
ಕಲಬುರಗಿ, ನವೆಂಬರ್ 23: ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. 3 ವಾರಗಳ ಮಧ್ಯಂತರ ಜಾಮೀನು ಪಡೆದು ನ.21ರಂದು ಜೈಲಿನಿಂದ ಆರ್.ಡಿ.ಪಾಟೀಲ್ ಬಿಡುಗಡೆಯಾಗಿದ್ದ. ಅದೇ ದಿನ ಕ್ಷುಲ್ಲಕ ಕಾರಣಕ್ಕೆ ಜೈಲು ಸಿಬ್ಬಂದಿ ಮೇಲೆ ಆತ ಹಲ್ಲೆ ನಡೆಸಿರುವ ಬಗ್ಗೆ ಕಲಬುರಗಿಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇನ್ನು, ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಆರ್.ಡಿ.ಪಾಟೀಲ್ನಿಂದಲೂ ಪ್ರತಿ ದೂರು ದಾಖಲಾಗಿದ್ದು, ಜೈಲು ಸಿಬ್ಬಂದಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ಆಗಿದೆ. ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ದಾಖಲಾಗಿದ್ದ ತನಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹೀಗಿದ್ದರೂ ನೀನು ಹೇಗೆ ಜಾಮೀನು ಪಡೆದುಕೊಂಡೆ ಎಂದು ಜೈಲು ಸಿಬ್ಬಂದಿ ಶಿವಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜಾಮೀನು ಸಿಕ್ಕರೂ ನಿನ್ನ ಹೊರ ಹೋಗಲು ಬಿಡುವುದಿಲ್ಲ ಎಂದು ಅವರು ನನ್ನನ್ನು ತಳ್ಳಿದ್ದು, ಈ ವೇಳೆ ನನ್ನ ಎಡ ಕಿವಿಯಿಂದ ರಕ್ತಸ್ರಾವವಾಗಿದೆ. ಬೆನ್ನಿನ ಗಾಯದಿಂದ ಬಳಲುತ್ತಿದ್ದ ತನಗೆ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇತ್ತು. ಹೀಗಾಗಿ ಬಿಡುಗಡೆಯಾದ ಬಳಿಕ ತಾನು ಚಿಕಿತ್ಸೆ ಪಡೆದಿದ್ದು, ಆ ದಾಖಲೆಗಳೇ ನನ್ನ ಮೇಲಿನ ಹಲ್ಲೆ ಸಾಬೀತುಪಡಿಸಲಿವೆ ಎಂದು ದೂರಿನಲ್ಲಿ ಆರ್.ಡಿ. ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲೆ ಯತ್ನ ಆರೋಪದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ
ಹಲ್ಲೆವೇಳೆ ತನಗಾದ ಗಂಭೀರ ಗಾಯದಿಂದ ಉನ್ನತ ವೈದ್ಯಕೀಯ ಚಿಕಿತ್ಸೆತನ್ನೂ ಪಡೆದಿದ್ದೇನೆ. ಈ ಘಟನೆಯು ಕಸ್ಟಡಿಯಲ್ಲಿ ಕ್ರೀಮಿನಲ್ ಬೆದರಿಕೆ, ಅಕ್ರಮ ಬಂಧನ ಮತ್ತು ಸಾರ್ವಜನಿಕ ಸೇವಕರಿಂದ ಅಧಿಕಾರ ದುರುಪಯೋಗ ಸೇರಿದಂತೆ ಗಂಭೀರ ಅಪರಾಧವಾಗಿದೆ. ಹೀಗಾಗಿ ಕಲಬುರಗಿ ಕೇಂದ್ರ ಕಾರಾಗೃಹದ ವಾರ್ಡನ್ ಶಿವಕುಮಾರ ವಿರುದ್ಧ ಕಾನೂನು ಬದ್ಧ ತನಿಖೆ ನಡೆಸಬೇಕು. ಮತ್ತು ಘಟನೆ ಸಂಬಂಧಿತ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ತಕ್ಷಣ ಪಡೆದುಕೊಳ್ಳುವಂತೆ ವಿನಂತಿಸೋದಾಗಿ ನೀಡಿದ ದೂರಿನಲ್ಲಿ ಆರ್.ಡಿ. ಪಾಟೀಲ್ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.