ಅನ್ಯ ಜಿಲ್ಲೆಗಳ ಪರ್ಮಿಟ್.. ಕೃಷ್ಣೆ ಒಡಲಿಗೆ ಕನ್ನ, ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳಿಂದ ಮರಳು ದಂಧೆಕೋರರ ವಿರುದ್ಧ FIR
ಆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೀತಿತ್ತು. ಅನ್ಯ ಜಿಲ್ಲೆಗಳ ಮರಳು ಸಾಗಾಣಿಕೆ ಪರ್ಮಿಟ್ಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದ ಹೈಟೆಕ್ ಜಾಲವೊಂದನ್ನು ಆ ಜಿಲ್ಲೆಯ ಕಂದಾಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲ ಏಳು ಜನರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದ್ದಾರೆ.
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕು ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಪ್ರತಿನಿತ್ಯ ಮರಳು ದಂಧೆ ಜೋರಾಗೆ ನಡೆಯುತ್ತಿದೆ. ಈ ನಡುವೆ ಶಾಕಿಂಗ್ ಸುದ್ದಿ ಏನಪ್ಪ ಅಂದ್ರೆ, ಅನ್ಯ ಜಿಲ್ಲೆಗಳಲ್ಲಿ ಅಲ್ಪ ಹಣ ಪಾವತಿಸಿ ಪಡೆದ ಪರ್ಮಿಟ್ಗಳನ್ನ ದುರ್ಬಳಕೆ ಮಾಡ್ಕೊಂಡು ಕೃಷ್ಣೇ ಒಡಲಲ್ಲಿ ಮರಳನ್ನ ಕಳ್ಳ ಸಾಗಾಣಿಕೆ ಮಾಡ್ತಿದ್ದ ದೊಡ್ಡ ಜಾಲವನ್ನ ಕಂದಾಯ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಬೇರೆ ಜಿಲ್ಲೆಯಲ್ಲಿ ಪರ್ಮಿಷನ್, ಇನ್ನೊಂದು ಜಿಲ್ಲೆಯಲ್ಲಿ ದಂಧೆ..! ಅಂದಹಾಗೆ ಕೊಪ್ಪಳ ಹಾಗೂ ಗದಗ ಜಿಲ್ಲೆ ವ್ಯಾಪ್ತಿಯ ಖಾಸಗಿ ಜಮೀನುಗಳಲ್ಲಿ ಮರಳು ಲಿಫ್ಟ್ ಮಾಡೋದಕ್ಕೆ 1280 ರೂಪಾಯಿ ರಾಜಧನ ಪಾವತಿಸಲಾಗ್ತಿತ್ತು.ಇನ್ನು ಗದಗ ಮತ್ತು ಕೊಪ್ಪಳದಲ್ಲಿ ರಾಜಧನ ಪಾವತಿಸಿರುವ ಮರಳು ಸಾಗಾಣಿಕೆ ಪರ್ಮಿಟ್ ಪತ್ರಗಳನ್ನ ದೇವದುರ್ಗದಲ್ಲಿ ಜನರೇಟ್ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಹೀಗೆ ಕೊಪ್ಪಳ ಮತ್ತು ಗದಗ ಜಿಲ್ಲೆಯಲ್ಲಿ ಬಳಕೆಯಾಗಬೇಕಿದ್ದ ಮರಳು ಸಾಗಾಣಿಕೆ ಪರ್ಮಿಟ್ನ ದುರ್ಬಳಕೆ ಮಾಡಿಕೊಂಡು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೃಷ್ಣ ನದಿ ವ್ಯಾಪ್ತಿಯಲ್ಲಿ ಮರಳು ದೋಚುತ್ತಿದ್ರು.
ಹೀಗೆ ಬೇರೆ ಬೇರೆ ಜಿಲ್ಲೆ ಪರ್ಮಿಟಗಳನ್ನ ಬಳಸಿ ರಾಯಚೂರು ಜಿಲ್ಲೆಯಲ್ಲಿ ಬಿಂದಾಸ್ ಆಗಿ ಮರಳು ದೋಚುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಹಾಯಕ ಆಯುಕ್ತ ಸಂತೋಷ್ ಕುಮಾರ್ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ, ದಾಳಿ ನಡೆಸಿ ಸುಮಾರು 3 ಲಕ್ಷ ರೂಪಾಯಿ ಮೊತ್ತದ 307 ಮರಳು ಸಾಗಾಣಿಕೆ ಪರ್ಮಿಟ್ಗಳನ್ನ ಜಪ್ತಿ ಮಾಡಿದೆ.
ಹೈಟೆಕ್ ಮರಳು ದಂಧೆಯನ್ನ ದೇವದುರ್ಗ ಪಟ್ಟಣದ ಮೆಡಿಕಲ್ ಶಾಪ್ನಲ್ಲಿ ಬಿಂದಾಸಾಗಿ ನಡೆಸಲಾಗ್ತಿತ್ತಂತೆ. ಚನ್ನಗೌಡ, ಭರತ್ ಕುಮಾರ್, ಸಿದ್ದಲಿಂಗ ರೆಡ್ಡಿ ಸೇರಿದಂತೆ ಮೂವರು ದಂಧೆ ನಡೆಸ್ತಿದ್ರು ಎಂದು ಆರೋಪಿಸಲಾಗಿದೆ. 1 ಟಿಪ್ಪರ್ನಲ್ಲಿ 15 ಟನ್ ಮರಳು ಸಾಗಿಸಲು 15,000 ರೂಪಾಯಿ ರಾಜಧನ ಪಾವತಿಸಿ ಪರ್ಮಿಟ್ ಪಡೆಯಬೇಕು. ಆದ್ರೆ ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಖಾಸಗಿ ಜಮೀನಿನಲ್ಲಿದ್ದ ಮರಳು ಲಿಫ್ಟ್ ಮಾಡೋದಾಗಿ 1280 ರೂಪಾಯಿ ರಾಜಧನ ಪಾವತಿಸಿದ ಮರಳು ಸಾಗಾಣಿಕೆ ಪರ್ಮಿಟ್ ಪಡೆದು ಅದನ್ನ ದೇವದುರ್ಗದಲ್ಲಿ ಪ್ರಿಂಟ್ ತೆಗೆದು ದುರ್ಬಳಕೆ ಮಾಡಿಕೊಳ್ಳಲಾಗ್ತಿತ್ತು. ದಂಧೆಯಲ್ಲಿ ಶಾಮಿಲಾಗಿದ್ದ ಮೂವರು ಸೇರಿದಂತೆ ಮರಳು ಮಾರಾಟ ಮಾಡ್ತಿದ್ದ ಗುತ್ತಿಗೆದಾರರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಒಟ್ನಲ್ಲಿ ಹೈಟೆಕ್ ಮರಳು ದಂಧೆಯ ಜಾಲ ಬಯಲಿಗೆಳೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಬಿಸಿಲ ನಾಡು ರಾಯಚೂರಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ತುಂಗಭದ್ರಾ ನದಿಯಲ್ಲಿ ವ್ಯಕ್ತಿ ನೀರುಪಾಲು: ಮರಳು ದಂಧೆಗೆ ತೆಗೆದಿದ್ದ ಗುಂಡಿಯಲ್ಲಿ ಮುಳುಗಿ ಸಾವು ಶಂಕೆ