ಕಲಬುರಗಿ, ಸೆಪ್ಟೆಂಬರ್ 29: ಸೈಬರ್ ವಂಚನೆಗಳ ಬಗ್ಗೆ ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದ್ರು ಕೂಡಾ ವಂಚಕರು ವಂಚನೆಗೆ ಹತ್ತಾರು ಬಗೆಯ ವಾಮಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕೆಲವರಿಗೆ ಮನೆಯಲ್ಲೇ ಕೂತು ಹಣ ಗಳಿಸುವ, ಹಣ ಡಬಲ್ ಮಾಡೋ ಆಮಿಷ ನೀಡಿದರೆ, ಇನ್ನು ಕೆಲವರಿಗೆ ಸರ್ಕಾರಿ ಹುದ್ದೆಗಳ ಬಣ್ಣ ಬಣ್ಣದ ಆಸೆ, ಆಮಿಷಗಳನ್ನು ನೀಡಿ ವಂಚನೆ (Fraud) ಮಾಡುತ್ತಿದ್ದಾರೆ. ಸಾರ್ವಜನಿಕರು ಕೂಡಾ ಹತ್ತಾರು ರೀತಿಯ ಆಸೆಗಳಿಗೆ ಬಲಿಯಾಗಿ, ಹಣ ಕಳೆದುಕೊಳ್ಳುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಕಲಬುರಗಿ (Kalaburagi) ಜಿಲ್ಲೆಯ ಓರ್ವ ಸಮಾಜ ಸೇವಕನಿಗೆ, ನಿಮಗೆ ಪುಡ್ ಕಾರ್ಪೋರೇಷನ್ ಆಪ್ ಇಂಡಿಯಾದ ನಾಮನಿರ್ದೇಶಿತ ಸದಸ್ಯನನ್ನಾಗಿ ಮಾಡ್ತೇವೆ ಅಂತ ಹೇಳಿ, ಬರೋಬ್ಬರಿ 5.60 ಲಕ್ಷ ರೂ. ವಂಚಿಸಿದ್ದಾರೆ.
ಕಲಬುರಗಿ ನಗರದ ಕೆಎಚ್ಬಿ ಕಾಲೋನಿಯ ನಿವಾಸಿಯಾಗಿರುವ ಐವತ್ತಾರು ವರ್ಷದ ಗುರುಲಿಂಗಪ್ಪ ಎಂಬವರು ಅನೇಕ ಸಮಾಜ ಸೇವೆ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರ ನಂಬರ್ ಪಡೆದಿದ್ದ ದುರುಳುರು, ವರ್ಷದ ಹಿಂದೆ, ಗುರುಲಿಂಗಪ್ಪ ಅವರಿಗೆ ಕರೆ ಮಾಡಿದ್ದರು. ಕರೆ ಮಾಡಿದ್ದ ದೆಹಲಿ ಮುೂಲದ ಬಿಜಯಲಕ್ಷ್ಮಿ ಪಾಂಡೇ ಅನ್ನೋ ಮಹಿಳೆ, ನಾನು ದೆಹಲಿಯಲ್ಲಿರುವ ಕೇಂದ್ರ ಸರ್ಕಾರದ ಪುಡ್ ಕಾರ್ಪೋರೇಷನ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಸರ್ಕಾರಿ ಹುದ್ದೆಯಾಗಿರುವ ಪುಡ್ ಕಾರ್ಪೋರೇಷನ್ ಮಂಡಳಿಯ ನಾಮ ನಿರ್ದೇಶಿತ ಸದಸ್ಯನನ್ನಾಗಿ ಮಾಡಿಸುತ್ತೇನೆ ಅಂತ ಹೇಳಿದ್ದಳಂತೆ. ವಂಚಕಿಯ ಮಾತನ್ನು ಕೇಳಿದ್ದ ಗುರುಲಿಂಗಪ್ಪ ಅವರು ತಮ್ಮ ಸ್ವವಿವರ ಸೇರಿದಂತೆ ಅನೇಕ ದಾಖಲಾತಿಗಳನ್ನು ವಂಚಕಿಗೆ ಕೊಟ್ಟಿದ್ದರಂತೆ. ದಾಖಲಾತಿಗಳನ್ನು ಪಡೆದಿದ್ದ ವಂಚಕಿ, ನಾಮ ನಿರ್ದೇಶಿತ ಸದಸ್ಯನನ್ನಾಗಿ ಮಾಡಲು ಕೆಲ ಖರ್ಚು ವೆಚ್ಚಗಳಿವೆ, ಅವುಗಳನ್ನು ಬರಿಸಬೇಕು ಅಂತ ಹೇಳಿದ್ದಳಂತೆ. ಈ ಮಾತನ್ನು ನಂಬಿದ್ದ ಗುರುಲಿಂಗಪ್ಪ ಅವರು, ಅನೇಕ ಬಾರಿ ತಮ್ಮ ಪೋನ್ ಪೇ ಮೂಲಕ, ವಂಚಕಿ ಬಿಜಲಯಕ್ಷ್ಮಿ ಅವರ ಪೋನ್ ಪೇ ನಂಬರ್ ಗೆ ಇಪ್ಪತ್ತು ಸಾವಿರ, ಮೂವತ್ತು ಸಾವಿರ, ನಲವತ್ತು ಸಾವಿರದಂತೆ ಮೂರು ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ.
