ರಾಜ್ಯದ ಮೊದಲ ಹೆಲ್ತ್ ಎಟಿಎಂ ಕಲಬುರಗಿಯಲ್ಲಿ ಆರಂಭ; ಹತ್ತೇ ನಿಮಿಷದಲ್ಲಿ ಸಿಗುತ್ತೆ ಐವತ್ತು ಪರೀಕ್ಷೆಗಳ ವರದಿ!

| Updated By: ಗಣಪತಿ ಶರ್ಮ

Updated on: Sep 20, 2023 | 4:20 PM

Karnataka's first health ATM Started working in Kalaburagi; ವ್ಯಕ್ತಿಯೋರ್ವನ ಬಿಪಿ, ಶುಗರ್, ಹಿಮೋಗ್ಲೋಬಿನ್, ಮಲೇರಿಯಾ, ಡೆಂಗ್ಯೂ, ಚಿಕನಗುನ್ಯ ಜ್ವರದ ರಿಪೋರ್ಟ್, ಹೈಟ್, ವೇಟ್, ಆಕ್ಸಿಜನ್ ಪ್ರಮಾಣ, ಸೇರಿದಂತೆ ಐವತ್ತಕ್ಕೂ ಹೆಚ್ಚು ಪರೀಕ್ಷೆಗಳ ರಿಪೋರ್ಟ್ ನ್ನು ಕೇವಲ ಹತ್ತೇ ನಿಮಿಷದಲ್ಲಿ ನಿಮ್ಮ ಕಣ್ಣೆದುರಿಗೆ ಮಾಡಿ, ನಿಮಗೆ ನೀಡುತ್ತದೆ ಈ ಹೆಲ್ತ್ ಎಟಿಎಂ. ಈ ಮಷಿನ್​​ನಲ್ಲಿ ಇಸಿಜಿ ಸೌಲಭ್ಯ ಕೂಡಾ ಇದೆ.

ರಾಜ್ಯದ ಮೊದಲ ಹೆಲ್ತ್ ಎಟಿಎಂ ಕಲಬುರಗಿಯಲ್ಲಿ ಆರಂಭ; ಹತ್ತೇ ನಿಮಿಷದಲ್ಲಿ ಸಿಗುತ್ತೆ ಐವತ್ತು ಪರೀಕ್ಷೆಗಳ ವರದಿ!
ರಾಜ್ಯದ ಮೊದಲ ಹೆಲ್ತ್ ಎಟಿಎಂ ಕಲಬುರಗಿಯಲ್ಲಿ ಆರಂಭ
Follow us on

ಕಲಬುರಗಿ, ಸೆಪ್ಟೆಂಬರ್ 20: ಇತ್ತೀಚೆಗೆ ಜನರಿಗೆ ಆರೋಗ್ಯ ಸೇವೆಗಳು (Health Services) ಭಾರವಾಗುತ್ತಿವೆ. ಅದರಲ್ಲೂ ಖಾಸಗಿ ಆಸ್ಪತ್ರೆಗೆ ಹೋದ್ರೆ ವೈದ್ಯರು ಬರೆಯೋ ಟೆಸ್ಟ್​​ಗಳು, ಅವುಗಳಿಗೆ ಖರ್ಚಾಗುವ ಹಣ ನೋಡಿ, ರೋಗಿಗಳ ಆರೋಗ್ಯ ಸುಧಾರಿಸೋ ಬದಲು ಮತ್ತಷ್ಟು ಕೆಡುತ್ತಿದೆ. ಇನ್ನು ಖಾಸಗಿ ಡೈಗ್ನೋಸ್ಟಿಕ್ ಸೆಂಟರ್​ಗಳಿಗೆ (Diagnostic Centres) ಹೋದಾಗ, ಸಮಯ ಮತ್ತು ಹಣ ಎರಡು ಹಾಳಾಗುತ್ತವೆ. ಮಧ್ಯಮ ಮತ್ತು ಬಡವರ್ಗದ ಜನರು, ವೈದ್ಯಕೀಯ ಪರೀಕ್ಷೆಗಳಿಗೆ ಹಣ ಖರ್ಚು ಮಾಡಲು ಹೆಣಗಾಡುತ್ತಿದ್ದಾರೆ. ಆದರೆ ಇನ್ನುಮುಂದೆ ಉಚಿತವಾಗಿ, ಕೆಲವೇ ನಿಮಿಷದಲ್ಲಿ ವದ್ಯಕೀಯ ಪರೀಕ್ಷೆಯ ರಿಪೋರ್ಟ್ ನೀಡೋ ಮಷಿನ್ (Health ATM) ಇದೀಗ ಬಂದಿವೆ. ಅದು ಕೂಡಾ ಉಚಿತವಾಗಿರಲಿದೆ!

