ಕಲಬುರಗಿ: ರಾಜ್ಯದಲ್ಲಿ ನಡೆದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮದ (PSI Recruitment scam) ತನಿಖೆ ಮುಗಿದಿದೆ ಅಂತ ಅನೇಕರು ಅಂದುಕೊಂಡಿದ್ದಾಗಲೇ, ಸಿಐಡಿ ಅಧಿಕಾರಿಗಳು (Kalaburagi CID) ಮತ್ತೆ ಶಾಕ್ ನೀಡಿದ್ದಾರೆ. ತನಿಖೆ ಮುಗಿದಿಲ್ಲಾ, ಅಕ್ರಮದಲ್ಲಿ ಭಾಗಿಯಾಗಿದ್ದವರು ಇನ್ನೂ ಅನೇಕರಿದ್ದು, ಅವರನ್ನು ಪತ್ತೆ ಮಾಡುವವರಗೆ ಬಿಡಲ್ಲಾ ಅನ್ನೋದನ್ನು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಹೌದು ಅಕ್ರಮದ ತನಿಖೆ ನಡೆದಂತೆ ಅಕ್ರಮ ಕುಳಗಳ ಕಳ್ಳಾಟ ಹೊರಬರುತ್ತಲೇ ಇವೆ. ತಾಜಾ ಆಗಿ ಇಂದು, ಪಿಎಸ್ಐ ಪರೀಕ್ಷೆ ಬರೆದು, ಆಯ್ಕೆಯಾಗಿದ್ದ ಸಂಜೀವ್ ಕುಮಾರ್ ಮುರಡಿ ಅನ್ನೋ ಸರ್ಕಾರಿ ನೌಕರ ಸಿಐಡಿ ಬಲೆಗೆ ಬಿದ್ದಿದ್ದಾನೆ (Arrest).
ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿಯಾಗಿದ್ದ ಸಂಜೀವ್ ಕುಮಾರ್ ಅನ್ನೋ ಸರ್ಕಾರಿ ನೌಕರ ಸಿಐಡಿ ಬಲೆಗೆ ಬಿದ್ದಿದ್ದಾನೆ. ಸಂಜೀವ್ ಕುಮಾರ್, ಸದ್ಯ ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಈತ 2021ರಲ್ಲಿ 545 ಪಿಎಸ್ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ. 2021 ರ ಅಕ್ಟೋಬರ್ ನಲ್ಲಿ ನಡೆದ ಪಿಎಸ್ಐ ಪರೀಕ್ಷೆಗೆ ಹಾಜರಾಗಿದ್ದ. ಕಲಬುರಗಿ ನಗರದ ರೇಷ್ಮೆ ಕಾಲೇಜಿನಲ್ಲಿ ಇದ್ದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದ. ತಾತ್ಕಾಲಿಕ ಆಯ್ಕ ಪಟ್ಟಿಯಲ್ಲಿ, ಕಲ್ಯಾಣ ಕರ್ನಾಟಕ ಕೋಟಾದ ಗ್ರಾಮೀಣ ವಿಭಾಗದಲ್ಲಿ ಸಂಜೀವ್ ಕುಮಾರ್ 14 ನೇ ರ್ಯಾಂಕ್ ಪಡೆದಿದ್ದ. ಸಾಮಾನ್ಯ ಪತ್ರಿಕೆಯಲ್ಲಿ 150 ಕ್ಕೆ 129.375 ಅಂಕ ಪಡೆದಿದ್ದ. ಜೊತೆಗೆ ಪೇಪರ್ 1 ರಲ್ಲಿನ 50 ಅಂಕಗಳಿಗೆ, 19 ಅಂಕಗಳನ್ನು ಪಡೆದಿದ್ದ. ಒಟ್ಟು 200 ಅಂಕಗಳಿಗೆ 148.375 ಅಂಕ ಪಡೆದು, ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದ!
