ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಆನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಯಲ್ಲಿ ಒಟ್ಟು 12 ಕೊಠಡಿಗಳಿದ್ದು, ಈ ಪೈಕಿ 8 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಆಗಾಗ ಕುಸಿದು ಬೀಳುತ್ತಿರುವ ಶಾಲೆಯ ಗೋಡೆಗಳು ಹಾಗೂ ಮೇಲ್ಛಾವಣಿಯ ಸಿಮೆಂಟ್, ಪ್ರತಿನಿತ್ಯ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಇಟ್ಟುಕೊಂಡು ತರಗತಿಯಲ್ಲಿ ಕೂರಬೇಕಾಗಿದೆ. ಈ ಕುರಿತು ಹೊಸ ಕೊಠಡಿಗಳನ್ನು ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಒಟ್ಟು 407 ವಿದ್ಯಾರ್ಥಿಗಳು, ಶಿಕ್ಷಕರು ಇರುವ ಸರ್ಕಾರಿ ಶಾಲೆಯಲ್ಲಿ ನಿತ್ಯ ಜೀವಭಯದಲ್ಲೇ ಮಕ್ಕಳು, ಶಿಕ್ಷಕರು ತೆರಳುತ್ತಿದ್ದಾರೆ.
ಇನ್ನು ನಿನ್ನೆ(ಡಿ.5) ಕೂಡಾ ಮುಂಜಾನೆ 10 ಗಂಟೆ ಸಮಯದಲ್ಲಿ ನಾಲ್ಕನೆ ತರಗತಿ ಮಕ್ಕಳಿದ್ದ ಶಾಲೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಮೈದಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದರಿಂದ, ವಿದ್ಯಾರ್ಥಿಗಳು ಬಚಾವಾಗಿದ್ದಾರೆ.
ಇನ್ನು ಆನೂರು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು 1992 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಮೂವತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಕೊಠಡಿಗಳು ಇದೀಗ ಬೀಳುವ ಹಂತಕ್ಕೆ ಬಂದಿವೆ. ಹೀಗಾಗಿ ಗ್ರಾಮಸ್ಥರು, ಇದ್ದಿರುವ ಕೊಠಡಿಗಳನ್ನು ಕೆಡವಿ, ಹೊಸದಾಗಿ ಕೊಠಡಿಗಳನ್ನು ನೀರ್ಮಾಣ ಮಾಡಬೇಕು ಎಂದು ಕಳೆದ ಒಂದು ವರ್ಷಗಳಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದಾರಂತೆ. ಆದರೆ ಭರವಸೆ ಬಿಟ್ಟರೆ ಕೊಠಡಿಗಳ ನೀರ್ಮಾಣವಾಗಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು. ಇನ್ನು ಮೂರು ಕೊಠಡಿಗಳ ನೀರ್ಮಾಣಕ್ಕೆ ಅನುಧಾನ ಬಂದಿದೆಯಂತೆ ಆದರೆ ಇನ್ನು ಕೊಠಡಿಗಳ ನೀರ್ಮಾಣ ಆರಂಭವಾಗಿಲ್ಲ. ಸದ್ಯ ಹೊಸದಾಗಿ ಕೊಠಡಿಗಳ ನೀರ್ಮಾಣವಾಗುವವರಗೆ ಸದ್ಯ ಬೇರೆಕಡೆ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Tue, 6 December 22