Kargil Vijay Diwas 2024: ಬಡತನ ಕಣ್ಣಮುಂದೆ, ಕೆಲಸ ಹುಡುಕುತ್ತಿದ್ದ ವೇಳೆ ಸಿಕ್ಕಿದ್ದೇ ದೇಶ ಸೇವೆ: ಮಹೇಶ್ ಮಂಜುನಾಥ್ ನಾಯ್ಕ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 26, 2024 | 9:52 AM

ಭಾರತದ ಗಡಿಪ್ರದೇಶದಲ್ಲಿ ಹಗಲಿರುಳು ಕಷ್ಟಪಟ್ಟು ದುಡಿಯುತ್ತೇವೆ. ನಮ್ಮ ಈ ಸೇವೆಯು ದೇಶಕ್ಕಾಗಿ. ನಾನು ದೇಶದ ಸೇವೆಯಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ನನಗೆ ಹೆಮ್ಮೆಯಿದೆ. ಈ ಭಾಗ್ಯವು ಎಲ್ಲರಿಗೂ ಸಿಗುವುದಿಲ್ಲ ನನ್ನ ಪಾಲಿಗೆ ಸಿಕ್ಕಿದೆ. ಯೋಧ ಮಹೇಶ್ ಮಂಜುನಾಥ್ ನಾಯ್ಕ್ ಟಿವಿ 9 ನೊಂದಿಗೆ ಮಾತನಾಡಿದ ವೇಳೆ ತಮ್ಮ ದೇಶ ಸೇವೆ ಆರಂಭವಾದ ದಿನಗಳನ್ನು ನೆನಪಿಸಿಕೊಳ್ಳುತ್ತ ಬಿಚ್ಚಿಟ್ಟ ಮನಸ್ಸಿನ ಮಾತುಗಳಿವು.

Kargil Vijay Diwas 2024: ಬಡತನ ಕಣ್ಣಮುಂದೆ, ಕೆಲಸ ಹುಡುಕುತ್ತಿದ್ದ ವೇಳೆ ಸಿಕ್ಕಿದ್ದೇ ದೇಶ ಸೇವೆ: ಮಹೇಶ್ ಮಂಜುನಾಥ್ ನಾಯ್ಕ್
ಭಾರತೀಯ ಯೋಧ ಮಹೇಶ್ ಮಂಜುನಾಥ್ ನಾಯ್ಕ್
Follow us on

ನಾವು ನೀವುಗಳು ಇಲ್ಲಿ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣಿಕರ್ತರು ಈ ದೇಶ ಕಾಯುವ ಸೈನಿಕರು. ದೇಶ ಸೇವೆಯೇ ಈಶ ಸೇವೆ ಎನ್ನುವ ಮಾತಿನಂತೆ ಬಿಸಿಲು, ಗಾಳಿ, ಮಳೆ ಎಂದು ಲೆಕ್ಕಿಸದೆ, ಕುಟುಂಬದ ಬಗ್ಗೆಯೂ ಒಂದು ಕ್ಷಣವು ಯೋಚಿಸದೇ ಹಗಲು ರಾತ್ರಿಯೆನ್ನದೆ ದೇಶ ಕಾಯುವ ಸೇವೆಯಲ್ಲಿ ನಿರತರಾದವರು ಅದೆಷ್ಟೋ ಯೋಧರು. ಅಂತಹವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಮಹೇಶ್ ಮಂಜುನಾಥ್ ನಾಯ್ಕ್ ಕೂಡ ಒಬ್ಬರು.

ಕಳೆದ ಹದಿನಾಲ್ಕು ವರ್ಷಗಳಿಂದ ಕಾಲಾಳು ಪಡೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಇವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊಸಮಂಜು. ಮಂಜುನಾಥ್ ನಾಯ್ಕ್ ಹಾಗೂ ಕಮಲಾಕ್ಷಿ ನಾಯ್ಕ್ ರವರ ಮುದ್ದಿನ ಸುಪುತ್ರ. ಹುಟ್ಟಿದ್ದು ಕಡು ಬಡತನದಲ್ಲಿಯೇ, ಓದುವುದಕ್ಕೂ ಕಷ್ಟ ಪಡುತ್ತಿದ್ದ ದಿನಗಳಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವಿತ್ತು. ತಮ್ಮ ಬಾಲ್ಯದ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ ಇವರು ಕಾಲೇಜು ಶಿಕ್ಷಣವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಾಪುರದಲ್ಲಿ ಪೂರ್ಣಗೊಳಿಸಿದರು.

ಆದರೆ ಮನೆಯ ಪರಿಸ್ಥಿತಿಯು ತೀರಾ ಹದಗೆಟ್ಟಿದ್ದ ಕಾರಣ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದ್ದ ದಿನಗಳವು. ಕೈಯಲ್ಲಿ ಕೆಲಸವಿದ್ದರೆ ಎಲ್ಲವು ಸರಿಯಾಗಬಹುದು ಎನ್ನುವ ಆಸೆ. ಓದುತ್ತಿರುವಾಗಲೇ ಉದ್ಯೋಗ ಹುಡುಕುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದ್ದವರು. ಪದವಿಯಲ್ಲಿರುವಾಗಲೇ ಸೇನೆಗೆ ಸೇರುವ ಸಲುವಾಗಿ ಪ್ರಯತ್ನದಲ್ಲಿ ನಿರತರಾಗಿದ್ದರು. ನಾಲ್ಕನೇಯ ಪ್ರಯತ್ನದಲ್ಲಿ ಯಶಸ್ಸು ಕಂಡರು.