ಇನ್ನು ಸಂಜೀವ್ ಕುಮಾರ್, ಕಿಂಗ್ ಪಿನ್ ರುದ್ರಗೌಡ್ ಪಾಟೀಲ್ ಜೊತೆ ಡೀಲ್ ಮಾಡಿಕೊಂಡು ಅಕ್ರಮವಾಗಿ ಪರೀಕ್ಷೆ ಬರೆದಿದ್ದು ಸಿಐಡಿ ಅಧಿಕಾರಿಗಳಿಗೆ ಗೊತ್ತಾಗಿತ್ತು. ಆದರೆ ನಿಖರವಾದ ಸಾಕ್ಷ್ಯಕ್ಕಾಗಿ ಅನೇಕ ದಿನಗಳಿಂದ ಹುಡುಕಾಟ ನಡೆಸಿದ್ದರು. ಹಾಗಾಗಿ ಅಕ್ರಮವಾಗಿ ಪರೀಕ್ಷೆ ಬರೆದು, ಬಂಧನ ಆಗುವವರೆಗೂ ಆರೋಪಿ ಸಂಜೀವನನ್ನು ರಾಜಾರೋಷವಾಗಿ ಸರ್ಕಾರಿ ಸೇವೆ ಸಲ್ಲಿಸಲು ಸಿಐಡಿ ಅಧಿಕಾರಿಗಳು ಬಿಟ್ಟಿದ್ದರು. ಅಂದರೆ ನಿಜವಾದ ಪೊಲೀಸರು ತನ್ನ ಮೇಲೆ ಕಣ್ಣಿಟ್ಟಿರುವುದು ಆರೋಪಿಗೆ ಅಪ್ಪಿತಪ್ಪಿಯೂ ತಿಳಿಯಲಿಲ್ಲ. ಅಷ್ಟರಮಟ್ಟಿಗೆ ಸಿಐಡಿ ಅಧಿಕಾರಿಗಳು ಖಡಕ್ಕಾಗಿ ತಮ್ಮ ಕೆಲಸ ಮಾಡಿದ್ದಾರೆ.
ಹೌದು ಸಂಜೀವ್ ಕುಮಾರ್, ಕಿಂಗ್ ಪಿನ್ ರುದ್ರಗೌಡ್ ಪಾಟೀಲ್ ಮೂಲಕ ಬ್ಲ್ಯೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿಕೊಂಡು ಅಕ್ರಮವಾಗಿ ಪರೀಕ್ಷೆ ಬರೆದಿದ್ದ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ಸಿಐಡಿ ಅಧಿಕಾರಿಗಳು ದೂರು ನೀಡಿದ್ದರು. ಜೊತೆಗೆ ಸಂಜೀವ್ ಕುಮಾರ್ ನನ್ನು ಹಿಡಿದು, ಇದೀಗ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯದಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದ್ದು, ಸಿಐಡಿ ಅಧಿಕಾರಿಗಳು ಸಂಜೀವ್ ಕುಮಾರ್ ನನ್ನು ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ.
ಕಲಬುರಗಿಯಲ್ಲಿಯೇ ಕಳೆದ 10 ತಿಂಗಳಿಂದ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳು ಇಲ್ಲಿವರಗೆ 24 ಅಭ್ಯರ್ಥಿಗಳು ಸೇರಿದಂತೆ ಅಕ್ರಮದಲ್ಲಿ ಭಾಗಿಯಾದ ಕಿಂಗ್ ಪಿನ್ ಗಳು, ಮಧ್ಯವರ್ತಿಗಳು ಸೇರಿ 54 ಜನರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಅನೇಕರು ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದರೆ, ಇನ್ನು ಕೆಲವರು ಕಂಬಿ ಹಿಂದೆ ಕಾಲ ಕಳೆಯುತ್ತಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ, ಟಿವಿ 9, ಕಲಬುರಗಿ
Published On - 6:04 pm, Wed, 1 February 23