ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ; ‘ಕಂಗ್ರಾಜುಲೇಷನ್ಸ್ ಬ್ರದರ್’
ಸೀರಿಯಲ್ಗಳಲ್ಲಿ ನಟಿಸಿ ಅನುಭವ ಹೊಂದಿರುವ ರಕ್ಷಿತ್ ನಾಗ್ ಅವರು ‘ಕಂಗ್ರಾಜುಲೇಷನ್ಸ್ ಬ್ರದರ್’ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಸಂಜನಾ ದಾಸ್, ಅನುಶಾ ಅವರು ನಾಯಕಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ತಂಡದ ಬಗ್ಗೆ ಇಲ್ಲಿದೆ ಮಾಹಿತಿ..

ಇದು ಸೋಶಿಯಲ್ ಮೀಡಿಯಾ ಜಮಾನ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಷಯಗಳು ಹೆಚ್ಚು ಜನರನ್ನು ತಲುಪುತ್ತವೆ. ಸಿನಿಮಾ ಟೈಟಲ್ ಕೂಡ ಆಗುತ್ತವೆ! ಹೌದು, ವೈರಲ್ ವಿಡಿಯೋ ಮೂಲಕ ‘ಕಂಗ್ರಾಜುಲೇಷನ್ಸ್ ಬ್ರದರ್’ (Congratulations Brother) ಎಂಬ ಡೈಲಾಗ್ ಹೆಚ್ಚು ಫೇಮಸ್ ಆಗಿತ್ತು. ಈಗ ಅದೇ ಮಾತು ಹೊಸ ಸಿನಿಮಾಗೆ ಟೈಟಲ್ ಆಗಿದೆ. ಈ ಸಿನಿಮಾದಲ್ಲಿ ರಕ್ಷಿತ್ ನಾಗ್ (Rakshith Nag), ಸಂಜನಾ ದಾಸ್, ಅನುಶಾ, ಶಶಿಕುಮಾರ್ ಮುಂತಾದವರು ನಟಿಸಿದ್ದಾರೆ. ಇತ್ತೀಚೆಗೆ ‘ಕಂಗ್ರಾಜುಲೇಷನ್ಸ್ ಬ್ರದರ್’ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.
ಕೆಲವೇ ತಿಂಗಳ ಹಿಂದೆ ‘ಕಂಗ್ರಾಜುಲೇಷನ್ಸ್ ಬ್ರದರ್’ ಸಿನಿಮಾ ಘೋಷಣೆ ಆಗಿತ್ತು. ಅಂದುಕೊಂಡ ಸಮಯದಲ್ಲೇ ಶೂಟಿಂಗ್ ಮುಕ್ತಾಯ ಮಾಡಲಾಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಈ ಸಿನಿಮಾದ ಮೊದಲ ಹಾಡನ್ನು ದುಬೈನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಈ ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ. ಅವರಿಗೆ ಹಿರಿಯ ನಟ ಶಶಿಕುಮಾರ್ ಸಾಥ್ ನೀಡಿದ್ದಾರೆ.
‘ಕಂಗ್ರಾಜುಲೇಷನ್ಸ್ ಬ್ರದರ್’ ಎಂಬ ಶೀರ್ಷಿಕೆಯೇ ಕೌತುಕ ಮೂಡಿಸಿದೆ. ಈ ಸಿನಿಮಾವನ್ನು ‘ಕಲ್ಲೂರ್ ಸಿನಿಮಾಸ್’ ಹಾಗೂ ‘ಪೆನ್ ಎನ್ ಪೇಪರ್ ಸ್ಟುಡಿಯೋಸ್’ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಪ್ರಶಾಂತ್ ಕಲ್ಲೂರ್ ಅವರು ಬಂಡವಾಳ ಹೂಡಿದ್ದಾರೆ. ಪ್ರತಾಪ್ ಗಂಧರ್ವ ಅವರು ನಿರ್ದೇಶನ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಹರಿ ಸಂತೋಷ್ ಅವರು ಕಥೆ ಬರೆದು, ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ.
