ಕೊನೆಗೂ ಕರ್ನಾಟಕ ವಕೀಲರ ಸಂರಕ್ಷಣಾ ವಿಧೇಯಕ ಮಂಡನೆ: ನುಡಿದಂತೆ ನಡೆದ ಸಿದ್ದರಾಮಯ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Dec 11, 2023 | 6:07 PM

Karnataka Advocates Protection Bill: ಮುಂದಿನ ಅಧಿವೇಶನದಲ್ಲಿ ಕರ್ನಾಟಕ ವಕೀಲರ ಸಂರಕ್ಷಣಾ ವಿಧೇಯಕ ಮಂಡನೆ ಮಾಡುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ವಕೀಲರ ಬಹುದಿನಳ ಬೇಡಿಕೆಯಾಗಿದ್ದ ವಕೀಲರ ರಕ್ಷಣಾ ವಿಧೇಯಕ ಇಂದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿದೆ.

ಕೊನೆಗೂ ಕರ್ನಾಟಕ ವಕೀಲರ ಸಂರಕ್ಷಣಾ ವಿಧೇಯಕ ಮಂಡನೆ: ನುಡಿದಂತೆ ನಡೆದ ಸಿದ್ದರಾಮಯ್ಯ
ವಕೀಲರ ಸಂರಕ್ಷಣಾ ಕಾಯ್ದೆ
Follow us on

ಬೆಳಗಾವಿ, (ಡಿಸೆಂಬರ್ 11): ಕರ್ನಾಟಕದ ವಕೀಲ ಸಮುದಾಯದ ಬಹುದಿನಗಳ ಬೇಡಿಕೆಯಾದ ವಕೀಲರ ರಕ್ಷಣಾ ವಿಧೇಯಕ (Karnataka Advocates Protection  Bill) ಕೊನೆಗೂ ಮಂಡನೆಯಾಗಿದೆ. ಇಂದು(ಡಿಸೆಂಬರ್ 11) ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಧರಣಿ ಮಧ್ಯೆಯೇ ಕರ್ನಾಟಕ ವಕೀಲರ ವಿರುದ್ಧದ ಹಿಂಸಾಚಾರ ತಡೆ ವಿಧೇಯಕ-2023ವನ್ನು ಕಾನೂನು ಸಚಿವ ಎಚ್​ಕೆ ಪಾಟೀಲ್ ಮಂಡನೆ ಮಾಡಿದರು.

ಇಂದು ಕಾನೂನು ಸಚಿವ ಎಚ್​ಕೆ ಪಾಟೀಲ್ ಅವರು ಇಂದು ಚಳಿಗಾಲದ ಅಧಿವೇಶನದಲ್ಲಿ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಮಂಡನೆ ಮಾಡಿದ್ದು, ನಾಳೆ ಅಂದರೆ ಡಿಸೆಂಬರ್ 12) ಅಂಗೀಕಾರವಾಗಲಿದೆ ಎಂದು ತಿಳಿಸಿದರು. ಇದೇ ವೇಳೆ ಚಿಕ್ಕಮಗಳೂರು ವಕೀಲನ ಮೇಲಿನ ಹಲ್ಲೆ ಬಗ್ಗೆ ಪ್ರಸ್ತಾಪಿಸಿದರು. ಇನ್ನು ಕಲಬುರಗಿಯಲ್ಲಿ ವಕೀಲ ಈರಣ್ಣಗೌಡ ಹತ್ಯೆಗೆ ಬಗ್ಗೆಯೂ ಸಹ ಸದನದಲ್ಲಿ ಪ್ರಸ್ತಾಪಿಸಿದರು.

ಕರ್ನಾಟಕ ನ್ಯಾಯವಾದಿಗಳ ವಿರುದ್ಧ ಹಿಂಸಾಚಾರ ತಡೆ ವಿಧೇಯಕ ಮಂಡನೆ ಜೊತೆಗೆ ಕರ್ನಾಟಕ ಅನುಸೂಚಿತ ಜಾತಿ/ಬುಡಕಟ್ಟುಗಳ ಉಪ ಹಂಚಿಕೆ ತಿದ್ದುಪಡಿ ವಿಧೇಯಕ -2023, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2023 ಹಾಗೂ ಬಿಬಿಎಂಪಿ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ ಮಂಡನೆ ಆಯ್ತು.

ವಕೀಲರಿಗೆ ಭರವಸೆ ನೀಡಿದ್ದ ಸಿದ್ದರಾಮಯ್ಯ

ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕರ್ನಾಟಕ ವಕೀಲರ ಸಂಘ ಮನವಿ ಮಾಡಿತ್ತು. ಅಲ್ಲದೇ ಈ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆದ್ರೆ, ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ 10ನೇ ರಾಜ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರಲಾಗುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಸಿದ್ದರಾಮಯ್ಯ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಲು ಮುಂದಾಗಿದೆ.

ಇದನ್ನೂ ಓದಿ: 2023ನೇ ಸಾಲಿನ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ, ಮುದ್ರಾಂಕ, ನೋಂದಣಿ ಶುಲ್ಕ ಹೆಚ್ಚಳ

ವಕೀಲರ ಮೇಲೆ ಹಲ್ಲೆ ಮಾಡಿದ್ರೆ ಏನು ಶಿಕ್ಷೆ?

ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಜಾರಿಯಾದರೆ ಯಾವುದೇ ವ್ಯಕ್ತಿ ವಕೀಲರ ಮೇಲೆ ಹಲ್ಲೆ ನಡೆಸುವಂತಿಲ್ಲ. ಒಂದು ವೇಳೆ ಹಲ್ಲೆ ಮಾಡಿದರೆ ಅಂತವರಿಗೆ 6 ತಿಂಗಳಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡಕ್ಕೆ ವಿಧಿಸುವ ವಿಧೇಯಕ ಇದಾಗಿದೆ. ಅಪರಾಧ ಸಂಬಂಧ ವಕೀಲರನ್ನು ಪೊಲೀಸರು ಬಂಧಿಸಿದ್ದಲ್ಲಿ ಲಾಯರ್ ಅಸೋಸಿಯೇಷನ್‌ಗೆ ಪೊಲೀಸರು ಮಾಹಿತಿ ನೀಡಬೇಕು ಎಂಬುದು ಇದರಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Mon, 11 December 23