ಬೂದಿ ಮುಚ್ಚಿದ ಕೆಂಡವಾದ ಆಳಂದ: ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ -ಏನಿದು ವಿವಾದ? ಯಾಕಿದು ವಿವಾದ?
ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೇ ಮಶಾಕ್ ದರ್ಗಾವಿದೆ. 14 ನೇ ಶತಮಾನದಲ್ಲಿಯೇ ತನ್ನ ತತ್ವವಿಚಾರಗಳಿಂದ ಲಾಡ್ಲೇ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ, 15ನೇ ಶತಮಾನದಲ್ಲಿ ಆಗಿಹೋಗಿರೋ ಸಂತರಾಗಿದ್ದ ರಾಘವ ಚೈತನ್ಯ ಅನ್ನೋರ ಸಮಾಧಿಯಿದೆ.
ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಸುಪ್ರಸಿದ್ದ ಸೂಪಿ ಸಂತ ಲಾಡ್ಲೇ ಮಶಾಖ್ ದರ್ಗಾದಲ್ಲಿರುವ ರಾಘವ ಚೈತನ್ಯರ ಸಮಾಧಿ ಮೇಲಿರುವ ಶಿವಲಿಂಗದ ಪೂಜೆ ವಿವಾದ ವಿಕೋಪಕ್ಕೆ ಹೋಗಿದೆ. ಎರಡು ಸಮುದಾಯದ ಜಿದ್ದಾಜಿದ್ದಿನ ಪರಿಣಾಮ ಪೊಲೀಸರು, ಜಿಲ್ಲಾಧಿಕಾರಿ ಮತ್ತು ಕೇಂದ್ರ ಸಚಿವರು, ಶಾಸಕರ ಕಾರಿನ ಮೇಲೆ ಕಲ್ಲು ತೂರಾಟ, ಮಾರಕಾಸ್ತ್ರಗಳ ಪ್ರದರ್ಶನದಂತಹ ಅಹಿತಕರ ಘಟನೆಗೆ ಆಳಂದ ಪಟ್ಟಣ ಸಾಕ್ಷಿಯಾಯಿತು. ಶಾಂತಿಯುತವಾಗಿದ್ದ ಆಳಂದ ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಇಂದು ಜಿಲ್ಲಾಡಳಿತದ ಆದೇಶದ ಮೇಲೆ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಮೂಡ್, ಕಡಗಂಚಿ ಮಠದ ಸ್ವಾಮೀಜಿ ಸೇರಿದಂತೆ ಹತ್ತು ಜನರು, ದರ್ಗಾದಲ್ಲಿರುವ ಲಿಂಗಕ್ಕೆ ಪೂಜೆಗೆ ಹೋಗುವಾಗ ಮತ್ತೊಂದು ಕೋಮಿನ ಜನರು, ದಿಡೀರನೆ ಕಲ್ಲು ತೂರಾಟ ನಡೆಸಿದರು. ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಕಲಬುರಗಿ ಜಿಲ್ಲಾಧಿಕಾರಿ ಕಾರು, ಶಾಸಕ ಸುಭಾಷ್ ಗುತ್ತೇದಾರ್ ಅವರ ಕಾರು ಸೇರಿದಂತೆ ಅನೇಕ ಕಾರಿನ ಗಾಜುಗಳು ಪುಡಿಪುಡಿಯಾಗಿವೆ. ಕೆಲ ಪೊಲೀಸ್ ಸಿಬ್ಬಂದಿ, ಮಾಧ್ಯಮದವರಿಗೆ ಕೂಡಾ ಘಟನೆಯಲ್ಲಿ ಗಾಯಗಳಾಗಿವೆ. ಕೈಯಲ್ಲಿ ಬಡಿಗೆ ಹಿಡಿದು ಮುನ್ನುಗ್ಗಿದ ಜನರು ತಮ್ಮ ಆಕ್ರೋಶವನ್ನು ಹೊರಹಾಕಿದರು. ಇಂತಹದೊಂದು ಆಕ್ರೋಶಕ್ಕೆ ಕಾರಣ ದರ್ಗಾದಲ್ಲಿರುವ ರಾಘವ ಚೈತನ್ಯರ ಸಮಾದಿ ಸ್ಥಳ ಮತ್ತು ಸಮಾದಿ ಮೇಲಿರುವ ಶಿವಲಿಂಗ.
