ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣದಲ್ಲಿ ಭಾರೀ ಬೆಳವಣಿಗೆಗಳಾಗುತ್ತಿವೆ. ವರ್ತೂರ್ ಸಂತೋಷ ಅರೆಸ್ಟ್ ಬೆನ್ನಲ್ಲೇ ಅಧಿಕಾರಿಗಳು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಸೆಲೆಬ್ರೆಟಿಗಳ ಮನೆ ಮೇಲೆ ದಾಳಿ ನಡೆಸಿ ತಲಾಶ್ ಮಾಡಿದ್ದಾರೆ. ಈಗ ಚಿನ್ನದ ಅಂಗಡಿಗಳ ಮಾಲೀಕರಿಗೂ ನೋಟೀಸ್ ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಲೋಡ್ ಶೆಡ್ಡಿಂಗ್ ಖಂಡಿಸಿ ಚಿಕ್ಕಮಗಳೂರಿನ ರಾಮನಹಳ್ಳಿ ಬಳಿಯ ಮೆಸ್ಕಾಂ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ 2023 ಮುಗಿದಿದ್ದು ಇಂದು ನಾಡಿನಿಂದ ಕಾಡಿಗೆ ದಸರಾ ಗಜಪಡೆ ತೆರಳಲಿದೆ. ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡುಗೆ ಕೊಡಲಾಗುತ್ತೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಹುಲಿಯ ಉಗುರಿನ ಪೆಂಡೆಂಟ್ ಧರಿಸಿದವರನ್ನು ಬಂಧಿಸಲಾಗಿದೆ. ಅನೇಕರು ಇದನ್ನೇ ದಾಳವಾಗಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಹುಲಿ ಉಗುರು ಪೆಂಡೆಂಟ್ ಧರಿಸಿರುವವರ ಫೋಟೋ ತೆಗೆದು ವೈರಲ್ ಮಾಡ್ತಿದ್ದಾರೆ ಎಂದಿದ್ದಾರೆ.
ವರ್ಗಾವಣೆಗೆ ಡೋಂಟ್ ಕೇರ್ ಎಂದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಗೇಟ್‌ಪಾಸ್ ನೀಡಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ ಐವರು ಎಇಇ, 7 ಎಇಗಳು ಹಾಗೂ 15 ಜೆಇಗಳನ್ನು ಅಮಾನತುಗೊಳಿಸಲಾಗಿದೆ. ವರ್ಗಾವಣೆ ಬಳಿಕ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೆ ಕರ್ತವ್ಯಲೋಪವೆನ್ನಲಾಗುತ್ತಿದೆ.
ವನ್ಯಜೀವಿ ಕಾಯ್ದೆ ಯಾರೂ ಉಲ್ಲಂಘನೆ ಮಾಡಬಾರದು. ಯಾರೇ ತಪ್ಪು ಮಾಡಿದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಕೆಲವರನ್ನು ಟಾರ್ಗೆಟ್ ಮಾಡ್ತಿದ್ದಾರೆ, ಕೆಲವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಇಂತಹ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆ ರೀತಿ ಇರಬಾರದು, ಎಲ್ಲರಿಗೂ ಕಾನೂನು ಒಂದೇ ಎಂದು ಹಾಸನದಲ್ಲಿ ಜೆಡಿಎಸ್ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹುಲಿ ಉಗುರು ಧರಿಸಿದ್ದ ಅರ್ಚಕರಿಬ್ಬರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಚಿಕ್ಕಮಗಳೂರು JMFC ಕೋರ್ಟ್ ಆದೇಶ ಹೊರಡಿಸಿದೆ. ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸಾಗೆ ನ್ಯಾಯಾಂಗ ಬಂಧನ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದ ಇತಿಹಾಸ ಪ್ರಸಿದ್ಧ ಖಾಂಡ್ಯ ಮಾರ್ಕಂಡೇಶ್ವರ ದೇವಾಲಯದ ಅರ್ಚಕರು.
