ಶಶಾಂಕ್-ಕೃಷ್ಣ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ, ಡಿಫರೆಂಟ್ ಹೆಸರು
Darling Krishna: ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಕಾಂಬಿನೇಷನ್ನಲ್ಲಿ ಮೂಡಿಬಂದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. ಇದೀಗ ಇದೇ ಕಾಂಬಿನೇಷನ್ನ ಹೊಸ ಸಿನಿಮಾ ಬರುತ್ತಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಿನಿಮಾದ ಶೀರ್ಷೆಕೆ ಭಿನ್ನವಾಗಿದೆ. ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ನಾಯಕ ಮತ್ತು ನಿರ್ದೇಶಕರು ಮಾತನಾಡಿದ್ದಾರೆ...

‘ಶಶಾಂಕ್, ಫ್ಲಾಪ್ ಸಿನಿಮಾಗಳನ್ನು ಮಾಡಿರಬಹುದು ಆದರೆ ಎಂದೂ ಕೆಟ್ಟ ಸಿನಿಮಾಗಳನ್ನು ಮಾಡಿಲ್ಲ’ ಎಂದಿದ್ದರು ನಟ ಸುದೀಪ್ (Kichcha Sudeep). ಅದು ನಿಜವೂ ಹೌದು, ಕೆಟ್ಟ ಅಭಿರುಚಿ ಇರುವ ಒಂದೇ ಒಂದು ಸಿನಿಮಾವನ್ನೂ ಸಹ ಶಶಾಂಕ್ ಮಾಡಿಲ್ಲ. ಬದಲಾಗಿ ಕತೆಗೆ ಒತ್ತಿರುವ, ಮಹಿಳಾ ಪರ, ಮಧ್ಯಮವರ್ಗದ ನೋವುಗಳಿಗೆ ದನಿಯಾಗುವಂಥಹಾ ಸಿನಿಮಾಗಳನ್ನು ಮಾತ್ರವೇ ಮಾಡಿದ್ದಾರೆ. ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ನಲ್ಲಿ ಬಂದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸಹ ಮಹಿಳಾಪರ ದನಿ ಹೊಂದಿತ್ತು. ಆ ಸಿನಿಮಾ ಹಿಟ್ ಆಯ್ತು ಇದೀಗ ಮತ್ತೆ ಇದೇ ಜೋಡಿ ಒಂದಾಗಿದೆ.
“ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಇದೀಗ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಕೈ ಹಾಕಿದ್ದಾರೆ ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ. ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾಕ್ಕೆ “ಬ್ರ್ಯಾಟ್” ಎಂದು ಹೆಸರಿಡಲಾಗಿದೆ. ಗುರುನಂದನ್ ಅಭಿನಯದ ಯಶಸ್ವಿ “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಮಂಜುನಾಥ್ ಕಂದಕೂರ್ ಅವರು ಮತ್ತೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
‘ಶಶಾಂಕ್ ಅವರು ಈವರೆಗೂ ನಿರ್ದೇಶನ ಮಾಡಿರದ ಹಾಗೂ ನಾನು ಕೂಡ ಈವರೆಗೂ ಮಾಡಿರದ ವಿಭಿನ್ನ ಕಥೆಯುಳ್ಳ ಚಿತ್ರ “ಬ್ರ್ಯಾಟ್”. ನನ್ನ ಪ್ರಕಾರ ಕನ್ನಡದಲ್ಲಿ ತೀರ ಅಪರೂಪವಾದ ಕತೆ ಹೊಂದಿರುವ ಸಿನಿಮಾ ಇದು. ಲವ್ ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತಿದ್ದ ನನಗೆ ಸಹ ಇದು ಭಿನ್ನ ಸಿನಿಮಾ. ಈ ಸಿನಿಮಾಕ್ಕಾಗಿ ನಾನು ತರಬೇತಿ ಸಹ ಪಡೆದುಕೊಂಡಿದ್ದೇನೆ. ಸಿನಿಮಾದಲ್ಲಿ ಮನಿಶಾ ನಾಯಕಿಯಾಗಿದ್ದಾರೆ, ಅವರು ಕನ್ನಡದವರೆ ಆಗಿದರೂ ಮೊದಲ ಬಾರಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಾವುದೇ ಕೊರತೆ ಇಲ್ಲದ ಹಾಗೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ’ ಎಂದಿದ್ದಾರೆ ನಾಯಕ ಡಾರ್ಲಿಂಗ್ ಕೃಷ್ಣ.
