ಶೂಟಿಂಗ್ ಮುಗಿಸಿದ ‘ರುದ್ರಾಭಿಷೇಕಂ’, ವಿಭಿನ್ನ ಪಾತ್ರದಲ್ಲಿ ವಿಜಯ್ ರಾಘವೇಂದ್ರ
Vijay Raghavendra: ‘ಕಾಂತಾರ’ ರೀತಿ ಜನಪದ, ಹಳ್ಳಿಗಾಡಿನ ಆಚರಣೆ, ಥ್ರಿಲ್ಲರ್ ಅಂಶವುಳ್ಳ ಕತೆ ಜೊತೆಗೊಂದು ನವಿರಾದ ಪ್ರೇಮಕತೆ, ಕೌಟುಂಬಿಕ ಸೆಂಟಿಮೆಂಟ್ ಎಲ್ಲವನ್ನೂ ಬರೆತ ಸಿನಿಮಾ ಒಂದು ತೆರೆಗೆ ಬರುತ್ತಿದೆ. ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ‘ರುದ್ರಾಭಿಷೇಕಂ’ ಸಿನಿಮಾ ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿಸಿದೆ.

ಜನಪದ, ಧಾರ್ಮಿಕತೆ, ಸಾಮಾಜಿಕ ಅಸಮಾನತೆ, ಥ್ರಿಲ್ಲರ್ ಕತೆ, ಹಾರರ್, ಸೆಂಟಿಮೆಂಟ್, ಪ್ರೇಮಕತೆ, ಭರ್ಜರಿ ಆಕ್ಷನ್ ಎಲ್ಲವನ್ನೂ ಒಳಗೊಂಡ ಅಪರೂಪದ ಸಿನಿಮಾ ಒಂದರಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ. ‘ರುದ್ರಾಭಿಷೇಕಂ’ ಹೆಸರಿನ ಹಳ್ಳಿಗಾಡಿನ ಕತೆಯುಳ್ಳ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಪ್ರಧಾನ ಪಾತ್ರದಲ್ಲಿ ಮಿಂಚಿದ್ದು, ಈ ಸಿನಿಮಾಕ್ಕಾಗಿ ಹಲವು ಜನಪದ ಕಲೆಗಳ ಪ್ರದರ್ಶನಗಳನ್ನು ಮಾಡಿದ್ದಾರೆ. ಬಿಡುಗಡೆಗೆ ಸಿನಿಮಾ ತಯಾರಾಗುತ್ತಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಕುಂಬಳಕಾಯಿ ಒಡೆದು, ಶೂಟಿಂಗ್ ಮುಕ್ತಾಯ ಮಾಡಿದೆ.
ವೀರಗಾಸೆ, ಕಂಪೆನಿ ನಾಟಕ, ವೀರಭದ್ರನ ಆರಾಧನೆ ಇನ್ನೂ ಕೆಲ ಪ್ರಧಾನ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ದೇಶಕ ವಸಂತ್ ಕುಮಾರ್ ಅವರು ಕತೆ ಹೆಣೆದಿದ್ದು, ಇತ್ತೀಚೆಗಷ್ಟೆ ಬೆಂಗಳೂರು ವಿಮಾನ ನಿಲ್ದಾಣದ ಸಮೀಪದ ಚಿಕ್ಕತತ್ತಮಂಗಲ ಗ್ರಾಮದ ವೀರಭದ್ರನ ದೇವಾಲಯದ ಸಮೀಪ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವ ಮೂಲಕ ಚಿತ್ರೀಕರಣ ಪೂರ್ಣಗೊಳಿಸಿದರು.
ಕ್ಲೈಮ್ಯಾಕ್ಸ್ ದೃಶ್ಯಕ್ಕೆ ವೀರಭದ್ರನ ಅವತಾರ ತಾಳಿದ್ದ ವಿಜಯ್ ರಾಘವೇಂದ್ರ ಮೈಗೆಲ್ಲ ಕಪ್ಪು ಬಳಿದುಕೊಂಡು, ಎರಡೂ ಕೈಯಲ್ಲಿ ಕತ್ತಿ ಹಿಡಿದು ದುಷ್ಟರನ್ನು ಸಂಹಾರ ಮಾಡುವ ದೃಶ್ಯಗಳನ್ನು ಸೆರೆ ಹಿಡಿಯಲಾಯ್ತು. ನಾಟಕದ ಹಿನ್ನೆಲೆಯಲ್ಲಿ ಈ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆದಿದ್ದು ವಿಶೇಷ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಟ ರಾಜು ಬಾಲವಾಡಿ ಸೇರಿದಂತೆ ಇನ್ನೂ ಹಲವರು ಭಾಗಿ ಆಗಿದ್ದರು. ಥ್ರಿಲ್ಲರ್ ಮಂಜು ಅವರು ಕ್ಲೈಮ್ಯಾಕ್ಸ್ ದೃಶ್ಯದ ಸಾಹಸ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಾಯಕಿಯಾಗಿ ಪ್ರಿಯಾಂಕಾ ತಿಮ್ಮಯ್ಯ ನಟಿಸಿದ್ದಾರೆ.
ಇದನ್ನೂ ಓದಿ:ವೀರಗಾಸೆ ವೇಷದಲ್ಲಿ ವಿಜಯ್ ರಾಘವೇಂದ್ರ: ‘ರುದ್ರಾಭಿಷೇಕಂ’ ಅದ್ಧೂರಿ ಕ್ಲೈಮ್ಯಾಕ್ಸ್
ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ನಿರ್ಮಾಣದ ಮೊದಲ ಸಿನಿಮಾ ಇದಾಗಿದ್ದು, ಮಂಜುನಾಥ ಕೆ.ಎನ್, ಲಾಯರ್ ಜಯರಾಮ್ , ಕೆ ವೆಂಕಟೇಶ್, ಚಿದಾನಂದ ಮೂರ್ತಿ, ಸುರೇಶ್ ಬಾಬು, ಅಶ್ವಥ್ ನಾರಾಯಣ, ಶಿವಕುಮಾರ್, ರವಿಕುಮಾರ್, ಚಂದ್ರಶೇಖರ ಹಡಪದ ಅವರುಗಳು ಒಟ್ಟಿಗೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಿಶೋರ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರಿನ ಹೊರವಲಯ ಹಾಗೂ ಮಂಗಳೂರು, ಉಡುಪಿ ಇನ್ನಿತರೆ ಕರಾವಳಿ ಪ್ರದೇಶಗಳಲ್ಲಿ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾದ ಎಡಿಟಿಂಗ್, ಡಬ್ಬಿಂಗ್, ಸೌಂಡ್ ಮಿಕ್ಸಿಂಗ್ ಕಾರ್ಯ ಪ್ರಾರಂಭವಾಗಿದೆ. ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Sat, 29 March 25