ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ವೇತನಕ್ಕೆ ಸರ್ಕಾರ ತಡೆ, ಸಂಕಷ್ಟದಲ್ಲಿ ಮಕ್ಕಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 05, 2023 | 10:00 AM

2014 ರ ಜನವರಿ 8 ರಂದು ಕಲಬುರಗಿ ನಗರದ ರೋಜಾ ಪ್ರದೇಶದಲ್ಲಿದ್ದ ಪಾತಕಿ ಮುನ್ನಾನನ್ನು ಹಿಡಿಯಲು ಹೋದಾಗ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದರು. ಈ ವೇಳೆ ಅಂದಿನ ಗೃಹ ಸಚಿವ ಕೆ.ಜೆ ಜಾರ್ಜ್, ಮಲ್ಲಿಕಾರ್ಜುನ ಬಂಡೆ ಮಕ್ಕಳು ಚಿಕ್ಕವರಾಗಿದ್ದರಿಂದ ಕುಟುಂಬಕ್ಕೆ ಅವರ ನಿವೃತ್ತಿಯಾಗೋವರೆಗಿನ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ವಾಗ್ದಾನ ಮಾಡಿದ್ದರು. ಆದರೀಗ ಆ ಭರವಸೆ ಈಡೇರದೆ ಕಂಗಾಲಾಗಿದ್ದಾರೆ.

ಕಲಬುರಗಿ: ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಅನೇಕ ಸಲ ಅನೇಕ ರೀತಿಯ ಭರವಸೆಗಳನ್ನು ನೀಡುತ್ತದೆ. ಇದೇ ಭರವಸೆಯ ಆಧಾರದ ಮೇಲೆ ಕುಟುಂಬಗಳು ಸಂತೋಷವಾಗುತ್ತವೆ. ಆದರೆ ಕೊಟ್ಟ ಭರವಸೆ ಈಡೇರಿಸುವ ಕೆಲಸವನ್ನು ಮುಂದೆ ಸರಿಯಾಗಿ ಮಾಡದೇ ಇರೋದರಿಂದ, ಅನೇಕರು ಅನೇಕ ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇದೇ ರೀತಿಯ ಸಮಸ್ಯೆ ಇದೀಗ ಪಾತಕಿಯೇ ಗುಂಡೇಟಿಗೆ ಬಲಿಯಾಗಿದ್ದ ಹುತಾತ್ಮ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಬಂದಿದೆ.

