ಕರ್ನಾಟಕದಲ್ಲಿ ಹೆಚ್ಚಾದ ಮದ್ಯದ ದರ, ಬಸ್ ಮೂಲಕ ಗೋವಾದಿಂದ ಕಲಬುರಗಿಗೆ ಅಕ್ರಮ ಮದ್ಯ ಸಾಗಾಟ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು, ಕಾಂಗ್ರೆಸ್ ಸರ್ಕಾರ ಕೂಡಾ ಮದ್ಯದ ಮೇಲಿನ ಟ್ಯಾಕ್ಸ್ ನ್ನು ಮತ್ತಷ್ಟು ಹೆಚ್ಚಿಸಿತ್ತು. ಹೀಗಾಗಿ ನೆರೆಯ ಮಹರಾಷ್ಟ್ರ, ತೆಲೆಂಗಾಣ, ಗೋವಾ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿಯೇ ಮದ್ಯದ ಬೆಲೆ ಹೆಚ್ಚು. ಹೀಗಾಗಿ ಗೋವಾದಿಂದ ಕಲಬುರ್ಗಿಗೆ ಬಸ್ ಮೂಲಕ ಮದ್ಯ ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಅಬಕಾರಿ ಅಧಿಕಾರಿಗಳು ಭೇದಿಸಿದ್ದಾರೆ.
ಕಲಬುರಗಿ, ಸೆ.28: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರಗಳು, ಪ್ರತಿವರ್ಷ ತಮ್ಮ ಆಧಾಯದ ಮೂಲವನ್ನು ಹೆಚ್ಚಿಸಲು ಅಬಕಾರಿ ಸುಂಕವನ್ನು ಹೆಚ್ಚಿಸುತ್ತಲೇ ಇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ಕೂಡಾ ಮದ್ಯದ ಮೇಲಿನ ಟ್ಯಾಕ್ಸ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ನೆರೆಯ ಮಹರಾಷ್ಟ್ರ, ತೆಲೆಂಗಾಣ, ಗೋವಾ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿಯೇ ಮದ್ಯದ ಬೆಲೆ ಹೆಚ್ಚು ಅನ್ನೋದು ಮದ್ಯಪ್ರಿಯರ ಮಾತು. ರಾಜ್ಯದಲ್ಲಿ ಮದ್ಯದ ಬೆಲೆ ಹೆಚ್ಚಾಗಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನೆರೆಯ ಗೋವಾದಿಂದ ಕಲಬುರಗಿ (Kalaburagi) ಸಾರಿಗೆ ಬಸ್ನಲ್ಲಿ ಮದ್ಯ ತಂದು ಮಾರಾಟ ಮಾಡುತ್ತಿದ್ದರು. ಇಂತಹ ಜಾಲವೊಂದನ್ನು ಪತ್ತೆ ಮಾಡುವಲ್ಲಿ ಕಲಬುರಗಿ ಅಬಕಾರಿ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಕಾರ್ಯಚರಣೆಗೆ ಇಳಿದ ಕಲಬುರಗಿ ಅಬಕಾರಿ ಇಲಾಖೆಯ ಅಧಿಕಾರಿಗಳು, ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಜಾಲವನ್ನು ಹೆಡೆಮುರಿ ಕಟ್ಟಿದ್ದಾರೆ. ಗೋವಾ ಮತ್ತು ಹೈದ್ರಾಬಾದ್ ನಡುವೆ, ಕಲಬುರಗಿ ಮಾರ್ಗವಾಗಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಬಸ್ಗಳು ಓಡಾಡುತ್ತವೆ. ಸ್ಲೀಪರ್, ಓಲ್ವೋ ಬಸ್ಗಳು ಕೇವಲ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು, ಕರೆದುಕೊಂಡು ಬರುವುದು ಮಾತ್ರ ಮಾಡಲ್ಲ. ಬದಲಾಗಿ ಗೋವಾದಿಂದ ಬರುವಾಗ ಮದ್ಯದ ಬಾಟಲ್ಗಳನ್ನು ಕೂಡಾ ಕದ್ದು ಮುಚ್ಚಿ ತರುವ ಕೆಲಸ ಮಾಡುತ್ತವೆ.
ಬೆಳಗಾವಿ ಹೊರವಲಯದಲ್ಲಿ ಅಬಕಾರಿ ಚೆಕಪೋಸ್ಟ್ ಇದ್ದರು ಕೂಡಾ ಬಸ್ ಒಳಗಡೆ, ಸ್ಪೇರ್ ಪಾರ್ಟ್ಸ್ ಇಡುವ ಜಾಗ ಸೇರಿದಂತೆ ಕೆಲವಡೇ ಯಾರಿಗೂ ಗೊತ್ತಾಗದ ಜಾಗದಲ್ಲಿ ಗೋವಾದಿಂದ ಮದ್ಯದ ಬಾಟಟ್ಗಳನ್ನು ತಂದು ಅವುಗಳನ್ನು ಕಲಬುರಗಿಯಲ್ಲಿ ಕೆಲವರಿಗೆ ಮಾರಾಟ ಮಾಡಲಾಗುತ್ತಿತ್ತು.