ಹರೀಶ್ ರೆಡ್ಡಿ ಅವರು ‘ಕಂಗ್ರಾಜುಲೇಷನ್ಸ್ ಬ್ರದರ್’ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಶ್ರೀಕಾಂತ್ ಕಶ್ಯಪ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಟೈಟಲ್ ಮತ್ತು ಕಥೆಯ ಬಗ್ಗೆ ಹರಿ ಸಂತೋಷ್ ಅವರು ಮಾತನಾಡಿದರು. ‘ಹುಡುಗರಿಗೆ ಹುಡುಗಿಯರು ಸಿಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ ಎಲ್ಲರೂ ಕಂಗ್ರಾಜುಲೇಷನ್ಸ್ ಬ್ರದರ್ ಎನ್ನುತ್ತಾರೆ. ಅಂಥದ್ದೇ ಕಥೆ ಈ ಸಿನಿಮಾದಲ್ಲಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಕಷ್ಟಕ್ಕೆ ತಳ್ಳಿದ ಕಾರು ಅಪಘಾತ; ಶಶಿಕುಮಾರ್ ಬದುಕಿನಲ್ಲಿ ಅಂದು ನಡೆದಿದ್ದು ಏನು?
ಶಶಿಕುಮಾರ್ ಅವರು ಹೀರೋ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಕಾರವಾರ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಒಟ್ಟು 45 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ ಮುಂತಾದವರು ಕೂಡ ನಟಿಸಿದ್ದಾರೆ. ಗುರು ಅವರ ಛಾಯಾಗ್ರಹಣ , ಸೂರಜ್ ಜೋಯಿಸ್ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

Congratulations Brother Movie Team
ಧಾರಾವಾಹಿಗಳಲ್ಲಿ ಅಭಿನಯಿಸಿ ಅನುಭವ ಪಡೆದಿರುವ ನಟ ರಕ್ಷಿತ್ ನಾಗ್ ಅವರಿಗೆ ‘ಕಂಗ್ರಾಜುಲೇಷನ್ಸ್ ಬ್ರದರ್’ ಮೊದಲ ಸಿನಿಮಾ. ನಟಿ ಸಂಜನಾ ದಾಸ್ ಅವರು ಬೋಲ್ಡ್ ಹಾಗೂ ಇಂಡಿಪೆಂಡೆಂಟ್ ಹುಡುಗಿಯ ಪಾತ್ರ ಮಾಡಿದ್ದಾರೆ. ನಟಿ ಅನುಶಾ ಅವರು ಆಡಿಷನ್ ಮೂಲಕ ಈ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.
ಇದನ್ನೂ ಓದಿ: ‘ಕಾದಾಡಿ’ ಸಿನಿಮಾದ ಐಟಂ ಸಾಂಗ್ನಲ್ಲಿ ಆದಿತ್ಯ ಶಶಿಕುಮಾರ್, ಸೋನಿ ಸಖತ್ ಡ್ಯಾನ್ಸ್
ಸುದ್ದಿಗೋಷ್ಠಿಯಲ್ಲಿ ನಟ ಶಶಿಕುಮಾರ್ ಮಾತನಾಡಿದರು. ‘ಸಿನಿಮಾ ಮಾಡುವಾಗ ಪಕ್ಕಾ ಪ್ಲ್ಯಾನ್ ಹಾಕಿಕೊಳ್ಳುವುದು ಮುಖ್ಯ. ಅಂದುಕೊಂಡ ಅವಧಿಯಲ್ಲೇ ಶೂಟಿಂಗ್ ಮುಗಿಸಿದರೆ ನಿರ್ಮಾಪಕರಿಗೆ ಅನುಕೂಲ ಆಗುತ್ತದೆ. ನಾವೆಲ್ಲ ಚಿತ್ರರಂಗಕ್ಕೆ ಬಂದಾಗ ಆ ರೀತಿ ಪ್ಲಾನಿಂಗ್ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.