ಧಾರವಾಡ: ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಪ್ರತಿವರ್ಷ ಕಾಮಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮೂರು ದಿನಗಳವರೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಸೇರಿ ವಿಜೃಂಭಣೆಯಿಂದ ಕಾಮಣ್ಣನ ಹಬ್ಬ ಆಚರಿಸುತ್ತಾರೆ. ಕೊರೊನಾ ಎರಡನೇ ಅಲೆ ಆರಂಭವಾಗಿರುವುದರಿಂದ ಧಾರವಾಡ ತಾಲೂಕು ಕಚೇರಿಯಲ್ಲಿ ತಹಶೀಲ್ದಾರಾದ ಡಾ.ಸಂತೋಷ ಬಿರಾದಾರ ಅಧ್ಯಕ್ಷತೆಯಲ್ಲಿ ಹೋಳಿ ಹಬ್ಬದ ಆಚರಣೆ ಕುರಿತ ಪೂರ್ವಭಾವಿ ಸಭೆಯು ಮುಳಮುತ್ತಲ ಗ್ರಾಮಸ್ಥರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಜರುಗಿತು. ಪ್ರತಿ ವರ್ಷದಂತೆ ಮುಳಮುತ್ತಲ ಕಾಮಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ನಂತರ ಆಯೋಜಿಸುವ ಸಾಮೂಹಿಕ ಅನ್ನ ಪ್ರಸಾದ ವಿತರಣೆ, ಮೆರವಣಿಗೆ ಮಾಡದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಯಿತು. ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಳಮುತ್ತಲ ಗ್ರಾಮಕ್ಕೆ ಆಗಮಿಸದಂತೆ ಹಾಗೂ ರಾಜ್ಯ ಸರ್ಕಾರವು ನೀಡಿರುವ ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವಂತೆ ಆಯೋಜಕರಿಗೆ ತಿಳಿಸಿದರು. ಇನ್ನು ಸಿಬ್ಬಂದಿಗೆ ಮುಳಮುತ್ತಲ ಗ್ರಾಮದಲ್ಲಿ ಕೊವಿಡ್ ಮಾರ್ಗಸೂಚಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ತಹಶೀಲ್ದಾರ ಸೂಚಿಸಿದರು.
ಮುಳಮುತ್ತಲ ಕಾಮಣ್ಣನ ವಿಶೇಷತೆ ಏನು?
ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಡುವ ಕಾಮಣ್ಣನಿಗೆ ಐತಿಹಾಸಿಕ ಹಿನ್ನೆಲೆಯಿದೆ. ಹೀಗಾಗಿ ಅದನ್ನು ಯಾರಾದರೂ ಕದ್ದೊಯ್ದರೇ ಹೇಗೆ ಎನ್ನುವ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಅಲ್ಲಿ ಪಹರೆ ಕಾಯುತ್ತಾರೆ. ತಮ್ಮ ತಮ್ಮ ಮನೆಯಲ್ಲಿರುವ ಆಯುಧಗಳೊಂದಿಗೆ ಆ ಮೂರ್ತಿಯ ರಕ್ಷಣೆಗೆ ನಿಲುತ್ತಾರೆ. ಎಲ್ಲೆಡೆ ಹೋಳಿಯ ಸಂಭ್ರಮ, ಬಣ್ಣದೋಕುಳಿ ಇದ್ದರೆ ಈ ಗ್ರಾಮದಲ್ಲಿ ಮಾತ್ರ ಒಂದು ವಿಚಿತ್ರ ಆಚರಣೆ ರೂಢಿಯಲ್ಲಿದೆ. ಇಂಥದ್ದೊಂದು ವಿಶಿಷ್ಟ ಸಂಪ್ರದಾಯವನ್ನು ಹಲವಾರು ವರ್ಷಗಳಿಂದ ಇಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದ ಗರಡಿ ಮನೆಯ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರ ಮಂಟಪವನ್ನ ನಿರ್ಮಿಸಿ, ಸುತ್ತಲೂ ಕಟ್ಟಿಗೆಯ ಭದ್ರತೆಯೊಂದಿಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗುತ್ತದೆ. ಇನ್ನು ಕಾಮಣ್ಣನ ಸುತ್ತಲೂ ಹಾಗೂ ಗ್ರಾಮದ ಅಗಸಿಯಲ್ಲಿ ಯುವಕರೆಲ್ಲಾ ಆಯುಧಗಳನ್ನು ಹಿಡಿದುಕೊಂಡು ಪಹರೆ ಕಾಯುತ್ತಾರೆ.
