Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರಷ್ಟ ಬಿಜೆಪಿ ಶಾಸಕ ವಿರೂಪಾಕ್ಷಪ್ಪನನ್ನು ಅರೆಸ್ಟ್ ಮಾಡಬೇಕು, ನನ್ನ ರಾಜಕೀಯ ಜೀವನದಲ್ಲಿ ಇಂಥ ಭ್ರಷ್ಟ ಸರ್ಕಾರ ನೋಡಿರಲಿಲ್ಲ -ಸಿದ್ದರಾಮಯ್ಯ ಗುಡುಗು

ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ಮೋದಿ, ಅಮಿತ್ ಶಾ, ಕಟೀಲು, ಬೊಮ್ಮಾಯಿ ಬರೀ ಸುಳ್ಳು ಹೇಳ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Follow us
ಆಯೇಷಾ ಬಾನು
|

Updated on:Mar 04, 2023 | 12:39 PM

ಬೆಂಗಳೂರು: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ (Madalu Veerupakshappa) ಹಾಗೂ ಪುತ್ರ ಪ್ರಶಾಂತ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಮತ್ತೊಂದೆಡೆ ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ ಅಂತಾ ಕರೆಯಬೇಕಾಗುತ್ತಿದೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ಮೋದಿ, ಅಮಿತ್ ಶಾ, ಕಟೀಲು, ಬೊಮ್ಮಾಯಿ ಬರೀ ಸುಳ್ಳು ಹೇಳ್ತಾರೆ. ನಾವು ಭ್ರಷ್ಟಾಚಾರ ಆರೋಪ ಮಾಡಿದ್ರೆ ದಾಖಲಾತಿ ಕೊಡಿ ಅಂತಾರೆ. ಅಲ್ಲದೇ ಹಿಂದಿನ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆದಿತ್ತು ಅಂತಾರೆ. PSI ನೇಮಕಾತಿ ಹಗರಣದಲ್ಲಿ ಎಡಿಜಿಪಿ ಸುಮ್ಮನೇ ಜೈಲಿಗೆ ಹೋದ್ರಾ? ಜಿಲ್ಲಾಧಿಕಾರಿ ಜೈಲಿಗೆ ಹೋಗಿದ್ದ, ಇದಕ್ಕಿಂತ ಇವರಿಗೆ ಸಾಕ್ಷ್ಯ ಬೇಕಾ? ಈಶ್ವರಪ್ಪ ಹೆಸರು ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ. ಈ ವಿಚಾರಕ್ಕೆ ಈಶ್ವರಪ್ಪ ರಾಜೀನಾಮೆ ಕೊಟ್ಟ, ಇದಕ್ಕಿಂತ ಸಾಕ್ಷ್ಯಬೇಕಾ? ಎಂದು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಪೊಲೀಸರು 8 ಕೋಟಿಗೂ ಹೆಚ್ಚು ಹಣ ಜಪ್ತಿ ಮಾಡಿದ್ದಾರೆ. ಬಿಜೆಪಿ ಶಾಸಕ ಮಾಡಾಳ್​​ ವಿರೂಪಾಕ್ಷಪ್ಪರನ್ನು ಅರೆಸ್ಟ್ ಮಾಡಬೇಕು. ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು. ಬಿಜೆಪಿಯವರು ದುಡ್ಡಿನಿಂದ ಚುನಾವಣೆ ಗೆಲ್ತೀವಿ ಅಂದುಕೊಂಡಿದ್ದಾರೆ. ಪ್ರತಿ ಕ್ಷೇತ್ರಕ್ಕೆ 100 ಕೋಟಿಯಷ್ಟು ಖರ್ಚು ಮಾಡಲು ಹೊರಟಿದ್ದಾರೆ. ರಾಜ್ಯದ ಜನರೇ ಬಿಜೆಪಿಯವರಿಗೆ ಪಾಠ ಕಲಿಸಬೇಕು. ನಾನು ಸಿಎಂ ಆಗಿದ್ದಾಗ ಆರೋಪ ಬಂದಾಗ ತನಿಖೆ ಮಾಡಿಸಿದ್ದೇನೆ ಎಂದರು.

ಇದನ್ನೂ ಓದಿ: ವಿರೂಪಾಕ್ಷಪ್ಪ ಮಾಡಾಳ್‌ ಪುತ್ರನ ವಿರುದ್ಧ ಭ್ರಷ್ಟಾಚಾರ ಆರೋಪ: ಸಿಎಂ ಬೊಮ್ಮಾಯಿ ರಾಜಿನಾಮೆ ನೀಡುವಂತೆ ಸೂಟ್​ಕೇಸ್, ಗುಟ್ಕಾ ಬ್ಯಾಗ್​ ಹಿಡಿದು ಕೈ ಪ್ರತಿಭಟನೆ

ಗಡಿಪಾರು ಆಗಿದ್ದ, ಜೈಲಿಗೆ ಹೋಗಿದ್ದ ಶಾರಿಂದ ಪಾಠ ಕಲಿಯಬೇಕಾ?

ಜೈಲಿಗೆ ಹೋಗಿ ಬಂದ ಅಮಿತ್​ ಶಾರಿಂದ ನಾವು ಪಾಠ ಕಲಿಯಬೇಕಾ? ಎಂದು ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹೈಕಮಾಂಡ್​​ನ ಎಟಿಎಂ ಆಗಿತ್ತು ಅಂತಿದ್ರು. ಕೇಂದ್ರ ಸಚಿವ ಅಮಿತ್ ಶಾ ಈಗ ಏನು ಹೇಳ್ತಾರೆ. ಗಡಿಪಾರು ಆಗಿದ್ದ, ಜೈಲಿಗೆ ಹೋಗಿದ್ದ ಶಾರಿಂದ ಪಾಠ ಕಲಿಯಬೇಕಾ? ಎಂದು ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಇದೇ ವೇಳೆ ಖರ್ಗೆರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಮೋದಿ ಆರೋಪ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರಿಗೆ ಗೌರವಕೊಡುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಎಲ್​.ಕೆ.ಅಡ್ವಾಣಿ, ಎಂ.ಎಂ.ಜೋಶಿರನ್ನು ಸೈಡ್​​​ಲೈನ್ ಮಾಡಿದ್ದು ನೀವು. ಅನಂತಕುಮಾರ್ ಪತ್ನಿಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಿದ್ದು ನೀವು. ಸಿಎಂ ಸ್ಥಾನದಿಂದ ತೆಗೆದು ಯಡಿಯೂರಪ್ಪರಿಂದ ಕಣ್ಣೀರು ಹಾಕಿಸಿದ್ರಿ, ಇವರು ಹೇಳಿದಂತೆ ಕೇಳುವ ಬೊಮ್ಮಾಯಿರನ್ನು ಸಿಎಂ ಮಾಡಿದ್ರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:43 am, Sat, 4 March 23