PSI ಪರೀಕ್ಷಾ ಅಕ್ರಮ ಪ್ರಕರಣ; ಲಕ್ಷ ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದ ಕಿಂಗ್ ಪಿನ್​ಗಳು ಸಿಬ್ಬಂದಿಗೆ ನೀಡಿದ್ದು ಬಿಡಿಗಾಸು, 50 ಜನರಿಗೆ ನೋಟಿಸ್

| Updated By: ಆಯೇಷಾ ಬಾನು

Updated on: Apr 20, 2022 | 7:55 AM

ಪ್ರಕರಣದ ವಿಚಾರಣೆ ತೀವ್ರಗೊಳಿಸಿದ ಸಿಐಡಿ ಅಧಿಕಾರಿಗಳು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರುವ 50 ಅಭ್ಯರ್ಥಿಗಳಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಗೆ ಬರುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.

PSI ಪರೀಕ್ಷಾ ಅಕ್ರಮ ಪ್ರಕರಣ; ಲಕ್ಷ ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದ ಕಿಂಗ್ ಪಿನ್​ಗಳು ಸಿಬ್ಬಂದಿಗೆ ನೀಡಿದ್ದು ಬಿಡಿಗಾಸು, 50 ಜನರಿಗೆ ನೋಟಿಸ್
ಕಲಬುರಗಿಯಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮ
Follow us on

ಕಲಬುರಗಿ: ಪಿಎಸ್‌ಐ ನೇಮಕಾತಿಯ ಅಕ್ರಮದ ಆಳಕ್ಕೆ ಇಳಿದಿರೋ ಸಿಐಡಿ ಟೀಂ ದೊಡ್ಡ ರಹಸ್ಯವನ್ನೇ ಬೇಧಿಸಿದೆ. ಕಲಬುರಗಿ ಮಾತ್ರವಲ್ಲದೆ ರಾಜ್ಯದ ಉದ್ದಗಲಕ್ಕೂ ಪರೀಕ್ಷಾ ಅಕ್ರಮ ನಡೆದಿರೋ ಬಗ್ಗೆ ಶಂಕೆ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆ ತೀವ್ರಗೊಳಿಸಿದ ಸಿಐಡಿ ಅಧಿಕಾರಿಗಳು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರುವ 50 ಅಭ್ಯರ್ಥಿಗಳಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಗೆ ಬರುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. ಹಾಲ್ಟಿಕೆಟ್, ಒಎಂಆರ್ ಶೀಟ್ನ ಕಾರ್ಬನ್ ಪ್ರತಿ ತರಬೇಕು ಎಂದಿದ್ದು OMR ಶೀಟ್, ಕಾರ್ಬನ್ ಶೀಟ್ ಸಿಐಡಿ ತಾಳೆ ಮಾಡಲಿದೆ.

ಸಿಐಡಿ ವಶದ ಅವಧಿ ಅಂತ್ಯ
ಮತ್ತೊಂದೆಡೆ ಇಂದು ಆರು ಜನರ ಸಿಐಡಿ ವಶದ ಅವಧಿ ಮುಗಿಯಲಿದೆ. ಹೀಗಾಗಿ ಇಂದು ಆರು ಜನರಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಸಿಐಡಿ ಮುಂದಾಗಿದೆ. ಕಳೆದ ಶನಿವಾರ ಮೂವರು ಅಭ್ಯರ್ಥಿಗಳು ಮತ್ತು ಮೂವರು ಕೊಠಡಿ ಮೇಲ್ವಿಚಾರಕಿಯರು ಸೇರಿ ಆರು ಜನರ ಬಂಧನವಾಗಿತ್ತು. ಸೋಮವಾರದಿಂದ ಆರು ಜನರನ್ನು ಸಿಐಡಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದಿದ್ದರು. ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತ್ತು.