ಪಾತಕಿ ಗುಂಡೇಟಿಗೆ ಬಲಿಯಾಗಿದ್ದ ಬಂಡೆ

2014 ರ ಜನವರಿ 8 ರಂದು ಕಲಬುರಗಿ ನಗರದ ರೋಜಾ ಪ್ರದೇಶದಲ್ಲಿದ್ದ ಪಾತಕಿ ಮುನ್ನಾನನ್ನು ಹಿಡಿಯಲು ಹೋದಾಗ, ಮುನ್ನಾ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ತಲೆಗೆ ಗುಂಡು ಹೊಕ್ಕಿತ್ತು. ನಂತರ ಅವರನ್ನು ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಲ್ಲಿಕಾರ್ಜುನ ಬಂಡೆ 2014ರ ಜನವರಿ 15 ರಂದು ಹುತಾತ್ಮರಾಗಿದ್ದರು. ಪಾತಕಿ ಗುಂಡೇಟಿಗೆ ಬಲಿಯಾಗಿದ್ದ ಮಲ್ಲಿಕಾರ್ಜುನ ಬಂಡೆ ಸಾವು, ಕಲಬುರಗಿಯಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು. ಮಲ್ಲಿಕಾರ್ಜುನ ಬಂಡೆ ನಿಧನರಾದಾಗ, ಅವರ ಅಂತ್ಯಕ್ರಿಯೇಗೆ ಬಂದಿದ್ದ ಅಂದಿನ ಗೃಹ ಸಚಿವ ಕೆ.ಜೆ ಜಾರ್ಜ್, ಮಲ್ಲಿಕಾರ್ಜುನ ಬಂಡೆ ಮಕ್ಕಳು ಚಿಕ್ಕವರಾಗಿದ್ದರಿಂದ ಕುಟುಂಬಕ್ಕೆ, ಅವರು ನಿವೃತ್ತಿಯಾಗೋವರೆಗಿನ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ವಾಗ್ದಾನ ಮಾಡಿದ್ದರು. ಅದರಂತೆ ಬಂಡೆ ಮಕ್ಕಳಿಗೆ ಐವತ್ತು ಲಕ್ಷ ಹಣ, 50X60 ಅಳತೆಯ ಸೈಟ್​ನ್ನು ಸರ್ಕಾರ ನೀಡಿದೆ. ಆದರೆ ವೇತನ ನೀಡುವ ವಿಚಾರದಲ್ಲಿ ಮಾತ್ರ ಸರ್ಕಾರ ಗೊಂದಲಕ್ಕೆ ಸಿಲುಕಿದೆ. ಇದರ ಜೊತೆಗೆ ಮಕ್ಕಳ ಶಾಲಾ ವಿದ್ಯಾಭಾಸ್ಯಕ್ಕೆ ತಲಾ 12 ಸಾವಿರ ರೂಪಾಯಿ ಫೀಸ್ ನ್ನು ಸರ್ಕಾರ ನೀಡುತ್ತಿದೆ. ಆದರೆ ಅದನ್ನು ನೇರವಾಗಿ ಶಾಲೆಗೆ ಕಳುಹಿಸದೇ ಇರೋದರಿಂದ ಆ ಹನ್ನೆರಡು ಸಾವಿರ ಪಡೆಯಲು ಹತ್ತಾರು ಬಾರಿ ಇಲಾಖೆಗೆ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆಯಂತೆ.

ಇದನ್ನೂ ಓದಿ:ರಾಜ್ಯದಲ್ಲಿರುವ 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯಬೇಕು, ಅದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ -ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

2019 ರಿಂದ ವೇತನ ತಡೆಹಿಡದಿರುವ ಸರ್ಕಾರ

ಮಲ್ಲಿಕಾರ್ಜುನ ಬಂಡೆ ನಿಧನರಾದ ಕೆಲವೇ ವರ್ಷಗಳಲ್ಲಿ ಅವರ ಪತ್ನಿ ಮಲ್ಲಮ್ಮ ಬಂಡೆ ಕೂಡಾ 2016 ರಲ್ಲಿ ಮೃತಪಟ್ಟಿದ್ದು, ಇದೀಗ ಮಲ್ಲಿಕಾರ್ಜುನ ಬಂಡೆ ಅವರ ಇಬ್ಬರು ಅಪ್ರಾಪ್ತ ಮಕ್ಕಳನ್ನು ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಇನ್ನು ಬಂಡೆ ಹುತಾತ್ಮರಾದ ನಂತರ ಸರ್ಕಾರ ತಾನು ಹೇಳಿದಂತೆ ಪ್ರತಿ ತಿಂಗಳು ಅವರ ಮೂಲ ವೇತನವಾಗಿದ್ದ 32,226 ರೂಪಾಯಿ ಹಣವನ್ನು ಅವರು ಕುಟುಂಬದವರಿಗೆ ನೀಡುತ್ತಿತ್ತು. ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕುಟುಂಬದವರು, ಮಕ್ಕಳ ಹೆಸರಲ್ಲಿ ಸುಕನ್ಯಾ ಸಮೃದ್ದಿ ಯೋಜನೆ, ಜೀವ ವಿಮೆ ಪಾಲಸಿಗಳನ್ನು ಮಾಡಿಸಿದ್ದರು. ಸರ್ಕಾರ ನೀಡಿದ ಹಣವನ್ನು ಪಾಲಿಸಿಗಳ ಕಂತನ್ನು ತುಂಬುತ್ತಿದ್ದರು. 2019 ರ ಅಕ್ಟೋಬರ್ ತಿಂಗಳವರಗೆ ಪ್ರತಿ ತಿಂಗಳು ಚೆಕ್ ಮೂಲಕ ಹಣವನ್ನು ನೀಡಲಾಗುತ್ತಿತ್ತು. ಆದರೆ 2019ರ ನವಂಬರ್​ನಿಂದ ಇಲ್ಲಿವರೆಗಿನ ವೇತನವನ್ನು ನೀಡಿಲ್ಲ.

