ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ಧ ಶರಣಬಸವೇಶ್ವರ ರಥೋತ್ಸವ ಮಾರ್ಚ್ 12 ರಂದು ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಲಿದೆ. ಜೊತೆಗೆ ಅದೇ ದಿನ ರಥೋತ್ಸವದ ನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ತುಂಗಾರತಿ ನಡೆಸಿದಂತೆ, ವಾರಣಾಸಿಯ ಹನ್ನೆರಡು ಪುರೋಹಿತರ ತಂಡ, ಶರಣಬಸವೇಶ್ವರರ ದೇವಸ್ಥಾನದಲ್ಲಿ ಶರಣಾರತಿ ಮಾಡಲಿದೆ. ಈ ಶರಣಾರತಿಯನ್ನು ವೀಕ್ಷಿಸಲು ಭಕ್ತರಿಗೆ ಕೂಡಾ ಅವಕಾಶ ಕಲ್ಪಿಸಲಾಗಿದೆ.
201 ನೇ ಶರಣಬಸವೇಶ್ವರ ಪುಣ್ಯತಿಥಿ ದಿನದಂದು ಭವ್ಯ ರಥೋತ್ಸವ ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಪ್ರತಿವರ್ಷ ಅದ್ದೂರಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ವರ್ಷ ಕೂಡಾ ಅದ್ದೂರಿಯಾಗಿ ಆಚರಿಸಲು ಶರಣಬಸವೇಶ್ವರ ಸಂಸ್ಥಾನದಿಂದ ಸಿದ್ದತೆ ನಡೆದಿದೆ. ಮಾರ್ಚ್ 8 ರಿಂದಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಐದು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