ಉಚಿತ ಆಂಬುಲೆನ್ಸ್ ವ್ಯವಸ್ಥೆ; ಕೊರೊನಾ ಸೋಂಕಿತರ ನೆರವಿಗೆ ನಿಂತ ಕಲಬುರಗಿ ಗ್ರಾಮ ಪಂಚಾಯಿತಿ
ಆಂಬುಲೆನ್ಸ್ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರ ಪೋನ್ ನಂಬರ್ ಹಾಕಿದ್ದು, ಆ ನಂಬರ್ಗೆ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ರೋಗಿಗಳ ಮನೆ ಮುಂದೆ ಆಂಬುಲೆನ್ಸ್ ಬಂದು ನಿಲ್ಲಲಿದೆ. ಇನ್ನು ಆಂಬುಲೆನ್ಸ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಕೂಡಾ ಇದೆ. ಇದರ ಖರ್ಚುವೆಚ್ಚವನ್ನು ಗ್ರಾಮ ಪಂಚಾಯತಿಯಿಂದ ಭರಿಸಲು ನಿರ್ಧರಿಸಲಾಗಿದೆ.
ಕಲಬುರಗಿ: ಸರ್ಕಾರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದನ್ನು ತಡೆಯಲು ಲಾಕ್ಡೌನ್ ಜಾರಿಗೊಳಿಸಿದೆ. ಹೀಗಾಗಿ ಸಾರಿಗೆ ಸಂಚಾರಕ್ಕೆ ಕೂಡಾ ಬ್ರೇಕ್ ಬಿದ್ದಿದೆ. ಗ್ರಾಮೀಣ ಭಾಗದಲ್ಲಿ ಆಂಬುಲೆನ್ಸ್ಗಳು ಸಿಗುವುದಿಲ್ಲ. ಇನ್ನು ಖಾಸಗಿ ವಾಹನಗಳ ಮಾಲೀಕರು ಸಾವಿರಾರು ರೂಪಾಯಿ ಹಣ ಕೇಳುತ್ತಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರು ನಗರಕ್ಕೆ ಬಂದು ಚಿಕಿತ್ಸೆ ಪಡೆಯಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅನೇಕರಿಗೆ ಕೊರೊನಾ ಲಕ್ಷಣಗಳಿದ್ದರು ಅವರನ್ನು ನಗರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಹರಸಾಹಸ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಕಲಬುರಗಿ ಗ್ರಾಮ ಪಂಚಾಯತಿ ಗ್ರಾಮೀಣ ಜನರ ನೋವಿಗೆ ಸ್ಪಂಧಿಸುವ ಕೆಲಸ ಮಾಡಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮ ಪಂಚಾಯತಿ ವತಿಯಿಂದ ಇದೀಗ ಉಚಿತವಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಘತ್ತರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಘತ್ತರಗಾ, ಹವಳಗಾ, ಕೊಳನೂರು ಎನ್ನುವ ಮೂರು ಗ್ರಾಮಗಳಿದ್ದು, ಈ ಮೂರು ಗ್ರಾಮದ ಜನರಿಗೆ ಇದರಿಂದ ಅನುಕೂಲವಾಗಲಿದೆ. ಈ ಮೂರು ಗ್ರಾಮಗಳಲ್ಲಿ ಯಾರಿಗಾದರೂ ಕೊರೊನಾ ಸೋಂಕಿನ ಲಕ್ಷಣಗಳು ಇದ್ದರೆ, ಅಂತಹವರನ್ನು ಅಫಜಲಪುರ ಪಟ್ಟಣಕ್ಕೆ ಅಥವಾ ಕಲಬುರಗಿ ನಗರ ಆಸ್ಪತ್ರೆಗೆ ದಾಖಲಾಗಲು ಈ ಉಚಿತ ಆಂಬುಲೆನ್ಸ್ ಬಳಸಬಹುದಾಗಿದೆ.
ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮರಳಿ ಮನೆಗೆ ಬರುವವರೆಗೂ ಕೂಡಾ ಉಚಿತ ಆಂಬುಲೆನ್ಸ್ ಸೇವೆಯನ್ನು ಪಡೆಯಬಹುದಾಗಿದೆ. ಆಂಬುಲೆನ್ಸ್ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರ ಪೋನ್ ನಂಬರ್ ಹಾಕಿದ್ದು, ಆ ನಂಬರ್ಗೆ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ರೋಗಿಗಳ ಮನೆ ಮುಂದೆ ಆಂಬುಲೆನ್ಸ್ ಬಂದು ನಿಲ್ಲಲಿದೆ. ಇನ್ನು ಆಂಬುಲೆನ್ಸ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಕೂಡಾ ಇದೆ. ಇದರ ಖರ್ಚುವೆಚ್ಚವನ್ನು ಗ್ರಾಮ ಪಂಚಾಯತಿಯಿಂದ ಭರಿಸಲು ನಿರ್ಧರಿಸಲಾಗಿದೆ.
