ಅವರಿಬ್ಬರೂ ನರ್ಸಿಂಗ್ ಪದವೀಧರರು (Nursing). ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಹೀಗಾಗಿ ಇಬ್ಬರೂ ಮದುವೆ (Wedding) ಕೂಡಾ ಆಗಿದ್ದರು. ದಂಪತಿಗೆ ಮೂರು ಮಕ್ಕಳು (Children) ಕೂಡಾ ಇವೆ. ಆದ್ರೆ ಮದುವೆಯಾದ ನಂತರ, ಇಬ್ಬರ ನಡುವೆ ಹೊಂದಾಣಿಕೆ ಕಡಿಮೆಯಾಗಿತ್ತು. ಇದೀಗ ಮಹಿಳೆ ಬಾರದ ಲೋಕಕ್ಕೆ ಹೋಗಿದ್ದಾಳೆ. ತಮ್ಮ ಮಗಳನ್ನು ಆಕೆಯ ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆ ಅಂತ ಹೆತ್ತವರು ಆರೋಪಿಸುತ್ತಿದ್ದಾರೆ. ಆದ್ರೆ ಪತಿ ಮನೆಯವರು ಕೊಲೆಯಲ್ಲ, ಆತ್ಮಹತ್ಯೆ (Suicide) ಅಂತ ಹೇಳುತ್ತಿದ್ದಾರೆ. ಬಾರದ ಲೋಕಕ್ಕೆ ಹೋಗಿರುವ ಮಹಿಳೆ (Woman). ಮತ್ತೊಂದಡೆ ಹೆತ್ತವರ ಕಣ್ಣೀರು, ಮಡುಗಟ್ಟಿದ ಆಕ್ರೋಶ. ಗಿಳಿಯಂತೆ ಇದ್ದ ಮಗಳು, ಗಿಡುಗನ ಕೈಗೆ ಸಿಕ್ಕು ಸಣ್ಣ ವಯಸ್ಸಿಗೆ ಬಾರದ ಲೋಕಕ್ಕೆ ಹೋಗಿದ್ದಾಳೆ ಅಂತ ಕಣ್ಣೀರು ಹಾಕಿರುವ ಕುಟುಂಬದವರು, ಆಕೆಯನ್ನು ಆಕೆಯ ಪತಿ, ಮತ್ತು ಕುಟುಂಬದವರೇ ಕೊಲೆ ಮಾಡಿದ್ದಾರೆ ಅನ್ನೋ ಆಕ್ರೋಶ. ಇಂತಹದ್ದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ (Kalaburgi) ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ. ಇನ್ನು ಇವರ ಆಕ್ರೋಶ, ಆಕ್ರಂದನಕ್ಕೆ ಕಾರಣವಾಗಿದ್ದು, ಮೂರು ಮಕ್ಕಳ ತಾಯಿ ಬಾರದ ಲೋಕಕ್ಕೆ ಹೋಗಿದ್ದು.
ಹೌದು ಕಲಬುರಗಿ ನಗರದ ತಾರಪೈಲ್ ನಿವಾಸಿಯಾಗಿರುವ ಸುಜಾತಾ ಅನ್ನೋ 35 ವರ್ಷದ ಮಹಿಳೆ ಬಾರದ ಲೋಕಕ್ಕೆ ಹೋಗಿದ್ದಾಳೆ. ಭಾನುವಾರ ಮುಂಜಾನೆ ಸುಜಾತಗೆ ತುಂಬಾ ಸಿರಿಯಸ್ ಇದೆ. ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ ಅಂತ ಸುಜಾತಾಳ ಪತಿ ಭೀಮರಾಯ್, ಹೆತ್ತವರಿಗೆ ಪೋನ್ ಮಾಡಿದ್ದನಂತೆ. ಆದ್ರೆ ಬಂದು ನೋಡುವಷ್ಟರಲ್ಲಿ ಸುಜಾತಾ ಬಾರದ ಲೋಕಕ್ಕೆ ಹೋಗಿದ್ದಾಳಂತೆ. ಇನ್ನು ನಿನ್ನೆ ಸಂಜೆ ಮತ್ತು ರಾತ್ರಿ ಕೂಡಾ ಸುಜಾತಾ, ತನ್ನ ಹೆತ್ತವರಿಗೆ ಕರೆ ಮಾಡಿ ಮಾತನಾಡಿದ್ದಳಂತೆ.
ಮನೆಯಲ್ಲಿ ಜಗಳವಾಗಿದೆ, ನನ್ನನ್ನು ಯಾರು ಕೂಡಾ ಮಾತನಾಡಿಸುತ್ತಿಲ್ಲಾ, ನಾನು ಪ್ರತ್ಯೇಕವಾಗಿ ಕೋಣೆಯಲ್ಲಿ ಇದ್ದೇನೆ ಅಂತ ಹೇಳಿದ್ದಳಂತೆ. ಆಗ ಮಗಳಿಗೆ ತಾಯಿ ಧೈರ್ಯ ಕೂಡಾ ಹೇಳಿದ್ದರಂತೆ. ಎಲ್ಲರ ಮನೆಯಲ್ಲಿ ಜಗಳ ಇರುತ್ತೆ, ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಮಗಳಿಗೆ ಬುದ್ದಿ ಮಾತುಗಳನ್ನು ತಾಯಿ ಹೇಳಿದ್ದಳಂತೆ. ಆದ್ರೆ ರಾತ್ರಿ ಕಳೆದು ಬೆಳಗಾಗೋದರಲ್ಲಿ ಸುಜಾತಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಇನ್ನು ಸುಜಾತಾಳನ್ನು ಆಕೆಯ ಪತಿ ಭೀಮರಾಯ್ ಮತ್ತು ಆಕೆಯ ಕುಟುಂಬದವರು, ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಅಂತ ಸುಜಾತಾಳ ಹೆತ್ತವರು ಆರೋಪಿಸುತ್ತಿದ್ದಾರೆ.
