ಕಲಬುರಗಿ: ಮುಂಗಾರು ಮಳೆ (Monsoon Rain) ಕೈಕೊಟ್ಟಿದೆ. ಇದರಿಂದ ಎಲ್ಲಡೆ ಬರದ ವಾತಾವರಣ ಕಾಣುತ್ತಿದೆ. ಜನರು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಜನರಿಗಿಂತ ಹೆಚ್ಚಾಗಿ ಜಾನುವಾರುಗಳು (Livestock) ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಮತ್ತೊಂದಡೆ ಹೊಟ್ಟೆ ತುಂಬಾ ಮೇವು ಕೂಡಾ ಸಿಗುತ್ತಿಲ್ಲ. ಮೇವು, ನೀರಿಗಾಗಿ ಮೂಖ ಪ್ರಾಣಿಗಳು ಪರದಾಡುತ್ತಿವೆ.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜನರು ಬೆಲೆ ಏರಿಕೆ, ಕುಡಿಯೋ ನೀರಿನ ಸಮಸ್ಯೆ ಸೇರಿದಂತೆ ಅನೇಕ ರೀತಿಯ ತೊಂದರೆ ಸಿಲುಕಿದ್ದಾರೆ. ಮತ್ತೊಂದಡೆ ರೈತರು, ಮಳೆಗಾಗಿ ಮೋಡ ನೋಡುತ್ತಾ ಕೂತಿದ್ದಾರೆ. ಮಳೆಗಾಲ ಆರಂಭವಾದರೂ ಮಳೆ ಬಾರದ ಹಿನ್ನೆಲೆ ಬಿತ್ತನೆ ಮಾಡಲು ಸಾಧ್ಯವಾಗದೆ ಅನ್ನದಾತರು ಕಂಗಾಲಾಗಿದ್ದಾರೆ. ಮೂಖ ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ತೊಂದರೆ ಅನುಭವಿಸುತ್ತಿವೆ. ಮಳೆಯಾಗದೇ ಇರುವುದರಿಂದ ಕೆರೆಕಟ್ಟೆಗಳು ಬರಿದಾಗಿವೆ. ಕೊಳವೆ ಬಾವಿಗಳು ಬತ್ತಿವೆ. ಹೀಗಾಗಿ ಜಾನುವಾರುಗಳಿಗೆ ಕುಡಿಯುವ ನೀರು ಸಿಗದಂತ ಸ್ಥಿತಿ ನಿರ್ಮಾಣವಾಗಿದೆ.
ಅನೇಕ ಕಡೆ ರೈತರು, ಜಾನುವಾರುಗಳಿಗೆ ಪ್ರತಿನಿತ್ಯ ಬಿಂದಿಗೆ ನೀರು ಕುಡಿಸಲು ಪರದಾಡುತ್ತಿದ್ದಾರೆ. ಜಾನುವಾರುಗಳು ಇದೀಗ ನೀರಿಗಾಗಿ ಕಿಲೋ ಮೀಟರ್ ದೂರ ಅಲೆದು ಸಿಕ್ಕಲ್ಲಿ ನೀರು ಕುಡಿದು ಬದುಕುತ್ತಿವೆ. ರೈತರು, ಕೊಳವೆ ಬಾವಿ, ಗ್ರಾಮದ ಸುತ್ತಮುತ್ತಲಿನ ಬಾವಿಗಳು, ಕೆರೆಗಳಲ್ಲಿನ ನೀರನ್ನೆ ಜಾನುವಾರುಗಳಿಗೆ ಕುಡಿಸುತ್ತಿದ್ದರು. ಆದರೆ ಇದೀಗ ಎಲ್ಲಿಯೂ ನೀರು ಸಿಗದೇ ಇರುವುದರಿಂದ ಅನೇಕರು ಜಾನುವಾರುಗಳನ್ನು ಸಾಕಲು ಸಂಕಷ್ಟ ಪಡುತ್ತಿದ್ದಾರೆ.
