Sand Mafia: ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

| Updated By: ರಾಜೇಶ್ ದುಗ್ಗುಮನೆ

Updated on: Feb 11, 2021 | 6:29 PM

Sand Mafia: ತುಂಗಭದ್ರಾ ನದಿಯಲ್ಲಿ ಉತ್ಕೃಷ್ಟವಾದ ಮರಳು ಇದೆ. ಹೀಗಾಗಿ ಗದಗ, ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಭಾರಿ ಬೇಡಿಕೆಯಿದೆ. ಇದರಿಂದ ಅಕ್ರಮ ದಂಧೆಕೋರರು ಯಾವುದೇ ಭಯವಿಲ್ಲದೇ ಮರಳು ಲೂಟಿ ನಡೆಸಿದ್ದಾರೆ.

Sand Mafia: ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಮರಳು ಸಂಗ್ರಹ
Follow us on

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ತೀರದ ಹಲವು ಕಡೆ ಅಕ್ರಮ ಮರಳು ಸಂಗ್ರಹ ಮಾಡುವ ಕೆಲಸ ಭರ್ಜರಿಯಾಗಿ ನಡೆದಿದೆ. ಹಗಲು, ರಾತ್ರಿ ಎನ್ನದೇ ಆಳೆತ್ತೆರದ ನೀರಿನಲ್ಲಿ ತೆಪ್ಪದ ಮೂಲಕ ಮರಳು ಲೂಟಿ ನಡೆಸಿದ್ದಾರೆ. ಅದರಲ್ಲೂ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಸುತ್ತಮುತ್ತಲಿ ತಗ್ಗು ಪ್ರದೇಶದಲ್ಲಿ ಅಕ್ರಮ ಮರಳು ಸಂಗ್ರಹ ಮಾಡಿದ್ದಾರೆ. ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ ಮರಳು ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.

ತುಂಗಭದ್ರಾ ನದಿಯಲ್ಲಿ ಉತ್ಕೃಷ್ಟವಾದ ಮರಳು ಇದೆ. ಹೀಗಾಗಿ ಈ ಮರಳಿಗೆ ಗದಗ, ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಭಾರಿ ಬೇಡಿಕೆಯಿದೆ. ಇದರಿಂದ ಅಕ್ರಮ ದಂಧೆಕೋರರು ಯಾವುದೇ ಭಯವಿಲ್ಲದೇ ಮರಳು ಲೂಟಿ ನಡೆಸಿದ್ದಾರೆ. ಆದರೆ ಈ ನದಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಇದೆ. ಹೀಗಾಗಿ ಮರಳು ತೆಗೆಯಲು ಕಷ್ಟಸಾಧ್ಯ. ಹೀಗಿದ್ದು ಅಕ್ರಮ ಮರಳು ದಂಧೆಕೋರರು ಮಾತ್ರ ತೆಪ್ಪದ ಮೂಲಕ ಎಗ್ಗಿಲ್ಲದೇ ಮರಳು ಲೂಟಿ ನಡೆಸಿದ್ದಾರೆ ಎನ್ನುವ ಆರೋಪ ಹಮ್ಮಿಗಿ ಗ್ರಾಮದಲ್ಲಿ ಕೇಳಿಬರುತ್ತಿದೆ.

ತೆಪ್ಪದಿಂದ ಮರಳು ತೆಗೆಯೋದು ಹೇಗೆ?
ದೊಡ್ಡ ಪ್ರಮಾಣದ ತೆಪ್ಪದಲ್ಲಿ ನಾಲ್ಕೈದು ಜನ ನಡು ನೀರಿನಲ್ಲಿ ಹೋಗುತ್ತಾರೆ. ಅಲ್ಲಿ ಗೊಬ್ಬರದ ಖಾಲಿ ಚೀಲಕ್ಕೆ ಉದ್ದವಾದ ಬಿದರಿನ ಕಟ್ಟಿಗೆ ಕಟ್ಟಿ ಅದರ ಮೂಲಕ ನೀರಿನಲ್ಲಿ ಮರಳು ಹೆಕ್ಕಿ ತೆಗೆಯುತ್ತಾರೆ. ತೆಪ್ಪ ತುಂಬಿದ ಬಳಿಕ ಅದನ್ನು ಟ್ರ್ಯಾಕ್ಟರ್​ಗಳ ಮೂಲಕ ಅಕ್ರಮವಾಗಿ ಖಾಲಿ ಜಾಗದಲ್ಲಿ ಸಂಗ್ರಹ ಮಾಡುತ್ತಾರೆ. ಅಲ್ಲಿಂದ ಟಿಪ್ಪರ್ ಮೂಲಕ ಬೇರೆ ಕಡೆಗೆ ಸಾಗಿಸುತ್ತಾರೆ.