ನೈತಿಕ ಮೌಲ್ಯಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು. ನೈತಿಕತೆ ಇಲ್ಲದ ಯಶಸ್ಸು, ದುಡಿಮೆ ಇಲ್ಲದ ಸಂಪತ್ತು ಹಾಗೂ ಚಾರಿತ್ರ್ಯ ಇಲ್ಲದ ಜ್ಞಾನ ನಿಷ್ಪ್ರಯೋಜಕ. ಅವುಗಳಿಂದ ಮನುಕುಲಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿಯವರು ಬೋಧಿಸಿದ ನೈತಿಕತೆಗಳು ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಹುಲಿ ಉಗುರಿನ ಪೆಂಡೆಂಟ್ ಹಾಕಿದ್ರೆ ಅಪರಾಧ ಎಂಬ ಅರಿವು ಇದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಪರಿಶೀಲಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ವೇಳೆ ಒಂದು ಡಾಲರ್ ಹಾಕಿಕೊಂಡಿದ್ದೆ. ನಾನು ಕಾಳಿ ಆರಾಧಿಸ್ತೇನೆ, ಹಾಗಾಗಿ ತ್ರಿಶೂಲವಿರುವ ಡಾಲರ್ ಮಾಡಿಸಿದ್ದೆ. ನಮ್ಮ ಕಚೇರಿ ಸಿಬ್ಬಂದಿಯನ್ನು ಮನೆಗೆ ಕಳಿಸಿ ಆ ಡಾಲರ್ನ್ನು ತರಿಸಿದ್ದೆ. ಡಾಲರ್ ಒಳಗೆ ಪ್ಲಾಸ್ಟಿಕ್ ಪೆಂಡೆಂಟ್ ಇತ್ತು, ಅಳತೆ ಪಡೆದು ತೆರಳಿದ್ದಾರೆ ಎಂದು ಬೆಂಗಳೂರಿನ ನಿವಾಸದಲ್ಲಿ ಆರ್ಯವರ್ಧನ್ ಗುರೂಜಿ ಪ್ರತಿಕ್ರಿಯೆ ನೀಡಿದ್ದಾರೆ.
ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳ ವಿರುದ್ಧ ಟಾರ್ಗೆಟ್ ಮಾಡಲಾಗುತ್ತಿದೆ. ಕಾನೂನಿನಲ್ಲಿ ಎಲ್ಲರಿಗೂ ಸಮಾನವಾಗಿಯೇ ಕ್ರಮ ತೆಗೆದುಕೊಳ್ಳಬೇಕು. ಮುಸ್ಲಿಂ ದರ್ಗಾಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡುತ್ತಾರೆ. ಇದು ಕೂಡಾ ಕಾನೂನಿಗೆ ವಿರುದ್ಧ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ಆರ್ಯವರ್ಧನ್ ಗುರೂಜಿ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಆರೋಪ ಹಿನ್ನೆಲೆ ಬೆಂಗಳೂರಿನ ಚಾಮರಾಜಪೇಟೆಯ ನಿವಾಸದಲ್ಲಿ ಅಧಿಕಾರಿಗಳಿಂದ ಶೋಧ ಮಾಡಲಾಗಿದೆ. ಈ ವೇಳೆ ಆರ್ಯವರ್ಧನ್ ಬಳಿ ಇದ್ದ ಪೆಂಡೆಂಟ್ನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡಿದಿದ್ದಾರೆ. ಆರ್ಯವರ್ಧನ್ ಹೇಳಿಕೆಯನ್ನು ಅರಣ್ಯ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ 5 ಕಡೆ ಸರ್ಚ್ ಮಾಡಿದ್ದೇವೆ. ದೂರು ಬಂದವರ ಎಲ್ಲರ ಮನೆಗಳಲ್ಲಿ ನಿನ್ನೆ ಪರಿಶೀಲನೆ ಮಾಡಿದ್ದೇವೆ. ದಾಳಿ ವೇಳೆ ಪೆಂಡೆಂಟ್ ವಶಕ್ಕೆ ಪಡೆಯಲಾಗಿದೆ ಎಂದು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಹೇಳಿದ್ದಾರೆ.
ವನ್ಯಜೀವಿಗಳ ಚರ್ಮ, ಉಗುರು ಧರಿಸುವುದು ಕಾನೂನು ಉಲ್ಲಂಘನೆ. 1972ರ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಉಲ್ಲಂಘನೆ ಆಗುತ್ತದೆ. ಹುಲಿ ಉಗುರು ಧರಿಸಿದವರ ವಿರುದ್ಧ ಈವರೆಗೆ 8 ದೂರು ಬಂದಿದೆ ಎಂದು ವಿಕಾಸಸೌಧದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನ ಆದರ್ಶನಗರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪಟು ಮೃತದೇಹ ಪತ್ತೆಯಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ನಿವಾಸಿ 25 ವರ್ಷದ ಧನಲಕ್ಷ್ಮೀ ಶವ ಪತ್ತೆಯಾಗಿದೆ. ಕಳೆದ 5 ವರ್ಷಗಳಿಂದ ಆದರ್ಶನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕಾಡುಗೋಡಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಧನಲಕ್ಷ್ಮೀ, ಮಂಗಳವಾರ ಮೈಸೂರು ದಸರಾ ನೋಡಿಕೊಂಡು ಬಂದಿದ್ದರು. 3 ಬಾರಿ ಅಂತಾರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಂದೆ, ತಮ್ಮ ಮನೆಯಲ್ಲಿರುವಾಗಲೇ ರೂಮ್ನಲ್ಲಿ ನೇಣಿಗೆ ಶರಣಾಗಿದ್ದಾರೆ.
