ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಯಾಗಿದೆ. ರಾಜ್ಯಾಧ್ಯಕ್ಷ ಯಾರಾಗುತ್ತಾರೆ ಎಂಬ ಯಕ್ಷ ಪ್ರಶ್ನೆಗೆ ಕೊನೆಗು ಉತ್ತರ ಸಿಕ್ಕಿದ್ದು ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರನ್ನು ನೇಮಿಸಿದೆ. ಹೈಕಮಾಂಡ್ನ ಈ ನಿರ್ಧಾರ ಕೆಲವರಿಗೆ ಸಂತಸ ಮೂಡಿಸಿದರೇ ಇನ್ನೂ ಕೆಲವರಿಗೆ ಬೇಸರ ಮೂಡಿಸಿದೆ. ಬಿಜೆಪಿಯ ಹಿರಿ ತಲೆಗಳನ್ನು ಬಿಟ್ಟು ಯುವಕನನ್ನು ರಾಜ್ಯಾಧ್ಯಕ್ಷ ಪಟ್ಟದಲ್ಲಿ ಕೂರಿಸಿದ್ದರಿಂದ ಹಲವರು ಅಸಮಾಧಾನಗೊಂಡಿದ್ದಾರೆ. ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕುತ್ತಿದ್ದಾರೆ. ಇನ್ನು ವಿಪಕ್ಷನಾಯಕನ ಆಯ್ಕೆಯೊಂದೇ ಬಾಕಿ ಉಳಿದಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯಕ್ಕೆ ತಣ್ಣಗಾಗಿದ್ದರೂ, ಬೂದಿ ಮುಚ್ಚಿದ ಕೆಂಡದಂತಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಇದರಿಂದ ಬಿರು ಬೇಸಿಗೆಗೆ ಬೇಸತ್ತಿದ್ದ ಜನರಿಗೆ ತಂಪೆರದಂತಾಗಿದೆ. ಇದರೊಂದಿಗೆ ದಿನದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ….
ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಆದಿಜಾಂಬವ ನಗರದಲ್ಲಿ ನಡೆದಿದೆ. ಶಾನೂರ್ ಅಲಿಯಾಸ್ ಸಂತೋಷ ಪೂಜಾರಿ(25) ಕೊಲೆಯಾದ ಯುವಕ. ಐದಾರು ಜನ ದುಷ್ಕರ್ಮಿಗಳಿಂದ ಯುವಕನ ಮೇಲೆ ಅಟ್ಯಾಕ್ ಮಾಡಿ ಹತ್ಯೆ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ಹಿನ್ನೆಲೆ ನಾಳೆ(ನ.13) ಬಿ.ವೈ.ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ಹೌದು, ನಾಳೆ ಎಸ್.ಎಂ.ಕೃಷ್ಣ ಮತ್ತು ಬಸವರಾಜ ಬೊಮ್ಮಾಯಿ ನಿವಾಸಗಳಿಗೆ ಭೇಟಿ ನೀಡಲಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಫೋಟೋ ಶೂಟ್ ವೇಳೆ ಯುವಕರ ನಡುವೆ ಜಗಳವಾಗಿ ಓರ್ವನನ್ನು ಹತ್ಯೆ ಮಾಡಲಾಗಿದೆ. ದೊಡ್ಡಬಳ್ಳಾಪುರದ ಕಚೇರಿಪಾಳ್ಯ ನಿವಾಸಿ ಸೂರ್ಯ(22) ಮೃತ ವ್ಯಕ್ತಿ. ದೀಪಾವಳಿ ಹಬ್ಬದ ಪ್ರಯುಕ್ತ ಡಾಬಾ ಮುಂದೆ ಸೀನರಿ ಹಾಕಿದ್ದರು. ಸೀನರಿ ಮುಂದೆ ಫೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ಅಪರಿಚಿತ ನಾಲ್ವರು ಯುವಕರಿಂದ ಸೂರ್ಯನ ಜತೆ ಕಿರಿಕ್, ಕ್ಯಾಮರಾ ಕಿತ್ತುಕೊಳ್ಳಲು ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ್ದಕ್ಕೆ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ಗೆ ಸಿಲುಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಬಳಿ ನಡೆದಿದೆ.
