ಕೊರೊನಾ ಸೋಂಕಿತರಿಗೆ ಮನೋಸ್ಥೈರ್ಯ ತುಂಬುವ ಪಾಠ; ಕಲಬುರಗಿ ಜಿಲ್ಲಾಡಳಿತಕ್ಕೆ ಸಾಥ್ ನೀಡಿದ ಶಿಕ್ಷಕರು

|

Updated on: May 23, 2021 | 9:43 AM

ಮನೆಯಲ್ಲಿ ಐಸೋಲೇಷನ್​ಗೆ ವ್ಯವಸ್ಥೆ ಇರದಿದ್ದರೆ, ಕೊವಿಡ್ ಕೇರ್ ಸೆಂಟರ್​ಗೆ ಹೋಗಲು ಸೂಚಿಸುವುದು ಮತ್ತು ನೆರವು ನೀಡುವುದನ್ನು ಶಿಕ್ಷಕರು ಮಾಡುತ್ತಾರೆ. ಹೋಮ್ ಐಸೋಲೇಷನ್​ನಲ್ಲಿರುವವರ ಆರೋಗ್ಯದಲ್ಲಿ ಏರುಪೇರಾದರೆ ಅವರು ಆಸ್ಪತ್ರೆಗೆ ದಾಖಲಾಗಲು ಬೇಕಾದ ನೆರವನ್ನು ನೀಡುವ ಕೆಲಸವನ್ನು ಪೋನ್ ಮೂಲಕವೇ ಶಿಕ್ಷಕರು ಮಾಡಲಿದ್ದಾರೆ.

ಕೊರೊನಾ ಸೋಂಕಿತರಿಗೆ ಮನೋಸ್ಥೈರ್ಯ ತುಂಬುವ ಪಾಠ; ಕಲಬುರಗಿ ಜಿಲ್ಲಾಡಳಿತಕ್ಕೆ ಸಾಥ್ ನೀಡಿದ ಶಿಕ್ಷಕರು
ಮನೆಯಲ್ಲಿದ್ದೇ ಸೋಂಕಿತರಿಗೆ ಮಾರ್ಗದರ್ಶನ ಮಾಡುತ್ತಾರೆ ಶಿಕ್ಷಕರು
Follow us on

ಕಲಬುರಗಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಕ್​ಡೌನ್ ಘೋಷಿಸಿದೆ. ಇದರಿಂದಾಗಿ ಎಲ್ಲಾ ವಹಿವಾಟುಗಳು ಬಂದ್​ ಅಗಿದೆ ಅದರಲ್ಲೂ ಮುಖ್ಯವಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತವಾಗಿವೆ. ಶಾಲಾ ಕಾಲೇಜುಗಳು ಪುನಃ ಯಾವಾಗ ಪ್ರಾರಂಭವಾಗುತ್ತವೆ ಎನ್ನುವುದು ಗೊತ್ತಿಲ್ಲ. ಶಾಲೆಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿದ್ದಾರೆ. ಆದರೆ ಪ್ರತಿನಿತ್ಯ ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕರು ಇದೀಗ ಐಸೋಲೆಷನ್​ನಲ್ಲಿರುವ ಕೊರೊನಾ ಸೋಂಕಿತರಿಗೆ ಪಾಠ ಮಾಡಲು ಪ್ರಾರಂಭಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಇಂತಹದೊಂದು ಕೆಲಸ ಪ್ರಾರಂಭವಾಗಿದ್ದು, ವಿಶೇಷವೆಂದರೆ, ಇಲ್ಲಿ ಶಿಕ್ಷಕರು ಸೋಂಕಿತರಿಗೆ ಪಠ್ಯವನ್ನು ಬೋಧಿಸುತ್ತಿಲ್ಲಾ. ಬದಲಾಗಿ ಕೊರೊನಾದ ಬಗ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಜನರು ಕೊರೊನಾದ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ವಾರ 1000 ದಿಂದ 1500 ಜನರಿಗೆ ಸೋಂಕು ದೃಢವಾಗುತ್ತಿತ್ತು. ಪ್ರತಿನಿತ್ಯ 10ರಿಂದ 20 ಜನರು ಸೋಂಕಿಗೆ ಬಲಿಯಾಗುತ್ತಿದ್ದರು. ಕಳೆದ ಕೆಲ ದಿನಗಳಿಂದ ಸೋಂಕು ಮತ್ತು ಸೋಂಕಿನಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿದೆ. ಆದರು ಕೂಡಾ ಜಿಲ್ಲೆಯಲ್ಲಿ ಸೋಂಕಿನ ಭಯ ಮಾತ್ರ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಚೈನ್ ಬ್ರೇಕ್ ಮಾಡಲು ಕಲಬುರಗಿ ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕೆಲಸಗಳಿಗೆ ಇದೀಗ ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್​ನಲ್ಲಿರುವ ಸೋಂಕಿತರ ಮೇಲೆ ನಿಗಾ ಇಡಲು, ಮೇಲ್ವಿಚಾರಣೆ ಮಾಡಲು ಮತ್ತು ಸೋಂಕಿತರಿಗೆ ಮಾರ್ಗದರ್ಶನ ನೀಡಲು 1300 ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಯಾಕೆ ಶಿಕ್ಷಕರ ಬಳಕೆ?
ಕಲಬುರಗಿ ಜಿಲ್ಲೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಹೋಮ್ ಐಸೋಲೇಷನ್​ನಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೂಡಾ ಅನೇಕ ಸೋಂಕಿತರು ಸಿಸಿಸಿ ಕೇಂದ್ರಕ್ಕೆ ದಾಖಲಾಗದೆ, ತಮ್ಮ ಮನೆಗಳಲ್ಲಿ, ತಮ್ಮ ಜಮೀನಿನಲ್ಲಿರುವ ಮನೆಗಳಲ್ಲಿ ಹೋಮ್ ಐಸೋಲೇಷನ್ ಆಗಿದ್ದಾರೆ. ಕೆಲವರು ಜವಬ್ದಾರಿಯಿಂದ ವರ್ತಿಸಿದರೆ, ಇನ್ನು ಕೆಲವರು ಬೇಜವ್ದಾರಿಯಿಂದ ವರ್ತಿಸುತ್ತಿದ್ದಾರೆ. ಮನೆಯಲ್ಲಿರದೇ, ಹೊರಗಡೆ ಓಡಾಡುವ ಮೂಲಕ ಅನೇಕರಿಗೆ ಸೋಂಕು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಹೋಮ್ ಐಸೋಲೇಷನ್ ಆಗಿರುವ ಅನೇಕ ಸೋಂಕಿತರಿಗೆ ಸರಿಯಾಗಿ ಮಾಹಿತಿ ಕೂಡಾ ಸಿಗದಂತಾಗಿದೆ.

ಹೋಮ್ ಐಸೋಲೇಷನ್​ನಲ್ಲಿರುವವರು ಏನು ಮಾಡಬೇಕು. ಏನು ಮಾಡಬಾರದು. ಯಾವಾಗ ಆಸ್ಪತ್ರೆಗೆ ಸೇರಬೇಕು. ಪ್ರತಿನಿತ್ಯದ ದಿನಚರಿಯನ್ನು ಹೇಗೆ ನಡೆಸಬೇಕು ಎನ್ನುವುದರ ತಿಳವಳಿಕೆ ಹೆಚ್ಚಿನ ಜನರಿಗೆ ಇಲ್ಲ. ಈ ಸಮಸ್ಯೆಗಳನ್ನು ದೂರ ಮಾಡಲು, ಕಲಬುರಗಿ ಜಿಲ್ಲಾಡಳಿತ ಇದೀಗ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲರ ಮೇಲೆ ನಿಗಾ ಇಡುವುದು ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಆಗುವುದಿಲ್ಲಾ. ಜಿಲ್ಲೆಯಲ್ಲಿ ಸಕ್ರೀಯ ಪ್ರಕರಣಗಳು ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲೆ ಕೆಲಸದ ಒತ್ತಡವಿದೆ. ಜೊತೆಗೆ ಮಕ್ಕಳಿಗೆ ಪಾಠ ಮಾಡಿ ಶಿಕ್ಷಕರಿಗೆ ಅನುಭವ ಇರುವುದರಿಂದ ಜನರ ಮನಸ್ಥಿತಿಯನ್ನು ತಿಳಿದುಕೊಂಡು, ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಕಲೆ ಕರಗತವಾಗಿರುತ್ತದೆ. ಹೀಗಾಗಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಹೋಮ್ ಐಸೋಲೇಷನ್ ನಲ್ಲಿರೋರಿಗೆ ಮಾರ್ಗದರ್ಶನ ಮಾಡಲು ಜಿಲ್ಲೆಯಲ್ಲಿ 1300 ಪ್ರೌಢ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ನೂರಾ ಇಪ್ಪತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓರ್ವ ಮುಖ್ಯಗುರುಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸೋಂಕಿತರು ಹೋಮ್ ಐಸೋಲೇಷನ್ ಆಗಿದ್ದಾರೆ ಅನ್ನೋ ಮಾಹಿತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಮುಖ್ಯ ಶಿಕ್ಷಕರಿಗೆ ಮಾಹಿತಿ ಸಿಗಲಿದೆ.