ಆರೋಗ್ಯದ ರಿಪೋರ್ಟ್ ಕಾರ್ಡ್ ನೀಡುತ್ತದೆ ಹೆಲ್ತ್ ಎಟಿಎಂ

ಹೌದು ಎಟಿಎಂ ಮಷಿನ್​ಗಳ ಮೂಲಕ ಜನರು ಸುಲಭವಾಗಿ ಹಣ ಪಡೆಯಬಹುದು. ಆದ್ರೆ ಇದೀಗ ರಾಜ್ಯದಲ್ಲಿ ಮೊದಲ ಬಾರಿಗೆ ಕಲಬುರಗಿಯಲ್ಲಿ ಆರೋಗ್ಯ ಇಲಾಖೆ ಹೆಲ್ತ್ ಎಟಿಎಂ ಆರಂಭಿಸಿದೆ. ಆದ್ರೆ ಹೆಲ್ತ್ ಎಟಿಎಂ ಹಣ ನೀಡೋದಿಲ್ಲಾ, ಬದಲಾಗಿ ಹತ್ತೇ ನಿಮಿಷದಲ್ಲಿ ವ್ಯಕ್ತಿಯ ಆರೋಗ್ಯದ ರಿಪೋರ್ಟ್ ಕಾರ್ಡ್ ನೀಡುತ್ತದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ತಂತ್ರಜ್ಞಾನದ ಹೆಲ್ತ್ ಎಟಿಎಂಗಳನ್ನು ಕಲಬುರಗಿಯಲ್ಲಿ ಆರಂಭಿಸಲಾಗಿದೆ.

ರಾಜ್ಯದಲ್ಲಿಯೇ ಮೊದಲು

ಎಟಿಎಂಗಳು ಬಂದ ಮೇಲೆ ಜನರು ಬ್ಯಾಂಕ್ ಗೆ ಹೋಗಿ, ಗಂಟೆಗಟ್ಟಲೆ ನಿಂತು ಹಣ ಪಡೆಯುವದಕ್ಕೆ ಮುಕ್ತಿ ಸಿಕ್ಕಿದೆ. ಇದೀಗ ನೀವು ಡೈಗ್ನೋಸ್ಟಿಕ್ ಕೇಂದ್ರಗಳಿಗೆ ಹೋಗಿ, ಅಲ್ಲಿ ದಿನಗಟ್ಟಲೆ ಕಾಯಬೇಕಾದ ಸ್ಥಿತಿಗೆ ಮುಕ್ತಿ ಹಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹೌದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಹೆಲ್ತ್ ಎಟಿಎಂ ಗಳನ್ನು ಆರಂಭಿಸಲಾಗಿದೆ. ಸೆಪ್ಟಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನ, ಸಿಎಂ ಸಿದ್ದರಾಮಯ್ಯನವರು ಹೆಲ್ತ್ ಎಟಿಎಂಗೆ ಚಾಲನೆ ನೀಡಿದ್ದರು. ಇದೀಗ ಅವುಗಳು ಕಾರ್ಯಾರಂಭ ಆರಂಭಿಸಿದ್ದು, ಕಲಹಬುರಗಿ ಜಿಲ್ಲೆಯಲ್ಲಿ ಇಪ್ಪತ್ತೈದು ಸ್ಥಳದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

