ಇದು ಮುಂದೆ ಬೆಲೆ ಏರುವುದರ ಮುನ್ಸೂಚನೆ: ಗೊಡ್ಡಾದ ತೊಗರಿ ಬೆಳೆ, ಒಣಗುತ್ತಿರೋ ಗಿಡಗಳು, ಬೆಳೆಗಾರರು ಕಂಗಾಲು
ರಾಜ್ಯದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಬರಬೇಕಿದೆ. ಕೂಡಲೇ ತೊಗರಿ ಬೆಳೆಗಾರರಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿ, ಅವರಿಗೆ ನೆರವು ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ರಾಜ್ಯದ ತೊಗರಿ ಕಣಜ ಅಂತ ಖ್ಯಾತಿ ಪಡೆದಿರೋದು ಕಲಬುರಗಿ (kalaburagi). ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವುದು ಇದೇ ಕಲಬುರಗಿ ಜಿಲ್ಲೆಯಲ್ಲಿ. ಆದ್ರೆ ಈ ಬಾರಿ ಅತಿಯಾದ ಮಳೆಯಿಂದ ತೊಗರಿ ಬೆಳೆಗಾರರು (toor dal growers) ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮೊದಲು ಅತಿವೃಷ್ಟಿಯಿಂದ (kalaburagi rains) ಸಾವಿರಾರು ಹೆಕ್ಟೇರ್ ನಲ್ಲಿ ಬೆಳದಿದ್ದ ತೊಗರಿ ಬೆಳೆ ಹಾಳಾಗಿ ಹೋಗಿತ್ತು. ಇದೀಗ ಉಳಿದಿರೋ ಅಲ್ಪಸ್ವಲ್ಪ ತೆನೆಯೂ ಗೊಡ್ಡಾಗಿದ್ದು, ಕಾಯಿಯಾಗುವ ಹಂತದಲ್ಲಿ ಒಣಗಿ ಹೋಗುತ್ತಿದೆ. ಇದರಿಂದ ತೊಗರಿ ಉತ್ಪಾದನೆ ಕುಂಠಿತವಾಗುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ತೊಗರಿ ಬೇಳೆ ಬೆಲೆ ಹೆಚ್ಚಾಗುವ ಆತಂಕ ಎದುರಾಗಿದೆ.
ಒಣಗಿರೋ ತೊಗರಿ ಬೆಳೆ. ಅದನ್ನು ನೋಡಿ ತನ್ನ ಸಂಕಷ್ಟವನ್ನು ತೋಡಿಕೊಳ್ತಿರುವ ರೈತ. ಪರಿಸ್ಥಿತಿ ಹೀಗೆಯೇ ಆದ್ರೆ ತಾವು ಬದಕೋದಾದ್ರು ಹೇಗೆ ಅನ್ನೋ ಆತಂಕವನ್ನು ವ್ಯಕ್ತಪಡಿಸುತ್ತಿರುವ ರೈತರು. ಮತ್ತೊಂದಡೆ ಒಣಗಿದ ತೊಗರಿ ಗಿಡಗಳನ್ನು ಹಿಡಿದುಕೊಂಡು, ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ರೈತರು ಪ್ರತಿಭಟನೆ ನಡೆಸಿದ್ದಾರೆ, ಮತ್ತೊಂದೆಡೆ ರೈತರು ಜಮೀನಿನಲ್ಲಿ ತಾವು ಬೆಳದಿದ್ದ ಬೆಳೆಯನ್ನು ನೋಡಿ ಕಂಗಾಲಾಗುತ್ತಿದ್ದಾರೆ.
ಯಾಕಂದ್ರೆ ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ತೊಗರಿ ಬೆಳೆ, ಇದೀಗ ಹೂ ಬಿಟ್ಟಿದ್ದು ಕಾಯಿಯಾಗುವ ಹಂತಕ್ಕೆ ಬಂದಿತ್ತು. ಇದು ರೈತರಲ್ಲಿಯೂ ಮಂದಹಾಸವನ್ನು ಹೆಚ್ಚಿಸಿತ್ತು. ಆದ್ರೆ ಕಾಯಿಯಾಗುವ ಹಂತದಲ್ಲಿಯೇ ತೊಗರಿ ಗಿಡಗಳು ನೆಟೆ ರೋಗದಿಂದ ಒಣಗುತ್ತಿವೆ. ಇದು ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದೆ. ಹೌದು ಕಲಬುರಗಿ ಜಿಲ್ಲೆಯ ಕಾಳಗಿ, ಚಿತ್ತಾಪುರ, ಆಳಂದ ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ತೊಗರಿ ಬೆಳೆ ಗೊಡ್ಡಾಗುತ್ತಿದೆ.
