ಕಲಬುರಗಿ: ದಿಕ್ಕು ತೋಚದೆ ನಿಂತಿರುವ ಇವರೆಲ್ಲಾ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂಗನಹಳ್ಳಿ ಮತ್ತು ಮಳಖೇಡ ಗ್ರಾಮದ ರೈತರು. ಇವರ ಈ ಸಂಕಷ್ಟಕ್ಕೆ ಕಾರಣ ಸಿಮೆಂಟ್ ಪ್ಯಾಕ್ಟರಿ, ಒಂದು ಪ್ರದೇಶಕ್ಕೆ ದೊಡ್ಡ ಪ್ಯಾಕ್ಟರಿಗಳು ಬಂದರೆ ಅಲ್ಲಿನ ಜನರಿಗೆ ಉದ್ಯೋಗ ಸಿಗುವುದರ ಜೊತೆಗೆ ರೈತರ ಭೂಮಿಗೆ ಹೆಚ್ಚಿನ ಬೆಲೆ ಸಿಗುತ್ತದೆ ಅಂತಾರೆ. ಆದರೆ ಈ ರೈತರಿಗೆ ಮಾತ್ರ ಯಾಕಾದ್ರು ತಮ್ಮ ಗ್ರಾಮದಲ್ಲಿ ಸಿಮೆಂಟ್ ಪ್ಯಾಕ್ಟರಿ ಪ್ರಾರಂಭವಾಗಿದೆಯೋ ಅಂತ ಚಿಂತಿಸುವಂತಾಗಿದೆ. ಹೌದು 2011 ರಲ್ಲಿ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ರಾಜಶ್ರೀ ಸಿಮೆಂಟ್ ವರ್ಕ್ಸ್ ಎನ್ನುವ ಸಿಮೆಂಟ್ ಪ್ಯಾಕ್ಟರಿಯನ್ನು ಪ್ರಾರಂಭಿಸಿಲು ಮುಂದಾಗಿದ್ದು, ಹೀಗಾಗಿ ಸಿಮೆಂಟ್ ಪ್ಯಾಕ್ಟರಿಗೆ ಬೇಕಿದ್ದ ಭೂಮಿಯನ್ನು ಜಿಲ್ಲಾಡಳಿತ ರೈತರಿಗೆ ಮನವೊಲಿಸಿ ಪ್ಯಾಕ್ಟರಿಗೆ ಭೂಮಿ ನೀಡುವಂತೆ ಮಾಡಿತ್ತು.
ಹೀಗಾಗಿ ಸೇಡಂ ತಾಲೂಕಿನ ಹಂಗನಳ್ಳಿ ಮತ್ತು ಮಳಖೇಡ ಗ್ರಾಮದ ವಿವಿಧ ಸರ್ವೇ ನಂಬರಗಳ 572 ಎಕರೆ ಭೂಮಿಯನ್ನು ಪ್ಯಾಕ್ಟರಿಗೆ ನೀಡುವಂತೆ ಹೇಳಿತ್ತು. ಆ ಸಂದರ್ಭದಲ್ಲಿ ಪ್ಯಾಕ್ಟರಿಯವರು ಎಲ್ಲರ ಜಮೀನುಗಳಿಗೆ ಯೋಗ್ಯ ರೀತಿಯಲ್ಲಿ ಬೆಲೆಯನ್ನು ನೀಡಲಾಗುವುದು, ಜೊತಗೆ ಭೂಮಿ ಕೊಟ್ಟ ರೈತರ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ಕೊಡಲಾಗುವುದು ಅಂತ ಹೇಳಿದ್ದರು. ಇದರಿಂದ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಯಾವುದೇ ತಂಟೆ ತಕರಾರು ಮಾಡದೆ ಪ್ಯಾಕ್ಟರಿಯವರಿಗೆ ಬಿಟ್ಟು ಕೊಡಲು ನಿರ್ಧಿರಿಸಿದ್ರು. ಆದರೆ ಆಗ ಪ್ಯಾಕ್ಟರಿಯವರು ರೈತರ ಫಲವತ್ತಾದ ಭೂಮಿಗೆ ಕೇವಲ ಮೂರುವರೇ ಲಕ್ಷ ರೂಪಾಯಿ ನೀಡಿದ್ರೆ, ಸರ್ಕಾರದ ಉಪಯೋಗಕ್ಕೆ ಭಾರದ ಜಮೀನಿಗೆ ಎಂಟು ಲಕ್ಷ ರೂಪಾಯಿ ನೀಡಿ, ರೈತರ ಕಣ್ಣಲ್ಲಿ ಮಣ್ಣೆರೆಚಿದ್ದಾರೆ.
