ದೇಶ, ರಾಜ್ಯ, ವಿದೇಶ, ಅಪರಾಧ, ಶೈಕ್ಷಣಿಕ ಮತ್ತು ವಾಣಿಜ್ಯ ಕುರಿತಾದ ಇಂದಿನ (ಡಿ.30) ಪ್ರಮುಖ ಸುದ್ದಿಗಳು: ಹೊಸ ವರ್ಷಾಚರಣೆಗೆ ಕೊರೊನಾ ರೂಲ್ಸ್, ದೇವರೆ ‘ಮೂರ್ತಿ’ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು, ಸಿದ್ದೇಶ್ವರ ಶ್ರೀ ಅನಾರೋಗ್ಯ ವಿಚಾರ: ಹರಿದು ಬಂದ ಭಕ್ತರಿಗೆ ದರ್ಶನ ನೀಡಿದ ನಡೆದಾಡುವ ದೇವರು ಒಳಗೊಂಡ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ ಓದಿ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಇಂದು ಮುಂಜಾನೆ ಅಹಮದಾಬಾದ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಕ್ಷಣ ದೆಹಲಿಯಿಂದ ಆಗಮಿಸಿದ ಪ್ರಧಾನಿ ಮೋದಿ ತಮ್ಮ ತಾಯಿಯ ಅಂತಿಮ ದರ್ಶನ ಪಡೆದರು. ಬಳಿಕ ತಾವೇ ಮುಂದೆ ನಿಂತು ತಾಯಿಯ ಅಂತಿಮಯಾತ್ರೆಗೆ ಹೆಗಲು ಕೊಟ್ಟಿದ್ದರು. ಗಾಂಧಿನಗರದ ಚಿತಾಗಾರದಲ್ಲಿ 100 ವರ್ಷದ ಹೀರಾಬೆನ್ ಮೋದಿ ಅವರ ಅಂತಿಮ ಕ್ರಿಯೆಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನವರಿ 1ರ ಹಿಂದಿನ ದಿನದ ಸಂಜೆಯಿಂದ ಮಧ್ಯರಾತ್ರಿ ವರೆಗೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ರಸ್ತೆಗಳು ಗಿಜಿಗುಡುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಮುಂಜಾತ್ರಾ ಕ್ರಮವಾಗಿ ಪೊಲೀಸರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಸುತ್ತೋಲೆ ಹೊರಡಿಸಿದ್ದಾರೆ. ಹಾಗಾದ್ರೆ, ಯಾವೆಲ್ಲ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಲಾಗಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಬಾರ್, ಪಬ್ ಹಾಗೂ ಹೊಟೇಲ್ಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ಎಷ್ಟು ಟೇಬಲ್ ಇದೆಯೋ ಅಷ್ಟು ಚೇರ್ಗೆ ಮಾತ್ರ ಅನುಮತಿ ನೀಡಲಾಗಿದೆ. ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವವರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದರು. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಜೆಡಿಎಸ್ನ ಪಂಚರತ್ನ ರಥಯಾತ್ರೆಯು ಎರಡು ದಾಖಲೆಗಳನ್ನು ನಿರ್ಮಿಸಿದೆ. ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಈ ಎರಡೂ ದಾಖಲೆಗಳನ್ನು ನಾಡಿನ ಜನ ಮತ್ತು ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ. ಕಳೆದ ನವೆಂಬರ್ 18ರಿಂದ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದ ಜನರು ವಿವಿಧ ಬಗೆಯ ಬೃಹತ್ ಹಾರಗಳನ್ನು ಹಾಕಿ ಗೌರವಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಹಾಗೂ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ದಾಖಲೆಗೆ ಪಾತ್ರರಾಗಿದ್ದಾರೆ.
ಭಕ್ತರು ಇತ್ತೀಚಿಗೆ ದೇವರ ಕಾಣಿಕೆ ಹುಂಡಿಗಳಲ್ಲಿ ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ ಕಾಗದದ ಪತ್ರಗಳನ್ನು ಹಾಕಿ ಮನವಿ ಮಾಡಿಕೊಳ್ಳುವುದು ಸಮಾನ್ಯವಾಗಿದೆ. ಈ ನಡುವೆ ಚಾಮರಾಜನಗರ ಜಿಲ್ಲೆಯಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಬೇಡಿಕೆ ಪತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ದೇವರೆ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ.
