ನವದೆಹಲಿ: ಕೊರೊನಾ ಕಾಟದಿಂದ ಬಸವಳಿದ ಜನಕ್ಕೆ ಇಲ್ಲೊಂದು ಸಮಾಧಾನಕರ ಸಂಗತಿಯಿದೆ. ಇನ್ನೇನು ಕೊರೊನಾ ಎರಡನೇ ಅಲೆ ಮುಗಿಯುತ್ತಿದ್ದು, 3 ನೇ ಅಲೆ ಅಪ್ಪಳಿಸುವುದು ಖಚಿತ ಎಂಬಂತಿದೆ. ಆದರೆ ಬರಲಿರುವ ಮೂರನೆಯ ಅಲೆ ಮೊದಲೆರಡು ಅಲೆಗಳಷ್ಟು ತೀವ್ರವಾಗಿರುವುದಿಲ್ಲ ಅನ್ನುತ್ತಿದೆ ನಮ್ಮ ಇಂಡಿಯನ್ ಕೌನ್ಸಿಲ್ ಆಫ್ ರೀಸರ್ಚ್ ಸಂಸ್ಥೆ (ICMR) ಮತ್ತು ಲಂಡನ್ನ ಇಂಪೀರಿಯಲ್ ಕಾಲೇಜು ವಿಜ್ಞಾನಿಗಳ ಜಂಟೀ ಅಧ್ಯಯನ ವರದಿ. (Indian Council of Medical Research in collaboration with Imperial College of London)
ಗಮನಾರ್ಹವೆಂದರೆ ಈ ಅಧ್ಯಯನ ವರದಿಯು ಡೇಟಾ ಸೈನ್ಸ್ ಅಂದ್ರೆ ಹಿಂದಿನ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಡೆಸಿರುವ ಅಧ್ಯಯನವಾಗಿದೆ. ಅಂದರೆ ಯಾವುದೇ ಪ್ರಯೋಗಾಲಯಗಳ ಅಧ್ಯಯನದಿಂದ ಕೂಡಿದ್ದಲ್ಲ. ಕೊವಿಡ್ ಮೊದಲು ಮತ್ತು ಎರಡನೆಯ ಅಲೆ ಸಂದರ್ಭದ ಮಾಹಿತಿಗಳನ್ನು ಕಲೆ ಹಾಕಿ ನೀಡಿರುವ ಸಾರ ಇದಾಗಿದೆ (mathematical modelling analysis). ಇದೇ ಮೊದಲ ಬಾರಿಗೆ ಐಸಿಎಂಆರ್ ಕೊರೊನಾ ಅಲೆ ಬಗ್ಗೆ ಮುನ್ಸೂಚನೆ ನೀಡಿದೆ. ಈ ಹಿಂದಿನ ಒಂದು, ಎರಡು ಅಲೆಗಳ ಬಗ್ಗೆ ಮುನ್ಸೂಚನೆ ನೀಡಿರಲಿಲ್ಲ.
ಐಸಿಎಂಆರ್ ಮತ್ತು ಲಂಡನ್ ಇಂಪೀರಿಯಲ್ ಕಾಲೇಜು ವಿಜ್ಞಾನಿಗಳ ಅಧ್ಯಯನದ ಮುಖ್ಯಾಂಶಗಳು ಹೀಗಿವೆ:
ಕೊರೊನಾ ಮೂರನೆಯ ಅಲೆಯ ವೇಳೆ ಕೊರೊನಾ ಸೋಂಕಿತರಾದವರ ಪೈಕಿ ಶೇ. 30ರಷ್ಟು ಜನ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುವರು. ವೈರಸ್ ಮರು ಉತ್ಪಾದನೆ ದರ ಶೇಕಡಾ 4.5ರಷ್ಟು ಇರುತ್ತೆ. ಸೋಂಕಿತನೊಬ್ಬನಿಂದ 4-5 ಜನರಿಗೆ ಸೋಂಕು ತಗುಲುತ್ತೆ. ಇವೆಲ್ಲವೂ ಎರಡನೇ ಅಲೆ ಮುಗಿದ ತಕ್ಷಣ ಸಂಭವಿಸುತ್ತವೆ ಅನ್ನುತ್ತಿದೆ ಐಸಿಎಂಆರ್ ಮುಖ್ಯಸ್ಥ ಬಲರಾಮ ಭಾರ್ಗವ್ ಸಮಿತಿಯ ಅಧ್ಯಯನ ವರದಿ.