ಹತ್ತೇ ನಿಮಿಷದಲ್ಲಿ ಐವತ್ತಕ್ಕೂ ಹೆಚ್ಚು ವೈದ್ಯಕೀಯ ಪರೀಕ್ಷೆಗಳು

ವ್ಯಕ್ತಿಯೋರ್ವನ ಬಿಪಿ, ಶುಗರ್, ಹಿಮೋಗ್ಲೋಬಿನ್, ಮಲೇರಿಯಾ, ಡೆಂಗ್ಯೂ, ಚಿಕನಗುನ್ಯ ಜ್ವರದ ರಿಪೋರ್ಟ್, ಹೈಟ್, ವೇಟ್, ಆಕ್ಸಿಜನ್ ಪ್ರಮಾಣ, ಸೇರಿದಂತೆ ಐವತ್ತಕ್ಕೂ ಹೆಚ್ಚು ಪರೀಕ್ಷೆಗಳ ರಿಪೋರ್ಟ್ ನ್ನು ಕೇವಲ ಹತ್ತೇ ನಿಮಿಷದಲ್ಲಿ ನಿಮ್ಮ ಕಣ್ಣೆದುರಿಗೆ ಮಾಡಿ, ನಿಮಗೆ ನೀಡುತ್ತದೆ ಈ ಹೆಲ್ತ್ ಎಟಿಎಂ. ಮಷಿನ್ ನಲ್ಲಿ ಇಸಿಜಿ ಸೌಲಭ್ಯ ಕೂಡಾ ಇದೆ.

ಖಾಸಗಿ ಕಂಪನಿಯೊಂದು, ತನ್ನ ಸಿಎಸ್ಆರ್ ಅನುಧಾನದಲ್ಲಿ, ಐದು ಕೋಟಿ ವೆಚ್ಚದಲ್ಲಿ ಇಪ್ಪತ್ತೈದು ಹೆಲ್ತ್ ಎಟಿಎಂ ಗಳನ್ನು ಖರೀದಿಸಿ, ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದೆ. ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆ, ಈ ಮಷಿನ್​​ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಜನಸಂದಣಿ ಇರೋ ಪ್ರದೇಶದಲ್ಲಿ ಅಳವಡಿಸುತ್ತಿದ್ದು, ಮಷಿನ್​ಗಳ ನಿಯಂತ್ರಣಕ್ಕಾಗಿ ಲ್ಯಾಬ್ ಟೆಕ್ನಿಷಿಯನ್​​ಗಳನ್ನು ಕೂಡಾ ನೇಮಿಸಿದೆ. ಇನ್ನು ಹೆಲ್ತ್ ಎಟಿಎಂ ಸೇವೆ ಉಚಿತವಾಗಿ ಇರಲಿದ್ದು, ಯಾರು ಬೇಕಾದ್ರು ಕೂಡಾ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಹೆಲ್ತ್ ಎಟಿಎಂಗಳ ಎಲ್ಲಾ ಪರೀಕ್ಷೆಗಳನ್ನು ನಾವೇ ಮಾಡಿಕೊಳ್ಳಲು ಬರೋದಿಲ್ಲಾ. ಶುಗರ್ ಟೆಸ್ಟ್ ಗೆ ರಕ್ತ ಸಂಗ್ರಹ, ಬಿಪಿ ತಪಾಸಣೆಯನ್ನು ಲ್ಯಾಬ್ ಟೆಕ್ನಿಷಿಯನ್ ಮಾಡ್ತಾರೆ. ಉಳಿದಂತೆ ಆಕ್ಸಿಜನ್ ಲೆವೆಲ್, ಹೈಟ್, ವೇಟ್ ಸೇರಿದಂತೆ ಕೆಲ ಪರೀಕ್ಷೆಗಳನ್ನು ಸ್ವಯಂ ನಾವೇ ಮಾಡಿಕೊಳ್ಳಬಹುದಾಗಿದೆ.