ಇದನ್ನೂ ಓದಿ:ಸಿಸಿಎಲ್ನಲ್ಲಿ ರನ್ ಹೊಳೆ ಹರಿಸಿದ ಡಾರ್ಲಿಂಗ್ ಕೃಷ್ಣಗೆ ವಿಶೇಷ ಗೌರವ
‘ಅತೀ ಹೆಚ್ಚು ತರಲೆ ಮಾಡುವ ಹುಡುಗರನ್ನು ಸಾಮಾನ್ಯವಾಗಿ “ಬ್ರ್ಯಾಟ್” ಎಂದು ಕರೆಯುತ್ತಾರೆ. ಅದರಲ್ಲೂ ಹದಿನಾರು ವರ್ಷದ ಒಳಗಿರುವ ಮಕ್ಕಳಿಗೆ ಈ ಪದ ಬಳಸುವುದು ಹೆಚ್ಚು. ನಮ್ಮ ಚಿತ್ರದ ಕಥೆಯೂ ಸಹ ಯುವಜನತೆಗೆ ಹತ್ತಿರವಾಗಿರುವುದರಿಂದ ಈ ಶೀರ್ಷಿಕೆ ಸೂಕ್ತವೆನಿಸಿತು. ಕನ್ನಡದಲ್ಲಿ ಶೀರ್ಷಿಕೆ ಇಡೋಣ ಎಂದು ಕೊಂಡು ನೋಡಿದಾಗ ಸಾಕಷ್ಟು ಈಗಾಗಲೇ ಬಂದಿರುವ ಚಿತ್ರಗಳ ಶೀರ್ಷಿಕೆಗಳೆ ದೊರಕಿತು. ಹಾಗಾಗಿ, ಹೇಗಿದರೂ ಇದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬರುತ್ತಿರುವ ಚಿತ್ರವಾಗಿರುವುದರಿಂದ “ಬ್ರ್ಯಾಟ್” ಶೀರ್ಷಿಕೆಯೇ ಸರಿ ಎನಿಸಿತು’ ಎಂದು ಹೆಸರಿನ ಹಿಂದಿನ ಗುಟ್ಟು ಹೇಳಿದರು ನಿರ್ದೇಶಕ ಶಶಾಂಕ್.
‘ಬ್ರ್ಯಾಟ್’ ಸಿನಿಮಾ ಅಪ್ಪ-ಮಗನ ನಡುವೆ ನಡೆವ ಸಂಘರ್ಷದ ಕತೆ ಒಳಗೊಂಡಿದೆಯಂತೆ. ಅಪ್ಪನಿಗೆ ಮಗನೇ “ಬ್ರ್ಯಾಟ್”, ಮಗನಿಗೆ ಅಪ್ಪ ‘ಬ್ರ್ಯಾಟ್’. ಅಪ್ಪನ ಪಾತ್ರದಲ್ಲಿ ಅಚ್ಯುತ ಕುಮಾರ್ ನಟಿಸಿದ್ದಾರೆ. ಸಿನಿಮಾದಲ್ಲಿ ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ನಟಿಸಿದ್ದಾರೆ. ಅಭಿಲಾಷ್ ಕಲ್ಲತ್ತಿ ಸಿನಿಮಾಟೊಗ್ರಫಿ, ಈಗಾಗಲೇ ಶೇಕಡಾ 80 ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:26 pm, Sat, 29 March 25