ಕಲಬುರಗಿ: ಪ್ರತಿ ವರ್ಷ ಸುಮಾರು 2 ಸಾವಿರ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ತರಭೇತಿ; ಸಿಎಂ ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕ ಭಾಗದ ಮೇಲೆ ತಮ್ಮ ಸರ್ಕಾರಕ್ಕೆ ಹೆಚ್ಚಿನ ಕಾಳಜಿ ಇರುವುದರಿಂದಲೇ ದಾಖಲೆ ಪ್ರಮಾಣದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ 5,000 ಕೋಟಿ ರೂ. ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.

ಕಲಬುರಗಿ: ಪ್ರತಿ ವರ್ಷ ಸುಮಾರು 2 ಸಾವಿರ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ತರಭೇತಿ; ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 17, 2023 | 6:25 PM

ಕಲಬುರಗಿ, ಸೆ.17: ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನು ಇಂದು(ಸೆ.17) ಕಲಬುರಗಿ(Kalaburagi)ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಡಿ.ಆರ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ‌ ಸಿಎಂ ಸಿದ್ದರಾಮಯ್ಯ (Siddaramaiah) ನವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ರು. ನಂತರ ಮಾತನಾಡಿದ ಅವರು ‘ಹೆಸರಿಗೆ ಕಲ್ಯಾಣವಾದರೆ ಸಾಲದು. ಅರೋಗ್ಯ, ಶಿಕ್ಷಣ, ಮೂಲಸೌಕರ್ಯ ಹೀಗೆ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಯ “ಕಲ್ಯಾಣ ರಾಜ್ಯ”ಸಂಕಲ್ಪ ನಮ್ಮದಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಆಯವ್ಯಯದಲ್ಲಿ 5,000 ಕೋಟಿ ರೂ. ಘೋಷಣೆ

ಕಲ್ಯಾಣ ಕರ್ನಾಟಕ ಭಾಗದ ಮೇಲೆ ತಮ್ಮ ಸರ್ಕಾರಕ್ಕೆ ಹೆಚ್ಚಿನ ಕಾಳಜಿ ಇರುವುದರಿಂದಲೇ ದಾಖಲೆ ಪ್ರಮಾಣದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ 5,000 ಕೋಟಿ ರೂ. ಘೋಷಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅರೋಗ್ಯ ಕೇಂದ್ರಗಳ ನಿರ್ಮಾಣದ ಮಾದರಿಯನ್ನು ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್ ಅನ್ವಯ ನಿಗದಿಪಡಿಸಲು ಕೆ.ಕೆ.ಆರ್.ಡಿ.ಬಿ. ಮಂಡಳಿ ಮತ್ತು ಅರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಇದರಿಂದ ಭಾಗದಲ್ಲಿ ಆರೋಗ್ಯ ಸೇವೆ ಮತ್ತಷ್ಟು ಉತ್ತಮಗೊಳ್ಳುವ ವಿಶ್ವಾಸ ಹೊಂದಿರುವೆ ಎಂದರು.

ಇದನ್ನೂ ಓದಿ:ಬರ ಪರಿಹಾರ, ಘೋಷಣೆ ಬಗ್ಗೆ ಮಾನದಂಡಗಳ ಸಮಸ್ಯೆ: ಕೇಂದ್ರದ ಬರ ನಿರ್ವಹಣೆ ಕೈಪಿಡಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್​​

ಕಲಬುರಗಿಯಲ್ಲಿ ನೈಸ್ ಅಕಾಡೆಮಿ ಸೆಂಟರ್ ಫಾರ್ ಎಕ್ಸಿಲೆನ್ಸ್ ಫಾರ್ ಕ್ಯಾರಿಯರ್ ಡೆವಲೆಪಮೆಂಟ್ ಸಂಸ್ಥೆಯು, ಮುಂದಿನ ಆರ್ಥಿಕ ವರ್ಷದಿಂದ ಆರಂಭವಾಗಲಿದೆ. ಕೆ.ಕೆ.ಆರ್.ಡಿ.ಬಿ ಮಂಡಳಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸಂಸ್ಥೆಗೆ ಪ್ರತಿ ವರ್ಷ 10 ಕೋಟಿ ರೂ. ನೀಡುವ ಮೂಲಕ ಪ್ರತಿ ವರ್ಷ ., ಬ್ಯಾಂಕಿಂಗ್ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಇದರಿಂದ ರಾಜ್ಯ, ರಾಷ್ಟ್ರದಲ್ಲಿ ಪ್ರಮುಖ ಹುದ್ದೆಯಲ್ಲಿ ಈ ಭಾಗದ ಜನರು ಉದ್ಯೋಗ ಪಡೆಯಲು ಸಹಾಯವಾಗಲಿದೆ ಎಂದು ಹೇಳಿದರು.