ಹೋಮ್ ಐಸೋಲೇಷನ್ ಆಗಿರೋರು ಯಾರು, ಯಾವ ಗ್ರಾಮ, ಯಾವ ಬಡಾವಣೆ, ಅವರ ಹೆಸರು, ವಿಳಾಸ, ಪೋನ್ ನಂಬರ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಆರೋಗ್ಯ ಕೇಂದ್ರದ ಸಿಬ್ಬಂದಿ ಮುಖ್ಯ ಶಿಕ್ಷಕರಿಗೆ ನೀಡುತ್ತಾರೆ. ಅವರು ತಮ್ಮ ಅಧಿನದಲ್ಲಿರುವ ಶಿಕ್ಷಕರಿಗೆ ಆ ಮಾಹಿತಿಯನ್ನು ನೀಡಲಿದ್ದಾರೆ. ಓರ್ವ ಶಿಕ್ಷಕ ಹತ್ತು ಜನ ಸೋಂಕಿತರ ಮೇಲೆ ನಿಗಾ ವಹಿಸಬೇಕಾಗುತ್ತದೆ. ಇನ್ನು ಕ್ಷೇತ್ರ ಸಂಪನ್ಮೂಲ ಅಧಿಕಾರಿಯನ್ನು ತಾಲೂಕು ನೋಡಲ್ ಅಧಿಕಾರಿ ಅಂತ ನೇಮಿಸಲಾಗಿದ್ದು, ಅವರು ಎಲ್ಲರ ಕೆಲಸದ ಮೇಲುಸ್ತುವಾರಿ ವಹಿಸಲಿದ್ದಾರೆ. ಅವರು ಆರೋಗ್ಯ ಇಲಾಖೆಗ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಾರೆ.

ಮನೆಯಲ್ಲಿದ್ದೇ ಸೋಂಕಿತರಿಗೆ ಮಾರ್ಗದರ್ಶನ ಮಾಡುತ್ತಾರೆ ಶಿಕ್ಷಕರು
ಸೋಂಕಿತರ ಮಾಹಿತಿಯನ್ನು ಮತ್ತು ಅವರ ಪೋನ್ ನಂಬರ್​ಗಳನ್ನು ಪಡೆಯುವ ಶಿಕ್ಷಕರು, ಹೋಮ್ ಐಸೋಲೇಷನ್ ಆಗಿರುವ ಸೋಂಕಿತರ ಮನೆಗಳಿಗೆ ಹೋಗುವುದಿಲ್ಲ. ಬದಲಾಗಿ ಪೋನ್​ನಲ್ಲಿಯೇ ಸೋಂಕಿತರ ಜೊತೆ ಸಂಪರ್ಕದಲ್ಲಿರುತ್ತಾರೆ. ಹೋಮ್ ಐಸೋಲೇಷನ್ ಆಗಿರುವ ಸೋಂಕಿತರಿಗೆ, ಶಿಕ್ಷಕರು ಪ್ರತನಿತ್ಯ ಕರೆ ಮಾಡಿ, ಆರೋಗ್ಯ ಹೇಗಿದೆ, ಆರೋಗ್ಯದಲ್ಲಿ ವ್ಯತ್ಯಾಸಗಳೇನಾದರು ಕಾಣಿಸಿಕೊಂಡಿದೆಯಾ, ಆರೋಗ್ಯ ಸ್ಥಿರವಾಗಿದೆಯಾ ಎನ್ನುವುದನ್ನು ವಿಚಾರಿಸುತ್ತಾರೆ.