ಇನ್ನು ಕೆಲವೊಮ್ಮೆ ದೆಹಲಿಗೆ ಬರುವಂತೆ ಕರೆಸಿಕೊಂಡಿದ್ದ ವಂಚಕಿ ಮತ್ತು ಗ್ಯಾಂಗ್, ಗುರುಲಿಂಗಪ್ಪ ಅವರಿಂದ ಅನೇಕ ಖರ್ಚು ಇದೆ ಅಂತ ಹೇಳಿ, ಮತ್ತೆ ಎರಡು ಲಕ್ಷ ರೂಪಾಯಿ ಹಣ ಪಡೆದುಕೊಂಡಿದೆ. ನಿಮ್ಮ ಕೆಲಸ ಕೆಲವೇ ದಿನಗಳಲ್ಲಿ ಆಗುತ್ತೆ, ನೀವು ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾದ ಸದಸ್ಯರಾಗುತ್ತಿರಿ ಅಂತ ಹೇಳಿ ಕಳುಹಿಸಿದ್ದಾರೆ. ಆದರೆ ಅನೇಕ ತಿಂಗಳು ಕಾದರು ಕೂಡಾ ಪುಡ್ ಕಾರ್ಪೋರೇಷನ್ ನಿಂದ ಯಾವುದೇ ಅಧಿಕೃತ ನೇಮಕ ಪತ್ರ ಗುರುಲಿಂಗಪ್ಪ ಅವರಿಗೆ ಬಂದಿಲ್ಲ.
ಹಣ ಕೊಡುವ ಮುನ್ನ ಯಾವುದೇ ವಿಚಾರಣೆ ಮಾಡದೆ ಬರೋಬ್ಬರಿ 5.60 ಲಕ್ಷ ರೂಪಾಯಿ ನೀಡಿದ್ದ ಗುರುಲಿಂಗಪ್ಪ ಅವರು, ನೇಮಕಾತಿ ಪತ್ರ ಬಾರದೇ ಇದ್ದಾಗ, ಅನುಮಾನಗೊಂಡಿದ್ದಾರೆ. ಹೀಗಾಗಿ ಮತ್ತೆ ದೆಹಲಿಗೆ ಹೋಗಿ, ಪುಡ್ ಕಾರ್ಪೋರೇಷನ್ ಆಪ್ ಇಂಡಿಯಾದ ಕಚೇರಿಗೆ ಬೇಟಿ ನೀಡಿದ್ದಾರೆ. ಅಲ್ಲಿ ವಂಚಕಿ ಬಿಜಲಯಕ್ಷ್ಮಿ ಪಾಂಡೇ ಅಂತ ಯಾರಾದ್ರು ಕೆಲಸ ಮಾಡ್ತಿದ್ದಾರಾ ಅಂತ ವಿಚಾರಿಸಿದ್ದಾರೆ. ಆಗ ಈ ಹೆಸರಿನ ಮಹಿಳೆ ನಮ್ಮಲ್ಲಿ ಕೆಲಸ ಮಾಡುತ್ತಿಲ್ಲಾ ಅಂತ ಸಿಬ್ಬಂದಿ ಹೇಳಿದ್ದಾರೆ. ಆಗ ಗುರುಲಿಂಗಪ್ಪ ಅವರಿಗೆ ತನಗೆ ಕರೆ ಮಾಡಿದ್ದು, ಹಣ ಪಡೆದು ವಂಚಕರು ಅನ್ನೋದು ಗೊತ್ತಾಗಿದೆ. ಹೀಗಾಗಿ ವಂಚಕರು ಕರೆ ಮಾಡಿದ್ದ ನಂಬರ್ ಗೆ ಕರೆ ಮಾಡಿ, ತನ್ನ ಹಣವನ್ನು ಮರಳಿ ನೀಡುವಂತೆ ಕೇಳಿದ್ದಾರೆ. ಇಂದು ಕೊಡ್ತೇವೆ, ನಾಳೆ ಕೊಡ್ತೇವೆ ಅಂತ ಹೇಳಿದ್ದ ವಂಚಕರು, ಇದೀಗ ಪೋನ್ ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಾದ ಮದ್ಯದ ದರ, ಬಸ್ ಮೂಲಕ ಗೋವಾದಿಂದ ಕಲಬುರಗಿಗೆ ಅಕ್ರಮ ಮದ್ಯ ಸಾಗಾಟ
ವಂಚಕರ ಬಗ್ಗೆ ಗುರುಲಿಂಗಪ್ಪ, ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಗೆ ಮೋಸ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ತನಗೆ ಬರಬೇಕಾದ ಹಣವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ದೂರದ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಇದ್ದು ಕೇವಲ ಪೋನ್ ಕರೆ ಮೇಲೆ ನಂಬಿಸಿ, ವಂಚಿಸುತ್ತಿರುವ ವಂಚಕರ ಪತ್ತೆ ಕಷ್ಟಸಾಧ್ಯವಿರೋದರಿಂದ, ಹಣ ಮರಳಿ ಬರೋದು ಡೌಟು. ಆದ್ರೆ ವಂಚಕರ ಕರೆ ಬಂದಾಗ, ಅವರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ನೀಡುವ ಮೊದಲು ಸ್ವಲ್ಪ ವಿಚಾರಿಸುವುದು ಉತ್ತಮ ಅಂತಾರೆ ಪೊಲೀಸರು.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