ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ
China's 'Manhattan Project' is on the way: ಚೀನಾ ದೇಶವು ಬಹಳ ಸಂಕೀರ್ಣ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬೇಡುವ ಇಯುವಿ ಮೆಷೀನ್ ಅನ್ನು ಅಭಿವೃದ್ಧಿಪಡಿಸಿದೆ. ಎಐ ಅಭಿವೃದ್ಧಿಗೆ ಬೇಕಾದ ಸೂಕ್ಷ್ಮ ಮತ್ತು ಶಕ್ತಿಶಾಲಿ ಚಿಪ್ಗಳನ್ನು ತಯಾರಿಸಲು ಈ ಇಯುವಿ ಲಿಥೋಗ್ರಫಿ ಮೆಷೀನ್ಗಳ ಅಗತ್ಯ ಇದೆ. ನೆದರ್ಲ್ಯಾಂಡ್ಸ್ ಮೂಲದ ಎಎಸ್ಎಂಎಲ್ ಕಂಪನಿಗೆ ಮಾತ್ರವೇ ತಿಳಿದಿರುವ ಈ ಟೆಕ್ನಾಲಜಿಯನ್ನು ಚೀನಾ ಸಿದ್ಧಿಸಿಕೊಂಡು ಈಗ ಇಯುವಿ ಪ್ರೋಟೋಟೈಪ್ ಸಿದ್ಧಪಡಿಸಿದೆ.

ನವದೆಹಲಿ, ಡಿಸೆಂಬರ್ 18: ಹಿಂದೆ ಕೋಲ್ಡ್ ವಾರ್ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನ ಸಿದ್ಧಿಸಿಕೊಳ್ಳಲು ಪೈಪೋಟಿ ನಡೆದಿತ್ತು. ಈಗ ಚಿಪ್ ಟೆಕ್ನಾಲಜಿಗೆ ಜಿದ್ದಾಜಿದ್ದಿ ನಡೆದಿದೆ. ಎಐ ಬಳಕೆಗೆ ಬೇಕಾದ ಬಹಳ ಸೂಕ್ಷ್ಮ ಚಿಪ್ಗಳನ್ನು ತಯಾರಿಸುವ ಇಯುವಿ ಲಿಥೋಗ್ರಫಿ ತಂತ್ರಜ್ಞಾನ ಹೊಂದಿರುವುದು ಯೂರೋಪ್ನ ಎಎಸ್ಎಂಎಲ್ (ASML) ಕಂಪನಿ ಮಾತ್ರವೇ. ಈ ಟೆಕ್ನಾಲಜಲಿ ಅಪ್ಪಿತಪ್ಪಿಯೂ ಚೀನಾ (China) ಕೈಗೆ ಹೋಗಬಾರದೆಂದು ಅಮೆರಿಕ ಹಲವು ವರ್ಷ ಕಾಲದಿಂದಲೂ ಯತ್ನಿಸುತ್ತಿದೆ. ಇದೇ ಹೊತ್ತಲ್ಲಿ ಅಮೆರಿಕಕ್ಕೆ ಶಾಕ್ ಎನಿಸುವಂತೆ, ಚೀನಾ ಇಯುವಿ ಲಿಥೋಗ್ರಫಿ ಮೆಷೀನ್ನ (EUV Lithography) ಪ್ರೋಟೋಟೈಪ್ ಅಭಿವೃದ್ಧಿಪಡಿಸಿದೆ. ಈ ಮೂಲಕ ಚಿಪ್ ರೇಸ್ನಲ್ಲಿ ಅಮೆರಿಕಕ್ಕೆ ಸರಿಸಮನಾಗಿ ಓಡಲು ಸಿದ್ಧ ಇರುವುದಾಗಿ ಚೀನಾ ಮೆಸೇಜ್ ರವಾನಿಸಿದೆ.
ಏನಿದು ಯುಎವಿ ಲಿಥೋಗ್ರಫಿ ಮೆಷೀನ್?
ಇಯುವಿ ಎಂದರೆ ಎಕ್ಸ್ಟ್ರೀಮ್ ಅಲ್ಟ್ರಾವಯ್ಲೆಟ್ ಲೈಟ್ (EUV- Extreme Ultra-Violet). ಅಂದರೆ, ಅತಿನೇರಳೆ ಬೆಳಕಿನಲ್ಲೇ ಅತಿರೇಕಕ್ಕೆ ಸೇರಿದ್ದು. ಐಸಿ ಚಿಪ್ಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಇದರ ಹಿಂದಿರುವ ವಿಜ್ಞಾನ ಸರಳವಾದರೂ ಅದನ್ನು ಕಾರ್ಯರೂಪಕ್ಕೆ ಇಳಿಸಲು ಬೇಕಾದ ತಂತ್ರಜ್ಞಾನ ಸಿದ್ಧಿಸುವುದು ತೀರಾ ಕಷ್ಟ. ನೆದರ್ಲ್ಯಾಂಡ್ಸ್ ಮೂಲದ ಎಎಸ್ಎಂಎಲ್ ಕಂಪನಿ ಮಾತ್ರವೇ ಈ ಟೆಕ್ನಾಲಜಿಯನ್ನು ಹೊಂದಿರುವುದು.
