ವೀರಗಾಸೆ ವೇಷದಲ್ಲಿ ವಿಜಯ್ ರಾಘವೇಂದ್ರ: ‘ರುದ್ರಾಭಿಷೇಕಂ’ ಅದ್ಧೂರಿ ಕ್ಲೈಮ್ಯಾಕ್ಸ್
Vijay Raghavendra: ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ವೀರಗಾಸೆ ಕಲೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಥ್ರಿಲ್ಲರ್ ಅಂಶಗಳುಳ್ಳ ಸಿನಿಮಾ ಇದಾಗಿದೆ. ಕೆಲವು ಗೆಳೆಯರೇ ಸೇರಿಕೊಂಡು ನಿರ್ಮಿಸುತ್ತಿರುವ ಸಿನಿಮಾ ಇದಾಗಿದ್ದು, ನೂರಾರು ವೀರಗಾಸೆ ಕಲಾವಿದರನ್ನು ಒಂದೆಡೆ ಸೇರಿಸಿ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಮಾಡಲಾಗಿರುವುದು ವಿಶೇಷ.

ನಮ್ಮ ನೆಲದ, ಸಂಸ್ಕೃತಿಯ, ಆಚರಣೆಯ ಕತೆ ಹೇಳಿ ಗೆದ್ದ ‘ಕಾಂತಾರ’ ಇನ್ನಷ್ಟು ಅಂಥಹದೇ ಮಾದರಿಯ ಸಿನಿಮಾಗಳು ಹೊರಗೆ ಬರಲು ಸ್ಪೂರ್ತಿ ನೀಡಿದೆ. ‘ಕಾಂತಾರ’ ಚಿತ್ರದಲ್ಲಿ ಕರಾವಳಿ ಭಾಗದ ದೈವಾರಾಧನೆ ಬಗ್ಗೆ ಹೇಳಲಾಗಿತ್ತು. ಅದೇ ಮಾದರಿಯಲ್ಲಿ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಅದರದ್ದೇ ಆದ ಸ್ಥಳೀಯ ಆಚರಣೆಗಳು, ಪದ್ಧತಿಗಳು, ಆರಾಧನೆಗಳು, ಕಲೆಗಳು ಇವೆ. ಇಂಥಹಾ ಸಂಪತ್ದ್ಭರಿತ ಕತೆಗಳಲ್ಲಿ ವೀರಗಾಸೆ ಕಲೆಯೂ ಸಹ ಒಂದು. ವೀರಗಾಸೆ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು, ಕಲೆಯ ಕುರಿತು ಇತಿಹಾಸ, ವರ್ತಮಾನ ಇನ್ನಿತರೆ ವಿಷಯಗಳನ್ನು ದಾಟಿಸಲು ಹೊರಟಿರುವ ನಿರ್ದೇಶಕ ವಸಂತ್ ಕುಮಾರ್, ‘ರುದ್ರಾಭಿಷೇಕಂ’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ವೀರಗಾಸೆ ಕಲಾವಿದರಾಗಿ ನಟಿಸುತ್ತಿರುವುದು ನಟ ವಿಜಯ್ ರಾಘವೇಂದ್ರ.
ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಚಿಕ್ಕಬಳ್ಳಾಪುರದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೆ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣವನ್ನು ಬಲು ಅದ್ಧೂರಿಯಾಗಿ ಮಾಡಲಾಗಿದೆ. ಕ್ಲೈಮ್ಯಾಕ್ಸ್ ದೃಶ್ಯಕ್ಕೆಂದು ವಿಶೇಷವಾಗಿ ನಾಡಿನ ಮೂಲೆ ಮೂಲೆಗಳಿಂದ ವೀರಗಾಸೆ ಕಲಾವಿದರನ್ನು ಕರೆಸಲಾಗಿತ್ತು. ದೇವನಹಳ್ಳಿಯ ಚಿಕ್ಕತದಮಂಗಲ ಗ್ರಾಮದಲ್ಲಿ ಅದ್ಧೂರಿ ಸೆಟ್ ಹಾಕಿ ವೀರಗಾಸೆ ಕಲಾವಿದರನ್ನಿಟ್ಟುಕೊಂಡು ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ನಡೆಸಲಾಗಿದೆ.
ಸಿನಿಮಾದಲ್ಲಿ ವೀರಗಾಸೆ ಕಲೆಯ ಮಹತ್ವ, ಇತಿಹಾಸ ಸಾರುವ ಜೊತೆಗೆ ಸಿನಿಮಾದಲ್ಲಿ ಕಮರ್ಶಿಯಲ್ ಕೋನದ ಸುಂದರ ಕತೆಯೂ ಇದೆ. ಹಲವು ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಈ ಕತೆಯಲ್ಲಿ ವೀರಗಾಸೆ ಪ್ರಧಾನ ಅಂಶವಾಗಿದೆ. ಸಿನಿಮಾ ಅನ್ನು ಕೆಲವು ಸಹೃದಯ, ಸಮಾನ ಮನಸ್ಕ ಗೆಳೆಯರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾದ ನಿರ್ಮಾಣ ಮಾಡಲಾಗಿದೆ. ಹಲವು ಅನುಭವಿ ಕಲಾವಿದರ ಜೊತೆಗೆ ಕೆಲವು ಸ್ಥಳೀಯ ಕಲಾವಿದರನ್ನು ಸಹ ಬಳಸಿಕೊಂಡು ಸಿನಿಮಾ ನಿರ್ಮಿಸಲಾಗಿದೆ.
