ಕಲಬುರ್ಗಿ: ದುಡ್ಡು ಕೊಡದಿದ್ದರೆ ಈ ಸರ್ಕಾರದಲ್ಲಿ (Corruption in Karnataka) ಯಾವುದೇ ಕೆಲಸ ಆಗುವುದಿಲ್ಲ. ನೌಕರಿಗೆ ಬೇಕು ಎಂದರೆ ಯುವತಿಯರು ಮಂಚ ಹತ್ತಬೇಕು, ಯುವಕರು ಲಂಚ ಕೊಡಬೇಕು. ಇದು ಲಂಚ-ಮಂಚದ ಸರ್ಕಾರವಾಗಿದೆ. ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ್ದು ಶೂನ್ಯ ಸಾಧನೆ ಎಂದು ನುಡಿದರು. ಖಾಲಿಯಾಗಿರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ. ಸಚಿವ ಪ್ರಭು ಚೌಹಾನ್ ಆಪ್ತ ಜ್ಞಾನದೇವ ಜಾಧವ್ ಅನೇಕ ಹುದ್ದೆಗಳನ್ನು ಕೊಡಿಸುವದಾಗಿ ಹೇಳಿ ವಂಚಿಸಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆಯುತ್ತಿದೆ. ಕೆಪಿಟಿಸಿಎಲ್ನ 1,492 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಹಾಕಿದವರು ಮೂರು ಲಕ್ಷಕ್ಕೂ ಹೆಚ್ಚು ಜನ. ಈ ಪರೀಕ್ಷೆಯನ್ನು ಕೂಡ ಸರ್ಕಾರ ಪಿಎಸ್ಐ ಪರೀಕ್ಷೆ ನಡೆಸಿದಂತೆ ನಡೆಸಿದೆ ಎಂದು ಹೇಳಿದರು.
ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಸ್ಮಾರ್ಟ್ವಾಚ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯ ಬಂಧನವಾಗಿದೆ. ಹಾಗಾದರೆ ಕೆಪಿಟಿಸಿಎಲ್ಗೆ ಮತ್ತೊಮ್ಮೆ ಪರೀಕ್ಷೆ ಮಾಡುತ್ತಾರಾ? ಒಂದೊಂದು ಜೆಇ (Juniour Engineer – JE) ಹುದ್ದೆಗೆ ಮೂವತ್ತು ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಎಇ (Assistant Engineer – AE) ಹುದ್ದೆಗಳನ್ನು ₹ 50 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಆರು ನೂರಕ್ಕೂ ಹೆಚ್ಚು ಹುದ್ದೆಗಳು ಮಾರಾಟವಾಗಿರುವ ಶಂಕೆಯಿದೆ ಎಂದು ತಿಳಿಸಿದರು.
ನೇಮಕಾತಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಸರ್ಕಾರದಿಂದ ಆಗುವ ಎಲ್ಲಾ ನೇಮಕಾತಿ ಹಗರಣಗಳ ತನಿಖೆಗೆ ತ್ವರಿತಗತಿಯ ನ್ಯಾಯಾಲಯಗಳು ರಚನೆಯಾಗಬೇಕಿದೆ. ನಮ್ಮದು ಪ್ರಾಮಾಣಿಕ ಸರ್ಕಾರ ಎಂದು ಹೇಳುವವರು ಧೈರ್ಯವಿದ್ದರೆ ತ್ವರಿತಗತಿಯ ನ್ಯಾಯಾಲಯಗಳನ್ನು ರಚಿಸಲಿ. ಇಲ್ಲದಿದ್ದರೆ ನಿರುದ್ಯೋಗಿ ಯುವಕರೇ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕುವ ಕಾಲ ಬರುತ್ತದೆ. ಯುವಕರ ಭವಿಷ್ಯವನ್ನು ಮಾರಾಟ ಮಾಡಿ ಇವರು ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದೆ. ಸರ್ಕಾರವು ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟಕ್ಕಿಟ್ಟಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ. ಧ್ವಜ ಸಂಹಿತೆ ಬದಲಾಯಿಸಿ, ಪಾಲಿಯಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿ ಉದ್ಯಮಕ್ಕೆ ಹೊಡೆತ ಕೊಟ್ಟಿದ್ದಾರೆ. ಪಾಲಿಸ್ಟರ್ ಧ್ವಜ ತಯಾರಿಸುತ್ತಿರುವುದು ರಿಲಯನ್ಸ್ ಗ್ರೂಪ್. ದೇಶಭಕ್ತಿಯನ್ನೂ ಇವರು ಅದಾನಿ ಮತ್ತು ಅಂಬಾನಿ ಕಂಪನಿಗೆ ಅಡ ಇಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು ಸೇಲ್ಸ್ ಏಜೆಂಟ್ಗಳಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಧ್ವಜಗಳ ಮಾರಾಟಕ್ಕೂ ಇವರು ಟಾರ್ಗೆಟ್ ಕೊಟ್ಟಿದ್ದಾರೆ. ಸರ್ಕಾರವೇ ಧ್ವಜಗಳನ್ನು ಖರೀದಿಸಿ, ಮಾರಾಟ ಮಾಡಿ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ‘ಕಾಶ್ಮೀರಿ ಫೈಲ್ಸ್’ ಸಿನಿಮಾಗೆ ತೆರಿಗೆ ರಿಯಾಯ್ತಿ ಕೊಟ್ಟರು. ಅನೇಕ ಶಾಸಕರು ಚಿತ್ರವನ್ನು ಉಚಿತವಾಗಿ ತೋರಿಸಿದರು. ಆದರೆ ಈಗ ರಾಷ್ಟ್ರಧ್ವಜವನ್ನು ಉಚಿತವಾಗಿ ನೀಡದೆ ಮಾರಾಟ ಮಾಡುತ್ತಿದ್ದಾರೆ ಎಂದು ನುಡಿದರು.
ಸಿದ್ದರಾಮಯ್ಯಗೆ ಹಿನ್ನಡೆ ಅಲ್ಲ
ಎಸಿಬಿ ರದ್ದು ಮಾಡಿದ್ದು ಸಿದ್ದರಾಮಯ್ಯ ಅವರಿಗೆ ಆದ ಹಿನ್ನಡೆ ಅಲ್ಲ. ಕೋರ್ಟ್ ಆದೇಶ ಪಾಲಿಸುವುದಾಗಿ ಸಿದ್ದರಾಮಯ್ಯ ಹಿಂದೆಯೇ ಹೇಳಿದ್ದರು. ಎಸಿಬಿ ರದ್ದಾಗಿದ್ದು ಸರ್ಕಾರದಿಂದಲ್ಲ, ಕೋರ್ಟ್ನಿಂದ. 2018ರಲ್ಲಿಯೇ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಎಸಿಬಿ ರದ್ದು ಮಾಡುವ ಭರವಸೆ ಕೊಟ್ಟಿತ್ತು. ಮೂರನೇ ಸಿಎಂ ಬಗ್ಗೆ ಮಾಹಿತಿ ಕೊಡುತ್ತಿರುವುದು ಬಿಜೆಪಿಯವರೇ. ಬೆಂಕಿ ಹಚ್ಚುವವರು ಅವರೇ, ನಂತರ ಆರಿಸುವವರೂ ಅವರೇ. ನಾವು ಬೆಂಕಿ ಹತ್ತಿದೆ ನೋಡಿ ಎಂದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ ಎಂದರು.