ಇದನ್ನೂ ಓದಿ: ಗಣೇಶ ವಿಸರ್ಜನೆ: ಕಲಬುರಗಿಯಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ
ಇಂತಹದೊಂದು ಜಾಲದ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಕಳೆದ ಕೆಲ ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇಂದು ಮುಂಜಾನೆ ಕಾರ್ಯಚರಣೆ ನಡೆಸಿದಾಗ ಹೈದ್ರಾಬಾದ್ನ ಎಸ್ವಿಆರ್ ಟ್ರಾವೆಲ್ಸ್ನ ಓಲ್ವೋ ಬಸ್ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಗೋವಾದಿಂದ ತಂದಿದ್ದ ವಿವಿಧ ಕಂಪನಿಯ ಒಂಬತ್ತು ಲೀಟರ್ ಮದ್ಯವನ್ನು ಜಪ್ತಿ ಮಾಡುವುದರ ಜೊತೆಗೆ, ಬಸ್ ಚಾಲಕ ಮತ್ತು ನಿರ್ವಾಹಕರು ಸೇರಿ, ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಗೋವಾ ಮದ್ಯಕ್ಕೆ ಕಲಬುರಗಿಯಲ್ಲಿ ಬೇಡಿಕೆ
ಗೋವಾದಲ್ಲಿ ಮದ್ಯದ ಬೆಲೆ ತುಂಬಾ ಕಡಿಮೆಯಾಗಿದೆ. ಆದರೆ ರಾಜ್ಯದಲ್ಲಿ ಮದ್ಯದ ಬೆಲೆ ಹೆಚ್ಚಿದೆ. ಗೋವಾದಲ್ಲಿ ಒಂದು ಬಾಟಲ್ ರಾಯಲ್ ಸ್ಟ್ಯಾಗ್ ವಿಸ್ಕಿ ಬೆಲೆ 330 ರೂಪಾಯಿ ಇದ್ದರೆ, ಕರ್ನಾಟಕದಲ್ಲಿ 1800 ರೂಪಾಯಿಯಿದೆ. ಪ್ರತಿಯೊಂದು ಕಂಪನಿಯ ಮದ್ಯದ ಬಾಟಲ್ಗಳ ಬೆಲೆಯಲ್ಲಿ ಕೂಡಾ ಕರ್ನಾಟಕ ಮತ್ತು ಗೋವಾದ ನಡುವೆ ಸಾಕಷ್ಟು ವ್ಯತ್ಯಾಸವಿದೆ.
ಹೀಗಾಗಿ ಅನೇಕರು ಗೋವಾಕ್ಕೆ ಹೋಗುವ ಬಸ್ಗಳ ಸಿಬ್ಬಂದಿ ಜೊತೆ ಸಂಪರ್ಕವನ್ನು ಹೊಂದಿದ್ದು, ಅವರ ಮೂಲಕ ಮದ್ಯದ ಬಾಟಲ್ಗಳನ್ನು ತರಿಸುತ್ತಿದ್ದರಂತೆ. ಮೂಲ ಬೆಲೆಯ ಬಾಟಲ್ಗಳ ಮೇಲೆ ಐನೂರು ಹೆಚ್ಚು ಕೊಟ್ಟು ಇಲ್ಲಿನ ಜನ ಖರೀದಿಸುತ್ತಾರಂತೆ. ಹೀಗಾಗಿ ಬಸ್ ಸಿಬ್ಬಂದಿ, ಗೋವಾದಿಂದ ಬರುವಾಗ ಐದರಿಂದ ಹತ್ತು ಬಾಟಲಲ್ಗಳನ್ನು ಅಕ್ರಮವಾಗಿ ತಂದು ಕಲಬುರಗಿಯಲ್ಲಿ ಮಾರಾಟ ಮಾಡಿ ಹೋಗುತ್ತಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಕಲಬುರಗಿ ಅಬಕಾರಿ ಇಲಾಖೆಯ ಉಪ ಅಧಿಕ್ಷಕ ದೊಡ್ಡಪ್ಪ ಹೆಬಳಿ, ಸದ್ಯ ಮೂವರನ್ನು ವಶಕ್ಕೆ ಪಡೆದಿದ್ದೇವೆ. ಅಕ್ರಮದ ಜಾಲದ ಹಿಂದೆ ಇನ್ನು ಯಾರೆಲ್ಲ ಇದ್ದಾರೆ, ಹೇಗೆಲ್ಲಾ ಈ ಜಾಲ ಕೆಲಸ ನಿರ್ವಹಿಸುತ್ತಿತ್ತು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆದರೆ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿ, ಗೋವಾ ರಾಜ್ಯದ ಬೊಕ್ಕದ ತುಂಬಿಸುತ್ತಿರುವವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಮದ್ಯದ ದರ ಹೆಚ್ಚಾದರು ಕೂಡಾ, ಅನೇಕರು ಇರುವ ಬೆಲೆಯಲ್ಲಿಯೇ ಮದ್ಯವನ್ನು ಖರೀದಿಸಿ ಕುಡಿಯುತ್ತಿದ್ದರೆ, ಕೆಲವರು ವಾಮಮಾರ್ಗದ ಮೂಲಕ ನೆರೆಯ ರಾಜ್ಯದ ಮದ್ಯಕ್ಕೆ ಮೊರೆ ಹೋಗಿದ್ದಾರೆ. ಇದು ಮದ್ಯ ಪ್ರಿಯರಿಗೆ ಲಾಭ ತಂದರೆ, ಸರ್ಕಾರಕ್ಕೆ ಮಾತ್ರ ನಷ್ಟವನ್ನುಂಟು ಮಾಡುತ್ತಿದೆ. ಹೀಗಾಗಿ ಇಂತಹದೊಂದು ಅಕ್ರಮ ದಂದೆ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇದೀಗ ಕಣ್ಣಿಟ್ಟಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Thu, 28 September 23