ಹುಲಿ ಉಗುರು ಧರಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ ಅರಣ್ಯ ಭವನ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದೆ. ಹುಲಿ ಚರ್ಮ ಬಣ್ಣದ ಶಾಲು ಧರಿಸಿ ವಾಟಾಳ್ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ. ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯದ ಹೊರವಲಯದಲ್ಲಿ ಹಗ್ಗದಿಂದ ಕುತ್ತಿಗೆ ಬಿಗಿದು ವೃದ್ಧೆ ಕೊಲೆ ಮಾಡಲಾಗಿದೆ. ಹೆಬ್ಬಾಳ ಸಮೀಪದ ಕಾರ್ಖಾನೆಯಲ್ಲಿ ಚಿಕೋರಿ ಕಾರ್ಖಾನೆ ಮಾಲೀಕ ರಮೇಶ್ ಪತ್ನಿ 62 ವರ್ಷದ ನಳಿನಿ ಎಂಬುವವರನ್ನು ಕೊಲೆ ಮಾಡಲಾಗಿದೆ. ಉದ್ಯಮ ಆರಂಭಿಸಲು ಚಿಕೋರಿ ಕಾರ್ಖಾನೆ ಅಡಮಾನವಿಟ್ಟಿದ್ದರು. ಕಾಫಿ ಪುಡಿ ಅಂಗಡಿ, ಚಿಕೋರಿ ಕಾರ್ಖಾನೆ ಬ್ಯಾಂಕ್ನಲ್ಲಿ ಅಡವಿಟ್ಟಿದ್ದರು. ಸಾಲ ತೀರಿಸದ ಕಾರಣ ಬ್ಯಾಂಕ್, ಚಿಕೋರಿ ಕಾರ್ಖಾನೆ ವಶಕ್ಕೆ ಪಡೆದಿತ್ತು. ನಂತರ ವೃದ್ಧ ದಂಪತಿ ಮಂಡ್ಯ ಬಿಟ್ಟು ಮೈಸೂರಿನ ವೃದ್ಧಾಶ್ರಮದಲ್ಲಿದ್ದರು. ಮಂಡ್ಯದ ಚಿಕೋರಿ ಕಾರ್ಖಾನೆಗೆ ಬಂದು ಹೋಗುತ್ತಿದ್ದರು. ಅದೇ ರೀತಿ ಬಂದಾಗ ಕಾರ್ಖಾನೆಯಲ್ಲೇ ನಳಿನಿಯನ್ನು ಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ವಿಭಾಗದ DRFO ದರ್ಶನ್ ಅವರು ಹುಲಿ ಉಗುರಿನ ಡಾಲರ್ ಹಾಕಿರುವ ಫೋಟೋ ವೈರಲ್ ಆಗಿದೆ. ಈ ಹಿನ್ನೆಲೆ DRFO ಎಂ.ದರ್ಶನ್ ವಿರುದ್ಧ ಅಲ್ದೂರು ಅರಣ್ಯ ಇಲಾಖೆ ಕಚೇರಿಗೆ ಸಾಮಾಜಿಕ ಕಾರ್ಯಕರ್ತರಾದ ಸುಪ್ರೀತ್, ಅಬ್ದುಲ್ ಖಾದರ್ ದೂರು ನೀಡಿದ್ದಾರೆ. ಹುಲಿ ಉಗುರಿನ ಡಾಲರ್ ಹಾಕಿದ DRFO ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ರಾಜಕೀಯದ ವಿಲನ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಾನು ಸಿದ್ದರಾಮಯ್ಯಗೆ ಸ್ನೇಹಿತ ಅಲ್ಲ, ವಿಲನ್ ಆಗಿರೋದು ನಿಜ. ನಾನು ಯಾಕೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸ್ನೇಹಿತ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲೆ ವಿಚಾರವಾಗಿ ಬಹಿರಂಗ ಚರ್ಚೆಗೆ ಡಿಕೆ ಶಿವಕುಮಾರ್ ಆಹ್ವಾನ ವಿಚಾರಕ್ಕೆ ಸಂಬಂಧಿಸಿ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಿಆರ್ಪಿ ಇರುವ ಚಾನಲ್ನಲ್ಲಿ ಚರ್ಚೆಗೆ ಬರುವ ಸವಾಲು ಹಾಕಿದ್ದಾರೆ. ನಾನು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲನ್ನು ಸ್ವೀಕಾರ ಮಾಡುತ್ತೇನೆ. ನಾನು ಪಲಾಯನ ಮಾಡಲ್ಲ, ನನ್ನ ಬಳಿಯೂ ಸಾಕಷ್ಟು ಸರಕು ಇದೆ ಎಂದು ಬೆಂಗಳೂರಿನಲ್ಲಿ ಡಿಕೆಶಿ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚಂದ್ರಗ್ರಹಣ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅಕ್ಟೋಬರ್ 28ರ ಶನಿವಾರ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು ಸಂಜೆ 6.30ರ ಬಳಿಕ ದೇವರ ದರ್ಶನ ಬಂದ್ ಇರಲಿದೆ. ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಎಂದು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಹುಲಿ ಉಗುರಿನ ಪ್ರಕರಣ ಸಂಬಂಧ ಸ್ಯಾಂಡಲ್ ವುಡ್ನ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಗೆ ನೋಟಿಸ್ ನೀಡಲಾಗಿದೆ. ಅರಣ್ಯಾಧಿಕಾರಿಗಳ ನೋಟಿಸ್ಗೆ ನಾಲ್ಕು ಜನ ಉತ್ತರಿಸಬೇಕಿದೆ. ದರ್ಶನ್, ನಿಖಿಲ್ ಬರವಣಿಗೆ ಮೂಲಕ ಉತ್ತರ ನೀಡೋ ಸಾಧ್ಯತೆ ಇದೆ.