ಈ ಟೆಕ್ನಾಲಜಿ ಬಳಸಿ ಎಎಸ್ಎಂಎಲ್ ಸಂಸ್ಥೆಯು ಇಯುವಿ ಲಿಥೋಗ್ರಫಿ ಮೆಷೀನ್ ತಯಾರಿಸಿದೆ. ಎನ್ವಿಡಿಯೋ, ಇಂಟೆಲ್ ಇತ್ಯಾದಿ ಅನೇಕ ಚಿಪ್ ತಯಾರಕ ಸಂಸ್ಥೆಗಳು ಇವೇ ಮೆಷೀನ್ ಬಳಸಿ ಉನ್ನತ ಮಟ್ಟದ ಮತ್ತು ಅತೀ ಸೂಕ್ಷ್ಮ ಮತ್ತು ಪ್ರಬಲ ಚಿಪ್ಗಳನ್ನು ತಯಾರಿಸುತ್ತವೆ.
ಇದನ್ನೂ ಓದಿ: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?
ಕೈಗೆ ಸಿಗದ ಟೆಕ್ನಾಲಜಿ; ಜಿದ್ದಿಗೆ ಬಿದ್ದ ಚೀನಾ
ಅಮೆರಿಕ, ಯೂರೋಪಿಯನ್ ಕಂಪನಿಗಳನ್ನು ಬಿಟ್ಟರೆ ಸ್ಯಾಮ್ಸುಂಗ್ ಮತ್ತು ಟಿಎಸ್ಎಂಸಿ (ತೈವಾನ್) ಕಂಪನಿಗಳಿಗೆ ಮಾತ್ರವೇ ಎಎಸ್ಎಂಎಲ್ನ ಇಯುವಿ ಲಿಥೋಗ್ರಫಿ ಮೆಷೀನ್ಗಳನ್ನು ಬಳಸುವ ಅಕ್ಸೆಸ್ ಇರುವುದು. 2010ರಲ್ಲಿ ಎಎಸ್ಎಂಎಲ್ ಈ ಮೆಷೀನ್ ಅಭಿವೃದ್ದಿಪಡಿಸಿದ್ದು. 2017ರಿಂದ ಇದರ ಕಮರ್ಷಿಯಲ್ ಉತ್ಪಾದನೆ ಶುರುವಾಗಿದ್ದು. 2019ರಲ್ಲಿ ಚೀನಾ ದೇಶವು ಇಯುವಿ ಮೆಷಿನ್ಗಳನ್ನು ಖರೀದಿಸಲು ಮುಂದಾಗಿತ್ತು. ಆದರೆ, ಅಮೆರಿಕಕ್ಕೆ ಇದನ್ನು ತಡೆಯಿತು.
ಆಗ ಚೀನಾ ಜಿದ್ದಿಗೆ ಬಿದ್ದಿತು. ಇಯುವಿ ಲಿಥೋಗ್ರಫಿ ಮೆಷೀನ್ ಅಭಿವೃದ್ಧಿಪಡಿಸಿಯೇ ತೀರುತ್ತೇವೆಂದು ಚೀನಾದವರು ಅಖಾಡಕ್ಕೆ ಅಡಿ ಇಟ್ಟೇ ಬಿಟ್ಟರು. ಇದು ಚೀನಾ ಪಾಲಿಗೆ ‘ಮ್ಯಾನ್ಹಾಟನ್ ಪ್ರಾಜೆಕ್ಟ್’ ಆಗಿಹೋಗಿತ್ತು. ಮ್ಯಾನ್ಹಾಟನ್ ಪ್ರಾಜೆಕ್ಟ್ ಹೆಸರು ಕೇಳಿರಬಹುದು. ಇದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸೋವಿಯತ್ ರಷ್ಯಾ ಹಾಗು ಜರ್ಮನಿಯನ್ನು ಹಿಂದಿಕ್ಕಲು ಅಮೆರಿಕವು ಮ್ಯಾನ್ಹಾಟನ್ ಪ್ರಾಜೆಕ್ಟ್ ಕೈಗೊಂಡಿತು. ಅದರಲ್ಲಿ ಯಶಸ್ವಿಯೂ ಆಯಿತು. ಈಗ ಚೀನಾ ಇಯುವಿ ತಂತ್ರಜ್ಞಾನ ಸಿದ್ಧಿಸಿಕೊಳ್ಳಲು ಕೈಗೊಂಡ ಯೋಜನೆಯನ್ನು ರೆಫರೆನ್ಸ್ ಆಗಿ ಚೀನಾದ ‘ಮ್ಯಾನ್ಹಾಟನ್ ಪ್ರಾಜೆಕ್ಟ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಓಮನ್ ಜೊತೆಗಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳೇನು?