ಮೊಬೈಲ್​ಗೆ ಬರುತ್ತೆ ಹೆಲ್ತ್ ರಿಪೋರ್ಟ್

ವ್ಯಕ್ತಿಯೊಬ್ಬರು ಡೈಗ್ನೋಸ್ಟಿಕ್ ಕೇಂದ್ರಕ್ಕೆ ಹೋಗಿ,ರಕ್ತ ಪರೀಕ್ಷೆ ಸೇರಿದಂತೆ ಅನೇಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾದ್ರೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಜೊತೆಗೆ ಅನೇಕ ಗಂಟೆಗಳ ಸಮಯವನ್ನು ಕೂಡಾ ಕಳೆಯಬೇಕಾಗುತ್ತದೆ. ಆದ್ರೆ ಹೆಲ್ತ್ ಎಟಿಎಂ ನಲ್ಲಿ ಉಚಿತವಾಗಿ,ಸುಲಭವಾಗಿ, ಹತ್ತೇ ನಿಮಿಷದಲ್ಲಿ ಐವತ್ತಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿಸಿಕೊಂಡು, ರಿಪೋರ್ಟ್ ಪಡೆಯುವ ಅವಕಾಶವಿದೆ. ಇನ್ನು ಹೆಲ್ತ್ ರಿಪೋರ್ಟ್ ನ್ನು ಪ್ರಿಂಟ್ ರೂಪದಲ್ಲಿ ಕೂಡಾ ಮಷಿನ್ ನೀಡುತ್ತದೆ, ಜೊತೆಗೆ ಪರೀಕ್ಷೆಗೊಳಗಾದ ವ್ಯಕ್ತಿಯ ಮೊಬೈಲ್ ಗೆ ಹೆಲ್ತ್ ರಿಪೋರ್ಟ್ ಬರೋದರಿಂದ ಅದನ್ನು ಸುಲಭವಾಗಿ ಸಂಗ್ರಹಿಸಿಟ್ಟುಕೊಳ್ಳಲು ಕೂಡಾ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕಲಬುರಗಿ: ಪ್ರತಿ ವರ್ಷ ಸುಮಾರು 2 ಸಾವಿರ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ತರಭೇತಿ; ಸಿಎಂ ಸಿದ್ದರಾಮಯ್ಯ

ಹೆಲ್ತ್ ಎಟಿಎಂನಿಂದ ಬಡಜನರ ವೈದ್ಯಕೀಯ ಪರೀಕ್ಷೆಗಳ ವೆಚ್ಚ ಸಂಪೂರ್ಣವಾಗಿ ಉಳಿಯಲಿದೆ. ಬೇರೆ ರಾಜ್ಯದಲ್ಲಿ ಈ ರೀತಿಯ ಮಷಿನ್ ಗಳ ಮೂಲಕ ರಿಪೋರ್ಟ್ ನೀಡೋ ವ್ಯವಸ್ಥೆ ಇತ್ತು. ನಮ್ಮ ರಾಜ್ಯದಲ್ಲಿ ಎಲ್ಲಿಯೂ ಇಂತಹ ಸೇವೆ ಇರಲಿಲ್ಲಾ. ಆದ್ರೆ ಕಲಬುರಗಿಯಲ್ಲಿ ಮೊದಲ ಬಾರಿಗೆ ಇಂತಹ ಸೇವೆಯನ್ನು ಆರಂಬಿಸಿದ್ದೇವೆ. ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಮಷಿನ್ ಗಳನ್ನು ಅಳವಡಿಸಲು ಪ್ರಯತ್ನ ಮಾಡುತ್ತೇವೆ ಅಂತಾರೆ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಶೇಖರ್ ಮಾಲಿ.

ಈ ಮೊದಲು ವೈದ್ಯಕೀಯ ಪರೀಕ್ಷೆಗೆ ಸಾವಿರಾರು ರೂಪಾಯಿ ಖರ್ಚಾಗುತ್ತಿತ್ತು. ಜೊತೆಗೆ ಸಮಯ ಕೂಡ ವ್ಯರ್ಥವಾಗುತ್ತಿತ್ತು.ಆದ್ರೆ ಇದೀಗ ಹೆಲ್ತ್ ಎಟಿಎಂ ಮೂಲಕ ಸಮಯ ಮತ್ತು ಹಣ ಕೂಡಾ ಉಳಿಯುತ್ತದೆ. ಇದರಿಂದ ತುಂಬಾ ಅನಕೂಲವಾಗಿದೆ ಅಂತಿದ್ದಾರೆ ಪರೀಕ್ಷೆ ಮಾಡಿಸಿಕೊಂಡ ಪವಿತ್ರಾ ಅನ್ನೋ ಮಹಿಳೆ.

ಸಾಮಾನ್ಯ ಜನರು, ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿತ್ತು. ಆದ್ರೆ ಇದೀಗ ಉಚಿತವಾಗಿ ಹೆಲ್ತ್ ಎಟಿಎಂ ಮೂಲಕ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಈ ರೀತಿಯ ಪ್ರಯತ್ನ ರಾಜ್ಯದ ಎಲ್ಲಾಕಡೆಯಾದ್ರೆ, ಹೆಚ್ಚಿನ ಜನರಿಗೆ ಅನಕೂಲವಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