ಬೆಂಗಳೂರು: 371ಜೆ ಕಾಯ್ದೆ ಅಡಿಯಲ್ಲಿ ಶಾಲೆಗಳಿಗೆ ಸರ್ಕಾರ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು, ಆದರೆ ಕಳೆದ 7 ವರ್ಷಗಳಿಂದ ಒಂದೇ ಒಂದು ರೂಪಾಯಿ ಅನುದಾನ ಬಳಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಅಂದರೆ ಫೆಬ್ರವರಿ 15ರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸುಮಾರು 1500 ಶಾಲೆಗಳನ್ನು ಬಂದ್ ಮಾಡಲು ಖಾಸಗಿ ಶಾಲಾ ಒಕ್ಕೂಟ ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ವಿಜಯನಗರ, ಕೊಪ್ಪಳದ ಶಾಲೆಗಳು ಅನುದಾನಕ್ಕೆ ಸೇರದ ಕಾರಣ ಈ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಚ್ಚಲು ನಿರ್ಧಾರ ಮಾಡಿರುವ 125 ಶಾಲೆಗಳನ್ನು ಕೈ ಬಿಡಬೇಕು ಎಂದು ಖಾಸಗಿ ಶಾಲಾ ಒಕ್ಕೂಟ ತಿಳಿಸಿದೆ.
ಕಳೆದ ವರ್ಷ 1,500 ಕೋಟಿ ಅನುದಾನ ಬಂದಿದೆ. ಆದರೆ ಕೇವಲ 5 ಕೋಟಿ ಅನುದಾನ ಮಾತ್ರ ಬಳಕೆಯಾಗಿದ್ದು, ಬಾಕಿ ಉಳಿದ ಅನುದಾನದ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ. ಹೀಗಾಗಿ ಶಾಲೆಗಳಿಗೆ ಅನುದಾನ ನೀಡುವಂತೆ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಸಚಿವರಿಗೆ ಮನವಿ ಸಲ್ಲಿಸಿತ್ತು. 2013-14 ರಲ್ಲಿ 371 ಜೆ ಜಾರಿಗೆ ಬಂದಿದ್ದು, ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನ ಬಂದಿದೆ. ಆದರೆ ಬಂದಂತಹ ಅನುದಾನ ಬಳಕೆಯಾಗದೆ ವಾಪಸ್ ಹೋಗುತ್ತಿದ್ದು, 7 ಜಿಲ್ಲೆಗಳಲ್ಲಿ 1,500 ಖಾಸಗಿ ಅನುದಾನ ರಹಿತ ಶಾಲೆಗಳಿವೆ. ಕನ್ನಡ ಮತ್ತು ಉರ್ದು ಮಾಧ್ಯಮ ಶಾಲೆಗಳಿದ್ದು, 5 ಲಕ್ಷ ವಿದ್ಯಾರ್ಥಿಗಳು ಈ ಭಾಗದಲ್ಲಿ ಇದ್ದಾರೆ.
ಇವರೆಲ್ಲರೂ ಬೀದಿಗೆ ಬೀಳುತ್ತಾರೆ. ಅದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಈಗಾಗಲೇ ಅಲ್ಲಿನ ಮಕ್ಕಳು ಕೂಲಿ ಕಾರ್ಮಿಕರಿದ್ದಾರೆ. 10 ನೇ ತರಗತಿ ಪರೀಕ್ಷೆ ಹತ್ತಿರದಲ್ಲಿದೆ. ನಾವು ಕೂಡ ಸಂಕಷ್ಟದಲ್ಲಿದ್ದೇವೆ. ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿದೆ.
ಈ ನಿಟ್ಟಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣ ಬಳಕೆಗೆ ಅವಕಾಶ ನೀಡಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಸೋಮವಾರದಿಂದ ಶಾಲೆಗಳನ್ನು ಸಾಂಕೇತಿಕವಾಗಿ ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟದಿಂದ ಎಚ್ಚರಿಕೆ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟಕ್ಕೆ ರುಪ್ಸಾ ಕೂಡ ಬೆಂಬಲ ನೀಡಿದ್ದು, ಈ ಕುರಿತು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: School Fees: ಸರ್ಕಾರದ ವಿರುದ್ಧ ತೊಡೆ ತಟ್ಟಿದ ಖಾಸಗಿ ಶಾಲೆಗಳ ಒಕ್ಕೂಟ; ಫೆಬ್ರವರಿ 23ರಂದು ಪ್ರತಿಭಟನೆಗೆ ನಿರ್ಧಾರ
Published On - 12:26 pm, Sat, 13 February 21