ಏನಿದು ವಿವಾದ? ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೇ ಮಶಾಕ್ ದರ್ಗಾವಿದೆ. 14 ನೇ ಶತಮಾನದಲ್ಲಿಯೇ ತನ್ನ ತತ್ವವಿಚಾರಗಳಿಂದ ಲಾಡ್ಲೇ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ, 15ನೇ ಶತಮಾನದಲ್ಲಿ ಆಗಿಹೋಗಿರೋ ಸಂತರಾಗಿದ್ದ ರಾಘವ ಚೈತನ್ಯ ಅನ್ನೋರ ಸಮಾಧಿಯಿದೆ. ಶಿವಾಜಿ ಮಹಾರಾಜರ ಗುರು, ಸಮರ್ಥ ರಾಮದಾಸರು. ಈ ರಾಮದಾಸರ ಗುರು ರಾಘವ ಚೈತನ್ಯರು. ಇವರ ಸಮಾಧಿ ಸ್ಥಳ, ದರ್ಗಾದ ಆವರಣದಲ್ಲಿದೆ. ಸಮಾದಿ ಮೇಲೆ ಶಿವಲಿಂಗವಿದೆ. ಈ ಜಾಗದ ವಿವಾದ ಕೂಡಾ ಇನ್ನು ಕೋರ್ಟ್ ಕಟೆಕಟೆಯಲ್ಲಿದೆ. ಇನ್ನು ದರ್ಗಾಕ್ಕೆ ಹೋಗುತ್ತಿದ್ದ ಅನೇಕ ಹಿಂದೂ ಭಕ್ತರು, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ನಮಸ್ಕರಿಸಿ, ಪೂಜೆ ಮಾಡಿ ಬರುತ್ತಿದ್ದರು. ಜೊತೆಗೆ ಜೋಶಿ ಅನ್ನೋ ಕುಟುಂಬದವರು ಲಿಂಗಕ್ಕೆ ಪ್ರತಿದಿನ ಪೂಜೆ ಕೂಡಾ ಸಲ್ಲಿಸುತ್ತಿದ್ದರು. ಇತ್ತೀಚಿನವರೆಗೆ ಅಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದೂ ಮುಸ್ಲಿಂ ನಡುವೆ ಸಾಮರಸ್ಯ ಕೂಡಾ ಇತ್ತು.
ಆದ್ರೆ ಕಳೆದ ಕೆಲ ತಿಂಗಳ ಹಿಂದೆ, ಶಿವಲಿಂಗದ ಮೇಲೆ ಅನ್ಯ ಕೋಮಿನ ಕೆಲವರು ಮಲಮೂತ್ರ ವಿಸರ್ಜನೆ ಮಾಡಿದ್ದರು. ಇಂದು ಹಿಂದೂ ಧರ್ಮಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿದ್ದನ್ನು, ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್, ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ರಕ್ಷಣೆ ನೀಡಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ದರು. ಇದು ಮತ್ತೊಂದು ಕೋಮಿನ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧವೇ ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಕಳೆದ ನವಂಬರ್ ತಿಂಗಳಲ್ಲಿ, ಆಳಂದದಲ್ಲಿ ಬೃಹತ್ ಪ್ರತಿಭಟನೆ ಕೂಡಾ ಹಿಂದೂಪರ ಸಂಘಟನೆಗಳ ಮುಖಂಡರು ನಡೆಸಿದ್ದರು. ಆಗ ಶಿವರಾತ್ರಿ ದಿನವೇ, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗವನ್ನು ಶುಚಿ ಗೊಳಿಸಿ, ಅಲ್ಲಿ ಪೂಜೆ ಮಾಡೋದಾಗಿ ಹೇಳಿದ್ದರು.