ನಡೆದಾಡುವ ದೇವರು ಎಂದು ಕರೆಯಲ್ಪಡುವ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ವಿಚಾರವಾಗಿ ಕೆಲ ದಿನಗಳ ಹಿಂದೆ ವದಂತಿಗಳು ಕೇಳಿಬಂದಿದ್ದವು. ಬಳಿಕ ಅವರು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಅನಾರೋಗ್ಯ ಎಂಬ ಮಾತು ಕೇಳಿಬರುತ್ತಿದ್ದಂತೆ ಸಾವಿರಾರು ಭಕ್ತರಲ್ಲಿ ಆತಂಕ ಉಂಟಾಗಿತ್ತು. ಹೀಗಾಗಿ ಸ್ವಾಮೀಜಿಯವರನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಶ್ರೀಗಳ ದರ್ಶನಕ್ಕೆ ಅಪಾರ ಪ್ರಮಾಣದ ಜನರು ಹರಿದು ಬರುತ್ತಿದ್ದಾರೆ. ಜೊತೆಗೆ ಹಾಲಿ, ಮಾಜಿ ಶಾಸಕರು ಹಾಗೂ ಸಚಿವರುಗಳು ಸಹ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯ ಕುಶಲೋಪಾರಿ ವಿಚಾರಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಕಾರು ಅಪಘಾತವಾಗಿದೆ. ದೆಹಲಿಯಲ್ಲಿ ಮನೆಗೆ ನಿರ್ಗಮಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಪಂತ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿಯಾದ ರಭಸಕ್ಕೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ ಎಂದು ಹೇಳಲಾಗಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ರಿಷಬ್ ಪಂತ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಿತಿ ಗಂಭೀರವಾಗಿದೆ. ತಲೆ, ಬೆನ್ನು ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಫುಟ್ಬಾಲ್ ದಂತಕಥೆ ಪೀಲೆ, ಬ್ರೆಜಿಲ್ನ ಸಾವೊಪಾಲೊ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೀಲೆ ಎಂದೇ ಖ್ಯಾತರಾಗಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ (82) ನಿಧನರಾಗಿದ್ದಾರೆ. 3 ಬಾರಿ ಫಿಫಾ ವಿಶ್ವಕಪ್ ಗೆದ್ದ ಏಕೈಕ ಆಟಗಾರರಾಗಿದ್ದ ಪೀಲೆ, ಫುಟ್ಬಾಲ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು. ಫುಟ್ಬಾಲ್ ದಿಗ್ಗಜ ಪೀಲೆ ನಿಧನಕ್ಕೆ ವಿಶ್ವದ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಹೊಸ ವರ್ಷದಲ್ಲಿ ಉಳಿತಾಯ ಹೆಚ್ಚಿಸುವ ಉದ್ದೇಶದೊಂದಿಗೆ ಅಂಚೆ ಇಲಾಖೆಯ ಟರ್ಮ್ ಡಿಪಾಸಿಟ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ , ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಜನವರಿ 1ರಿಂದ ಪರಿಷ್ಕೃತ ಬಡ್ಡಿ ದರ ಜಾರಿಗೆ ಬರಲಿದೆ. ಒಟ್ಟಾರೆಯಾಗಿ ಎಲ್ಲ ಠೇವಣಿಗಳ ಮೇಲೆ ಶೇಕಡಾ 1.1ರಷ್ಟು ಬಡ್ಡಿ ದರ ಹೆಚ್ಚಾಗಲಿದೆ. ಆದರೆ, ಪಿಪಿಎಫ್ ಮತ್ತು ಹೆಣ್ಣುಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಸಿರಪ್ನ್ನು ಸೇವಿಸಿ ಉಜ್ಬೇಕಿಸ್ತಾನ್‌ದ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಇದೀಗ ಉಜ್ಬೇಕಿಸ್ತಾನ್‌ನ ಭಾರತ-ನಿರ್ಮಿತ ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಉಜ್ಬೇಕಿಸ್ತಾನ್‌ನಲ್ಲಿ 18 ಸಾವುಗಳಿಗೆ ಕೆಮ್ಮು ಸಿರಪ್ ತಯಾರಿಸಿದ ನೋಯ್ಡಾ ಸಂಸ್ಥೆಯು ಎಲ್ಲಾ ಉತ್ಪಾದನೆಯನ್ನು ನಿಲ್ಲಿಸುವಂತೆ ಹೇಳಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Fri, 30 December 22