ಗ್ರಾಮ ಪಂಚಾಯತಿಯಿಂದ ಆಂಬುಲೆನ್ಸ್ ಖರೀದಿ ಘತ್ತರಗಾ ಗ್ರಾಮ ಪಂಚಾಯತಿಯಿಂದಲೇ ಮೂರು ಗ್ರಾಮಗಳ ಜನರಿಗೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ಸೆಕಂಡ್ ಹ್ಯಾಂಡ್ ಆಂಬುಲೆನ್ಸ್ ಅನ್ನು ಒಂದು ಲಕ್ಷ ರೂಪಾಯಿ ನೀಡಿ ಖರೀದಿಸಲಾಗಿದೆ. ಇತ್ತೀಚೆಗೆ ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಕೂಡಾ ಹೆಚ್ಚಾಗುತ್ತಿದೆ. ಸೂಕ್ತ ಸಮಯದಲ್ಲಿ ಅನೇಕರನ್ನು ಆಸ್ಪತ್ರೆಗೆ ಸೇರಿಸಲಿಕ್ಕಾಗದೇ ಗ್ರಾಮೀಣ ಭಾಗದ ಜನರು ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಘತ್ತರಗಾ ಗ್ರಾಮ ಪಂಚಾಯತಿ ಅಧ್ಯಕ್ಷ ವಿಠಲ್ ನಾಟೀಕರ್ ಮತ್ತು ಇನ್ನುಳಿದ ಸದಸ್ಯರು, ತಮ್ಮ ಗ್ರಾಮ ಪಂಚಾಯತಿಯಿಂದಲೇ ತಮ್ಮ ಹಳ್ಳಿಗೆ ಆಂಬುಲೆನ್ಸ್ ಖರೀದಿ ಮಾಡಿದರೆ ಸೂಕ್ತ ಎಂದು ನಿರ್ಧರಿಸಿ, ಸೆಕೆಂಡ್ ಹ್ಯಾಂಡ್ ಆಂಬುಲೆನ್ಸ್ ಖರೀದಿ ಮಾಡಿದ್ದಾರೆ. ಗ್ರಾಮ ಪಂಚಾಯತ್ನ ಸಂಪನ್ಮೂಲ ಸಂಗ್ರಹದ ನಿಧಿಯಿಂದ ಈ ಆಂಬುಲೆನ್ಸ್ ಖರೀದಿ ಮಾಡಲಾಗಿದೆ.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆಂಬುಲೆನ್ಸ್ ಖರೀದಿ ಮಾಡಲಾಗಿದೆ. ಜನರಿಗೆ ಉಚಿತವಾಗಿ ಇದನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿನ ಸೋಂಕಿತರಿಗೆ ಇಂದರಿಂದ ಸುಲಭವಾಗಿ ಚಿಕಿತ್ಸೆ ಪಡೆಯಲು ನಗರಕ್ಕೆ ಹೋಗಲು ಅನುಕೂಲವಾಗಲಿದೆ. ಸದ್ಯ ಲಾಭಕ್ಕಿಂತ ಹೆಚ್ಚಾಗಿ ಜನರ ಜೀವ ಮುಖ್ಯ. ಅವರ ಜೀವ ಉಳಿಯಬೇಕು ಎನ್ನುವ ಉದ್ದೇಶದಿಂದ ಈ ಕೆಲಸವನ್ನು ಪ್ರಾರಂಭಿಸಲಾಗಿದೆ ಎಂದು ಘತ್ತರಗಾ ಗ್ರಾಮ ಪಂಚಾಯತಿ ಅಧ್ಯಕ್ಷ ವಿಠಲ್ ನಾಟೀಕರ್ ತಿಳಿಸಿದ್ದಾರೆ.
ನಾವು ನಗರಕ್ಕೆ ಆಸ್ಪತ್ರೆಗೆ ಹೋಗಲಿಕ್ಕೆ ಸಾಕಷ್ಟು ಪರದಾಡಬೇಕಿತ್ತು. ಇದೀಗ ನಮ್ಮ ಗ್ರಾಮ ಪಂಚಾಯತಿಯವರು ಆಂಬುಲೆನ್ಸ್ ಖರೀದಿ ಮಾಡಿದ್ದರಿಂದ ಹೆಚ್ಚಿನ ಅನಕೂಲವಾಗಿದೆ. ಇದರಿಂದ ಅನೇಕರ ಪ್ರಾಣ ಉಳಿಯಲಿದೆ ಎಂದು ಗ್ರಾಮಸ್ಥ ಮಲಕಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ:
Published On - 10:27 am, Mon, 17 May 21