ಬಸ್‌ಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮಾಜಿ ಕೇಂದ್ರ ಸಚಿವ ದಿವಂಗತ ಆನಂತಕುಮಾರ್ 5 ನೇ ವರ್ಷದ ಪುಣ್ಯಸ್ಮರಣೆಯನ್ನು ಲಾಲ್ ಬಾಗ್ ವೇಸ್ಡ್ ಗೇಟ್ ಬಳಿ ಹಮ್ಮಿಕೊಳ್ಳಲಾಗಿದ್ದು, ಆನಂತ ಸ್ಮೃತಿ ನಡಿಗೆ ಕಾರ್ಯಕ್ರಮ ಅಡಿ ಗೌರವ ಸಲ್ಲಿಸಲಾಗಿದ್ದು, ಪಂಜಿನ ಮೆರವಣಿಗೆ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ತೇಜಸ್ವಿನಿ ಆನಂತಕುಮಾರ್, ಬಸವನಗುಡಿ ಶಾಸಕರಾದ ರವಿಸುಬ್ರಮಣ್ಯ, ಸಿಕೆ ರಾಮಮೂರ್ತಿ, ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಕಾರ್ತಕರ್ತರು ಆನಂತಕುಮಾರ್ ಅಭಿಮಾನಿಗಳು ಭಾಗಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲದಲ್ಲಿ ಪಟಾಕಿ ಖರೀದಿ ಮಾಡಲು ಜನ ಮುಗಿಬಿದ್ದಿದ್ದಾರೆ. ಹೌದು, ನೆಲಮಂಗಲ ಜೂನಿಯರ್ ಕಾಲೇಜ್ ಆಟದ ಮೈದಾನದಲ್ಲಿ ಖರೀದಿಗೆ ಅವಕಾಶ ನೀಡಲಾಗಿದ್ದು, ಪೊಲೀಸರ ಕಣ್ಗಾವಲಿನಲ್ಲೇ ಪಟಾಕಿ ಮಾರಟ ಮಾಡಲಾಗುತ್ತಿದೆ. ಹಠ ಹಿಡಿದ ಮಕ್ಕಳ ಜೊತೆ ಆಗಮಿಸಿ ಪೋಷಕರಿಂದ ಪಟಾಕಿಗಳನ್ನು ಖರೀದಿ ಮಾಡಲಾಗುತ್ತಿದೆ.
ಮಂಡ್ಯ: ದೀಪಾವಳಿ ಹಬ್ಬದಂದು ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರೆದಿದೆ. ಹೌದು, ರೈತ ಹಿತರಕ್ಷಣಾ ಸಮಿತಿ ವತಿಯಿಂದ ಕಳೆದ 69 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಿರಂತರ ಧರಣಿ ನಡೆಸಲಾಗುತ್ತಿದೆ. ಇಂದಿನ ಹೋರಾಟಕ್ಕೆ ವಿವಿಧ ಸಂಘಟನೆಗಳು ಸಾಥ್ ನೀಡಿದ್ದು, ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರ ‘ ವಿಜಯೇಂದ್ರ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಬದಲಾವಣೆ ಆಗಿದೆ. ನ.15 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಜಯೇಂದ್ರ ಪದಗ್ರಹಣ ಮಾತ್ರ ನಿಗದಿ ಮಾಡಲಾಗಿದ್ದು,
ನಂತರ ಅರಮನೆ ಮೈದಾನದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ. ಹೌದು, ಅಂದು ನಿಗದಿಯಾಗಿದ್ದ BJP ಕಾರ್ಯಕರ್ತರ ಸಮಾವೇಶವನ್ನು ನ.23ರ ನಂತರ ನಡೆಸಲು ನಿರ್ಧಾರಿಸಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಕರೆದು ದೊಡ್ಡ ಸಮಾವೇಶ ನಡೆಸಲು ಚಿಂತನೆ ಮಾಡಲಾಗಿದೆ.
ಮೈಸೂರು: ಟಂಟಂ ವಾಹನ ಪಲ್ಟಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ತಾಲೂಕಿನ ಮೇಗಳಾಪುರ ಗ್ರಾಮದ ಬಳಿ ನಡೆದಿದೆ. ದರ್ಶನ್ ಎಂಬುವರು ಸಾವನ್ನಪ್ಪಿದ್ದಾರೆ. ಉಳಿದ 10 ಯುವಕರಿಗೆ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟಂಟಂ ವಾಹನದಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನ ಪಲ್ಟಿಯಾಗಿದೆ. ಈ ಕುರಿತು ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಒಂದೇ ಠಾಣೆಯ 35ಕ್ಕೂ ಹೆಚ್ಚು ಸಿಬ್ಬಂದಿ ವರ್ಗಾವಣೆಗೆ ಮೊರೆ ಹೋದ ಘಟನೆ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ನಡೆದಿದೆ. ಹೌದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಹೌದು ಠಾಣೆಯ ಇನ್ಸ್‌ಪೆಕ್ಟರ್ ಗಿರೀಶ್‌ರಿಂದ ಬೇಸತ್ತು 12 ಎಎಸ್‌ಐ, 24 ಕಾನ್ಸ್‌ಟೇಬಲ್‌ಗಳಿಂದ ವರ್ಗಾವಣೆಗೆ ಮೊರೆ ಹೋಗಿದ್ದಾರೆ.
ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ, ಪಕ್ಷದಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ‘ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬುದರ ಹಿಂದೆ ಸಿಎಂ ಇದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಅಧೋಗತಿಗೆ ತಲುಪಿದೆ. ಬಿಜೆಪಿಯವರು ಸರ್ಕಾರವನ್ನು ಬೀಳಿಸುತ್ತಾರೆಂದು ಹೇಳುತ್ತಿದ್ದೀರಿ, ಆದರೆ, ಅಂತಹ ಯಾವುದೇ ಕಾರ್ಯಕ್ಕೆ ಬಿಜೆಪಿ ಕೈ ಹಾಕುವುದಿಲ್ಲ ಎಂದು ಹೇಳಿದರು.
ಹುಬ್ಬಳ್ಳಿ, ನ.12: ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದುಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಅವರು ‘ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಡ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ರಾಜಸ್ಥಾನದ ಚುನಾವಣೆಯ ಉಸ್ತುವಾರಿ ಇದ್ದೆ. ಈ ಹಿನ್ನಲೆ ಮೂರು ರಾಜ್ಯಗಳಲ್ಲಿ ಪೂರ್ತಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಬೆಂಗಳೂರು: ಸಾಲದಿಂದ ದೇಶ ದಿವಾಳಿಯಾಗಿದೆ ಎಂಬ ಸಿಎಂ ಹೇಳಿಕೆ ವಿಚಾರ ‘ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯಗೆ ಇಲ್ಲವೆಂದು ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ನನ್ನ 20 ತಿಂಗಳ ಅವಧಿಯಲ್ಲಿ 3,500 ಕೋಟಿ ಸಾಲ ಮಾಡಿದ್ದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ 2 ಲಕ್ಷ 45 ಸಾವಿರ ಕೋಟಿ ಸಾಲ ಮಾಡಿತ್ತು. ಈಗ 5 ಲಕ್ಷ 71 ಸಾವಿರ ಕೋಟಿಗೂ ಅಧಿಕ ಸಾಲ ಇದೆ. ನಿಮಗೆ ಪ್ರಧಾನಿ ಮೋದಿ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಿದ ಪೊಲೀಸ್ ಅಧಿಕಾರಿಗೆ, ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಅನಾವಶ್ಯಕ ತೊಂದರೆ ನೀಡುತ್ತಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಪ್ರಹ್ಲಾದ ಜೋಶಿ ಅವರು ಗರಂ ಆಗಿದ್ದಾರೆ.