ಇನ್ನು ಪ್ರದೇಶಕ್ಕೆ ಘೋಷಿಸಿರುವ 5,000 ಕೋಟಿ ರೂ. ಅನುದಾನ ಸಮರ್ಪಕ ಬಳಕೆಗೆ ಡಾ.ಅಜಯ್ ಸಿಂಗ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ರಚಿಸಲಾಗಿದೆ. ಡಾ. ಅಜಯ್ ಸಿಂಗ್ ಅವರು ಈಗಾಗಲೆ ಪ್ರಥಮ ಮಂಡಳಿ ಸಭೆ ನಡೆಸಿ ಪ್ರಸಕ್ತ ಸಾಲಿಗೆ 3,000 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸುತ್ತಿದ್ದಾರೆ. ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶೇ.25ರಷ್ಟು ಅನುದಾನ ಶಿಕ್ಷಣಕ್ಕೆ ಮೀಸಲಿಟ್ಟಿದ್ದು ಈ ಭಾಗದಲ್ಲಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಲಿದೆ ಎಂದರು.

ಅಕ್ಷರ ಆವಿಷ್ಕಾರ ಯೋಜನೆ

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯು “ಅಕ್ಷರ ಆವಿಷ್ಕಾರ” ಯೋಜನೆ ರೂಪಿಸಿದೆ. ಇದರ ಭಾಗವಾಗಿ ಪ್ರದೇಶದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲೆ-2,566 ಮತ್ತು ಪ್ರೌಢ ಶಾಲೆ-52 ಸೇರಿದಂತೆ ಒಟ್ಟು 2,618 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೆ ಮಂಜೂರಾತಿ ನೀಡಿ 18.34 ಕೋಟಿ ರೂ. ಅನುದಾನ ನೀಡಿದೆ. ಇದು ಈ ಸರ್ಕಾರಕ್ಕೆ ಪ್ರದೇಶದಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ನೀಡುತ್ತಿರುವ ಆದ್ಯತೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ:Honesty: ವಿಶ್ವೇಶ್ವರಯ್ಯ ಅವರಲ್ಲಿದ್ದ ಪ್ರಾಮಾಣಿಕತೆಗೆ ಭಾರತ ರತ್ನ ಕೊಟ್ಟರು -ಎಂದು ಹೃದಯತುಂಬಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ! ತಪ್ಪದೆ ವಿಡಿಯೋ ನೋಡಿ

ಪ್ರಸಕ್ತ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವರುಣನ ಅವಕೃಪೆಯಿಂದ ಮಳೆ ಇಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 42 ಸೇರಿದಂತೆ ರಾಜ್ಯದ 31 ಜಿಲ್ಲೆಗಳ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಕುಡಿಯುವ ನೀರು, ಮೇವು ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳುವಂತೆ ಹಾಗೂ ಬೆಳೆ ಹಾನಿ ಸಮೀಕ್ಷೆ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಿ.ಎಂ ಸಿದ್ದರಾಮಯ್ಯ ತಿಳಿಸಿದರು.

ಇನ್ನು ಈ ವೇಳೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಈ ಪ್ರದೇಶಕ್ಕೆ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಅಪ್ಪಾರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್ ಹೀಗೆ ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಸಂಕಲ್ಪ ಶಕ್ತಿಯಿಂದಾಗಿ 1948ರ ಸೆ.17 ರಂದು ಹೈದರಾಬಾದ್ ಕರ್ನಾಟಕ ಪ್ರದೇಶ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಇದನ್ನೂ ಓದಿ:ಮಾಧ್ಯಮದ ಮೇಲಿನ ನೈಜದಾಳಿಗಳ ಪಟ್ಟಿ ನಾವು ಕೊಡ್ತೇವೆ; ಸಿಎಂ ಸಿದ್ದರಾಮಯ್ಯ ಟ್ವೀಟ್​

ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ

ಬ್ರಿಟೀಷ್ ಮತ್ತು ನಿಜಾಮರ ಆಳ್ವಿಕೆಯ ಕಾರಣ ಪ್ರದೇಶದಲ್ಲಿ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಕಾಣಲಿಲ್ಲ. ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಎನ್.ಧರ್ಮಸಿಂಗ್ ಅವರ ವರದಿಯಂತೆ ಕಲಬುರಗಿ, ಬೀದರ, ರಾಯಚೂರು, ಬಳ್ಳಾರಿ ಒಳಗೊಂಡ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಲಾಗಿತ್ತಾದರು, ಅದು ಜನರ ನಿರೀಕ್ಷೆ ಈಡೇರಿಸಲು ಸಫಲವಾಗಲಿಲ್ಲ. ಇದು ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಪರಿಚ್ಛೇದಕ್ಕೆ ತಿದ್ದುಪಡಿಗೆ ಹೋರಾಟಕ್ಕೆ ನಾಂದಿಯಾಯಿತು. ಹಲವು ದಶಕಗಳ ತೀವ್ರ ಹೋರಾಟ ಹಾಗೂ ಈ ಭಾಗದ ಹಿರಿಯ ರಾಜಕಾರಣಿಗಳಾದ ಮಾಜಿ ಕೇಂದ್ರ ಸಚಿವರಾಗಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ.ಎನ್. ಧರಂಸಿಂಗ್ ಅವರ ಅವಿರತ ಪ್ರಯತ್ನದಿಂದಾಗಿ 2013ರಲ್ಲಿ ಮನಮೋಹನ ಸಿಂಗ್ ನೇತೃತ್ವದ ಯು.ಪಿ.ಎ. ಸರ್ಕಾರ ಕಲಂ 371ಕ್ಕೆ ತಿದ್ದುಪಡಿಗೆ ಅಸ್ತು ಎಂದ ಪರಿಣಾಮ ಈ ಭಾಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಲಭಿಸಿದೆ. ಸಾವಿರಾರು ಕೋಟಿ ರೂ. ವಿಶೇಷ ಅನುದಾನ ಹರಿದು ಬರುತ್ತಿದೆ. ಇದರಿಂದ ಹಿಂದುಳಿದ ಈ ಭಾಗದ ಜನರ ಬದುಕಿನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ ಎಂದರು.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಈ ಪ್ರದೇಶ ವಿಶ್ವವೇ ನಿಬ್ಬೆರಗಾಗುವಂತಹ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ ಪವಿತ್ರ ಭೂಮಿಯಾಗಿದೆ ಎಂದು ಪ್ರದೇಶದ ಕಲೆ, ಸಂಸ್ಕತಿಯನ್ನು ಸಿ.ಎಂ. ಕೊಂಡಾಡಿದರು.

ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವದ್ಯಾಲಯಗಳಾಗಬೇಕು ಎಂಬ ಪರಿಕಲ್ಪನೆಯಿಂದ ಗ್ರಾಮದ ಗ್ರಂಥಾಲಯಗಳನ್ನು “ಅರಿವು ಕೇಂದ್ರ’ ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 939 ಅರಿವು ಕೇಂದ್ರಗಳನ್ನು ಮೇಲ್ದರ್ಜೇಗೇರಿಸಲಾಗಿದೆ. ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ ಪ್ರಸಕ್ತ ಆಯವ್ಯಯದಲ್ಲಿ 100 ಕೋಟಿ ರೂ. ಅನುದಾನ ಒದಗಿಸಿದೆ. ತಲಾ 25 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಇದೂವರೆಗೆ 7 ಜಿಲ್ಲೆಗಳಲ್ಲಿ 218 ಗ್ರಾಮಗಳಲ್ಲಿ ಸಮುದಾಯ ಶೌಚಾಲಯ ಸಂಕೀರ್ಣ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ.

