Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮೋತ್ಸವಗಳಲ್ಲಿ ‘ವಾಘಚಿಪಾಣಿ’ ಯಶಸ್ಸು; ನಿರ್ದೇಶಕ ನಟೇಶ್ ಹೆಗಡೆ ಮನದಾಳದ ಮಾತು

ನಟೇಶ್ ಹೆಗಡೆ ಅವರ ‘ಪೆದ್ರೊ’ ಮತ್ತು ‘ವಾಘಚಿಪಾಣಿ’ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿವೆ. ಆದರೆ, ಇವುಗಳು ಥಿಯೇಟರ್​ಗಳಲ್ಲಿ ಬಿಡುಗಡೆ ಕಂಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆಗೆ ನಟೇಶ್ ಹೆಗಡೆ ಅವರು ಉತ್ತರಿಸಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ ಜೊತೆಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಸಿನಿಮೋತ್ಸವಗಳಲ್ಲಿ ‘ವಾಘಚಿಪಾಣಿ’ ಯಶಸ್ಸು; ನಿರ್ದೇಶಕ ನಟೇಶ್ ಹೆಗಡೆ ಮನದಾಳದ ಮಾತು
ನಟೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 21, 2025 | 12:50 PM

ನಿರ್ದೇಶಕ ನಟೇಶ್ ಹೆಗಡೆ (Natesh Hegde) ಅವರು ಈವರೆಗೆ ‘ಪೆದ್ರೊ’ ಹಾಗೂ ‘ವಾಘಚಿಪಾಣಿ’ ಹೆಸರಿನ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಎರಡೂ ಚಿತ್ರಗಳು ಸಾಕಷ್ಟು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ವಿಮರ್ಶಕರಿಂದ ಮೆಚ್ಚುಗೆಯ ಮಹಾಪೂರವನ್ನು ಪಡೆದಿದೆ. ಈ ಸಿನಿಮಾಗಳನ್ನು ವೀಕ್ಷಿಸಬೇಕು ಎಂಬುದು ಜನಸಾಮಾನ್ಯರ ಆಸೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಚಿತ್ರ ಈವರೆಗೆ ಥಿಯೇಟರ್​ಗಳಲ್ಲಿ ಬಿಡುಗಡೆ ಕಂಡಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

‘ವಾಘಚಿಪಾಣಿ’ ಸಿನಿಮಾ ಬರ್ಲಿನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಅಧಿಕೃತವಾಗಿ ಆಯ್ಕೆ ಆಗಿತ್ತು. ಈ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ. ಈ ಸಿನಿಮಾ ಬಗ್ಗೆ ಹಾಗೂ ಈಗಿರುವ ಚಾಲೆಂಜ್​ಗಳ ಬಗ್ಗೆ ನಟೇಶ್ ಮಾತನಾಡಿದ್ದಾರೆ. ಯಾವುದೇ ಸಿನಿಮಾಗಳನ್ನು ಥಿಯೇಟರ್​​ನಲ್ಲಿ ರಿಲೀಸ್ ಮಾಡಬೇಕು ಎಂದರೆ ಅದಕ್ಕೆ ಲಕ್ಷ ಲಕ್ಷ ಖರ್ಚಾಗುತ್ತದೆ. ಈ ರೀತಿ ರಿಲೀಸ್ ಮಾಡುವ ಚಿತ್ರಗಳು ಮರಳಿ ಲಾಭವನ್ನು ತರಬೇಕು. ಅಂದಾಗ ಮಾತ್ರ ನಿರ್ಮಾಪಕ ಗೆಲ್ಲಲು ಸಾಧ್ಯ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎಂಬುದು ನಟೇಶ್ ಹೆಗಡೆ ಅವರ ಅಭಿಪ್ರಾಯ.

ಇದನ್ನೂ ಓದಿ
Image
ವಿಚ್ಛೇದನ ಪಡೆದ ದಿನ ಹಾಡಿನ ಮೂಲಕ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದ ಧನಶ್ರೀ
Image
ಬೆಟ್ಟಿಂಗ್​ಗೆ ಪ್ರಚಾರ: ಪ್ರಕಾಶ್ ರೈ, ವಿಜಯ್ ಸೇರಿ ಹಲವು ನಟರ ಮೇಲೆ ಪ್ರಕರಣ
Image
ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ; ನೈಜ ಘಟನೆ ಹೇಳ ಹೊರಟ ಹರ್ಷಿಕಾ
Image
ಒಟಿಟಿಯಲ್ಲಿ ಕಾಲೇಜ್ ಕಹಾನಿ ಕಥೆ; ಫನ್​ ಇರೋ ಸಿನಿಮಾನ ಮಿಸ್ ಮಾಡಬೇಡಿ