ಇದರ ಹಿಂದಿನ ಕಾರಣವೇ ಬಲು ವಿಚಿತ್ರ
ಹಲವಾರು ವರ್ಷಗಳ ಹಿಂದೆ ಗ್ರಾಮದ ಬುಡ್ಡಪ್ಪ ಕಣವಿ ಎನ್ನುವ ವ್ಯಕ್ತಿ ಅತ್ತಿಗೆಗೆ ಕುಡಿಯಲು ನೀರು ಕೇಳುತ್ತಾನಂತೆ. ಆಕೆ ‘ನೀನು ಅದೇನು ದೊಡ್ಡ ಕಾರ್ಯ ಮಾಡಿ ಬಂದಿದ್ದೀಯಾ’ ಅಂತಾ ಹೀಯಾಳಿಸುತ್ತಾಳಂತೆ. ಇದರಿಂದ ನೊಂದ ಬುಡ್ಡಪ್ಪ ಪಕ್ಕದ ಅಣ್ಣಿಗೇರಿ ಗ್ರಾಮಕ್ಕೆ ಹೋಗಿ, ಅಲ್ಲಿನ ರಾಜರು ಪ್ರತಿಷ್ಠಾಪಿಸಿದ್ದ ಕಾಮಣ್ಣನ ಮೂರ್ತಿಯನ್ನ ಹೊತ್ತು ತರುತ್ತಾನೆ. ಬಳಿಕ ತಾನು ಮಾಡಿದ ಸಾಧನೆಯನ್ನ ತೋರಿಸಲು ಗ್ರಾಮದ ಅಗಸಿ ಮುಂದೆ ಬಂದು, ಮೂರ್ತಿಯನ್ನ ಅಲ್ಲಿಟ್ಟು, ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಇಂಥ ರೋಚಕ ಕಥೆಯನ್ನು ಸ್ಥಳೀಯರು ಇಂದಿಗೂ ಹೇಳುತ್ತಾರೆ. ಅಂದು ಕಾಮಣ್ಣನ ಮೂರ್ತಿಯನ್ನು ಮರಳಿ ಪಡೆಯಲು ಆಯುಧ ಸಮೇತ ಬಂದ ಅಣ್ಣಿಗೇರಿ ಗ್ರಾಮಸ್ಥರನ್ನು ಹಿಮ್ಮೆಟ್ಟಿಸಲು ಸ್ಥಳೀಯರು ಆಯುಧಗಳೊಂದಿಗೆ ಹೋರಾಟಕ್ಕೆ ನಿಲ್ಲುತ್ತಾರೆ. ಗ್ರಾಮಸ್ಥರನ್ನು ನೋಡಿ ಇವರ ಸಹವಾಸವೇ ಬೇಡ ಅಂತಾ ಅಣ್ಣಿಗೇರಿ ಗ್ರಾಮಸ್ಥರು ಮರಳಿ ಹೋಗುತ್ತಾರಂತೆ. ಬಳಿಕ ಗ್ರಾಮದಾದ್ಯಂತ ಬುಡ್ಡಪ್ಪ ಸತ್ತ ಹಿನ್ನೆಲೆಯಲ್ಲಿ ಶೋಕಾಚರಣೆ ನಡೆಯುತ್ತದೆ. ಇದೇ ಕಾರಣಕ್ಕೆ ಬಣ್ಣದೋಕುಳಿಯನ್ನೂ ನಿಷೇಧಿಸಲಾಗುತ್ತದೆ. ಅಂದು ಅನಿವಾರ್ಯತೆಯಿಂದಾಗಿ ನಡೆದ ಹೋರಾಟ ಇಂದು ಆಚರಣೆಯಾಗಿ ಬದಲಾಗಿದೆ. ಈ ಆಚರಣೆಯನ್ನು ನೋಡಲು ಇಂದಿಗೂ ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಾರೆ. ಹೀಗೆ ಬಂದವರು ಏನಾದರೂ ಬೇಡಿಕೊಂಡರೆ, ಅದು ಸಿಗುತ್ತದೆ ಎನ್ನುವ ನಂಬಿಕೆಯೂ ಜನರಲ್ಲಿದೆ.