ಇದನ್ನೂ ಓದಿ:ತಮಿಳುನಾಡಿಗೆ ಬಿಡಲು ನಮ್ಮ ಬಳಿ ನೀರು ಇಲ್ಲ: ಸಿಎಂ ಸಿದ್ದರಾಮಯ್ಯ

371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನಗಳ ಸಂಸ್ಥೆ ನಿರ್ಮಾಣ

ಕೆ.ಕೆ.ಆರ್.ಡಿ.ಬಿ. ಮಂಡಳಿಯ 182.65 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು ಮುಂದಿನ 3-4 ತಿಂಗಳಿನಲ್ಲಿ ಉದ್ಘಾಟಿಸಲಾಗುವುದು. ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಯ ಹೊಸ “ತಾಯಿ ಮತ್ತು ಮಕ್ಕಳ ಆಸ್ಪತ್ರೆ” ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ಸುಟ್ಟ ಗಾಯಗಳ ಘಟಕ ಸ್ಥಾಪನೆ ಮಾಡಲಾಗುವುದು. ಕಲಬುರಗಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ 162.80 ಕೋಟಿ ರೂ. ಮತ್ತು ಕೊಪ್ಪಳ ವೈದ್ಯಕೀಯ ಕಾಲೇಜು ಆವರಣದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ 29.76 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದ ಅವರು, ಕೆ.ಕೆ.ಆರ್.ಟಿ.ಸಿ.ಗೆ 100 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 250 ಬಸ್ ಖರೀದಿ ಮಾಡಲಾಗುತ್ತಿದೆ ಎಂದರು.

ಯೂನಿವರಸಲ್ ತಲಾ ಆದಾಯ ಪರಿಕಲ್ಪನೆಯಲ್ಲಿ ಪಂಚ ಗ್ಯಾರಂಟಿ ಜಾರಿ:

ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳ ಸರಮಾಲೆಯಿಂದ ತತ್ತರಿಸಿದ ನಾಡಿನ ಜನತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೂನಿವರಸಲ್ ತಲಾ ಆದಾಯ ಪರಿಕಲ್ಪನೆಯಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರ ಖರೀದಿಯ ಶಕ್ತಿ ಹೆಚ್ಚಾದರೆ ಆರ್ಥಿಕತೆಯು ಉತ್ತಮಗೊಳ್ಳುತ್ತದೆ. ಇದನ್ನು ಈಗಾಗಲೇ ಜಾರಿಗೊಂಡಿರುವ ನಮ್ಮ ಗ್ಯಾರಂಟಿ ಯೋಜನೆಗಳು ಸಾಬೀತುಪಡಿಸಿವೆ. ಇದು ಕರ್ನಾಟಕ ಮಾದರಿ ಆಡಳಿತದ ಪರಿ ಎಂದರು.

“ಶಕ್ತಿ” ಯೋಜನೆಯಡಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಪ್ಟೆಂಬರ್ 5ರ ವರೆಗೆ ದಿನನಿತ್ಯ 6.75 ಲಕ್ಷದಂತೆ 587.36 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. “ಅನ್ನ ಭಾಗ್ಯ” ಯೋಜನೆಯಡಿ ಆಗಸ್ಟ್-2023 ಮಾಹೆಗೆ 20,44,691 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ 76,54,686 ಫಲಾನುಭವಿಗಳು ಇದಕ್ಕಾಗಿ ಅರ್ಹರಿದ್ದು, 124.92 ಕೋಟಿ ರೂ.ಗಳ ಪೈಕಿ 119.50 ಕೋಟಿ ರೂ. ಪಾವತಿಸಿದೆ. “ಗೃಹ ಜ್ಯೋತಿ”ಯೋಜನೆಯಡಿ ಆಗಸ್ಟ್ 28ರ ವರೆಗೆ ಜೆಸ್ಕಾಂ ವ್ಯಾಪ್ತಿಯಲ್ಲಿ 20,38,245 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 18,80,286 ಗ್ರಾಹಕರು ಯೋಜನೆಯ ಲಾಭ ಪಡೆದಿದ್ದಾರೆ. ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯಡಿ ಕಲಬುರಗಿ ವಿಭಾಗದ 7 ಜಿಲ್ಲೆಗಳಲ್ಲಿ ಆಗಸ್ಟ್-2023ರ ಮಾಹೆಯ ಅಂತ್ಯದ ವರೆಗೆ ನೊಂದಾಯಿಸಿದ 20,89,653 ಫಲಾನುಭವಿಗಳ ಪೈಕಿ 19,44,015 ಮಹಿಳೆಯರಿಗೆ ತಲಾ 2,000 ರೂ. ಹಣ ಡಿ.ಬಿ.ಟಿ. ಮೂಲಕ ಪಾವತಿಸಿದೆ. ನಿರುದ್ಯೋಗಿಗಳಿಗೆ ಮಾಸಿಕ 1,500 ಮತ್ತು 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆ ಈ ವರ್ಷದ ಅಂತ್ಯದೊಳಗೆ ಜಾರಿಗೆ ತರಲಾಗುತ್ತದೆ.

