ನಗರಿಯ ಹುಡುಗಿಯ ಕೈ ಹಿಡಿದಿದ್ದು ಸುದ್ದಿಯಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:20 pm, Fri, 23 January 26
