ಬೆಂಗಳೂರು, ಸೆಪ್ಟೆಂಬರ್ 30: ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅರ್ಜಿ ಸಲ್ಲಿಸುವ ಕಾರ್ಯಕರ್ತರ ಮಾಹಿತಿ ಕಲೆ ಹಾಕಲು ಕರ್ನಾಟಕ ಕಾಂಗ್ರೆಸ್ ಸರ್ಕಾರ (Karnataka Congress Government) ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಆರ್‌ಟಿಐ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಕಾನೂನು ಪ್ರಕಾರ ಆರ್‌ಟಿಐ ಕಾರ್ಯಕರ್ತರ ಗೋಪ್ಯತೆ ಕಾಪಾಡಬೇಕು. ಆದರೆ, ಇಲ್ಲಿ ಸರ್ಕಾರವೇ ಮಾಹಿತಿ ಕಲೆ ಹಾಕಲು ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಆರ್‌ಟಿಐ ಕಾರ್ಯಕರ್ತರನ್ನು ಬೆದರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಹೆಚ್ಚೆಚ್ಚು ಆರ್‌ಟಿಐ ಅರ್ಜಿ ಹಾಕುವವರು ಯಾರು ಎಂಬ ಮಾಹಿತಿ ಕ್ರೋಢೀಕರಿಸಲು ಸರ್ಕಾರ ಮುಂದಾಗಿದೆ. ಆದರೆ, ಇದಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆರ್‌ಟಿಐ ಅರ್ಜಿ ಹಾಕುವವರ ಮಾಹಿತಿ ಪಡೆದು ಏನು ಮಾಡಲು ಹೊರಟಿದೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಂಬ ಪ್ರಶ್ನೆ ಉದ್ಭವಿಸಿದೆ.
ಮುಖ್ಯ ಕಾರ್ಯದರ್ಶಿ ಕಚೇರಿ, ಇಲಾಖೆಗಳು, ಸಚಿವಾಲಯಗಳಲ್ಲಿ ಮಾಹಿತಿ ಕೇಳುವವರ ಮಾಹಿತಿ ಕಲೆ ಹಾಕಲು ಮುಂದಾಗಿರುವ ಸರ್ಕಾರ, ಹೆಚ್ಚು ಬಾರಿ ಆರ್‌ಟಿಐ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸುವಂತೆ ಈಗಾಗಲೇ ನಿರ್ದೇಶನ ನೀಡಿದೆ. ಕಲಬುರಗಿ ಪೀಠದ ಮಾಹಿತಿ ಆಯುಕ್ತರು ಪತ್ರ ಬರೆದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. 2023ರ ಏಪ್ರಿಲ್‌ನಲ್ಲೇ ಕಲಬುರಗಿ ಪೀಠದ ಮಾಹಿತಿ ಆಯುಕ್ತರು ಪತ್ರ ಬರೆದಿದ್ದರು. ಆದರೆ ಬಿಜೆಪಿ ಸರ್ಕಾರವು ಯಾವುದೇ ಕ್ರಮವಹಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಆರ್‌ಟಿಐ ಕಾರ್ಯಕರ್ತರ ಮಾಹಿತಿ ಕಲೆಹಾಕಲು ಮುಂದಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಈಗಾಗಲೇ ಆರ್‌ಟಿಐ ಅರ್ಜಿದಾರರ ಮಾಹಿತಿ ನೀಡಲು ನಿರ್ದೇಶನ ನೀಡಲಾಗಿದೆ. ಆರ್‌ಟಿಐ ಅಡಿ ಅರ್ಜಿದಾರರ ವಿವರಗಳ ಗೋಪ್ಯತೆ ಕಾಪಾಡುವುದು ಕಾನೂನಿನಲ್ಲಿದೆ. ಆದಾಗ್ಯೂ, ಸರ್ಕಾರವೇ ಮಾಹಿತಿ ಕಲೆ ಹಾಕಲು ಮುಂದಾಗಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಮಾಹಿತಿ ಹಕ್ಕು ಕಾಯ್ದೆಯನ್ನು ಸಂಸತ್ತು 2005ರಲ್ಲಿ ಅಂಗೀಕರಿಸಿತು. ಇದರಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರಿ ಸಂಸ್ಥೆಗಳಿಂದ ಮಾಹಿತಿ ಪಡೆಯುವ ಹಕ್ಕನ್ನು ನೀಡಲಾಯಿತು. ಈ ಕಾನೂನಿನ ಅಡಿಯಲ್ಲಿ, ಸರ್ಕಾರಿ ಕಚೇರಿಗಳು, ಇಲಾಖೆಗಳು, ಸಚಿವಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ಸಾರ್ವಜನಿಕರು ಹೊಂದಿರುತ್ತಾರೆ.
ಇದನ್ನೂ ಓದಿ: ಡಿಎಂಕೆ ಒತ್ತಡಕ್ಕೆ ಮಣಿದು ನೀರು ಬಿಡುತ್ತಿದ್ದೀರಿ: ಸಿದ್ದರಾಮಯ್ಯ ಟ್ವೀಟ್ಗೆ ರಾಜೀವ್ ಚಂದ್ರಶೇಖರ್ ತಿರುಗೇಟು
ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವು ಸರ್ಕಾರದ ಇಲಾಖೆಗಳ ವ್ಯವಹಾರಗಳ ಬಗ್ಗೆ ಮಾಹಿತಿ ತಿಳಿಯುವ ಅಧಿಕಾರವನ್ನು ಜನರಿಗೆ ನೀಡುವುದಾಗಿದೆ. ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವುದು, ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಜನರಿಗಾಗಿ ಕೆಲಸ ಮಾಡುವಂತೆ ಮಾಡುವ ಉದ್ದೇಶದೊಂದಿಗೆ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