ಸುಜಾತಾ ಮತ್ತು ಭೀಮರಾಯ್ ಅವರದ್ದು ಪ್ರೇಮ ವಿವಾಹ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಸುಜಾತಾ ನರ್ಸಿಂಗ್ ಓದಿ, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಂತೆ. ಇತ್ತ ಕಲಬುರಗಿ ನಗರದ ತಾರಪೈಲ್ ಬಡಾವಣೆಯ ಭೀಮರಾಯ್ ಕೂಡಾ ಅದೇ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಂತೆ. ಇಬ್ಬರ ನಡುವೆ ಪ್ರೀತಿ ಮೂಡಿತ್ತಂತೆ. ಇದು ಹೆತ್ತವರಿಗೆ ಗೊತ್ತಾದಾಗ, ಮದುವೆ ಬಗ್ಗೆ ಚಿಂತಿಸಿ ಹೆಜ್ಜೆ ಇಡುವಂತೆ ಇಬ್ಬರಿಗೂ ಕುಟುಂಬದವರು ಹೇಳಿದ್ದರಂತೆ.
ಇನ್ನು ಇಬ್ಬರೂ ಒಂದೇ ಜಾತಿಯವರಾಗಿದ್ದರೂ ಒಳಪಂಗಡಗಳು ಬೇರೆ ಬೇರೆಯಾಗಿವೆ. ಆದರೂ ಕೂಡಾ ಯಾವುದೇ ಅಡ್ಡಿಯಿಲ್ಲ ಅಂತ ತಿಳಿದು, ಇಬ್ಬರೂ 2016 ರಲ್ಲಿಯೇ ಜೇವರ್ಗಿಯ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದರಂತೆ. ಇನ್ನು ಮದುವೆಯಾದ ಮೇಲೆ ಸುಜಾತಾ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದಳಂತೆ. ದಂಪತಿಗೆ ಮೂರು ಮಕ್ಕಳು ಕೂಡಾ ಆಗಿವೆ. ಆದ್ರೆ ಮದುವೆಯಾದ ಮೇಲೆ ಭೀಮರಾಯ್ ಮತ್ತು ಆತನ ಹೆತ್ತವರು ಸುಜಾತಾಗೆ ತೊಂದರೆ ಕೊಡಲು ಆರಂಭಿಸಿದ್ದರಂತೆ.
ಲವ್ ಮಾಡಿ ಮದುವೆಯಾಗಿದ್ದೀಯಾ, ವರದಕ್ಷಿಣೆ ತಂದಿಲ್ಲಾ ಅಂತ ಪೀಡಿಸುತ್ತಿದ್ದರಂತೆ. ಇನ್ನು ಆಗಾಗ ಸುಜಾತಾಗೆ ಭೀಮರಾಯ್ ಹಲ್ಲೆ ಕೂಡಾ ಮಾಡುತ್ತಿದ್ದನಂತೆ. ಈ ಬಗ್ಗೆ ಅನೇಕ ಸಲ ರಾಜಿ ಪಂಚಾಯತಿಗಳು ಕೂಡಾ ನಡೆದಿದ್ದವಂತೆ. ಇದೀಗ ಸುಜಾತಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಇನ್ನು ಭೀಮರಾಯ್ ಹೇಳೋ ಪ್ರಕಾರ, ನಾವು ಗಂಡ ಹೆಂಡತಿ ಚೆನ್ನಾಗಿಯೇ ಇದ್ದೆವು. ಆದ್ರೆ ಇಂದು ನಸುಕಿನ ಜಾವ, ಸುಜಾತಾ ಮನಯೆಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಹೇಳುತ್ತಿದ್ದಾನೆ.
ಸದ್ಯ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೀಮರಾಯ್ ಮತ್ತು ಆತನ ಕುಟುಂಬದವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಂತರವೇ, ಭೀಮರಾಯ್ ಮತ್ತು ಕುಟುಂಬದವರು ಸುಜಾತಾಳನ್ನು ಕೊಲೆ ಮಾಡಿದ್ರಾ, ಅಥವಾ ಸುಜಾತಾಳೆ ಆತುರದ ನಿರ್ಧಾರ ಮಾಡಿ, ತಾನೇ ತನ್ನ ಜೀವ ಕಳೆದುಕೊಂಡಿದ್ದಾಳಾ? ಅನ್ನೋದು ಗೊತ್ತಾಗಲಿದೆ. ಆದ್ರೆ ಬಾಳಿ ಬದುಕಬೇಕಿದ್ದ ಮಹಿಳೆ, ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.
ವರದಿ: ಸಂಜಯ್, ಟಿವಿ9, ಕಲಬುರಗಿ