ಇದನ್ನೂ ಓದಿ: ಮುಂಗಾರು ಮಳೆ ವಿಳಂಬ; ರಾಜ್ಯದಲ್ಲಿ ಎದುರಾಗಲಿದೆ ನೀರಿಗಾಗಿ ಹಾಹಾಕಾರ
ನೀರಿನ ಜೊತೆಗೆ ಮೇವಿನ ಕೊರತೆ ಕೂಡಾ ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮಳೆಯಾಗುತ್ತಿತ್ತು. ಮಳೆ ನಂತರ ಭರ್ಜರಿ ಹುಲ್ಲು ಬೆಳೆಯುತ್ತಿತ್ತು. ಅನೇಕ ಕಡೆ ರೈತರು ಹುಲ್ಲನ್ನು ಕೂಡಾ ಬೆಳೆಯುತ್ತಿದ್ದರು. ಆದರೆ ಈ ಬಾರಿ ಮಳೆಯಾಗದೇ ಇರುವುದರಿಂದ ಎಲ್ಲಿಯೂ ಹಸಿ ಹುಲ್ಲು ಸಿಗುತ್ತಿಲ್ಲ. ಇನ್ನು ಕಳೆದ ಬಾರಿ ಹೆಚ್ಚಿನ ರೈತರು ತೊಗರಿ ಸೇರಿದಂತೆ ಬೇರೆ ಬೆಳೆಗಳನ್ನು ಬೆಳದಿದ್ದರಿಂದ ಜೋಳವನ್ನು ಕೂಡಾ ಹೆಚ್ಚಾಗಿ ಬೆಳದಿರಲಿಲ್ಲ. ಹೀಗಾಗಿ ಒಣ ಜೋಳದ ದಂಟು ಕೂಡಾ ರೈತರ ಬಳಿ ಸಂಗ್ರಹವಿಲ್ಲ. ಇದ್ದ ಅಲ್ಪ ಪ್ರಮಾಣದ ಒಣ ಮೇವು ಕೂಡಾ ಖಾಲಿಯಾಗಿದೆ. ಜೊತೆಗೆ ಹಸಿರು ಮೇವು ಕೂಡಾ ಸಿಗುತ್ತಿಲ್ಲ. ಇದರಿಂದ ಜಾನುವಾರುಗಳಿಗೆ ಹೊಟ್ಟೆ ತುಂಬಾ ಮೇವು ಕೂಡಾ ಸಿಗುತ್ತಿಲ್ಲ. ಮಳೆಯಾಗದೇ ಇರುವುದರಿಂದ ಜಾನುವಾರುಗಳ ಹೊಟ್ಟೆಗೆ ಕೂಡಾ ಹೊಡೆತ ಬಿದ್ದಿದೆ.
ಬರಗಾಲದ ಸಂದರ್ಭದಲ್ಲಿ ಸರ್ಕಾರವೇ ಗೋಶಾಲೆಗಳನ್ನು ತೆರೆಯುತ್ತದೆ. ಅಲ್ಲಿ ಜಾನುವಾರುಗಳಿಗೆ ಸರ್ಕಾರದಿಂದಲೇ ಕುಡಿಯುವ ನೀರು, ಮೇವಿನ ವ್ಯವಸ್ಥೆ ಕೂಡಾ ಮಾಡಲಾಗುತ್ತದೆ. ಆದರೆ ಈ ಬಾರಿ ಎಲ್ಲಿಯೂ ಕೂಡಾ ಗೋಶಾಲೆಗಳನ್ನು ಆರಂಭಿಸಿಲ್ಲ. ಸರ್ಕಾರ ಇನ್ನು ರಾಜ್ಯವನ್ನು ಬರಪೀಡಿತ ರಾಜ್ಯ ಅಂತ ಘೋಷಣೆ ಮಾಡಿಲ್ಲ. ಮಳೆಯಾಗುತ್ತೆ ಅನ್ನೋ ನಿರೀಕ್ಷೆಯಲ್ಲಿಯೇ ಸರ್ಕಾರವಿದೆ. ಆದರೆ ಗ್ರಾಮೀಣ ಬಾಗದಲ್ಲಿ ಜಾನುವಾರುಗಳನ್ನು ಸಾಕಿದ್ದ ರೈತರು ಮತ್ತು ಸಾರ್ವಜನಿಕರು ಇದೀಗ ಮೇವು, ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಜಾನುವಾರುಗಳನ್ನು ಸಾಕುವುದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ.
ಮೋಡ ಬಿತ್ತನೆ ಸೇರಿದಂತೆ ಪರ್ಯಾಯ ಕ್ರಮಗಳ ಮೂಲಕ ಮಳೆಯಾಗುವಂತೆ ನೋಡಿಕೊಳ್ಳಬೇಕು. ರೈತರು, ಜಾನುವಾರುಗಳು ಸಂಕಷ್ಟದಲ್ಲಿದ್ದು, ಅವುಗಳ ನೆರವಿಗೆ ಸರ್ಕಾರ ಬರಬೇಕು ಅಂತ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ. ಕೂಡಲೇ ಗೋಶಾಲೆಗಳನ್ನು ಆರಂಭಿಸಿ. ಅಲ್ಲಿಯಾದರೂ ಅವುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಬೇಕು ಅನ್ನೋ ಆಗ್ರಹವನ್ನು ರೈತರು ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