ಬೆಂಗಳೂರು: ಕೊರೊನಾ ಮಹಾಮಾರಿ ನಾಡಿನಲ್ಲಿ ಕಾಲಿಟ್ಟಿದ್ದೇ ಮನುಷ್ಯರೂ ಮಾಯವಾಗುತ್ತಿದ್ದಾರೆ, ಅದರೊಟ್ಟಿಗೆ ಮನುಷ್ಯತ್ವವವೂ ಮಾಯವಾಗುತ್ತಿದೆ. ಮಾನವೀಯತೆ, ಸಂವೇದನಾಶೀಲತೆ ತೋರದ ಅನೇಕ ಪ್ರಕರಣಗಳು ನಡೆದಿವೆ. ಇಲ್ಲೊಂದು ಉದಾಹರಣೆ ಹೇಳುವುದಾದರೆ ಬೆಂಗಳೂರಲ್ಲಿ ಆ್ಯಂಬುಲೆನ್ಸ್ ಚಾಲಕನ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಹಣ ಕೊಟ್ಟಿಲ್ಲ ಎಂದು ಮೃತದೇಹವನ್ನು ಆ್ಯಂಬುಲೆನ್ಸ್ ಚಾಲಕ ಫುಟ್‌ಪಾತ್ ಮೇಲೆ ಇಳಿಸಿ ಹೋಗಿದ್ದಾನೆ.
ಮೇ 24ರ ಮಧ್ಯ ರಾತ್ರಿ 1 ಗಂಟೆ ವೇಳೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೆಬ್ಬಾಳ ಚಿತಾಗಾರದ ಬಳಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಅನೂಜ್ ಸಿಂಗ್ ಎಂಬುವವರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಆಸ್ಪತ್ರೆಯಿಂದ ಚಿತಾಗಾರಕ್ಕೆ ಅನೂಜ್ ಶವ ಕೊಂಡೊಯ್ಯಲು ಆ್ಯಂಬುಲೆನ್ಸ್ ಚಾಲಕ ಶರತ್ ಗೌಡ 18 ಸಾವಿರ ರೂಪಾಯಿ ಕೇಳಿದ್ದಾನೆ.
ಅನೂಜ್ ಸಿಂಗ್ ಪತ್ನಿ ಬಳಿ ಚಾಲಕ ಶರತ್‌ಗೌಡ ಹಣ ಕೇಳಿದ್ದ. ಆದರೆ ಅನೂಜ್ ಸಿಂಗ್ ಪತ್ನಿ 3 ಸಾವಿರ ರೂಪಾಯಿ ನೀಡಿದ್ದರು. ಉಳಿದ ಹಣವನ್ನು ಹೊಂದಿಸಿ ಕೊಡುವುದಾಗಿಯೂ ಹೇಳಿದ್ದರು. ಆ ವೇಳೆಗೆ ಚಾಲಕ ಶರತ್ ಗೌಡ ಅನೂಜ್ ಮೃತದೇಹವನ್ನು ಹೆಬ್ಬಾಳದ ಚಿತಾಗಾರದ ಬಳಿಗೆ ತಂದಿದ್ದ. ಆಗ ಉಳಿದ ಹಣ ಕೊಡುವಂತೆ ಗಲಾಟೆ ಮಾಡಿದ್ದಾನೆ.
ವಿಪತ್ತು ನಿರ್ವಹಣೆ ಕಾಯಿದೆ ಅನುಸಾರ FIR ದಾಖಲು
ಕೈಯಲ್ಲಿ ಹಣವಿಲ್ಲ ಎಂದಿದ್ದಕ್ಕೆ ಶವವನ್ನು ಫುಟ್‌ಪಾತ್ ಮೇಲೆ ಇಳಿಸಿ ತೆರಳಿದ್ದಾರೆ ಚಾಲಕ ಮತ್ತು ಅವನ ಜೊತೆಗಾರ. ಹೆಬ್ಬಾಳ ಚಿತಾಗಾರದ ಉಸ್ತುವಾರಿ ನೋಡಿಕೊಳ್ಳುವವರು ನೀಡಿದ ದೂರಿನ ಅನ್ವಯ ಆ್ಯಂಬುಲೆನ್ಸ್ ಚಾಲಕ ಶರತ್‌ಗೌಡ ಮತ್ತು ನಾಗೇಶ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಅಮೃತಹಳ್ಳಿ ಠಾಣೆಯಲ್ಲಿ ವಿಪತ್ತು ನಿರ್ವಹಣೆ ಕಾಯಿದೆ 2005 ಅನುಸಾರ ಇಬ್ಬರ ವಿರುದ್ಧವೂ FIR ದಾಖಲಾಗಿದೆ. ದೂರು ಸಂಬಂಧ ಆ್ಯಂಬುಲೆನ್ಸ್ ಚಾಲಕ ಶರತ್ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
(Inhuman ambulance driver demands huge money to transport dead body of coronavirus patient lands in jail in hebbal)
ಬಿಡುವಿಲ್ಲದೇ ಆ್ಯಂಬುಲೆನ್ಸ್ ಸರ್ವಿಸ್, ಸುಸ್ತಾದ ಡ್ರೈವರ್ ಮರದ ಕೆಳಗೇ ಮಲಗ್ಬಿಟ್ರು | ಫೋಟೋ ವೈರಲ್