ಈ ಟೆಕ್ನಾಲಜಿ ಪಡೆಯುವುದು ಚೀನಾಗೆ ಸುಲಭವಾಗಿರಲಿಲ್ಲ. ಇಯುವಿಗಿಂತ ಮುಂಚೆ ಎಎಸ್ಎಂಎಲ್ ಸಂಸ್ಥೆಯು ಡಿಯುವಿ ಮೆಷೀನ್ಗಳನ್ನು ತಯಾರಿಸಿತ್ತು. ಇದೂ ಕೂಡ ಅಲ್ಟ್ರಾವಯಲೆಟ್ ಕಿರಣಗಳನ್ನು ಬಳಸಿ ಚಿಪ್ ತಯಾರಿಸುವ ಟೆಕ್ನಾಲಜಿಯೇ. ಆದರೆ, ಇಯುವಿಯಷ್ಟು ಸೂಕ್ಷ್ಮ ಮತ್ತು ಪ್ರಬಲ ಚಿಪ್ ಅನ್ನು ಡಿಯುವಿ ಮೂಲಕ ತಯಾರಿಸಲು ಆಗುವುದಿಲ್ಲ. ಚೀನಾದವರು ಡಿಯುವಿ ಮೆಷೀನ್ನಲ್ಲೇ ಏನೇನೋ ಬದಲಾವಣೆ ಮಾಡಿಕೊಂಡು ಇಯುವಿ ತಯಾರಿಸಲು ನೋಡಿದರು. ಅದರಲ್ಲಿ ವಿಫಲವಾದರು.
ಡಿಯುವಿ ಇಟ್ಟುಕೊಂಡು ಇಯುವಿ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವ ಸತ್ಯ ಕಂಡುಕೊಂಡ ಚೀನೀಯರು, ಆರಂಭಿಕ ಹಂತದಿಂದಲೇ ಯುಇವಿಯನ್ನು ಅಭಿವೃದ್ಧಿಪಡಿಸುವುದೆಂದು ನಿರ್ಧರಿಸಿದರು. ಆಗ ಅವರಿಗೆ ಸಹಾಯಕ್ಕೆ ಸಿಕ್ಕವರು ಅದೇ ಎಎಸ್ಎಂಎಲ್ ಕಂಪನಿಯ ಮಾಜಿ ಉದ್ಯೋಗಿಗಳು. ಚೀನೀ ಮೂಲದ ಈ ಉದ್ಯೋಗಿಗಳನ್ನು ಇಟ್ಟುಕೊಂಡು ಬಹಳ ಕಸರತ್ತು ನಡೆಸಿ ಎಕ್ಸ್ಟ್ರೀಮ್ ಅಲ್ಟ್ರಾವಯಲೆಟ್ ಲಿಥೋಗ್ರಫಿಯ ಪ್ರೋಟೋಟೈಪ್ ಮೆಷೀನ್ ಅನ್ನು ಚೀನಾ ತಯಾರಿಸಿದೆ.
ಮೆಷೀನ್ ಮಾರಾಟ ತಡೆಯಬೇಡಿ ಎಂದು 2019ರಲ್ಲೇ ಎಚ್ಚರಿಸಿದ್ದರು ಎಎಸ್ಎಂಎಲ್ ಸಿಇಒ
2019ರಲ್ಲಿ ಚೀನಾ ದೇಶವು ಇಯುವಿ ಮೆಷೀನ್ ಅನ್ನು ಕೇಳಿದ್ದಾಗ ಅಮೆರಿಕ ತಡೆದಿತ್ತು. ಆ ಸಂದರ್ಭದಲ್ಲಿ ಎಎಸ್ಎಂಎಲ್ನ ಸಿಇಒ ಆಗಿದ್ದ ಪೀಟರ್ ವೆನ್ನಿಂಕ್ ಅವರು ಚೀನಾವನ್ನು ತಡೆಯಬೇಡಿ ಎಂದಿದ್ದರು. ಚೀನಾಗೆ ಈ ಮೆಷೀನ್ ಸಿಗದಿದ್ದರೆ ಅವರು ಹೇಗಾದರೂ ಮಾಡಿ ತಂತ್ರಜ್ಞಾನ ಅಭಿವೃದ್ಧಿಪಡಿಸಿಕೊಂಡೇ ತೀರುತ್ತಾರೆ ಎಂದು ಎಚ್ಚರಿಸಿದ್ದರು. ಅವರು ಹೇಳಿದಂತೆಯೇ ಈಗ ಆಗುತ್ತಿದೆ.
ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?
ಹಿಂದೆ ಮಾಡಲಾದ ಅಂದಾಜು ಪ್ರಕಾರ 2030ಕ್ಕೆ ಚೀನಾದವರು ಇಯುವಿ ಮೆಷೀನ್ ಮೂಲಕ ಚಿಪ್ ಉತ್ಪಾದನೆ ಆರಂಭಿಸಬಹುದು ಎನ್ನಲಾಗಿತ್ತು. ಈಗ ಅದರ ವೇಗ ನೋಡಿದರೆ 2028ಕ್ಕೆ ಮುನ್ನವೇ ಚಿಪ್ ತಯಾರಿಕೆ ಶುರುವಾಗಬಹುದು. ಇದು ಸಾಕಾರಗೊಂಡರೆ ಚೀನಾ ದೇಶ ಚಿಪ್ ತಯಾರಿಕೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Thu, 18 December 25