ಹೌದು, ಅಂತಿಮ ವರ್ಷ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ದೇಶ ಸೇವೆ ಮಾಡುವ ಅವಕಾಶವೊಂದು ಲಭಿಸಿತ್ತು. ಹೀಗಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಸೇನೆಯ ತರಬೇತಿಗೆ ಹೊರಟ ಮಹೇಶ್ ಅವರಿಗೆ ಮನೆಯಲ್ಲಿ ಮೊದಲು ಬೆಂಬಲವಿರಲಿಲ್ಲ. ಒಬ್ಬನೇ ಮಗನಾದ ಕಾರಣ ತಂದೆ ತಾಯಿ ಬೇಡ ಎಂದೇ ಹೇಳಿದ್ದರು. ದೇಶ ಸೇವೆ ಮಾಡುವುದು ನನಗೆ ಸಿಕ್ಕ ಭಾಗ್ಯ ಎಂದು ಕೊಂಡು ಹೊರಟ ಅವರು, ಸರಿಸುಮಾರು ಒಂಬತ್ತು ತಿಂಗಳ ಕಾಲ ತರಬೇತಿ ಪಡೆದು ಸೈನಿಕನಾಗಿ ದೇಶ ಸೇವೆಯತ್ತ ಹೆಜ್ಜೆ ಇಟ್ಟರು. ಹದಿನಾಲ್ಕು ವರ್ಷಗಳಿಂದ (ಕಾಲಾಳು ಪಡೆ) ಸೈನಿಕನಾಗಿ ಸೇವೆಯಲ್ಲಿ ಸಲ್ಲಿಸುತ್ತಿದ್ದು, ಪ್ರಸ್ತುತ ಅಹಮದಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತರಬೇತಿ ದಿನಗಳನ್ನು ನೆನಪಿಸಿಕೊಳ್ಳುತ್ತ ಅವರು, “ಹದಿಹರೆಯದ ವಯಸ್ಸಿನಲ್ಲಿ ಮನಸ್ಸು ಏಕಾಗ್ರತೆಯು ಇರುವುದಿಲ್ಲ. ಹೀಗಾಗಿ ತರಬೇತಿಯನ್ನು ಪೂರ್ಣಗೊಳಿಸಿ ಸೇನೆ ಸೇರುವುದೇ ದೊಡ್ಡ ಸವಾಲಿನ ಕೆಲಸ. ತರಬೇತಿಯ ಅವಧಿಯಲ್ಲಿ ನನ್ನ ಜೊತೆಯಲ್ಲಿದ್ದ ಐವರು ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿ ಬೇಡ ಎಂದು ಹೋದದ್ದು ಇದೆ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಪರೀಕ್ಷೆಗಳನ್ನು ಎದುರಿಸಿ ಸೇನೆ ಸೇರುವುದು ಅಷ್ಟು ಸುಲಭವಲ್ಲ” ಎನ್ನುತ್ತಾರೆ.

ಇದನ್ನೂ ಓದಿ: ಯುದ್ಧದ ಸಮಯದಲ್ಲಿ ಯೋಧರ ಆಹಾರ ಹೇಗಿರುತ್ತದೆ? ಟಿವಿ9 ಜತೆ ಅನುಭವ ಹಂಚಿಕೊಂಡ ಕರ್ನಲ್ ರಾಡ್ರಿಗಸ್

“ದೇಶ ಸೇವೆಯನ್ನು ಮಾಡುವ ಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ. ಈಗಿನ ಕಾಲದಲ್ಲಿ ಎಷ್ಟೋ ಜನರು ಪದವಿ ಹಾಗೂ ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ. ಆದರೆ ಅವರಿಗೂ ಈ ದೇಶ ಸೇವೆಯನ್ನು ಮಾಡುವ ಅವಕಾಶ ದೊರೆಯುವುದು ಕಡಿಮೆಯೇ. ಹೀಗಾಗಿ ನಾನು ಯಾರೊಂದಿಗೂ ನನ್ನನ್ನು ಹೋಲಿಕೆ ಮಾಡಿಕೊಳ್ಳುವುದಿಲ್ಲ. ನನ್ನ ಈ ವೃತ್ತಿಯ ಮೇಲೆ ನನಗೆ ಹೆಮ್ಮೆಯಿದೆ. ಮುಂದಿನ ಜನ್ಮವಿದ್ದರೆ ಮತ್ತೆ ಇಲ್ಲಿಯೇ ಹುಟ್ಟಿ ದೇಶ ಸೇವೆಯನ್ನೇ ಮಾಡುವೆ” ಇದು ಯೋಧ ಮಹೇಶ್ ಮಂಜುನಾಥ್ ನಾಯ್ಕ್ ಅವರ ಮನದಾಳದ ಮಾತುಗಳು. ಈ ಎಲ್ಲಾ ಮಾತುಗಳನ್ನು ಕೇಳಿದಾಗ ಮೈ ಮನ ರೋಮಾಂಚನವಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