ಇದನ್ನೂ ಓದಿ:ಪವರ್ಫುಲ್ ಸಿನಿಮಾ ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
‘ರುದ್ರಾಭಿಷೇಕಂ’ ಸಿನಿಮಾನಲ್ಲಿ ಎರಡು ಷೇಡ್ಗಳಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ. ತಂದೆ ಮತ್ತು ಮಗ ಇಬ್ಬರು ಪಾತ್ರಗಳಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ. ಸಿನಿಮಾದ ನಾಯಕಿ ಪಾತ್ರದಲ್ಲಿ ಮಾಜಿ ಬಿಗ್ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ‘ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ವೀರಗಾಸೆ ಕಲೆಯ ಮಹತ್ವ, ಇತಿಹಾಸವನ್ನು ಈ ಚಿತ್ರದಲ್ಲಿ ಹೇಳಲಾಗಿದೆ.ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರ ಹೇಳುತ್ತದೆ’ ಎಂದಿದ್ದಾರೆ ನಿರ್ದೇಶಕ ವಸಂತ್ ಕುಮಾರ್.
‘ಒಂದೊಳ್ಳೆ ಸಿನಿಮಾ ನೀಡಬೇಕು ಎಂಬ ಮಹದಾಸೆಯಿಂದ 9 ಜನ ನಿರ್ಮಾಪಕರುಗಳು ಸೇರಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ. ಶೂಟಿಂಗ್ ಜತೆ ಜತೆಗೆ ಎಡಿಟಿಂಗ್ ಕೂಡ 90% ಮುಗಿದಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ಧವಾಗಲಿದೆ. ನಿರ್ಮಾಪಕರ ಹಾಗೂ ಕಲಾವಿದರೆಲ್ಲರ ಸಹಕಾರದಿಂದ ಯಾವುದೇ ತೊಂದರೆಯಿಲ್ಲದೆ ಚಿತ್ರೀಕರಣ ನಡೆದಿದೆ. ಕ್ಲೈಮ್ಯಾಕ್ಸ್ ಹಾಡು ಸಿನಿಮಾದ ಹೈಲೆಟ್ ಆಗಲಿದೆ. ನೂರಾರು ಜನ ವೀರಗಾಸೆ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ಇನ್ನುಮುಂದೆ ವೀರಗಾಸೆ ಕಲಾವಿದರು ಎಲ್ಲೇ ನೃತ್ಯ ಮಾಡಿರೂ ಈ ಹಾಡನ್ನಿಟ್ಟುಕೊಂಡು ವೀರಗಾಸೆ ಕುಣಿತ ನಡೆಸಬೇಕು ಅಷ್ಟು ಅದ್ಭುತವಾಗಿ ಹಾಡು ಮೂಡಿ ಬಂದಿದೆ. ನಾಯಕ ವಿಜಯ ರಾಘವೇಂದ್ರ ಕೂಡ ನಮಗೆ ತುಂಬಾ ಸಹಕಾರ ಕೊಟ್ಟಿದ್ದಾರೆ. ತಂಡದ ಜತೆ ಸ್ನೇಹಿತನಂತೆ ಬೆರೆತು ಕೈಜೋಡಿಸಿದ್ದಾರೆ’ ಎಂದಿದ್ದಾರೆ ನಿರ್ದೇಶಕ ವಸಂತ್ ಕುಮಾರ್.
ಸಿನಿಮಾ ಅನ್ನು ದೇವನಹಳ್ಳಿ ಸುತ್ತಮುತ್ತ, ಶಿಡ್ಲಘಟ್ಟದ ಕೆಲವು ಹಳ್ಳಿಗಳು, ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ ಎರಡು ಹಾಡುಗಳ ಚಿತ್ರೀಕರಣ ಮಾಡಲಾಗಿದೆಯಂತೆ. ಮಂಜುನಾಥ ಕೆ.ಎನ್, ಲಾಯರ್ ಜಯರಾಮ್ , ಕೆ ವೆಂಕಟೇಶ್, ಚಿದಾನಂದ ಮೂರ್ತಿ, ಸುರೇಶ್ ಬಾಬು, ಅಶ್ವಥ್ ನಾರಾಯಣ, ಶಿವಕುಮಾರ್, ರವಿಕುಮಾರ್, ಚಂದ್ರಶೇಖರ ಹಡಪದ ಅವರುಗಳು ಸೇರಿ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಕಿಶೋರ್ ಕುಮಾರ್ ಬಿಜೆ, ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ‘ರುದ್ರಾಭಿಷೇಕಂ’ ಚಿತ್ರದಲ್ಲಿ ಬಲ ರಾಜವಾಡಿ ಅವರು ಊರ ಗೌಡನಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು ಸಾಹಸ, ಭಜರಂಗಿ ಮೋಹನ್ ಕೊರಿಯಾಗ್ರಫಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Thu, 20 March 25