ಇದನ್ನೂ ಓದಿ:ಶೀಘ್ರವೇ 2,454 ವಿವಿಧ ಹಂತದ ಪೊಲೀಸ್ ಹುದ್ದೆ ಭರ್ತಿ ಮಾಡ್ತೇವೆ; ಸಿಎಂ ಸಿದ್ದರಾಮಯ್ಯ

ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ಲಭಿಸಲಿದೆ. ಸರ್ವರನ್ನು ಒಳಗೊಂಡ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಗೆ ಮತ್ತು “ಸರ್ವೋದಯ ಸಮಾಜ” ನಿರ್ಮಾಣಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಪೂರಕವಾಗಿದೆ. ಇದುವೇ ಕರ್ನಾಟಕ ಮಾದರಿ ಆಡಳಿತದ ಪರಿಯಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ವಿವರಿಸಿದರು.

ಕೆಂದ್ರೀಕೃತ ಯೋಜನೆ ರೂಪಗೊಳಿಸಲು ಮಂಡಳಿಗೆ ಸಲಹೆ

ಶತ-ಶತಮಾನಗಳಿಂದ ಪ್ರಾಕೃತಿಕ, ಸಾಮಾಜಿಕ, ರಾಜಕೀಯ ಕಾರಣದಿಂದ ಹಿಂದುಳಿದ ಈ ಪ್ರದೇಶದ ಅಭಿವೃದ್ಧಿಯನ್ನು ದಿನ ಬೆಳಗಾಗುವದರಲ್ಲಿ ಮಾಡಲು ಸಾದ್ಯವಿಲ್ಲ. ಬಹು ಆಯಾಮದ ಬಡತನ ನಿವಾರಣೆ, ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಜಾಗೃತಿ ಹೀಗೆ ವಿವಿಧ ಆಯಾಮಗಳಲ್ಲಿ ಆದ್ಯತೆ ನೀಡಿ ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕೇಂದ್ರಿಕೃತ ಯೋಜನೆ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಕೇವಲ ಅನುದಾನ ಒದಗಿಸುವುದು ಮುಖ್ಯವಲ್ಲ. ಅನುದಾನದ ಬಳಕೆ ಯಾವ ರೀತಿ ಮಾಡಿಕೊಳ್ಳಲಾಗುತ್ತದೆ ಎಂಬುದು ಮುಖ್ಯ ಎಂದರು.

8 ಜನ ಸ್ವಾತಂತ್ರ್ಯ ಯೋಧರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕಲಬುರಗಿ ಜಿಲ್ಲೆಯ ಭಗವಾನ್ ಪುರಿ ಅರಿಬಾ, ಕೊಪ್ಪಳ ಜಿಲ್ಲೆಯ ಜಿ.ಬಿ.ಮೂಲಿಮನಿ ಮತ್ತು ಪ್ರಹ್ಲಾದರಾವ್ ತಂ. ಶ್ರೀನಿವಾಸಚಾರ್, ವಿಜಯನಗರ ಜಿಲ್ಲೆಯ ದೇಸಾಯಿ ಗುಂಡುರಾವ ತಂ. ವೆಂಕೋಬರಾವ್ ಕಮಲಾಪುರ, ಬೀದರ ಜಿಲ್ಲೆಯ ರಾಮರಾವ ತಂ. ಗುಂಡೆರಾವ ಮತ್ತು ಪುಂಡಲಿಕರಾವ್ ತಂ. ಭೀಮರಾವ, ಯಾದಗಿರಿ ಜಿಲ್ಲೆಯ ಸಂಗಪ್ಪ ತಂ. ಬಸಪ್ಪ ಮಂಟೆ ಹಾಗೂ ರಾಯಚೂರು ಜಿಲ್ಲೆಯ ಡಿ. ಪಂಪಣ್ಣ ಅವರನ್ನು ಸಿ.ಎಂ. ಸೇರಿ ಗಣ್ಯರು ಸತ್ಕರಿಸಿದರು. ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್ ಸಮನ್ವಯ ಸಾಧಿಸಿದರು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