ಬೆಂಗಳೂರು, ಡಿಸೆಂಬರ್ 25: ಜಮ್ಮು-ಕಾಶ್ಮೀರದ (Jammu-Kashmir) ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ 150 ಅಡಿ ಕಂದಕಕ್ಕೆ ಉರುಳಿ ಕರ್ನಾಟಕದ ಮೂವರು ಯೋಧರು (Karnataka Soldiers) ಹುತಾತ್ಮರಾಗಿದ್ದಾರೆ. ದುರಂತದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ (25), ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬಿಜಾಡಿಯ ಯೋಧ ಅನೂಪ್, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ ಖೋತ ಸಾವಿಗೀಡಾಗಿದ್ದಾರೆ.
ಮಹಾಲಿಂಗಪುರದ ಮಹೇಶ್ ಮಾರಿಗೊಂಡ ಕಳೆದ ಆರು ವರ್ಷಗಳಿಂದ 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೂರು ವರ್ಷದ ಹಿಂದೆ ಮಹೇಶ್ ನಾಗಪ್ಪ ಮಾರಿಗೊಂಡ ಅವರ ವಿವಾಹವಾಗಿತ್ತು. ಯೋಧ ಅನೂಪ್ ಕಳೆದ 13 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅನುಪ್ ದಂಪತಿಗೆ ಎರಡು ವರ್ಷದ ಪುಟ್ಟ ಮಗು ಇದೆ.
ಇದನ್ನೂ ಓದಿ: ಪೂಂಚ್‌ನಲ್ಲಿ ಸೇನಾ ವಾಹನ ಕಂದಕಕ್ಕೆ ಬಿದ್ದು ಐವರು ಯೋಧರು ಸಾವು, 12 ಜನರಿಗೆ ಗಾಯ
ಬುಧವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸೇನಾ ವಿಮಾನದಲ್ಲಿ ಅನುಪ್ ಪಾರ್ಥಿವ ಶವ ಆಗಮನವಾಗಲಿದೆ. ಮಂಗಳೂರು ಎನ್ಸಿಸಿ ಬೆಟಾಲಿಯನ್ ಪಾರ್ಥಿವ ಸ್ವೀಕರಿಸಲಿದೆ. ಬಳಿಕ ಉಡುಪಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಪಾರ್ಥಿವ ಶರಿರ ರವಾನಿಸಲಾಗುತ್ತದೆ. ಗುರುವಾರ ಬೆಳಗ್ಗೆ 9 ಗಂಟೆಗೆ ಉಡುಪಿ ಕುಂದಾಪುರದ ತೆಕ್ಕಟೆಯಿಂದ ಬೀಜಾಡಿವರೆಗೂ ಅಂತಿಮಯಾತ್ರೆ ನಡೆಯಲಿದೆ.
ಬೀಜಾಡಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿವೆ. ಬಳಿಕ, 11 ಗಂಟೆಗೆ ಬೀಜಾಡಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ.
11 ಮರಾಠಾ ಲೈಟ್ ಇನ್‌ಫೆಂಟ್ರಿಯ ಸೇನಾ ವಾಹನವು ಸೋಮವಾರ (ಡಿ.24)ರ ಸಂಜೆ 5.30ರ ಸುಮಾರಿಗೆ ನಿಲಂ ಪ್ರಧಾನ ಕಚೇರಿಯಿಂದ ಎಲ್‌ಒಸಿ ಮೂಲಕ ಪೂಂಚ್ ಜಿಲ್ಲೆಯ ಬನೋಯ್ ಘರೋವಾ ಪೋಸ್ಟ್‌ಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಘರೋವಾ ಪ್ರದೇಶದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದರು. ಆ ವಾಹನವು ಸುಮಾರು 150 ಅಡಿ ಆಳದ ಕಮರಿಗೆ ಬಿದ್ದಿತ್ತು.
ಘಟನೆಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ಒಟ್ಟು ಐವರು ಹುತಾತ್ಮರಾಗಿದ್ದಾರೆ. 12 ಜನ ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಸೇನಾ ವಾಹನವು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಪೋಸ್ಟ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಯೋಧರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರು. ಜಮ್ಮು ಕಾಶ್ಮೀರದ ಪೂಂಚ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕರ್ನಾಟಕದ ಯೋಧರಾದ ಧರ್ಮರಾಜ ಸುಭಾಷ ಖೋತ, ಅನೂಪ್ ಹಾಗೂ
ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Wed, 25 December 24