ಬೆಂಗಳೂರು: ಸತ್ಯ ಹರಿಶ್ಚಂದ್ರ, ಏಕಪತ್ನಿವ್ರತಸ್ಥರಾ? 224 ಶಾಸಕರ ಮೇಲೆಯೂ ತನಿಖೆಯಾಗಲಿ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಬಗ್ಗೆ ಮಾತನಾಡಿರುವ JDS ಶಾಸಕ ಶಿವಲಿಂಗೇಗೌಡ ‘ನಾವು ನೂರಕ್ಕೆ ನೂರರಷ್ಟು ಏಕ ಪತ್ನಿವ್ರತಸ್ಥರೇ’ ‘ನನಗಿರೋದು ಒಬ್ಬಳೇ ಹೆಂಡತಿ, ಅನೈತಿಕ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.
ನಾನು ಯಾವ ದೇವರ ಮೇಲಾದರೂ ಆಣೆ ಮಾಡುತ್ತೇನೆ. ಸಚಿವ ಡಾ.ಕೆ.ಸುಧಾಕರ್ ನೀಡಿರುವ ಹೇಳಿಕೆ ತಪ್ಪು. ಇವರೇಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹಾಗಾದ್ರೆ ಇವರು ಇನ್ನೂ ಸಂಬಂಧ ಇಟ್ಟುಕೊಂಡಿದ್ದಾರಾ? ಸಚಿವರು ಹೀಗೆ ಮಾತನಾಡಬಾರದು, ಅದು ತಪ್ಪಾಗುತ್ತೆ. ಅವರನ್ನೂ ಸೇರಿಸಿಕೊಂಡು ತನಿಖೆ ಮಾಡಲು ಹೇಳಿದ್ದಾರೆ. ಹಾಗಾದ್ರೆ ನಾವು ಯಾರ ಮೇಲೆ ಅನುಮಾನಪಡೋದು? ಎಂದು ಶಿವಲಿಂಗೇಗೌಡ, ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲಾ ಶಾಸಕರ ಮೇಲೆ ಹೇಳಿದ್ದು ತಪ್ಪು ಎಂದ ರೂಪಾ
ಡಾ.ಸುಧಾಕರ್ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದ್ರೆ ಅವರು ಬಳಸಿರುವ ಪದ ಬಳಕೆ ತಪ್ಪು. ಎಲ್ಲರಿಗೂ ಒಂದು ವೈಯಕ್ತಿಕ ಸ್ವಾತಂತ್ರ್ಯ ಇರುತ್ತದೆ. ಅವರ ಮೇಲೆ ಆಪಾದನೆ ಬಂದಿದ್ದರೆ ಅದನ್ನು ಎದುರಿಸಲಿ. ಈ ಮನೆಗೆ ಪ್ರವೇಶ ಮಾಡಬೇಕು ಅಂದ್ರೆ ಒಂದು ದೂರು ದೃಷ್ಟಿ ಇಟ್ಟುಕೊಂಡು ಪ್ರವೇಶ ಮಾಡ್ತಾರೆ. ಅವರನ್ನೇ ಅವರೇ ತೇಜೋವಧೆ ಮಾಡಿಕೊಳ್ಳುವಂತ ಪರಿಸ್ಥಿತಿ ಬಂದಿದೆ. ಎಲ್ಲರೂ ಯಾಕೆ ಕೋರ್ಟ್ ಮೊರೆ ಹೋಗಿಲ್ಲ? ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೋ ಅದಕ್ಕೆ ಕೊಡಿ. ಅವರು ಎಲ್ಲಾ ಶಾಸಕರ ಮೇಲೆ ಹೇಳಿದ್ದು ತಪ್ಪು ಅಂತಾ ವಿಧಾನಸೌಧದಲ್ಲಿ ಶಾಸಕಿ ರೂಪಾ ಶಶಿಧರ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರದ್ದೇ ಡಬಲ್ ಇಂಜಿನ್ ಸರ್ಕಾರ ಇದೆ; ತನಿಖೆ ನಡೆಸಲಿ ಎಂದ ರೇವಣ್ಣ
ರಾಜ್ಯ, ಕೇಂದ್ರದಲ್ಲಿ ಎರಡೂ ಕಡೆ ಅವರದೇ ಸರ್ಕಾರವಿದೆ. ಅವರಿಗೆ ಯಾವ ರೀತಿಯ ತನಿಖೆ ಬೇಕೋ ಮಾಡಿಸಲಿ. ಅವರದ್ದೇ ಎರಡು ಕಡೆ ಡಬಲ್ ಇಂಜಿನ್ ಸರ್ಕಾರ ಇದೆ. ದೇವಸ್ಥಾನಕ್ಕೆ ಹೋಗಿ ಬರುವಂತೆ ಕರೆದ್ರೂ ಹೋಗುತ್ತೇನೆ ಎಂದು ವಿಧಾನಸೌಧದಲ್ಲಿ JDS ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ರು.
