ಕಡೂರು: ದಶಕದ ನಂತರ ಕೋಡಿ ಹರಿದ ವಿಷ್ಣುಸಮುದ್ರ ಕೆರೆ, ಅದ್ದೂರಿ ತೆಪ್ಪೋತ್ಸವ ನಡೆಸಿದ 40 ಹಳ್ಳಿಯ ಜನರು

| Updated By: Rakesh Nayak Manchi

Updated on: Oct 31, 2022 | 12:04 PM

ಬಯಲು ಸೀಮೆಯ ನಾಡು ಚಿಕ್ಕಮಗಳೂರಿನ ಕಡೂರು ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ವಿಷ್ಣುಸಮುದ್ರ ಕರೆ ಕೋಡಿ ಹರಿದಿದೆ. ಇದೇ ಖುಷಿಯಲ್ಲಿ ಕಡೂರಿನ ಹತ್ತಾರು ಹಳ್ಳಿಗಳ ಜನರು ಒಟ್ಟು ಸೇರಿ ಅದ್ದೂರಿ ತೆಪ್ಪೋತ್ಸವ ನಡೆಸಿದರು. ಒಂದು ಲಕ್ಷಕ್ಕೂ ಅಧಿಕ ಮಂದಿ ವಿಶೇಷ ಕ್ಷಣವನ್ನು ಕಣ್ತುಂಬಿಕೊಂಡರು.

ಕಡೂರು: ದಶಕದ ನಂತರ ಕೋಡಿ ಹರಿದ ವಿಷ್ಣುಸಮುದ್ರ ಕೆರೆ, ಅದ್ದೂರಿ ತೆಪ್ಪೋತ್ಸವ ನಡೆಸಿದ 40 ಹಳ್ಳಿಯ ಜನರು
ಕಡೂರು ವಿಷ್ಣುಸಮುದ್ರ ಕರೆ ತೆಪ್ಪೋತ್ಸವ
Follow us on

ಚಿಕ್ಕಮಗಳೂರು: ಪ್ರತಿಯೊಬ್ಬರು ಅಚ್ಚರಿ ಪಡುವಂತಹ ಬೆಳವಣಿಗೆ ಹತ್ತಾರು ಹಳ್ಳಿಗಳು ಆಶ್ರಯಿಸಿರುವ ಕರೂರು ತಾಲೂಕಿನಲ್ಲಿರುವ ವಿಷ್ಣುಸಮುದ್ರ ಕೆರೆಯಲ್ಲಿ ನಡೆದಿದೆ. ಈ ಕೆರೆ ತುಂಬದೇ 12 ವರ್ಷಗಳೇ ಆಗಿತ್ತು. ತೆಪ್ಪೊತ್ಸವ ನಡೆಯದೇ ಬರೋಬ್ಬರಿ 66ವರ್ಷಗಳೇ ಸಂದಿತ್ತು. ಆದರೆ ಈ ಬಾರಿ ಸುರಿದ ಧಾರಾಕಾರ ಮಳೆಗೆ ಕೆರೆಯೂ ತುಂಬಿದೆ, ಅದ್ದೂರಿ ತೆಪ್ಪೊತ್ಸವವೂ ಜರುಗಿತು. ಭಾನುವಾರ ನಡೆದ ಈ ವಿಶೇಷ ಕ್ಷಣವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡರು.

ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಹೇಮಗಿರಿಯ ವಿಷ್ಣುಸಮುದ್ರ ಕೆರೆ ತುಂಬಿ ಕೋಡಿ ಬಿದ್ದಿದೆ. ಶಾಶ್ವತ ಬರಪೀಡಿತ ಪ್ರದೇಶ ಎಂದೇ ಹಣೆಪಟ್ಟಿ ಹೊತ್ತಿದ್ದ ಕಡೂರು ತಾಲೂಕಿನಲ್ಲಿ ಈ ಭಾರೀ ಭಾರೀ ಮಳೆಯಾಗಿದೆ. ಪರಿಣಾಮವಾಗಿ ವಿಷ್ಣುಸಮುದ್ರ ಕರೆ ಕೋಡಿ ಹರಿದಿದೆ. ಇದೇ ಖುಷಿಯಲ್ಲಿ ಹಲವು ವರ್ಷಗಳಿಂದ ನಡೆಯದೇ ಇದ್ದ ತೆಪ್ಪೊತ್ಸವವನ್ನ ಸುತ್ತ ನಾಲ್ವತ್ತಕ್ಕೂ ಹೆಚ್ಚು ಹಳ್ಳಿಯ ಜನರು ಸೇರಿ ಅದ್ದೂರಿಯಾಗಿ ಆಚರಿಸಿದರು.