‘ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ನೋಡಬೇಕು ಎಂದು ಹಂಬಲ ವ್ಯಕ್ತಿಪಡಿಸುವವರು ನಿಜಕ್ಕೂ ಥಿಯೇಟರ್​ಗೆ ಬರುತ್ತಾರಾ? ಇದು ನಮ್ಮ ಮುಂದಿರುವ ಪ್ರಶ್ನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ರಿಲೀಸ್ ಆದ ರೂಪಾಂತರ, ಶಿವಮ್ಮ, ಮಿತ್ಯ ರೀತಿಯ ಸಿನಿಮಾಗಳು ಸದ್ಯ ಪರಿಸ್ಥಿತಿಯನ್ನು ವಿವರಿಸುತ್ತವೆ. ಪ್ರತಿ ಸಿನಿಮಾ ಮಾಡಲು ಲಕ್ಷಾಂತರ ರೂಪಾಯಿ ಬೇಕು. ರಿಲೀಸ್ ಮಾಡಲು ಹಾಕಿದ ಹಣವೂ ಹಿಂದಿರುಗಿಬರದ ಪರಿಸ್ಥಿತಿ ಇದೆ. ಹಲವು ಸಿನಿಮಾಗಳು ಬಿಸ್ನೆಸ್ ಆಗಿ ಬದಲಾಗುತ್ತಿಲ್ಲ’ ಎಂದು ಸಿನಿಮಾ ರಿಲೀಸ್ ಹಿಂಜರಿಕೆಯ ಹಿಂದಿನ ಕಾರಣವನ್ನು ಅವರು ವಿವರಿಸಿದ್ದಾರೆ.

ಹಾಗಾದರೆ ನೇರವಾಗಿ ಒಟಿಟಿ ಹಾದಿ ಹಿಡಿಯಬಹುದಲ್ಲ? ಈ ಪ್ರಶ್ನೆಗೆ ‘ಅದು ಅಷ್ಟು ಸುಲಭದಲ್ಲಿ ಇಲ್ಲ’ ಎಂಬ ಉತ್ತರ ನೀಡುತ್ತಾರೆ ನಟೇಶ್. ‘ಮೊದಲು ಥಿಯೇಟರ್​​ನಲ್ಲಿ ರಿಲೀಸ್ ಆದ ಸಿನಿಮಾಗಳ ಸ್ಯಾಟಲೈಟ್ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟ ಆಗುತ್ತಿದ್ದವು. ಈಗ ಒಟಿಟಿ ಬಂದ ಬಳಿಕ ಸ್ಯಾಟಲೈಟ್ ಮಾರುಕಟ್ಟೆ ಕುಸಿದಿದೆ. ಎಲ್ಲಾ ಒಟಿಟಿಗಳು ಕನ್ನಡ ಸಿನಿಮಾಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಈ ಎಲ್ಲಾ ಕಾರಣದಿಂದ ಈ ರೀತಿಯ ಸಿನಿಮಾಗಳನ್ನು ರಿಲೀಸ್ ಮಾಡೋದು ಅಷ್ಟು ಸುಲಭದಲ್ಲಿ ಇಲ್ಲ’ ಎಂಬುದು ನಟೇಶ್ ಹೆಗಡೆ ಅಭಿಪ್ರಾಯ.

‘ಸಿನಿಮಾಗಳನ್ನು ಸಿನಿಮೋತ್ಸವದಲ್ಲಿ ಮಾತ್ರ ತೋರಿಸಬೇಕು, ಥಿಯೇಟರ್​ಗಳಲ್ಲಿ ರಿಲೀಸ್ ಮಾಡಬಾರದು ಎಂಬ ಉದ್ದೇಶದಿಂದ ಯಾವ ನಿರ್ದೇಶಕನೂ ಸಿನಿಮಾ ಮಾಡುವುದಿಲ್ಲ. ಜನರಿಗೆ ತೋರಿಸಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡುತ್ತಾರೆ. ಸಿನಿಮಾಗಳಿಗೆ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಸಾಕಷ್ಟು ಗೌರವ ಸಿಕ್ಕ ಹೊರತಾಗಿಯೂ ಒಟಿಟಿ ವಿಚಾರ ಎಂಬುದು ಬಂದಾಗ ‘ನಾವು ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುವುದಿಲ್ಲ’ ಎನ್ನುವ ಮಾತನ್ನೇ ಕೇಳಬೇಕಾಗುತ್ತದೆ’ ಎಂದಿದ್ದಾರೆ ನಟೇಶ್ ಹೆಗಡೆ.