ಕಳೆದ ಎರಡು ದಿನಗಳಿಂದ ಬಂಧಿತರಿಂದ ಸಾಕಷ್ಟು ಮಾಹಿತಿ ಪಡೆದಿರೋ ಸಿಐಡಿ ಅಕ್ರಮ ಹೇಗಾಗಿದೆ, ಯಾರೆಲ್ಲಾ ಇದ್ದಾರೆ, ಯಾರಿಗೆ ಹಣ ನೀಡಲಾಗಿದೆ ಅನ್ನೋದು ಸೇರಿದಂತೆ ಅನೇಕ ಮಾಹಿತಿ ಸಂಗ್ರಹಿಸಿದ್ದಾರೆ. ಬಂಧಿತರು ಕಲಬುರಗಿ ನಗರದ ಜ್ಞಾನಜೋತಿ ಇಂಗ್ಲಿಷ್ ಶಾಲೆಯ ಕೊಠಡಿ ಮೇಲ್ವಿಚಾರಕರು ಮತ್ತು ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು. ಹೀಗಾಗಿ ಈ ಆರು ಜನರ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಅಕ್ರಮದಲ್ಲಿ ಭಾಗಿಯಾಗಿರೋ ಅನೇಕರನ್ನು ವಿಚಾರಣೆಗೊಳಪಡಿಸಲು ಸಿಐಡಿ ಸಿದ್ಧತೆ ಮಾಡಿಕೊಂಡಿದೆ.

ಕಿಂಗ್‌ಪಿನ್‌ ದಿವ್ಯಾ, ಕಾಶೀನಾಥ್‌ಗಾಗಿ ಸಿಐಡಿ ತಲಾಶ್‌
ಇನ್ನು ಬಂಧಿತರ ವಿಚಾರಣೆ ಮುಂದುವರಿಸಿರೋ ಸಿಐಡಿ ಅಕ್ರಮದ ಒಂದೊಂದೇ ಸೀಕ್ರೆಟ್‌ಗಳನ್ನ ಬಯಲು ಮಾಡ್ತಿದೆ. ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್‌ ಕಾಶೀನಾಥ್‌ ಸೂಚನೆಯಂತೆ ನಾವು ಅಭ್ಯರ್ಥಿಗಳ ಓಎಂಆರ್‌ ಶೀಟ್‌ ಭರ್ತಿ ಮಾಡ್ತಿದ್ವಿ ಅಂತಾ ಬಂಧಿತ ಪರೀಕ್ಷಾ ಮೇಲ್ವಿಚಾರಕರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆದ್ರೆ ಇದುವರೆಗೂ ಕಾಶೀನಾಥ್‌ ಹಾಗೂ ಶಾಲೆಯ ಕಾರ್ಯದರ್ಶಿ ದಿವ್ಯಾ ಪತ್ತೆಯಾಗಿಲ್ಲ. ಈ ನಡುವೆ ದಿವ್ಯಾ ಹಾಗರಗಿಯಿಂದ ಅಂತರ ಕಾಪಾಡಿಕೊಳ್ಳಲು ಬಿಜೆಪಿ ಮುಂದಾಗಿದೆ.

ನಾಪತ್ತೆಯಾಗಿರೋ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಎಲ್ಲಿ?
ದಿವ್ಯಾ ಹಾಗರಗಿ ರಕ್ಷಣೆಗೆ ನಿಂತಿದ್ದಾರಾ ಕೆಲ ಬಿಜೆಪಿ ಪ್ರಭಾವಿ ನಾಯಕರು? ಎಂಬ ಪ್ರಶ್ನೆ ಎದ್ದಿದೆ. ಅಕ್ರಮದಲ್ಲಿ ದಿವ್ಯಾ ಹಾಗರಗಿ ಬಾಗಿ ಶಂಕೆ ಹಿನ್ನೆಲೆ ದಿವ್ಯಾ ಹಾಗರಗಿ ಬಂಧನಕ್ಕೆ ಸಿಐಡಿ ಮುಂದಾಗಿದೆ. ಆದ್ರೆ ಕಳೆದ ಆರು ದಿನಗಳಿಂದ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ. ನೆರೆಯ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಅನೇಕ ಕಡೆ ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆದಿದೆ. ಬಿಜೆಪಿ ಪ್ರಭಾವಿ ಮುಖಂಡರಿಂದ ದಿವ್ಯಾ ಹಾಗರಗಿ ರಕ್ಷಣೆ ಶಂಕೆ ವ್ಯಕ್ತವಾಗಿದೆ. ದಿವ್ಯಾ ಹಾಗರಗಿ ಜೊತೆ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಮತ್ತು ಇನ್ನಿಬ್ಬರು ಸಿಬ್ಬಂದಿ ಕೂಡಾ ನಾಪತ್ತೆಯಾಗಿದ್ದಾರೆ. ಒಂದೇ ಕಡೆ ಐವರು ಇರೋ ಶಂಕೆ ಇದ್ದು ಅನೇಕ ಕಡೆ ಹೋಗಿ ಸಿಐಡಿ ತಂಡ ಪರಿಶೀಲನೆ ನಡೆಸಿ ಬಂದಿದೆ.

