ಕಲಬುರ್ಗಿ: ಕರ್ನಾಟಕದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಖಂಡಿಸಿದರು. ಟಿವಿ9ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಪೊಲೀಸರು ಕೇಂದ್ರ ಸರ್ಕಾರದ ಅಣತಿಯಂತೆ ಪೊಲೀಸರು ದಾಳಿ ಮಾಡಿದ್ದಾರೆ. ಪ್ರತಿಭಟನೆ ಮಾಡಬಹುದು ಎನ್ನುವ ಕಾರಣಕ್ಕೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಎಷ್ಟೇ ಜನರ ಮನೆ ಮೇಲೆ ದಾಳಿ ನಡೆಸಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪಿಎಫ್ಐ ಮೇಲಿನ ದಾಳಿಗೆ ಕಾಂಗ್ರೆಸ್ ಸಹ ಬೆಂಬಲಿಸಿದೆ. ಸಂಘಟನೆಯ ಬಗ್ಗೆ ಇವರಿಗೆ ಅಷ್ಟೇಕೆ ಭೀತಿ ಎಂದು ಪ್ರಶ್ನಿಸಿದರು.
ಭಾರತದ ಅತಿದೊಡ್ಡ ಭಯೋತ್ಪಾದಕ ಸಂಘಟನೆ ಆರ್‌ಎಸ್‌ಎಸ್. ಬಿಜೆಪಿಯಲ್ಲೇ ಹೆಚ್ಚು ಉಗ್ರರು ಇದ್ದಾರೆ. ಪ್ರತಿಭಟನೆ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು. ಆ ಹಕ್ಕನ್ನು ಇವರು ಹತ್ತಿಕ್ಕುತ್ತಿದ್ದಾರೆ. ಎಷ್ಟೇ ಜನರ ಮನೆ ಮೇಲೆ ದಾಳಿ ಮಾಡಿ, ಕೇಸ್ ಹಾಕಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ನವರು ತಾವು ಕಳ್ಳರು, ಪರರನ್ನು ನಂಬರು ಎಂಬಂತೆ ವರ್ತಿಸುತ್ತಿದ್ದಾರೆ. ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದಾಗ ಕಾರದ ಪುಡಿ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಮನೆಗಳಲ್ಲಿ ಕಾರದ ಪುಡಿ ಇಡುವ ಬದಲು, ಸೆಗಣಿ ಇಡ್ತಾರಾ ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಮತ್ತು ಸಂಬಂಧಿತ ಸಂಘಟನೆಗಳು ದೇಶದ ಭಾವೈಕ್ಯತೆಗೆ ಅಪಾಯ ತಂದೊಡ್ಡುವ ಚಟುವಟಿಕೆ ನಡೆಸುತ್ತಿವೆ. ಆದರೆ ಎಂದಿಗೂ ಈ ಸಂಘಟನೆಗಳ ಮೇಲೆ ದಾಳಿ ನಡೆದಿಲ್ಲ. ಆರ್‌ಎಸ್‌ಎಸ್ ಮತ್ತು ಅದರ ಪರಿವಾರದ ಸಂಘಟನೆಗಳಾದ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇನೆಗಳ ನಾಯಕರ ಬಳಿ ಆಯುಧಗಳಿವೆ. ಆದರೂ ಅವರ ಮೇಲೆ ಎಂದಿಗೂ ಎನ್‌ಐಎ ದಾಳಿ ಮಾಡಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.
ಎಸ್ಡಿಪಿಐ ಮೇಲೆ ದಾಖಲಾಗಿದ್ದ ಶೇ 98ರಷ್ಟು ಪ್ರಕರಣಗಳನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿವೆ. ಮಲೆಗಾಂವ್ ಸೇರಿದಂತೆ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರ್‌ಎಸ್‌ಎಸ್ ಹೆಸರು ಕೇಳಿಬಂದಿದೆ ಆದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ಹಣಿಯುತ್ತಿದೆ ಎಂದು ದೂರಿದರು.