ಗಣಿ, ಕಂದಾಯ, ಪೊಲೀಸ್ ಇಲಾಖೆ ನಡುವೆ ಸಮನ್ವಯ ಕೊರತೆ
ಅಧಿಕಾರಿಗಳು ಮನಸ್ಸು ಮಾಡಿದರೆ ಅಕ್ರಮ ಮರಳು ದಂಧೆ ತಡೆಯುವುದು ದೊಡ್ಡದಲ್ಲ. ಆದರೆ ಮುಂಡರಗಿ ತಾಲೂಕಿನಲ್ಲಿ ಗಣಿ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಇದೆ. ಹೀಗಾಗಿ ಅಕ್ರಮ ಮರಳು ಲೂಟಿ ಸಹಜವಾಗಿ ನಡೆಯುತ್ತಿದೆ. ಗಣಿ ಇಲಾಖೆ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಇರುತ್ತಾರೆ. ಆದರೆ, ತಹಶೀಲ್ದಾರ, ಪೊಲೀಸ್ ಅಧಿಕಾರಿಗಳು ಮುಂಡರಗಿ ಪಟ್ಟಣದಲ್ಲಿ ಇರುತ್ತಾರೆ. ತಹಶೀಲ್ದಾರ ಆಶಪ್ಪ ಪೂಜಾರ್ ಮತ್ತು ಸಿಪಿಐ ಸುಧೀರಕುಮಾರ ಬೆಂಕಿ ಮಾತ್ರ ಅಕ್ರಮಕ್ಕೆ ಬ್ರೇಕ್ ಹಾಕುತ್ತಿಲ್ಲ ಎನ್ನುವ ಅರೋಪವಿದೆ. ಈ ಅಧಿಕಾರಿಗಳು ಹಾಗೂ ಗಣಿ ಇಲಾಖೆ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯೇ ಅಕ್ರಮ ದಂಧೆಕೋರರಿಗೆ ವರವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಗಣಿ ಇಲಾಖೆ ಅಧಿಕಾರಿಗಳು ಹೇಳುವುದೇನು?
ಈ ಮೊದಲು ಗುಮ್ಮಗೋಳ ಗ್ರಾಮದ ಬಳಿಯು ತೆಪ್ಪದಲ್ಲಿ ಮರಳು ತೆಗೆಯುತ್ತಿದ್ದರು. ಅದನ್ನು ನಿಲ್ಲಿಸಿದ್ದೇವೆ. ಹಮ್ಮಿಗಿ ಗ್ರಾಮದ ಬಳಿಯೂ ನಡೆದಿದೆ ಎನ್ನುವ ಮಾಹಿತಿ ಇದೆ. ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆ ಸಮಯದಲ್ಲಿ ಯಾರೂ ಮರಳು ತೆಗೆಯುವುದು ಕಂಡು ಬಂದಿಲ್ಲ. ಅಕ್ರಮ ತಡೆಯಲು ಮುಂಡರಗಿ ತಹಶೀಲ್ದಾರ ಹಾಗೂ ಸಿಪಿಐಗೆ ಲಿಖಿತ ಪತ್ರ ಬರೆಯುತ್ತೇವೆ ಎಂದು ಗಣಿ ಇಲಾಖೆ ಹಿರಿಯ ಅಧಿಕಾರಿ ರಾಜೇಶ್ ತಿಳಿಸಿದರು.

ಗದಗದ ಹಮ್ಮಿಗಿ ಗ್ರಾಮದ ಬಳಿ ಮರಳು ಸಂಗ್ರಹ

ಅನ್ಯ ಜಿಲ್ಲೆಗಳ ಪರ್ಮಿಟ್.. ಕೃಷ್ಣೆ ಒಡಲಿಗೆ ಕನ್ನ, ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳಿಂದ ಮರಳು ದಂಧೆಕೋರರ ವಿರುದ್ಧ FIR

 

Published On - 6:28 pm, Thu, 11 February 21