ಇತ್ತ ಸರ್ಕಾರಿ ಭೂಮಿಗೆ ಉತ್ತಮ ಬೆಲೆ ನೀಡಿ, ಶಹಬ್ಬಾಶ್ ಅನಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿನ 150 ರೈತರು, ಇದೀಗ ಕಲಬುರಗಿ ಜಿಲ್ಲಾಡಳಿತ ಮತ್ತು ಪ್ಯಾಕ್ಟರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹತ್ತಾರು ಭಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಮಾಜಿ ಕಾರ್ಮಿಕ ಸಚಿವ ಎಸ್ ಕೆ ಕಾಂತ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆದ್ರೆ ಇಲ್ಲಿವರಗೆ ಯಾವುದೇ ಪ್ರಯೋಜನವಾಗಿಲ್ಲ.
ಹಂಗನಹಳ್ಳಿಯಲ್ಲಿ ಸರ್ಕಾರದ 24 ಎಕರೆ ಒಂಬತ್ತು ಗುಂಟೆ ಜಾಗವಿದೆ. ಅದನ್ನು ಪ್ಯಾಕ್ಟರಿಯವರು ಸರ್ಕಾರಕ್ಕೆ ಪ್ರತಿ ಎಕರೆ ಭೂಮಿಗೆ ಎಂಟು ಲಕ್ಷದಂತೆ ನೀಡಿದ್ದಾರೆ. ಅದು ಕೂಡಾ ಉಪಯೋಗಕ್ಕೆ ಬಾರದ ಜಮೀನು. ಇನ್ನು ಫಲವತ್ತಾದ ರೈತರ ಕೃಷಿ ಭೂಮಿಗೆ ಕೇವಲ ಪ್ರತಿ ಎಕರೆಗೆ ಮೂರುವರೇ ಲಕ್ಷ ನೀಡಿದ್ದಾರೆ. ಯಾಕಂದರೆ 2011 ರಲ್ಲಿ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲದೆ, ಸಿಮೆಂಟ್ ಪ್ಯಾಕ್ಟರಿ ಪರವಾಗಿ ನಿಂತಿದ್ದರಿಂದ ಇಂತಹದೊಂದು ಅನ್ಯಾಯ ರೈತರಿಗೆ ಆಗಿದೆ. ಹೀಗಾಗಿ ಸರ್ಕಾರದ ಭೂಮಿಗೆ ನೀಡಿದಂತೆ ರೈತರ ಭೂಮಿಗೂ ಪ್ರತಿ ಎಕರೆಗೆ ಎಂಟು ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಅನೇಕ ಹೋರಾಟಗಳನ್ನು ರೈತರು ಮಾಡಿದ್ದಾರೆ. ಕಳೆದ ಒಂದು ದಶಕದಿಂದ ಅನೇಕರನ್ನು ಬೇಟಿಯಾಗಿ ತಮ್ಮ ಸಮಸ್ಯೆ ಹೇಳಿದ್ದಾರೆ. ಆದ್ರೆ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇನ್ನು ಭೂಮಿ ಕೊಟ್ಟ ರೈತರ ಪ್ರತಿಯೊಂದು ಕುಟುಂಬಕ್ಕೆ ಪ್ಯಾಕ್ಟರಿಯಲ್ಲಿ ಉದ್ಯೋಗ ಕೊಡೋದಾಗಿ ಕಂಪನಿ ಹೇಳಿತ್ತಂತೆ. ಆದ್ರೆ ಉದ್ಯೋಗವನ್ನು ಕೂಡ ಕಂಪನಿ ನೀಡಿಲ್ಲವಂತೆ.
ಸರ್ಕಾರಕ್ಕೆ ಪ್ರತಿ ಎಕರೆಗೆ ಎಂಟು ಲಕ್ಷ ಕೊಡಲಾಗಿದೆ ಅಂತ ಹೇಳಿದ್ದ ಕಂಪನಿಯವರು, ಇತ್ತ ರೈತರಿಂದ ಮೂರುವರೇ ಲಕ್ಷ ರೂಪಾಯಿಯಂತೆ ಪ್ರತಿ ಎಕರೆ ಭೂಮಿಯನ್ನು ಖರೀದಿಸಿರುವ ಸಿಮೆಂಟ್ ಪ್ಯಾಕ್ಟರಿಯ ಅವ್ಯವಹಾರ ಇದೀಗ ದಾಖಲಾತಿಗಳಿಂದ ಬಯಲಾಗಿದೆ. ಆದ್ರೆ ಅಂದು ಕಡಿಮೆ ದುಡ್ಡು ಕೊಟ್ಟರು ಕೂಡಾ ಪ್ಯಾಕ್ಟರಿಯವರು ಇಲ್ಲಿವರಗೆ ಭೂಮಿ ಕೊಟ್ಟ ರೈತ ಕುಟುಂಬಗಳಿಗೆ ಯಾವುದೇ ಉದ್ಯೋಗವನ್ನು ಕೂಡಾ ನೀಡಿಲ್ಲ. ಹೀಗಾಗಿ ರೈತರು ತಮಗೆ ಅನ್ಯಾಯವಾಗಿದೆ. ನ್ಯಾಯ ಕೊಡಿ ಅಂತ ಕೇಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ಪ್ಯಾಕ್ಟರಿಯವರ ಜೊತೆ ಮಾತನಾಡಿ ರೈತರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಮಾಡಬೇಕಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