ಕೆಲ ವರ್ಷಗಳವರೆಗೆ ಬೇರೆ ಊರಿನವರಿಗೂ ಪ್ರವೇಶ ಇರಲಿಲ್ಲ
ಘಟನೆ ನಡೆದ ಮರುವರ್ಷವೂ ಅಣ್ಣಿಗೇರಿ ಜನರು ಬಂದು ಕಾಮಣ್ಣನ ಮೂರ್ತಿಯನ್ನು ಒಯ್ಯಬಹುದು ಎನ್ನುವ ಲೆಕ್ಕಾಚಾರದಲ್ಲಿ ಆ ಮೂರ್ತಿಯ ಸುತ್ತಲೂ ಸ್ಥಳೀಯರು ಆಯುಧಗಳೊಂದಿಗೆ ನಿಲ್ಲುವ ಆಚರಣೆ ನಡೆದು ಬಂತು. ಅಷ್ಟೇ ಅಲ್ಲ ಆರಂಭದ ವರ್ಷಗಳಲ್ಲಿ ಹೋಳಿ ಹಬ್ಬದ ವೇಳೆಯಲ್ಲಿ ಬೇರೆ ಗ್ರಾಮದ ಯಾರಿಗೂ ಕೂಡ ಇಲ್ಲಿಗೆ ಪ್ರವೇಶವೂ ಇರಲಿಲ್ಲ. ಬೇರೆ ಯಾವುದೋ ನೆಪ ಮಾಡಿಕೊಂಡು ಬಂದು, ಮೂರ್ತಿಯನ್ನು ಕದ್ದೊಯ್ದರೆ ಹೇಗೆ ಎನ್ನುವ ಅನುಮಾನವೇ ಇದಕ್ಕೆ ಕಾರಣವಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಆ ನಿಯಮವನ್ನು ಸಡಿಲಿಸಲಾಯಿತು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದಲೂ ಕೂಡ ಅನೇಕರು ಬಂದು ಇಲ್ಲಿನ ಕಾಮಣ್ಣನಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ಈ ದೇವನ ಬಳಿ ಏನೇ ಕೇಳಿದರೂ ಅದು ಒಂದೇ ವರ್ಷದಲ್ಲಿ ಸಿಗುತ್ತದೆ ಎನ್ನುವ ನಂಬಿಕೆಯೂ ಇದೆ. ಅದರಲ್ಲೂ ಮದುವೆಯಾದವರು ಹಾಗೂ ಮಕ್ಕಳಾಗದವರು ಇಲ್ಲಿಗೆ ಬಂದು ಕಾಮಣ್ಣನನ್ನು ಬೇಡಿಕೊಂಡರೆ ಅದು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ಗ್ರಾಮಸ್ಥರಿಗೆ ಹಾಗೂ ಬೇರೆ ಕಡೆಯಿಂದ ಬಂದವರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿರುತ್ತದೆ. ಅಂದು ಆರಂಭವಾದ ಕಾಮಣ್ಣನನ್ನು ಕಾಯುವ ಕೆಲಸ ಸಾಂಪ್ರದಾಯಿಕ ಆಚರಣೆಯ ರೂಪ ತಳೆದು, ಇವತ್ತಿಗೂ ಮುಂದುವರೆದಿದೆ.
ಹೀಗೂ ಆಗಿರಬಹುದು
ಗ್ರಾಮಸ್ಥರು ಹೇಳುವ ಪ್ರಕಾರ ಬುಡ್ಡಪ್ಪನಿಗೆ ಆತನ ಅತ್ತಿಗೆ ‘ಅಣ್ಣಿಗೇರಿ ಕರಿ’ ತಂದಿದ್ದೀಯಾ? ಅಂತಾ ಹೀಯಾಳಿಸಿದ್ದಳಂತೆ. ಇದನ್ನು ಕೊಂಚ ಗಂಭೀರವಾಗಿ ಯೋಚಿಸಿದಾಗ ಇದರ ಹಿನ್ನೆಲೆ ಬಲು ಅಚ್ಚರಿ ಮೂಡಿಸುತ್ತದೆ. ಘಟನೆ ನಡೆದಿರಬಹುದಾದ ಕಾಲದಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ರಾಜರ ಆಡಳಿತ ಇತ್ತು. ಅವರ ಆನೆಗಳೂ ಇದ್ದವು. ಅತ್ತಿಗೆ ಬುಡ್ಡಪ್ಪನಿಗೆ ಅಣ್ಣಿಗೇರಿಯಿಂದ ಆನೆಯನ್ನು ಹೊತ್ತು ತಂದು ಸಾಧನೆ ಮಾಡಿದ್ದೀಯಾ ಅಂತಾ ಮೂದಲಿಸಿರಬಹುದು. ಅತ್ತಿಗೆ ಮೂದಲಿಕೆಯನ್ನೇ ಪ್ರತಿಷ್ಠೆಯಾಗಿ ಸ್ವೀಕರಿಸಿದ ಬುಡ್ಡಪ್ಪ ಕಣವಿ, ಕೂಡಲೇ ತಾನು ಏನಾದರೊಂದು ಸಾಧನೆ ಮಾಡಲೇ ಬೇಕು ಅಂತಾ ಅಣ್ಣಿಗೇರಿಗೆ ಹೋಗಿರಬಹುದು. ಅಲ್ಲಿ ಅದಾಗಲೇ ಕಾಮಣ್ಣನ ಮೂರ್ತಿಯನ್ನು ಅಲ್ಲಿನ ರಾಜರು ಪ್ರತಿಷ್ಠಾಪನೆ ಮಾಡಿರಬಹುದು. ಅದನ್ನ ಹೊತ್ತು ತಂದು ತನ್ನ ಸಾಧನೆಯನ್ನ ಮೆರೆಯಬೇಕು ಅಂದುಕೊಂಡ ಬುಡ್ಡಪ್ಪ ಮೂರ್ತಿಯನ್ನ ಕದ್ದು ತಂದಿರಬಹುದು. ಗ್ರಾಮಕ್ಕೆ ತಂದ ಬಳಿಕ ಅಣ್ಣಿಗೇರಿ ರಾಜರೇನಾದರೂ ತನ್ನನ್ನ ಹಿಡಿದು ಶಿಕ್ಷಿಸಿದರೆ ಹೇಗೆ ಅಂತಾ ಆತನಿಗೆ ಭಯ ಶುರುವಾಗಿ ಅಗಸಿ ಬಳಿ ಕಾಮಣ್ಣನ ಮೂರ್ತಿ ಇಟ್ಟು, ಆತ್ಮಹತ್ಯೆ ಮಾಡಿಕೊಂಡಿರಬಹುದು.