ಇನ್ನು ಆರೋಗ್ಯ ಸಚಿವ ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರಕ್ಕೆ ಸುಧಾಕರ್ ಹೇಳಿಕೆ ಕೇಳಿ ಶಾಸಕಿ ಸೌಮ್ಯಾರೆಡ್ಡಿ ಬಿದ್ದು ಬಿದ್ದು ಬಿದ್ದು ಸುಧೀರ್ಘವಾಗಿ ನಕ್ಕಿದ್ದಾರೆ. ವಿಧಾನಸೌಧ ಮೆಟ್ಟಿಲಿನ ಮೇಲೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಸುಧಾಕರ್ ಹೇಳಿಕೆಯನ್ನ ಮೊಬೈಲ್ನಲ್ಲಿ ಕೇಳಿಸಿಕೊಂಡ ಸೌಮ್ಯಾ ಬಿದ್ದು ಬಿದ್ದು ನಗಾಡಿದ್ದಾರೆ.
ಸಚಿವ ಡಾ.ಕೆ.ಸುಧಾಕರ್‌ಗೆ ಮಾಡುವುದಕ್ಕೆ ಕೆಲಸವಿಲ್ಲ. ಹೀಗಾಗಿ ಡಾ.ಕೆ.ಸುಧಾಕರ್ ಇಂತಹ ಹೇಳಿಕೆ ಕೊಡ್ತಿದ್ದಾರೆ. ಒಂದೆಡೆ ರೈತರು ಸಾಯುತ್ತಿದ್ದಾರೆ, ಜಿಡಿಪಿ ಬೇರೆ ಕುಸಿದಿದೆ. ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಯುವತಿ ರಕ್ಷಣೆ ನೀಡುವಂತೆ ಗೃಹ ಸಚಿವರನ್ನು ಕೇಳಿದ್ದಾರೆ. ಹೀಗಾಗಿ ಯುವತಿಗೆ ನ್ಯಾಯ ಕೊಡಿ ಎಂದು ಕೇಳುತ್ತಿದ್ದೇವೆ. ಸುಧಾಕರ್‌ಗೆ ಮಾಡಲು ಕೆಲಸವಿಲ್ಲದೆ ಹೇಳಿಕೆ ನೀಡಿದ್ದಾರೆ. ಇವರೇಕೆ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದ್ರು? ನಮಗೆಲ್ಲ ನಾಚಿಕೆಯಾಗಬೇಕು ಅದರ ಬಗ್ಗೆ ಚರ್ಚಿಸೋಕೆ ಅಂತಾ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ.
ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದ ಶಾಸಕ ರಾಜು ಗೌಡ
ಡಾ.ಕೆ.ಸುಧಾಕರ್ ಹೇಳಿಕೆ ಅವರ ವೈಯಕ್ತಿಕ ವಿಚಾರ. ಹೇಳಿಕೆ ಕೊಡುವ ಸಮಯದಲ್ಲಿ ಸ್ಪಷ್ಟವಾಗಿ ಹೇಳಬೇಕು. ಇಂಥವರು ಇಂಥವರು ಎಂದು ಹೇಳಬೇಕು. 224 ಜನರು ಎಂದು ಹೇಳುವುದು ಸರಿಯಲ್ಲ. ಅವರು ಸಚಿವರಿದ್ದಾರೆ, ನಾವೆಲ್ಲ ಶಾಸಕರಿದ್ದೇವೆ. ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ನಾವು ಸಾಮಾನ್ಯ ಜನರಂತಲ್ಲ, ನಮಗೆ ಜವಾಬ್ದಾರಿ ಇದೆ. ಸಚಿವರು ಇಂತಹ ಹೇಳಿಕೆಯನ್ನು ಕೊಡಬಾರದು ಎಂದು ಶಾಸಕ ರಾಜು ಗೌಡ ಪ್ರತಿಕ್ರಿಯಿಸಿದ್ದಾರೆ.
Published On - 12:56 pm, Wed, 24 March 21