ಮನೆಯಲ್ಲಿ ಐಸೋಲೇಷನ್​ಗೆ ವ್ಯವಸ್ಥೆ ಇರದಿದ್ದರೆ, ಕೊವಿಡ್ ಕೇರ್ ಸೆಂಟರ್​ಗೆ ಹೋಗಲು ಸೂಚಿಸುವುದು ಮತ್ತು ನೆರವು ನೀಡುವುದನ್ನು ಶಿಕ್ಷಕರು ಮಾಡುತ್ತಾರೆ. ಹೋಮ್ ಐಸೋಲೇಷನ್​ನಲ್ಲಿರುವವರ ಆರೋಗ್ಯದಲ್ಲಿ ಏರುಪೇರಾದರೆ ಅವರು ಆಸ್ಪತ್ರೆಗೆ ದಾಖಲಾಗಲು ಬೇಕಾದ ನೆರವನ್ನು ನೀಡುವ ಕೆಲಸವನ್ನು ಪೋನ್ ಮೂಲಕವೇ ಶಿಕ್ಷಕರು ಮಾಡಲಿದ್ದಾರೆ. ಜೊತೆಗೆ ಹೋಮ್ ಐಸೋಲೇಷನ್​ಲ್ಲಿರುವವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಶಿಕ್ಷಕರಿಗೆ, ಮುಖ್ಯೋಪಾದ್ಯಾಯರಿಗೆ ಈ ಬಗ್ಗೆ ತರಬೇತಿಯನ್ನು ನೀಡಲಾಗಿದೆ. ಸೋಂಕಿತರ ಜೊತೆ ಹೇಗೆ ವರ್ತಿಸಬೇಕು. ಅವರ ಮನೋಬಲವನ್ನು ಹೇಗೆ ವೃದ್ಧಿಸಬೇಕು ಎನ್ನುವುದರ ಬಗ್ಗೆ ಶಿಕ್ಷಕರಿಗೆ ತಿಳಿಸಲಾಗಿದೆ. ಇನ್ನು ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿರುವ ಶಶಿಲ್ ನಮೋಶಿ, ವಿಶೇಷ ಆಸಕ್ತಿ ವಹಿಸಿ ಇಂತಹದೊಂದು ಕಾರ್ಯಕ್ರಮ ಪ್ರಾರಂಭವಾಗಲು ಜಿಲ್ಲಾಡಳಿತಕ್ಕೆ ನೆರವಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಪ್ರತಿನಿತ್ಯ ಶಿಕ್ಷಕರು,ಸೋಂಕಿತರಿಗೆ ಕರೆ ಮಾಡಿ, ಅವರ ಆರೋಗ್ಯವನ್ನು ವಿಚಾರಿಸುವ ಕೆಲಸ ಮಾಡುತ್ತಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರ ಮೇಲೆ ನಿಗಾ ಇಡಲು ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರು ಸಂತೋಷದಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಪ್ರತಿ ದಿನ ಸೋಂಕಿತರಿಗೆ ಕರೆ ಮಾಡುವ ಶಿಕ್ಷಕರು, ಆರೋಗ್ಯ ವಿಚಾರಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಿಸಿಸಿ ಕೇಂದ್ರಕ್ಕೆ ದಾಖಲಿಸುವುದು, ಆಸ್ಪತ್ರೆ ಸೇರಲು ನೆರವಾಗುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಸೋಂಕಿತರಿಗೆ ಮಾನಸಿಕ ಸ್ಥೈರ್ಯ ತುಂಬುವ ಮಹಾನ್ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ತಿಳಿಸಿದ್ದಾರೆ.

ಕೊರೊನಾದ ಸಂದರ್ಭದಲ್ಲಿ, ಜಿಲ್ಲಾಡಳಿತಕ್ಕೆ ನೆರವಾಗಿ, ಸೋಂಕಿತರಿಗೆ ಮಾಹಿತಿ ನೀಡುವುದು, ಅವರ ಗೊಂದಲಗಳನ್ನು ತಕ್ಕಮಟ್ಟಿಗೆ ನಿವಾರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇಂತಹ ಕಷ್ಟಕಾಲದಲ್ಲಿ ಕೆಲಸ ಮಾಡುತ್ತಿರುವುದು ಖುಷಿ ನೀಡುತ್ತಿದೆ ಎಂದು ಶಿಕ್ಷಕ ಪ್ರಭು ಹೇಳಿದ್ದಾರೆ.

ಇದನ್ನೂ ಓದಿ:

ಉಚಿತ ಆಂಬುಲೆನ್ಸ್ ವ್ಯವಸ್ಥೆ; ಕೊರೊನಾ ಸೋಂಕಿತರ ನೆರವಿಗೆ ನಿಂತ ಕಲಬುರಗಿ ಗ್ರಾಮ ಪಂಚಾಯಿತಿ

ಲಾಕ್​ಡೌನ್​ ಇದ್ದರೂ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನ ಓಡಾಟ; ಕಾರನ್ನು ವಶಕ್ಕೆ ಪಡೆದ ಕಲಬುರಗಿ ಪೊಲೀಸರು