ಬೇರೊಬ್ಬನ ಜತೆ ಲವ್ವಿಡವ್ವಿಗೆ ಗಂಡನ ಹತ್ಯೆ: ಸುಪಾರಿ ಹಣ ಕೊಡದೆ ಕಳ್ಳಾಟ, 9 ವರ್ಷದ ಬಳಿಕ ರಹಸ್ಯ ಬಯಲು
ವೈರಲ್ ಆಗಿರುವ ಅದೊಂದು ವಿಡಿಯೋದಿಂದ 9 ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ರಹಸ್ಯ ಇದೀಗ ಬಯಲಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿ ಸುಪಾರಿ ನೀಡಿ ಕೊಲೆ ಮಾಡಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.

ಕಲಬುರಗಿ, ನವೆಂಬರ್ 23: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನ ಪತಿಯನ್ನೇ ಸುಪಾರಿ ಕೊಟ್ಟು ಪತ್ನಿ ಕೊಲೆ (kill) ಮಾಡಿಸಿದ್ದ ಘಟನೆ ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿತ್ತು. ಸಹಜ ಸಾವು ಅಂತಾ ಬಿಂಬಿಸುವಲ್ಲಿ ಪತ್ನಿ (Wife) ಯಶಸ್ವಿ ಕೂಡ ಆಗಿದ್ದಳು. ಆದರೆ ಬರೋಬ್ಬರಿ 9 ವರ್ಷಗಳ ಬಳಿಕ ಅದು ಸಹಜ ಸಾವಲ್ಲ ಕೊಲೆ ಎನ್ನುವುದು ಗೊತ್ತಾಗಿದೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.
ನಡೆದದ್ದೇನು?
ಕಲಬುರಗಿಯ ಕಡಣಿ ಗ್ರಾಮದಲ್ಲಿ 9 ವರ್ಷದ ಬಳಿಕ ವ್ಯಕ್ತಿಯ ಸಾವಿನ ರಹಸ್ಯ ಬಯಲಾಗಿದೆ. ಬೀರಪ್ಪ ಪೂಜಾರಿ ಕೊಲೆಯಾದ ವ್ಯಕ್ತಿ. 2016ರ ಏಪ್ರಿಲ್ನಲ್ಲಿ ಮನೆ ಹಿಂಬದಿಯೇ ಶವವಾಗಿ ಬಿದ್ದಿದ್ದ. ಕುಡಿತದ ಚಟದಿಂದಲೇ ಪತಿ ಸಾವನ್ನಪ್ಪಿದ್ದಾನೆಂದು ಪತ್ನಿ ಕಣ್ಣೀರು ಹಾಕಿದ್ದಳು. ಸಂಬಂಧಿಕರೂ ಇದನ್ನ ನಂಬಿ ಬೀರಪ್ಪನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಆದರೆ ಇದೀಗ ವಿಡಿಯೋದಿಂದಾಗಿ ಬೀರಪ್ಪನದ್ದು ಸಹಜ ಸಾವಲ್ಲ, ಕೊಲೆ ಅನ್ನೋದು ಗೊತ್ತಾಗಿದೆ.
