ಬರಿದಾಗುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು: ರೈತರಲ್ಲಿ ಆತಂಕ
ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿ ಬತ್ತಿ ಹೋಗುತ್ತಿರುವುದರಿಂದ ರೈತರು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯಲ್ಲಿ ನದಿಯ ನೀರಿನ ಮಟ್ಟ ತೀವ್ರವಾಗಿ ಇಳಿದಿದ್ದು, ರೈತರ ಬೆಳೆಗಳು ಮತ್ತು ಜಾನುವಾರುಗಳಿಗೆ ಅಪಾಯ ಎದುರಾಗಿದೆ. ಹಿಪ್ಪರಗಿ ಬ್ಯಾರೇಜ್ ನಿಂದ ನೀರು ಬಿಡುಗಡೆ ಮಾಡುವಂತೆ ಮತ್ತು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಪಡೆಯುವಂತೆ ರೈತರು ಆಗ್ರಹಿಸುತ್ತಿದ್ದಾರೆ.
Updated on: Mar 29, 2025 | 6:42 PM

ಈಗ ಬೇಸಿಗೆ ಆರಂಭವಾಗಿದೆ. ಜನರು ಬಿರು ಬಿಸಿಲಿನಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ನದಿ ಒಡಲು ಖಾಲಿಯಾಗ್ತಿದ್ದು, ರೈತರಿಗೆ ಚಿಂತೆ ಶುರುವಾಗಿದೆ. ಮೈತುಂಬಿ ಹರಿಯುತ್ತಿದ್ದ ಕೃಷ್ಣೆ ಬರಿದಾಗಿದ್ದು, ರೈತರು ನದಿಗೆ ನೀರು ಬಿಡಿ, ಮುಂಬರುವ ಕಂಟಕ ತಪ್ಪಿಸಿ ಎನ್ನುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮುತ್ತೂರು, ಮೈಗೂರು ತುಬಚಿ ಗ್ರಾಮದ ಬಳಿಯ ಕೃಷ್ಣಾ ನದಿ ಒಡಲು ಬರಿದಾಗಿದೆ. ಕೃಷ್ಣಾ ನದಿ ಬಾಗಲಕೋಟೆ ಜಿಲ್ಲೆಯ ಜೀವನದಿ. ಇದನ್ನು ನಂಬಿಕೊಂಡು ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಮಳೆಗಾಲ, ಬೇಸಿಗೆಕಾಲ ಮತ್ತು ಚಳಿಗಾಲ ಮೂರು ಕಾಲದಲ್ಲೂ ಕೃಷ್ಣಾ ನದಿಯೇ ರೈತರಿಗೆ ಆಸರೆ. ಆದರೆ, ಈಗ ಬೇಸಿಗೆ ಆರಂಭವಾಗಿದೆ. ನೀರು ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ತುಂಬಿ ಹರಿಯುತ್ತಿದ್ದ ಕೃಷ್ಣೆಯ ಒಡಲು ಬತ್ತಿ ಹೋಗಿದೆ. ಅಲ್ಲಲ್ಲಿ ತಗ್ಗು ಗುಂಡಿಗಳಲ್ಲಿ ಮಾತ್ರ ನೀರಿದ್ದು, ಅವುಗಳಿಗೆ ಪೈಪ್ ಹಾಕಿ ಮೋಟರ್ ಪಂಪ್ ಮೂಲಕ ರೈತರು ತಮ್ಮ ಹೊಲಗಳಿಗೆ ನೀರು ಸಾಗಿಸುತ್ತಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಈ ನೀರು ಕೂಡ ಖಾಲಿಯಾಗಲಿದ್ದು, ಜನ ಜಾನುವಾರುಗಳು ಅಷ್ಟೇ ಅಲ್ಲ ಪಕ್ಷಿ ಜಲಚರ ಜೀವಿಗಳಿಗೂ ನೀರಿನ ಅಭಾವವಾಗಲಿದೆ.

ಕೃಷ್ಣಾ ನದಿಯಿಂದ ಲಕ್ಷಾಂತರ ಎಕರೆ ಭೂಮಿ ನೀರಾವರಿ ಅಗುತ್ತದೆ. ಕೃಷ್ಣಾ ನದಿ ನೀರಿನಿಂದ ಬೆಳೆಯುವ ಮೇವು ನಂಬಿ ಈ ಭಾಗದ ಹಳ್ಳಿ ಜನರು ಹೈನುಗಾರಿಕೆ ಮಾಡುತ್ತಾರೆ. ನೀರು ಖಾಲಿಯಾಗುತ್ತಿರುವುದರಿಂದ ರೈತರ ಉಪಕಸುಬು ಹೈನುಗಾರಿಕೆಗೂ ಹೊಡೆತ ಬೀಳಲಿದೆ.

ಇನ್ನು ನದಿ ಖಾಲಿಯಾದರೆ ಕೊಳವೆಬಾವಿಗಳ ಅಂತರ್ಜಲ ಕುಸಿಯುತ್ತದೆ. ಇನ್ನು ಕೃಷ್ಣಾ ನದಿ ಖಾಲಿಯಾಗಿದ್ದು ಜಲಚರಗಳು ಸಾವನ್ನಪ್ಪುತ್ತವೆ. ಜಲಚರಗಳನ್ನು ಅರಸಿ ತಿನ್ನೋದಕ್ಕೆ ಬಂದಿರುವ ಪಕ್ಷಿಗಳೇ ಇದಕ್ಕೆ ಸಾಕ್ಷಿ ಅಂತ ಹೇಳಬುದು. ಪಕ್ಷಿಗಳು ಖಾಲಿಯಾದ ಕೃಷ್ಣಾ ನದಿಗಲ್ಲಿ ಆಹಾರ ಅರಸುತ್ತಿವೆ. ಇದೆಲ್ಲದಕ್ಕೂ ಪರಿಹಾರ ಅಂದರೆ ತಕ್ಷಣವೇ ಹಿಪ್ಪರಗಿ ಬ್ಯಾರೇಜ್ನಿಂದ ಅರ್ಧದಿಂದ 1 ಟಿಎಮ್ಸಿ ನೀರನ್ನು ತಕ್ಷಣ ಬಿಡಿಸಬೇಕು. ನಂತರ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 3-4 ಟಿಎಮಸಿ ನೀರನ್ನು ಕೃಷ್ಣಾ ನದಿಗೆ ಹರಿಸಬೇಕು.

ಈ ಬಗ್ಗೆ ರಾಜ್ಯ ಸರಕಾರ ಮಹಾರಾಷ್ಟ್ರ ಜೊತೆ ಚರ್ಚಿಸಬೇಕು. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಇದೆ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ, ನಮ್ಮ ರಾಜ್ಯದ ಬಿಜೆಪಿ ಸಂಸದರು ಹಾಗೂ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ ಮನವೊಲಿಸಬೇಕು.ಆ ಮೂಲಕ ಕೊಯ್ನಾದಿಂದ ನೀರು ಹರಿಸಿ ರೈತರಿಗೆ, ಜಾನುವಾರುಗಳ ಬಾಯಾರಿಸಬೇಕು ಎಂದು ಆಗ್ರಹ ಕೇಳಿಬಂದಿದೆ.



