ಹೌದು ಇಲ್ಲಿವರಗೆ ಸರ್ಕಾರ ಹದಿಮೂರು ಲಕ್ಷಕ್ಕೂ ಅಧಿಕ ಹಣವನ್ನು ಬಾಕಿ ಉಳಸಿಕೊಂಡಿದೆ. ಈ ಹಣವನ್ನು ಬಿಡುಗಡೆ ಮಾಡುವಂತೆ ಕುಟುಂಬದವರು ಹತ್ತಾರು ಸಲ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ, ರಾಜ್ಯ ಡಿಜಿ ಐಜಿಪಿ ಅವರಿಗೆ, ಗೃಹ ಇಲಾಖೆಗೆ, ಮುಖ್ಯಮಂತ್ರಿ ಕಚೇರಿಗೆ ಮನವಿ ಮಾಡಿದ್ದಾರೆ. ಆದರೆ ವೇತನ ಮಾತ್ರ ಬಿಡುಗಡೆ ಮಾಡುತ್ತಿಲ್ಲ.

ಇದನ್ನೂ ಓದಿ:Crores found in BJP MLA’ s house: ಸರ್ಕಾರದ ವಿರುದ್ಧ ಕಾಂಗ್ರೆಸ್ ಸೂಟ್ ಕೇಸ್ ಹಿಡಿದು ಪ್ರತಿಭಟನೆ, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

ವೇತನ ಬಿಡುಗಡೆಗೆ ಅಡ್ಡಿಯಾದ ತಂತ್ರಾಶ

2019 ರ ವರಗೆ ಮ್ಯಾನುವಲ್ ಮೂಲಕ ವೇತನ ನೀಡಲಾಗುತ್ತಿತ್ತು. ಆದ್ರೆ ಸರ್ಕಾರ 2019 ರಲ್ಲಿ ರಾಜ್ಯ ಸರ್ಕಾರ ಖಜಾನೆ 2 ತಂತ್ರಾಶವನ್ನು ಜಾರಿಗೆ ತಂದ ನಂತರ ಈ ಸಮಸ್ಯೆ ಉದ್ಭವವಾಗಿದೆ. ಹೌದು ಇದೀಗ ಎಚ್. ಆರ್.ಎಂ.ಎಸ್ ನ್ನು ತಂತ್ರಾಶ 2 ರಲ್ಲಿ ದಾಖಲಿಸಿದ ನಂತರವೇ ಸರ್ಕಾರಿ ನೌಕರರಿಗೆ ವೇತನ ಬಿಡುಗಡೆ ಮಾಡಲಾಗುತ್ತದೆ. ಆದರೆ ಹುತಾತ್ಮ ಮಲ್ಲಿಕಾರ್ಜುನ ಬಂಡೆ ಅವರಿಗೆ ತಂತ್ರಾಶ 2 ರಲ್ಲಿ ದಾಖಲಿಸೋದು ಹೇಗೆ, ಯಾವ ಹೆಡ್​ನಲ್ಲಿ ವೇತನ ಬಿಡುಗಡೆ ಮಾಡಬೇಕು ಅನ್ನೋ ಗೊಂದಲ ಆರಂಭವಾಗಿದೆ. ಸರ್ಕಾರ ಆದೇಶವೊಂದನ್ನು ಹೊರಡಿಸಿ ಗೊಂದಲವನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ಆದರೆ ಸರ್ಕಾರ ಮಾಡದೇ ಇರೋದರಿಂದ ವೇತನ ಸಿಗದೇ ಕುಟುಂಬದವರು ಕಂಗಾಲಾಗಿದ್ದಾರೆ.

ಇನ್ನು ಒಂದು ವಾರದೊಳಗಾಗಿ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡದೇ ಇದ್ದರೆ, ಕುಟುಂಬದವರ ಜೊತೆ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸೋದಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಹನಮಂತ ಮರಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಇಶಾ ಪಂತ್, ಎಲ್ಲ ಪೈಲ್ ಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿದೆ ಎನ್ನುತ್ತಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ ಕಲಬುರಗಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 am, Sun, 5 March 23