ನೆಲಮಂಗಲ: ಚಲಿಸುತ್ತಿದ್ದBMTC ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯದ ಭಾರಿ ಅವಘಡ ತಪ್ಪಿದೆ. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ಈ ಘಟನೆ ನಡೆದಿದ್ದು,ಕೂಡಲೇ ಚಾಲಕ ಸೋಮಶೇಖರ್ ಎಂಬುವವರು ಬಸ್ಸಿನಲ್ಲಿದ್ದ ಸಿಲಿಂಡರ್ ಬಳಿಸಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು: ಗ್ಯಾರಂಟಿಗಳಿಗೆ ಮರುಳಾಗಬೇಡಿ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ‘ಕುಮಾರಸ್ವಾಮಿಗೂ ಗ್ಯಾರಂಟಿ ಯೋಜನೆಗಳಿಗೆ ಏನು ಸಂಬಂಧ, ನಮ್ಮ ಗ್ಯಾರಂಟಿಗಳ ಬಗ್ಗೆ ಅವರಿಗೆ ಏನು ಗೊತ್ತಿದೆ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಮೈಸೂರು: ಜೂನ್ ನಂತರ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಉಳಿಯಲ್ಲ. ಲಿಂಗಾಯತರು ಬಿಜೆಪಿ ಬಿಟ್ಟಿದ್ದಾರೆ ಅಂತ ಅಮಿತ್ ಶಾ ಮೋದಿ ಮಾಡಿರುವ ನಾಟಕ. ನಾಟಕದ ಸ್ಕ್ರೀಪ್ಟ್ ರಚನೆ ಮಾಡಿ ಅಧ್ಯಕ್ಷ ಸ್ಥಾನಕೊಟ್ಟಿದ್ದಾರೆ. ಜೂನ್ ನಂತರ ಬಿಜೆಪಿ ಅಧ್ಯಕ್ಷರಾಗಲು ಬಿಡಲ್ಲ. ಬಿವೈ ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ. ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡಲು ಆಡಿರುವ ನಾಟಕ. ನಾಟಕವನ್ನ ನಂಬಿ ಲಿಂಗಾಯತರು ಯಾಮಾರಬೇಡಿ ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ಯಾದಗಿರಿ: ಅಕಾಲಿಕ ಮಳೆಗೆ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಕಳೆದ 4 ದಿನಗಳಿಂದ ಸುರಿದ ಮಳೆಗೆ ನೂರಾರು ಎಕರೆ ಭತ್ತ ನೆಲಸಮವಾಗಿದೆ. ಬರಗಾಲದ ಮಧ್ಯೆಯೂ ರೈತರು ನದಿ ನೀರು ಬಳಸಿ ಭತ್ತ ಬೆಳೆದಿದ್ದರು. ನಾಲ್ಕೈದು ದಿನಗಳ ಬಳಿಕ ಭತ್ತ ಕಟಾವು ಮಾಡುತ್ತಿದ್ದರು. ಇದೀಗ ಬೆಳೆ ನಾಶವಾಗಿದ್ದು, ಇದೀಗ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚಿಗೆ ಹಣ ಕೊಡುತ್ತಾರೆ ಅವರು ಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಯಾರು ಕೊಡಲ್ಲಾ ಅವರು ಮಂತ್ರಿಗಳಾಗುವುದಿಲ್ಲ. ಹೆಚ್ಚು ಹಣ ಕೊಟ್ಟು ಅವರು ಅಧಿಕಾರದಲ್ಲಿ ಇರುತ್ತಾರೆ. ಯಾವುದೆ ಪವರ್ ಶೇರಿಂಗ್ ಇಲ್ಲ. ಯಾರು ಹಣ ಕೊಡುತ್ತಾರೆ ಅವರು ಅಧಿಕಾರದಲ್ಲಿ ಇರುತ್ತಾರೆ. ಈಗಾಗಲೇ ಹೈಕಮಾಂಡ್ ಇದನ್ನೇ ಹೇಳಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ 10 ಲಕ್ಷ ಮಹಿಳೆಯರಿಗೆ ಸಿಕ್ಕಿಲ್ಲ. ರಾಜ್ಯದಲ್ಲೇ ಲಕ್ಷಾಂತರ ಫಲಾನುಭವಿಗಳಿಗೆ ಹಣ ತಲುಪಿಲ್ಲ. ಈಗ ತೆಲಂಗಾಣದಲ್ಲಿ 4 ಸಾವಿರ ಹಣ ನೀಡುತ್ತೇವೆ ಎನ್ನುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಬೆಂಗಳೂರು: ರಾಜ್ಯದಲ್ಲಿ ಡುಪ್ಲಿಕೇಟ್ ಮುಖ್ಯಮಂತ್ರಿ ಇದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿ ನಗೆಪಾಟಲಿಗೀಡಾಗಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂವು ಮುಡಿಸಿದ್ದಾರೆ. ತೆಲಂಗಾಣದಲ್ಲಿ 2 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡೋದಾಗಿ ಹೇಳಿದ್ದಾರೆ. ಕರ್ನಾಟಕದಲ್ಲೇ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮೊದಲು ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ. ತೆಲಂಗಾಣದಲ್ಲಿ ಹೋಗಿ ಮತದಾರರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ಮಾಡಿದರು.
ತುಮಕೂರು: ಸಿದ್ಧಗಂಗಾ ಮಠಕ್ಕೆ ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ವಿಜಯೇಂದ್ರ ಅವರಿಗೆ ಯಲಹಂಕ ಶಾಸಕ ವಿಶ್ವನಾಥ್, ಸುರೇಶ್ ಗೌಡ, ಜ್ಯೋತಿ ಗಣೇಶ್, ಪ್ರೀತಂಗೌಡ ಸೇರಿ ಹಲವರು ಸಾಥ್ ನೀಡಿದರು. ಈ ವೇಳೆ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರ ಎಂದು ಘೋಷಣೆ ಕೂಗಿದರು.