ಮೊದಲ ಅಲೆಗಿಂತ ಎರಡನೇ ಅಲೆ ನಾಲ್ಕು ಪಟ್ಟು ಹೆಚ್ಚು ತೀವ್ರವಾಗಿತ್ತು. ಆದರೆ ಎಲ್ಲರಿಗೂ ಲಸಿಕೆ ನೀಡುವ ಮೂಲಕ (vaccination coverage) 3ನೇ ಅಲೆಯ ತೀವ್ರತೆಯನ್ನು ತಗ್ಗಿಸಬಹುದು. 2ನೇ ಅಲೆ ಮುಗಿದ 3 ತಿಂಗಳೊಳಗೆ ಶೇ. 40ರಷ್ಟು ಲಸಿಕೆ ನೀಡಿರಬೇಕಾಗುತ್ತದೆ. ಎರಡು ಡೋಸ್ ಲಸಿಕೆ ನೀಡಿದರೆ 3ನೇ ಅಲೆಯ ತೀವ್ರತೆ ಶೇ. 55ರಷ್ಟು ಕಡಿಮೆಯಾಗುತ್ತದೆ.
ಜುಲೈ ಅಂತ್ಯಕ್ಕೆ 51.6 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ
ಇದನ್ನು ಮನಗಂಡು ಭಾರತ ಸರ್ಕಾರ ದೇಶಾದ್ಯಂತ ಲಸಿಕೆ ನೀಡಿಕೆ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಿದೆ. ಕಳೆದೊಂದು ವಾರದಲ್ಲೇ ಬರೋಬ್ಬರಿ 4 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಒಂದು ವಾರದಲ್ಲೇ 4 ಕೋಟಿ ಡೋಸ್ ಲಸಿಕೆ ನೀಡಿರುವುದು ಈವೆರೆಗಿನ ಭಾರತದ ಗರಿಷ್ಠ ಸಾಧನೆ. ಜೂನ್ 19ರಿಂದ ಜೂನ್ 25ರವರೆಗೆ ಒಂದು ವಾರದ ಅವಧಿಯಲ್ಲಿ 3.99 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ.
ಭಾರತದ ರಾಷ್ಟ್ರೀಯ ಲಸಿಕಾ ಅಭಿಯಾನದ ತಾಂತ್ರಿಕ ಸಲಹಾ ತಂಡದ ಮುಖ್ಯಸ್ಥ ಡಾಕ್ಟರ್ ನರೇಂದ್ರ ಕುಮಾರ್ ಅರೋರಾ ಹೇಳುವ ಪ್ರಕಾರ, ಜುಲೈ ತಿಂಗಳಲ್ಲಿ ಭಾರತಕ್ಕೆ 20-22 ಕೋಟಿ ಕೊರೊನಾ ಲಸಿಕೆ ಲಭ್ಯವಾಗಲಿದೆ. ಹೀಗಾಗಿ ಜುಲೈ ತಿಂಗಳಿನಲ್ಲಿ ನಿತ್ಯ 1 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದಿದ್ದಾರೆ. ಇನ್ನೂ ಆಗಸ್ಟ್ ತಿಂಗಳಿನಲ್ಲಿ 30 ಕೋಟಿ ಡೋಸ್ ಲಸಿಕೆ ಪೂರೈಕೆಯಾಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ.
ಕೇಂದ್ರ ಸರ್ಕಾರದ ಪ್ಲ್ಯಾನ್ ಪ್ರಕಾರ, ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ 94 ಕೋಟಿ ಜನರಿಗೂ ಕೊರೊನಾ ಲಸಿಕೆ ನೀಡಲು ಸಾಧ್ಯ. ಎಲ್ಲವೂ ಕೇಂದ್ರ ಸರ್ಕಾರದ ಪ್ಲ್ಯಾನ್ ಪ್ರಕಾರವೇ ನಡೆಯುತ್ತಿದೆ ಎಂಬ ವಿಶ್ವಾಸದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳಿದ್ದಾರೆ. ಕೇಂದ್ರ ಸರ್ಕಾರದ ಪ್ಲ್ಯಾನ್ ಪ್ರಕಾರ, ಜುಲೈ ಅಂತ್ಯಕ್ಕೆ 51.6 ಕೋಟಿ ಡೋಸ್ ಲಸಿಕೆ ನೀಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ.
(ICMR and london imperial college joint study says third wave not worrying if vaccinated vastly)
Published On - 5:22 pm, Sat, 26 June 21