ನಾಯಿ ಕಚ್ಚಿದಕ್ಕೆ ದೂರು ನೀಡಿದವರ ಬೈಕ್ ಗಳಿಗೆ ಬೆಂಕಿ ಹಚ್ಚಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಾಯಿ ಮಾಲೀಕನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ನಂಜುಂಡಬಾಬು ಬಂಧಿತ ಆರೋಪಿ. ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯ ಮನೆಯಲ್ಲಿ ಘಟನೆ ನಡೆದಿದೆ. ಇದೇ ತಿಂಗಳ 23ರಂದು ಘಟನೆ ನಡೆದಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಗೆ ನಾಯಿ ಕಚ್ಚಿತ್ತು. ಈ ಸಂಬಂಧ ಮಹಿಳೆ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಕೊಟ್ಟವರ ಸುಮ್ಮನೆ ಬಿಡುವುದಿಲ್ಲ ಎಂದು ನಾಯಿ ಮಾಲೀಕ ಬೆದರಿಕೆ ಹಾಕಿದ್ದನಂತೆ.
ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ ಸಂಭವಿಸಿ 5 ಜನ ಮೃತಪಟ್ಟಿದ್ದರು. ಆದರೆ ಈಗ ಸಾವಿನ ಸಂಖ್ಯೆ 12ಕ್ಕೆ ಏರಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಟಾಟಾ ಸುಮೋ ವಾಹನದಲ್ಲಿದ್ದ 12 ಪ್ರಯಾಣಿಕರು ಮೃತಪಟ್ಟಿದ್ದಾರೆ.
ಲಾರಿ-ಟಾಟಾ ಸುಮೊ ನಡುವೆ ಭೀಕರ ಅಪಘಾತ, ಐವರು ದುರ್ಮರಣ, ಹಲವರ ಸ್ಥಿತಿ ಚಿಂತಾಜನಕ#Chikkaballapura #accident #lorry https://t.co/eyJbvMw9co
— TV9 Kannada (@tv9kannada) October 26, 2023
ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ರಾಮನಗರ ಜಿಲ್ಲೆಯ ವಿಚಾರವಾಗಿ ಹೆಚ್ಡಿಕೆ ವಿರುದ್ಧ ಡಿಕೆಶಿ ಕಿಡಿಕಾರಿದ್ದರು. ಯಾರೋ ಹೆಸರಿಗಾಗಿ ಜಿಲ್ಲೆ ಘೋಷಣೆ ಮಾಡಿದ್ದಾರೆ ಎಂದಿದ್ದರು. ಸದ್ಯ ಈಗ ಸುದ್ದಿಗೋಷ್ಠಿ ಮೂಲಕ ಡಿಕೆಶಿ ಟೀಕೆಗಳಿಗೆ ಕುಮಾರಸ್ವಾಮಿ ಉತ್ತರ ನೀಡಲಿದ್ದಾರೆ.
ಇಂದು ಮಧ್ಯಾಹ್ನ 3.20ಕ್ಕೆ ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಲಿದ್ದಾರೆ. ದೆಹಲಿಯಿಂದ ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಐಐಎಂ ಸಂಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂದು ಸಂಜೆ 6.05ಕ್ಕೆ ಬೆಂಗಳೂರಿನಿಂದ ಚೆನ್ನೈಗೆ ತೆರಳಲಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಸಂಚಾರಿ ಠಾಣೆ ಮುಂದೆಯೇ ಭೀಕರ ಅಪಘಾತ ಸಂಭವಿಸಿದ್ದು ಐವರು ಮೃತಪಟ್ಟಿದ್ದಾರೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿದೆ. ಟಾಟಾ ಸುಮೋ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
Published On - 8:11 am, Thu, 26 October 23