ಲಕ್ಷ ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದ ಕಿಂಗ್ ಪಿನ್ಗಳು ಸಿಬ್ಬಂದಿಗೆ ನೀಡಿದ್ದು ಬಿಡಿಗಾಸು
ಇನ್ನು ಈ ಅಕ್ರಮಕ್ಕೆ ಸಂಬಂಧಿಸಿದಂತೆ ಲಕ್ಷ ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದ ಕಿಂಗ್ ಪಿನ್ಗಳು ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಕೇವಲ ನಾಲ್ಕು ಸಾವಿರ ಮಾತ್ರ ನೀಡಿದ್ದಾರೆ. ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಕೊಠಡಿ ಮೇಲ್ವಿಚಾರಕಿಯರಿಗೆ ತಲಾ ನಾಲ್ಕು ಸಾವಿರ ನೀಡಿದ್ದರು. ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಿದ್ದೀರಿ ಅದಕ್ಕಾಗಿ ನಾಲ್ಕು ಸಾವಿರ ಹಣ ನೀಡ್ತಿದ್ದೇವೆ. ದಿವ್ಯಾ ಹಾಗರಗಿ ಮೇಡಂ ನೀಡಲು ಹೇಳಿದ್ದಾರೆ ಅಂತ ಹೇಳಿ ಕಾಶಿನಾಥ್ ಹಣ ನೀಡಿದ್ದರು ಎಂಬುವುದು ತಿಳಿದು ಬಂದಿದೆ. ಡೌಟ್ ಬರಬಾರದು ಅಂತ, ಪರೀಕ್ಷಾ ಕೆಲಸದಲ್ಲಿ ಭಾಗಿಯಾಗಿದ್ದಲ್ಲರಿಗೂ ತಲಾ ನಾಲ್ಕು ಸಾವಿರ ನೀಡಲಾಗಿತ್ತು. ಇಲಾಖೆ ಪರೀಕ್ಷಾ ಕೆಲಸಕ್ಕೆ ನೀಡೋ ಹಣದ ಜೊತೆಗೆ ಹೆಚ್ಚುವರಿ ನಾಲ್ಕು ಸಾವಿರ ನೀಡಲಾಗಿತ್ತು. ಒಬ್ಬಬ್ಬ ಅಭ್ಯರ್ಥಿಯಿಂದ 40 ರಿಂದ 80 ಲಕ್ಷಕ್ಕೆ ಡೀಲ್ ಮಾಡಿದ್ದ ಕಿಂಗ್ ಪಿನ್ಗಳು ನಾಲ್ಕು ಸಾವಿರ ಜೊತೆ ಮತ್ತೆ ಹಣ ನೀಡಿದ್ದಾರಾ ಅನ್ನೋ ಬಗ್ಗೆ ಸಿಐಡಿ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಗಲಾಟೆ ಹಿಂದಿನ ಮಾಸ್ಟರ್ ಮೈಂಡ್‌ಗಾಗಿ ಶೋಧ, ವಸೀಂ ಮೊಬಾಲಿಕ್ ಪಠಾಣ್‌ ಡೆಡ್‌ಲೈನ್ ಅಂತ್ಯ

Published On - 7:54 am, Wed, 20 April 22