ಇದನ್ನೂ ಓದಿ: ಕೋಲಾರ: ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಗೆ ಕಿರುಕುಳ; ಕತ್ತು ಹಿಸುಕಿ ಕೊಂದ ಪತಿ
ಅಷ್ಟಕ್ಕೂ, ಅಂದು ಬೀರಪ್ಪನನ್ನ ಕೊಂದವನು ಮಹೇಶ್, ಪತಿ ಬೀರಪ್ಪನ ಕೊಲೆಗೆ ಗೆಳೆಯನ ಜತೆ ಸೇರಿ ಪತ್ನಿ ಶಾಂತಾಬಾಯಿ ಮಸಲತ್ತು ಮಾಡಿದ್ದು, ಈ ಮಹೇಶನ ಕೈಯಿಂದ ಕೊಲೆ ಮಾಡಿಸಿದ್ದಳಂತೆ. ಆದರೆ ಡೀಲ್ ಮುಗಿಸಿ 9 ವರ್ಷವಾದರೂ ನನಗೆ ಹಣ ಕೊಟ್ಟಿಲ್ಲ ಅಂತ ಮಹೇಶ್, ಶಾಂತಾಬಾಯಿ ಜತೆ ಜಗಳ ಆಡಿದ್ದಾನೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ, ಬೀರಪ್ಪನ ಸಹೋದರ ಫರಹತಬಾದ ಠಾಣೆ ಪೊಲೀಸರಿಗೆ ದೂರು ನೀಡಿದ್ದ. ಇದೀಗ ಪೊಲೀಸರು ಶಾಂತಾಬಾಯಿ, ಜೆಸಿಬಿ ಸಿದ್ದು, ಮಹೇಶ್, ಶಂಕರ್ ಹಾಗೂ ಸೂರ್ಯಕಾಂತ್ರನ್ನ ಅರೆಸ್ಟ್ ಮಾಡಿದ್ದಾರೆ.
ಗ್ರಾಮದ ಜೆಸಿಬಿ ಸಿದ್ದ ಎಂಬಾತನ ಜತೆಗೆ ಶಾಂತಾಬಾಯಿಗೆ ಅಕ್ರಮ ಸಂಬಂಧವಿತ್ತಂತೆ. ಇದಕ್ಕೆ ಅಡ್ಡಿಯಾಗಿದ್ದ ಪತಿಯನ್ನ ಕೊಲ್ಲಲು ಊಟದಲ್ಲಿ ಮಾತ್ರೆ ಹಾಕಿ ಯತ್ನಿಸಿದ್ದಾಳೆ. ಆವಾಗ ಬೀರಪ್ಪ ಸಾಯಲಿಲ್ಲ. ಬಳಿಕ ಇದೇ ಮಹೇಶನಿಗೆ ಜೆಸಿಬಿ ಸಿದ್ದ ಕೊಲೆ ಸುಪಾರಿ ನೀಡಿದ್ದಾನೆ. ಈ ಮಹೇಶ್ ತನ್ನ ಸ್ನೇಹಿತರ ಜತೆಗೂಡಿ ಬೀರಪ್ಪನಿಗೆ ಕಂಠಮಟ್ಟ ಕುಡಿಸಿ ಕತ್ತು ಹಿಸುಕಿ ಕೊಂದಿದ್ದಾರೆ. ಆದರೆ 9 ವರ್ಷವಾದರೂ ಹಂತಕ ಮಹೇಶನಿಗೆ ಸುಪಾರಿಯ ಬಾಕಿ ಹಣ ಕೊಟ್ಟಿರಲಿಲ್ಲ. ಇದೀಗ ಬಾಕಿ ಹಣಕ್ಕಾಗಿ ಮಹೇಶ್ ಪಟ್ಟು ಹಿಡಿದಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ: ಆ ಒಂದು ವೀಡಿಯೋದಿಂದ 9 ವರ್ಷ ಬಳಿಕ ಬಯಲಾಯ್ತು ಪತ್ನಿಯ ಮಸಲತ್ತು
ಒಟ್ಟಿನಲ್ಲಿ ಬರೋಬ್ಬರಿ 9 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಒಂದೇ ಒಂದು ವಿಡಿಯೋ ಮೂಲಕ ಇದೀಗ ಇಡೀ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪತಿಯನ್ನ ಕೊಂದು ತಣ್ಣಗಿದ್ದ ಪತ್ನಿ ಒಂಬತ್ತು ವರ್ಷದ ಬಳಿಕ ಪ್ರೇಮಿ ಜೊತೆಗೆ ಕಂಬಿಹಿಂದೆ ಸೇರಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