ಬಳಿಕ ಅಣ್ಣಿಗೇರಿಯಿಂದ ಜನರು ಬಂದು, ಇದನ್ನ ನೋಡಿ ಮರಳಿ ಹೋಗಿರಬಹುದು. ಆದರೆ ಮುಂದಿನ ವರ್ಷ ಅದೇ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಗ್ರಾಮಸ್ಥರಲ್ಲಿ ಅಣ್ಣಿಗೇರಿ ಜನರು ಬಂದು ಅದನ್ನ ತೆಗೆದುಕೊಂಡು ಹೋಗಬಹುದು ಎನ್ನುವ ಆತಂಕದಿಂದ ಆಯುಧಗಳೊಂದಿಗೆ ಕಾಯುವುದನ್ನು ಶುರು ಮಾಡಿರಬಹುದು. ಅಲ್ಲದೇ ತಮ್ಮ ಗ್ರಾಮಕ್ಕೆ ಬೇರೆ ಗ್ರಾಮದ ಯಾರೂ ಬರಬಾರದು ಎನ್ನುವ ನಿಯಮವನ್ನು ಹಾಕಿರಬಹುದು. ಸಾಮಾನ್ಯವಾಗಿ ಒಂದು ಊರಿನ ದೇವರ ಮೂರ್ತಿಗಳನ್ನು ಕದ್ದೊಯ್ದು ತಮ್ಮೂರಿನಲ್ಲಿ ಸ್ಥಾಪಿಸುವ ಉದಾಹರಣೆಗಳು ಮುಂಚೆಯಿಂದಲೂ ಈ ಪ್ರದೇಶದಲ್ಲಿವೆ. ಹಾಗೆ ಕದ್ದು ತಂದ ಮೂರ್ತಿಯನ್ನು ಮರಳಿ ಕಳುಹಿಸಿದರೆ, ತಮ್ಮ ಊರಿಗೆ ಕೇಡು ಎನ್ನುವ ನಂಬಿಕೆಯೂ ಇರುವುದರಿಂದ ಈ ಕಾಮಣ್ಣನ ಮೂರ್ತಿಯನ್ನು ಯಾವುದೇ ಕಾರಣಕ್ಕೂ ಗ್ರಾಮದಿಂದ ಯಾರೂ ಕದ್ದೊಯ್ಯಬಾರದು ಎನ್ನುವ ಕಾರಣಕ್ಕೆ ಹೀಗೆ ಪಹರೆಗೆ ನಿಂತಿರುವ ರೂಢಿ ಜಾರಿಗೆ ಬಂದಿರಬಹುದು ಎನ್ನಲಾಗುತ್ತದೆ
ಇದೆಲ್ಲಕ್ಕಿಂತ ವಿಚಿತ್ರ ಎಂದರೆ ಇದುವರೆಗೂ ಇಲ್ಲಿ ಪ್ರತಿಷ್ಠಾಪನೆಗೊಳ್ಳುವ ಕಾಮಣ್ಣನ ಒಂದೇ ಒಂದು ಫೋಟೋವನ್ನು ತೆಗೆಯಲು ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಕಾಮಣ್ಣನ ಮುಖವನ್ನ ಚಿತ್ರೀಕರಿಸದಂತೆ ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ. ಅದರ ಚಿತ್ರ ಬೇರೆ ಊರಿನವರಿಗೆ ಸಿಕ್ಕರೆ, ಅವರು ಹೋಳಿ ಹಬ್ಬ ಮುಗಿದ ಮೇಲೆ ಕದ್ದೊಯ್ಯಬಹುದು ಎನ್ನುವ ಆತಂಕ ಇದಕ್ಕೆ ಕಾರಣವಂತೆ.
ಇದನ್ನೂ ಓದಿ
ಸೋಂಕು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ
Published On - 12:14 pm, Sat, 27 March 21