ರಾಜ್ಯದ ತೊಗರಿ ಕಣಜ ಖ್ಯಾತಿಯ ತೊಗರಿ ಬೆಳೆಗಾರರು ಕಂಗಾಲು
ಹೌದು ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವುದು ಕಲಬುರಗಿ ಜಿಲ್ಲೆಯಲ್ಲಿ. ಹೀಗಾಗಿಯೇ ಕಲಬುರಗಿಯನ್ನು ರಾಜ್ಯದ ತೊಗರಿ ಕಣಜ ಅಂತ ಕರೆಯುತ್ತಾರೆ. ಕಲಬುರಗಿಯಲ್ಲಿ ಬೆಳೆಯುವ ತೊಗರಿ ರಾಜ್ಯವಲ್ಲದೆ, ನೆರೆಯ ರಾಜ್ಯಗಳಿಗೆ ಕೂಡಾ ಹೋಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಸರಿಸುಮಾರು ಒಂಬತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪ್ರತಿವರ್ಷ ತೊಗರಿಯನ್ನು ಬೆಳೆಯಲಾಗುತ್ತದೆ.
ಆದ್ರೆ ಈ ಬಾರಿ ತೊಗರಿ ಬೆಳೆಗಾರರಿಗೆ ಮೇಲಿಂದ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರಿಂದ ಸರಿಸುಮಾರು ಮೂರು ಲಕ್ಷ ಹೆಕ್ಟೇರ್ ನಷ್ಟು ತೊಗರಿ ಬೆಳೆ ಈಗಾಗಲೇ ಹಾಳಾಗಿ ಹೋಗಿದೆ. ಅಲ್ಲಲ್ಲಿ ಬೆಳೆಯಿದ್ದರೂ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಹೂ ಬಿಟ್ಟಿರಲಿಲ್ಲ. ಇದೀಗ ಕೆಲವಡೇ ಹೂ ಬಿಟ್ಟರು ಕೂಡಾ ಕಾಯಿಯಾಗುವ ಹಂತದಲ್ಲಿ ತೊಗರಿ ಬೆಳೆಗೆ ನೆಟೆ ರೋಗ ಕಾಟ ಆರಂಭವಾಗಿದ್ದು, ಕಾಯಿಯಾಗುವ ಮೊದಲೇ ಗಿಡಗಳು ಒಣಗಿ ಹೋಗುತ್ತಿವೆ ಎನ್ನುತ್ತಾರೆ ಚಂದು ಜಾದವ್, ರೈತ.
ಹೌದು ಮೊದಲೇ ರೈತರು ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಕಳೆದುಕೊಂಡಿದ್ದರು. ಇರುವ ಬೆಳೆಗೆ ಇದೀಗ ನಟೆ ರೋಗದ ಕಾಟ ಆರಂಭವಾಗಿದೆ. ತೊಗರಿ ಗಿಡವಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗೋದಿಲ್ಲಾ ಅಂತಿದ್ದಾರೆ ರೈತರು. ಇನ್ನು ಈ ಬಾರಿ ಜಿಲ್ಲೆಯಲ್ಲಿ ತೊಗರಿ ಉತ್ಪಾದನೆ ಕೂಡಾ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ.
ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ತೊಗರಿ ಬೆಳದಿದ್ದರು. ಈ ಭಾಗದಲ್ಲಿ ವಾಣಿಜ್ಯ ಬೆಳೆ ತೊಗರಿಯೇ ಆಗಿರುವುದರಿಂದ ಉತ್ತಮ ಇಳುವರಿ ಬಂದ್ರೆ ಮಾತ್ರ ರೈತರಿಗೆ ಅನಕೂಲ. ಆದ್ರೆ ಈ ಬಾರಿ ಮೇಲಿಂದ ಮೇಲೆ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲಕುತ್ತಿದ್ದಾರೆ. ಮಾಡಿದ ಸಾಲವನ್ನು ತೀರಿಸೋದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ಹೀಗಾಗಿ ಸರ್ಕಾರ ತಮಗೆ ಕೂಡಲೇ ಪರಿಹಾರ ನೀಡಬೇಕು ಅಂತ ಆಗ್ರಹಿಸಿದ್ದಾರೆ ರೈತರಾದ ಶರಣಬಸಪ್ಪ ಮಮಶೆಟ್ಟಿ.
ರಾಜ್ಯದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಬರಬೇಕಿದೆ. ಕೂಡಲೇ ತೊಗರಿ ಬೆಳೆಗಾರರಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿ, ಅವರಿಗೆ ನೆರವು ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಇಲ್ಲದಿದ್ದರೆ, ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲಕುತ್ತಾರೆ. (ವರದಿ: ಸಂಜಯ್, ಟಿ ವಿ 9, ಕಲಬುರಗಿ)