ಶಿವಮಾಲೆ ವ್ರತ ಆರಂಭಿಸಿದ್ದ ಹಿಂದೂಪರ ಕಾರ್ಯಕರ್ತರು ಇನ್ನು ಆಳಂದನ ದರ್ಗಾದಲ್ಲಿರುವ ರಾಘವ ಚೈತನ್ಯರ ಸಮಾಧಿ ಸ್ಥಳದ ಮೇಲಿರುವ ಶಿವಲಿಂಗವನ್ನು ಶುಚಿಗೊಳಿಸುವುದು ಮತ್ತು ಪೂಜೆ ಮಾಡುವ ಸಲುವಾಗಿ, ಕಳೆದ ಜನವರಿ 25 ರಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಲಬುರಗಿಯಲ್ಲಿ ಶಿವಮಾಲೆ ವ್ರತವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಾರಂಭಿಸಿದ್ದರು. ಅಂದು ನೂರಾರು ಜನರು ಶಿವಮಾಲೆ ಧರಿಸಿದ್ದರು. ಮಾರ್ಚ್ 1ರಂದು ಶಿವರಾತ್ರಿ ದಿನ, ರಾಘವ ಚೈತನ್ಯರ ಸಮಾಧಿ ಮೇಲಿರುವ ಶಿವಲಿಂಗವನ್ನು ಶುಚಿಗೊಳಿಸಿ, ಪೂಜೆ ಮಾಡಿ, ನಮ್ಮ ವ್ರತವನ್ನು ಮುಗಿಸೋದಾಗಿ ಹೇಳಿದ್ದರು. ಆದರೆ ಮಾರ್ಚ್ 1 ರಂದೆ ಲಾಡ್ಲೇ ಮಶಾಕ್ ದರ್ಗಾದ ಸಂದಲ್ ಕೂಡಾ ಇರೋದ್ರಿಂದ ಜಿಲ್ಲಾಡಳಿತ ಮತ್ತು ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದರು. ಮಾರ್ಚ್ 1 ರಂದು ಆಳಂದನಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದವು. ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಆಹ್ವಾನ ನೀಡಿದ್ದರು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರಗೆ ಮಾರ್ಚ್ ಮೂರರವರಗೆ ಜಿಲ್ಲೆಗೆ ಪ್ರವೇಶವನ್ನು ನಿರ್ಬಂಧಿಸಿತು. ಶ್ರೀರಾಮ ಸೇನೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಕೂಡಾ ಆಳಂದ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಇಡೀ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಮಾಡಿತ್ತು. ಮಾ.5ರವರೆಗೆ ಆಳಂದ ತಾಲೂಕಿನಾದ್ಯಂತ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ. ಆದರೆ ಪೂಜೆಗೆ ಅವಕಾಶ ನೀಡಲೇಬೇಕು ಅಂತ ಆಗ್ರಹಿಸಿದ್ದಾಗ, ಕೇವಲ ಹತ್ತು ಜನರಿಗೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿತ್ತು.
ಇಂದು ಆಗಿದ್ದೇನು? ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ್ ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಕಡಗಂಚಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಮಾಡಲು ಮುಂದಾಗಿದ್ದರು. ಆದರೆ ಹೆಚ್ಚಿನ ಜನರು ಮೆರವಣಿಗೆ ಮೂಲಕ ದರ್ಗಾದ ಬಳಿ ಹೊರಟಿದ್ದರಿಂದ ಮುಸ್ಲಿಂ ಸಮಾಜದವರ ಕಣ್ಣು ಕಂಪಾಗಿಸಿತ್ತು. ಹೀಗಾಗಿ ದರ್ಗಾದ ಬಳಿ ಜಮಾವಣೆಗೊಂಡ ನೂರಾರು ಮುಸ್ಲಿಂ ಸಮಾಜದ ಜನರು, ಕೈಯಲ್ಲಿ ಬಡಿಗೆ, ಮಾರಕಾಸ್ತ್ರಗಳನ್ನು ಹಿಡಿದು ಪ್ರದರ್ಶಿಸಿದರು. ಕೇವಲ ಹತ್ತು ಜನರು ಬಂದು ಪೂಜೆ ಮಾಡಲು ಮಾತ್ರ ಅವಕಾಶ ನೀಡೋದಾಗಿ ಹೇಳಿದ್ದರು. ಆದರೆ ಇತ್ತ ಹಿಂದೂಪರ ಸಂಘಟನೆಗಳ ಮುಖಂಡರನ್ನು ಮತ್ತು ಶಾಸಕರು, ಕೇಂದ್ರ ಸಚಿವರನ್ನು ಪೊಲೀಸರು ದರ್ಗಾದ ಬಳಿ ಹೋಗುವುದನ್ನು ತಡೆದಿದ್ದರಿಂದ, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು, ಧರಣಿ ನಡೆಸಿದರು. ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಮುಂದೆ ಮಧ್ಯಾಹ್ನ ಮೂರು ಗಂಟೆವರಗೆ ಧರಣಿ ನಡೆಸಿದರು. ಆಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಎರಡು ಸಮುದಾಯದವರನ್ನು ಸೇರಿಸಿ ಮಾತುಕತೆ ನಡೆಸಿದರು. ಎರಡು ಸಮುದಾಯದ ತಲಾ ಹತ್ತು ಜನರು ದರ್ಗಾದೊಳಗೆ ಹೋಗಲು ಅವಕಾಶ ನೀಡೋದಾಗಿ ಹೇಳಿದರು. ಹತ್ತು ಜನ ಮುಸ್ಲಿಂ ಸಮಾಜದವರು, ಸಂದಲ್ ಕಾರ್ಯಕ್ರಮ ಮಾಡಲು, ಹತ್ತು ಜನ ಹಿಂದೂಗಳು ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ನೀಡೋದಾಗಿ ಹೇಳಿದ್ದರು. ಅದಕ್ಕೆ ಎರಡು ಕೋಮಿನವರು ಒಪ್ಪಿಕೊಂಡಿದ್ದರು. ಅದರಂತೆ ದರ್ಗಾದೊಳಗೆ ಬಿಗಿ ಪೊಲೀಸ್ ಬಂದೂಬಸ್ಥನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಹತ್ತು ಜನರ ತಂಡ ಹೋಯಿತು. ಈ ಸಂದರ್ಭದಲ್ಲಿ ಮತ್ತೊಂದು ಕೋಮಿನವರು ಗಲಾಟೆ ಮಾಡಿದರು. ಆದರೆ ಹಠ ಬಿಡದೇ ದರ್ಗಾದೊಳಗೆ ಹೋದ ಹಿಂದೂ ಪರ ಮುಖಂಡರು, ಸ್ವಾಮೀಜಿಗಳು, ಸಚಿವರು, ಶಾಸಕರ ತಂಡ, ಪೂಜೆ ಮಾಡಿ ಹೊರಬಂದಿದೆ.
ಜಿಲ್ಲಾಡಳಿತ ಹತ್ತು ಜನರಿಗೆ ಪೂಜೆಗೆ ಅವಕಾಶ ನೀಡಿತ್ತು. ಅದರಂತೆ ಹತ್ತು ಜನರು ಹೋಗಿ ಪೂಜೆ ಮಾಡಿ ಬಂದಿದ್ದೇವೆ. ಆದ್ರೆ ಕೆಲವರು ಗಲಾಟೆ ಮಾಡಿದ್ದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಕೆಲವರ ಪ್ರಚೋದನೆಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಅಹಿತಕರ ಘಟನೆಗೆ ಸಾಕ್ಷಿಯಾದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖುಬಾ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಶಿವಲಿಂಗಕ್ಕೆ ಪೂಜೆಯನ್ನು ಮಾಡಲಾಗಿದೆ. ಪೂಜೆಗೆ ಹೋಗುವ ಸಮಯದಲ್ಲಿ ಕೆಲ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿವೆ. ಯಾರು ಕಲ್ಲೆಸದಿದ್ದಾರೋ, ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಹೇಳಿದ್ರು.
ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ
ಇದನ್ನೂ ಓದಿ: ಆಳಂದ ಚಲೋ ಹಿನ್ನೆಲೆ: ಕಲಬುರಗಿಯ ಕೆಲವೆಡೆ ನಿಷೇಧಾಜ್ಞೆ; ಜಿಲ್ಲೆಗೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ನಿರ್ಬಂಧ
Published On - 9:53 pm, Tue, 1 March 22