ಅದ್ದೂರಿ ತೆಪ್ಪೋತ್ಸವವನ್ನು ಕಡೂರು ತಾಲೂಕಿನ ಭಕ್ತರು ಮಾತ್ರವಲ್ಲ, ಅಪರೂಪದ ಕ್ಷಣಗಳನ್ನ ನೋಡಲೆಂದೇ ಚಿಕ್ಕಮಗಳೂರು ಸೇರಿದಂತೆ ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಭಕ್ತರು ಸಾಗರೋಪಾದಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಆಗಮಿಸಿ ತೆಪ್ಪೋತ್ಸವದ ವಿಶೇಷ ಸಂಭ್ರಮದಲ್ಲಿ ಮಿಂದೆದ್ದರು. ಒಂದು ಲಕ್ಷಕ್ಕೂ ಅಧಿಕ ಜನರು ಕೀಲೋಮೀಟರ್ ದೂರ ಕೆರೆಯ ಸುತ್ತಲೂ ನಿಂತು ಅದ್ದೂರಿ ತೆಪ್ಪೋತ್ಸವವನ್ನ ಕಣ್ತುಂಬಿಸಿಕೊಂಡರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ತನ್ನದೇ ಆದ ವಿಶೇಷ ಪರಂಪರೆಯಿದೆ. ಹಿಂದಿನಿಂದಲೂ ಸುತ್ತಮುತ್ತಲ ಹಳ್ಳಿಯ ಜನರು ಸೇರಿದಂತೆ ಜಿಲ್ಲೆ, ಹೊರಜಿಲ್ಲೆಯ ಭಕ್ತರು ಏನೇ ಹೊಸ ವ್ಯವಹಾರ ಪ್ರಾರಂಭಿಸಲು, ಅನಾರೋಗ್ಯಕ್ಕೆ ಈಡಾದರೆ, ಮಕ್ಕಳ ಫಲ ಬಯಸಿ ಇಲ್ಲಿ ಶ್ರದ್ಧೆಯಿಂದ ಹರಕೆ ಕಟ್ಟಿಕೊಂಡರೆ ಸಾಕು ಎಲ್ಲವೂ ನೆರವೇರುತ್ತದೆ ಎಂಬ ನಂಬಿಕೆ ಇದೆ. ಕೆರೆ ತುಂಬಿದ ಖುಷಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ತೆಪ್ಪವನ್ನ ಸಿಂಗಾರಗೊಳಿಸುವ ಕೆಲಸವನ್ನ ಮಾಡಲಾಗುತ್ತಿತ್ತು. ಮಂಗಳೂರಿನ ಕಮಲಾಕ್ಷ ಪೂಜಾರ್ ಮತ್ತು ತಂಡ ಎರಡು ದೋಣಿ ಬಳಸಿ ವಿಶೇಷ ತೆಪ್ಪ ನಿರ್ಮಿಸಿದ್ದರು.

ಮುಂದೆ ಯಾವಾಗ ಕೆರೆ ತುಂಬುತ್ತೋ? ತೆಪ್ಪೋತ್ಸವವನ್ನ ನೋಡುತ್ತೇವೋ, ಇಲ್ವೋ? ನೋಡಿ ಕಣ್ತುಂಬಿಕೊಳ್ಳಲು ಎಷ್ಟು ವರ್ಷ ಕಾಯಬೇಕೋ ಅನ್ನೋ ಪ್ರಶ್ನೆಗಳನ್ನ ಇಟ್ಕೊಂಡು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತೆಪ್ಪೋತ್ಸವದ ಅಪರೂಪದ ಕ್ಷಣಗಳನ್ನ ಕಣ್ತುಂಬಿಸಿಕೊಂಡರು. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಭಾನುವಾರ ನಡೆದ ಈ ಅದ್ದೂರಿ ತೆಪ್ಪೋತ್ಸವ ಇಡೀ ರಾಜ್ಯದ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಮಾಡಿದ್ದಂತೂ ಸುಳ್ಳಲ್ಲ.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Mon, 31 October 22