‘ವಾಘಚಿಪಾಣಿ’ ಚಿತ್ರವನ್ನು ರೀಲ್​ನಲ್ಲಿ ಶೂಟ್ ಮಾಡಿ ಆ ಬಳಿಕ ಡಿಜಿಟಲ್​ಗೆ ರೂಪಾಂತರಿಸಲಾಗಿದೆ. ಇದಕ್ಕೂ ಒಂದು ಕಾರಣ ಇದೆ ಎಂಬುದು ಅವರ ಮಾತು. ಅದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು. ಮುಂದಿನ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸದಲ್ಲಿ ‘ವಾಘಚಿಪಾಣಿ’ ಚಿತ್ರದ ಮೂಲಕ ಸ್ಪರ್ಧಿಸುವ ಉದ್ದೇಶವನ್ನು ನಟೇಶ್ ಹೊಂದಿದ್ದಾರೆ. ಈ ವೇಳೆ ಸಿನಿಮಾ ಪ್ರದರ್ಶನ ಕಂಡರೆ ಒಂದಷ್ಟು ಜನರಿಗೆ ಚಿತ್ರ ನೋಡಲು ಅವಕಾಶ ಸಿಗಲಿದೆ.

ಸಿನಿಮೋತ್ಸವಗಳಿಂದ ಸಿನಿಮಾ ತಂಡಗಳಿಗೆ ಸಾಕಷ್ಟು ಲಾಭ ಇದೆ ಎನ್ನುತ್ತಾರೆ ನಟೇಶ್. ‘ಪ್ರತಿ ಸಿನಿಮೋತ್ಸವಗಳಿಂದ ಸಿನಿಮಾ ತಂಡಗಳಿಗೆ ಲಾಭ ಆಗುತ್ತದೆ. ಇವುಗಳಿಂದ ಸಿನಿಮಾಗೆ ಮನ್ನಣೆ ಸಿಗುತ್ತದೆ. ಪ್ರತಿ ಚಿತ್ರಕ್ಕೆ ಬಾಯಿಮಾತಿನ ಪ್ರಚಾರ ಸಿಗುತ್ತದೆ. ಸಿನಿಮಾಗೆ ಪರೋಕ್ಷವಾಗಿ ಪ್ರಚಾರ ಸಿಕ್ಕಂತೆ ಆಗುತ್ತದೆ. ಇದು ಸಿನಿಮೋತ್ಸವಗಳಿಂದ ಆಗುವ ಲಾಭ’ ಎಂದಿದ್ದಾರೆ ನಟೇಶ್.

ಇದು ಥಿಯೇಟರ್​​ನಲ್ಲಿ ರಿಲೀಸ್ ಆಗಬೇಕಿರುವ ಸಿನಿಮಾ, ಇದು ಒಟಿಟಿಯಲ್ಲಿ ನೋಡಬೇಕಿರುವ ಸಿನಿಮಾ ಎಂದು ವಿಂಗಡಿಸುವ ಪರಿಸ್ಥಿತಿ ಬಂದಿದೆ. ಇಡೀ ಮಾರುಕಟ್ಟೆ ಆ ರೀತಿಯಲ್ಲಿ ವರ್ತಿಸುತ್ತಿದೆ. ಆ ರೀತಿ ಆಗಬಾರದು ಎಂಬುದು ನಟೇಶ್ ಅಭಿಪ್ರಾಯ. ಆ ರೀತಿ ವಿಂಗಡಿಸಬಾರದು ಎಂದು ಅವರು ಒತ್ತಿ ಹೇಳುತ್ತಾರೆ.

ಇದನ್ನೂ ಓದಿ: ರಿಷಬ್​ ಶೆಟ್ಟಿ ನಿರ್ಮಾಣದ ‘ಪೆದ್ರೊ’ ಟ್ರೇಲರ್​ ರಿಲೀಸ್​; ನಟೇಶ್ ಹೆಗಡೆ​ ನಿರ್ದೇಶನಕ್ಕೆ ಮೆಚ್ಚುಗೆ

ಸ್ಟಾರ್ ಹೀರೋ ಜೊತೆ ದೊಡ್ಡ ಕಮರ್ಷಿಯಲ್ ಸಿನಿಮಾಗಳನ್ನು ನಟೇಶ್ ಹೆಗಡೆ ಅವರಿಂದ ನಿರೀಕ್ಷಿಸಬಹುದೇ? ‘ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂಬುದು ಅವರ ಅಭಿಪ್ರಾಯ. ಈ ರೀತಿ ಪ್ಲ್ಯಾನ್ ಮಾಡಿ ಯಾವುದನ್ನೂ ಮಾಡುವ ಆಲೋಚನೆಯಲ್ಲಿ ಅವರು ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:32 pm, Fri, 21 March 25