ಬೆಂಗಳೂರು: ದೀಪಾವಳಿಗೆ ಹಿನ್ನೆಲೆಯಲ್ಲಿ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರಾಗಿದೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನಕೊಳ್ಳಲು ಜನರು ಮುಗಿಬಿದ್ದಾರೆ. ಹೀಗಾಗಿ ಕೆ ಆರ್ ಮಾರುಕಟ್ಟೆ ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಹಬ್ಬದ ಸಲುವಾಗಿ ಹಣ್ಣು, ಹೂವುಗಳ ಬೆಲೆ ಏರಿಕೆಯಾಗಿದೆ. ಮಾರು ಹೂವಿನ ಬೆಲೆ 50 ರೂ. ಆಗಿದೆ. ಇಂದು ನರಕ ಚತುರ್ದಶಿ, ಧನಲಕ್ಷ್ಮಿ ಪೂಜೆ , ಕೇದರೇಶ್ವರ ವೃತಕ್ಕೆ ಸಿದ್ಧತೆ ಹಿನ್ನೆಲೆಯಲ್ಲಿ ಗ್ರಾಹಕರು ಹೂ, ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಬೃಹತ್ ಹಾರ ಹಾಕಿ ಸವಾಗತಿಸಿದರು. ತುಮಕೂರಿಗೆ ತೆರಳುವ ಮಾರ್ಗ ಮಧ್ಯೆ ಕಾರ್ಯಕರ್ತರು ಸ್ವಾಗತಿಸಿದರು.
ಕೊಪ್ಪಳ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗಂಗಾವತಿ ಪಟ್ಟಣದ ಶ್ರೀರಾಮ ನಗರದಲ್ಲಿ ಪರವಾನಿಗೆ ಪಡೆಯದೆ ಪಟಾಕಿ ಮಾರಾಟ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲೇ ಬಿಂದಾಸ್ ಆಗಿ ಪಟಾಕಿ ಮಾರಟ ಮಾಡಲಾಗುತ್ತಿದೆ. ಪರವಾನಗಿ ಇಲ್ಲದೆ ವ್ಯಾಪಾರ ನಡಿತಾಯಿದ್ದರೂ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಡೋಂಟ್ ಕೇರ್ ಅಂದಿದ್ದಾರೆ.
ಬಾಗಲಕೋಟೆ: ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಬಾಗಲಕೋಟೆ ತಾಲ್ಲೂಕಿನ ಮುರನಾಳ ಗ್ರಾಮದ ಪತ್ತಾರ ಕುಟುಂಬದ ಮಕ್ಕಳು ಶನಿವಾರ ರಾತ್ರಿ ಮನೆ ಮುಂದೆ ಚಿಣ್ಣರು ಹಣತೆಯಲ್ಲಿ ದೀಪ ಹಚ್ಚಿ ಸಂಭ್ರಮಿಸಿದರು. ದೀಪ ಬೆಳಗಿ ದೀಪಾವಳಿ ಶುಭ ಕೋರಿದರು.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಇಂದು (ನ.12) ಬರ ಪರಿಶೀಲನೆ ನಡೆಸಲಿದೆ. ಜೆಡಿಎಸ್ ಮುಖಂಡರು ಹುಣಸೂರು ತಾಲೂಕಿನ ಬೆಟ್ಟದೂರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿಟಿ ದೇವೇಗೌಡ ನೇತೃತ್ವದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕರಾದ ಸಾ.ರಾ.ಮಹೇಶ್
ಅಶ್ವಿನ್ ಕುಮಾರ್ ಸೇರಿ ಹಲವು ನಾಯಕರು ಬರ ಪರಿಶೀಲನೆ ಮಾಡಲಿದ್ದಾರೆ.
ತಮಕೂರು: ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರಇಂದು (ನ.12) ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಬಳಿಕ ಸಿದ್ಧಗಂಗಾ ಸ್ವಾಮೀಜಿ ಆಶೀರ್ವಾದ ಪಡೆಯಲಿದ್ದಾರೆ. ನಂತರ ಮನೆದೇವರು ಎಡೆಯೂರು ಸಿದ್ದಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.
Published On - 7:41 am, Sun, 12 November 23