ಮುಂದಿನ 6 ತಿಂಗಳಲ್ಲಿ ಸಂಪೂರ್ಣ ಕಾಗದ ರಹಿತವಾಗಲಿದೆ ಕರ್ನಾಟಕ ವಿಧಾನಮಂಡಲ: ಶಾಸಕರಿಗೆ ಸಿಗಲಿದೆ ಐಪ್ಯಾಡ್

ಕರ್ನಾಟಕ ವಿಧಾನಮಂಡಲವನ್ನು ಮುಂದಿನ 6 ತಿಂಗಳಲ್ಲಿ ಕಾಗದ ರಹಿತವಾಗಿಸಲು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA) ಅಡಿ 130 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಇನ್ಮುಂದೆ ಶಾಸಕರು ಕಲಾಪದಲ್ಲಿ ಐಪ್ಯಾಡ್ ಮೂಲಕವೇ ಕಾರ್ಯನಿರ್ವಹಿಸಲಿದ್ದಾರೆ. ಕಲಾಪಕ್ಕೆ ಪೂರಕವಾದ ಅಪ್ಲಿಕೇಷನ್​ಗಳನ್ನು ಐಪ್ಯಾಡ್ ಹೊಂದಿರಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ 6 ತಿಂಗಳಲ್ಲಿ ಸಂಪೂರ್ಣ ಕಾಗದ ರಹಿತವಾಗಲಿದೆ ಕರ್ನಾಟಕ ವಿಧಾನಮಂಡಲ: ಶಾಸಕರಿಗೆ ಸಿಗಲಿದೆ ಐಪ್ಯಾಡ್
ಮುಂದಿನ 6 ತಿಂಗಳಲ್ಲಿ ಪೇಪರ್​ಲೆಸ್ ವಿಧಾನಮಂಡಲ: ಶಾಸಕರಿಗೆ ಐಪ್ಯಾಡ್!
Image Credit source: tv9

Updated on: Jun 02, 2026 | 2:23 PM

ಮಂಗಳೂರು, ಜೂನ್ 2: ಕರ್ನಾಟಕ ವಿಧಾನಮಂಡಲವು ಮುಂದಿನ ಆರು ತಿಂಗಳಲ್ಲಿ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡು ಕಾಗದ ರಹಿತವಾಗಿ (Paperless) ಬದಲಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ತಿಳಿಸಿದ್ದಾರೆ. ಇನ್ಮುಂದೆ ಅಧಿವೇಶನದ ಅವಧಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಕಾಗದದ ಕಡತಗಳ ಬದಲಿಗೆ ಇನ್‌ಬಿಲ್ಟ್ ಅಪ್ಲಿಕೇಶನ್ ಒಳಗೊಂಡಿರುವ ಐಪ್ಯಾಡ್‌ಗಳನ್ನು (iPads) ಬಳಸಲಿದ್ದಾರೆ. ಈ ಮಹತ್ವಾಕಾಂಕ್ಷಿ ನಿರ್ಧಾರದಿಂದಾಗಿ ಮುದ್ರಣ ಮತ್ತು ಸಾಗಣೆಗೆ ತಗಲುತ್ತಿದ್ದ ಕೋಟ್ಯಂತರ ರೂಪಾಯಿ ವೆಚ್ಚ ಹಾಗೂ ಕಾಗದದ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

  • ಮುಂದಿನ 6 ತಿಂಗಳಲ್ಲಿ ಕರ್ನಾಟಕ ವಿಧಾನಮಂಡಲ ಸಂಪೂರ್ಣ ಡಿಜಿಟಲೀಕರಣ.
  • ಅಧಿವೇಶನದಲ್ಲಿ ಕಾಗದದ ಬದಲು ಐಪ್ಯಾಡ್ ಬಳಸಲಿರುವ ಶಾಸಕರು.
  • ಬೆಂಗಳೂರು, ಬೆಳಗಾವಿಯ ಸದನಗಳ ಡಿಜಿಟಲೀಕರಣಕ್ಕೆ ಒಟ್ಟು 130 ಕೋಟಿ ರೂ. ಅಂದಾಜು ವೆಚ್ಚ; ಶೇ 60 ರಷ್ಟು ಹಣ ಭರಿಸಲಿರುವ ಕೇಂದ್ರ ಸರ್ಕಾರ.

ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA) ಜೊತೆ ಒಪ್ಪಂದ

ಈ ಡಿಜಿಟಲ್ ಕ್ರಾಂತಿಗಾಗಿ ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್ ಜಂಟಿಯಾಗಿ ‘ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA)’ ಯೋಜನೆಯೊಂದಿಗೆ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ಈ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ‘ನೆವಾ’ ಮತ್ತು ರಾಜ್ಯ ಉಸ್ತುವಾರಿ ಸಮಿತಿಯ ಅಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ಬೆಂಗಳೂರು ಮತ್ತು ಬೆಳಗಾವಿಯ ಸುವರ್ಣಸೌಧದ ವಿಧಾನಸಭೆ ಕಲಾಪಗಳ ಡಿಜಿಟಲೀಕರಣಕ್ಕೆ 78 ಕೋಟಿ ರೂ. ಹಾಗೂ ವಿಧಾನಪರಿಷತ್ ಡಿಜಿಟಲೀಕರಣಕ್ಕೆ 52 ಕೋಟಿ ರೂ. ಸೇರಿ ಒಟ್ಟು 130 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಶೇ 60 ರಷ್ಟು ಪಾಲನ್ನು ನೀಡಲಿದೆ.

ಐಪ್ಯಾಡ್ ಮೂಲಕವೇ ಸಿಗಲಿದೆ ಸಕಲ ಮಾಹಿತಿ, ಶಾಸಕರಿಗೆ ತರಬೇತಿ

ಅಧಿವೇಶನದ ದಿನದ ಕಾರ್ಯಸೂಚಿ (Agenda), ಪ್ರಶ್ನೋತ್ತರಗಳು ಹಾಗೂ ಮಂಡನೆಯಾಗುವ ಎಲ್ಲಾ ವಿಧೇಯಕಗಳನ್ನು (Bills) ಶಾಸಕರಿಗೆ ಇ-ಫಾರ್ಮ್ಯಾಟ್ (ಡಿಜಿಟಲ್) ಮೂಲಕವೇ ಸುಲಭವಾಗಿ ಸಿಗುವಂತೆ ಕಳುಹಿಸಲಾಗುತ್ತದೆ. ಇದರಿಂದಾಗಿ ಕಡತಗಳು ಕಾಣೆಯಾಗುವ ಭೀತಿ ಇರುವುದಿಲ್ಲ. ಅಧಿವೇಶನದ ಸಮಯದಲ್ಲಿ ಶಾಸಕರ ಮೇಜುಗಳಿಗೆ ಐಪ್ಯಾಡ್‌ಗಳನ್ನು ಅಳವಡಿಸಲಾಗುತ್ತದೆಯಲ್ಲದೆ, ಕಲಾಪ ಮುಗಿದ ನಂತರ ಅವುಗಳನ್ನು ಸುರಕ್ಷಿತವಾಗಿ ತೆಗೆದಿಡಲಾಗುತ್ತದೆ. ಈ ವ್ಯವಸ್ಥೆಯನ್ನು ಬಳಸಲು ಎಲ್ಲಾ ಶಾಸಕರಿಗೂ ವಿಶೇಷ ತರಬೇತಿ ನೀಡಲಾಗುವುದು ಎಂದು ಸ್ಪೀಕರ್ ತಿಳಿಸಿದ್ದಾರೆ.

ಡಿಜಿಟಲ್ ಹಾಜರಾತಿ ಮತ್ತು ಕಿಯೋಸ್ಕ್ ಅಳವಡಿಕೆ

ಕೇವಲ ಕಲಾಪ ಮಾತ್ರವಲ್ಲದೆ ಶಾಸಕರ ಹಾಜರಾತಿ (Attendance) ವ್ಯವಸ್ಥೆಯನ್ನು ಕೂಡ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಇದರೊಂದಿಗೆ, ವಿಧಾನಸೌಧದ ವಿವಿಧ ಮಹಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳು ಹಾಗೂ ಅಧಿಕಾರಿಗಳ ವಿವರಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲು ವಿಧಾನಮಂಡಲದ ಐಟಿ ತಂಡವು ಸೌಧದ ಆವರಣದಲ್ಲಿ ಮಾಹಿತಿ ಕೇಂದ್ರಗಳನ್ನು (Kiosks) ಸ್ಥಾಪಿಸಲಿದೆ ಎಂದು ಯುಟಿ ಖಾದರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us