ಕಲಬುರಗಿ: ಜಿಲ್ಲೆಯ ಆಳಂದದಲ್ಲಿ ನಿನ್ನೆ (ಮಾರ್ಚ್ 1) ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ 150 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮಾರ್ಚ್ 5ರ ವರೆಗೆ ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಮುಂದುವರಿಸಿ ಆದೇಶ ನೀಡಲಾಗಿದೆ. ನಿಷೇಧಾಜ್ಞೆ ಹಾಗೂ ಪೊಲೀಸರ ಬಂದೋಬಸ್ತ್ ನಡುವೆ ಪಟ್ಟಣದ ಇಂದಿನ ವಾತಾವರಣ ತಕ್ಕಮಟ್ಟಿಗೆ ಸುಧಾರಿಸಿದೆ ಎಂದು ಮಾಹಿತಿ ಲಭಿಸಿದೆ. ನಿನ್ನೆ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆಗೆ ಆಗ್ರಹಿಸಿ, ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಬಿಜೆಪಿ ಮುಖಂಡರು ತೆರಳಿದ್ದರು. ಈ ವೇಳೆ ಬಿಜೆಪಿ ಮುಖಂಡರಿಗೆ ಅಡ್ಡಿಪಡಿಸಿ ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆ ಬಗ್ಗೆ ಮೊದಲೇ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿತ್ತು.
ಆಳಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆ ಲಾಡ್ಲೇ ಮಶಾಕ್ ದರ್ಗಾಕ್ಕೆ ಜನರ ಎಂಟ್ರಿಗೆ ನಿರ್ಬಂಧ ವಿಧಿಸಲಾಗಿದೆ. ಶಿವಲಿಂಗಕ್ಕೆ ಪೂಜೆ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿತ್ತು. ಹೀಗಾಗಿ, ಇದೀಗ ದರ್ಗಾ ಸೇರಿದಂತೆ ಎಲ್ಲಡೆ ಪೊಲೀಸರ ನಿಯೋಜನೆ ಮಾಡಲಾಗಿದೆ. ದರ್ಗಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಅಂಗಡಿಗಳು ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಬಿಗಿ ಪೊಲೀಸ ಬಂದೂಬಸ್ತ್ ಕೈಗೊಳ್ಳಲಾಗಿದೆ.
ಮಂಗಳವಾರ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಕಲಬುರಗಿ ನಗರದ ಹೊರವಲಯದಲ್ಲಿರುವ ಕೋಟನೂರು ಬಳಿ ವಶಕ್ಕೆ ಪಡೆಯಲಾಗಿತ್ತು. ಈ ಮೊದಲೇ ಆಳಂದ ಪ್ರವೇಶಕ್ಕೆ ಸ್ವಾಮೀಜಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೆ, ಈ ನಡುವೆ ಆಳಂದಗೆ ಹೋಗಲು ಮುಂದಾಗಿದ್ದ ಸಿದ್ದಲಿಂಗ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ವಶಕ್ಕೆ ಪಡೆಯಲಾಗಿತ್ತು.
ಹಿಂದೂಪರ ಕಾರ್ಯಕರ್ತರಿಂದ ಆಳಂದ ಚಲೋ ಹಿನ್ನೆಲೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಾಘವ ಚೈತನ್ಯ ಲಿಂಗಕ್ಕೆ ಪೂಜೆಗೆ ಅವಕಾಶ ನೀಡಲು ಆಗ್ರಹಿಸಿ ಧರಣಿ ನಡೆಸಲಾಗಿತ್ತು. ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಧರಣಿಗೆ ಸಾಥ್ ನೀಡಿದ್ದರು. ಈ ಮಧ್ಯೆ, ಬಡಿಗೆ ಹಿಡಿದು ದರ್ಗಾ ಬಳಿ ಸೇರಿರುವ ನೂರಾರು ಜನರು ಪೂಜೆ ಮಾಡಲು ಒಳಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ಮೊದಲೇ, ಜಿಲ್ಲೆಗೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ನಿರ್ಬಂಧ ವಿಧಿಸಲಾಗಿತ್ತು. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಆಳಂದ ತಾಲೂಕು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆಳಂದನಲ್ಲಿರೋ ಲಾಡ್ಲೆ ಮಶಾಕ್ ದರ್ಗಾ ಬಳಿಯಿರೋ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ನಡೆಸಲು ಹಿಂದೂ ಕಾರ್ಯಕರ್ತರು ನಿರ್ಧರಿಸಿದ್ದರು. ದರ್ಗಾದ ಸಂದಲ ಕೂಡಾ ಇಂದೇ ಇರೋದರಿಂದ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: ಬೂದಿ ಮುಚ್ಚಿದ ಕೆಂಡವಾದ ಆಳಂದ: ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ -ಏನಿದು ವಿವಾದ? ಯಾಕಿದು ವಿವಾದ?
ಇದನ್ನೂ ಓದಿ: ಆಳಂದ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅವಕಾಶ: ಧಿಡೀರನೆ ಬದಲಾದ ಚಿತ್ರಣ- ಕಲ್ಲು ತೂರಾಟದ ನಡುವೆ ಪೂಜೆ ಮಾಡಿ ಹೊರಬಂದ ತಂಡ
Published On - 11:21 am, Wed, 2 March 22