ರಾಜ್ಯದ ವಿವಿಧ ನಿಗಮಗಳಿಗೆ ಕೆಇಎ ವತಿಯಿಂದ ಎಫ್ಡಿಎ ಹುದ್ದೆಗಾಗಿ ಪರೀಕ್ಷೆ ನಡೆಯಿತು. ಈ ವೇಳೆ ಹುಬ್ಬಳ್ಳಿ ಘಂಟಿಕೇರಿ ಶಾಂತಿನಿಕೇತನ ಕಾಲೇಜು ಪರೀಕ್ಷಾ ಕೇಂದ್ರದ ಪರೀಕ್ಷಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. 20 ಅಭ್ಯರ್ಥಿಗಳಿಗೆ ಅರ್ಧ ಗಂಟೆ ಹೆಚ್ಚು ಕಾಲಾವಕಾಶ ನೀಡಿದ್ದಾರೆ ಅಂತ ಆರೋಪಿಸಿದ್ರು. ಪ್ರಶ್ನೆ ಮಾಡಿದ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಲಾಗಿದೆ. ಇನ್ನು ಮತ್ತೊಂದೆಡೆ ಕಲಬುರಗಿಯಲ್ಲಿ FDA ಹುದ್ದೆಗಳ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡಿದ ಆರೋಪದ ಮೇಲೆ 9 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಚಂದ್ರ ಗ್ರಹಣ ಅಂತ್ಯ ಹಿನ್ನೆಲೆ ರಾಜ್ಯದ ಎಲ್ಲಾ ದೇವಾಲಯಗಳನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 2 ವರ್ಷ ಕಳೆಯುತ್ತಿದೆ. ಆದರೆ ಕರುನಾಡಿನ ಜನರ ಮನದಲ್ಲಿ ಅಪ್ಪು ಇನ್ನೂ ಜೀವಂತವಾಗಿದ್ದಾರೆ. ಇದೀಗ 2ನೇ ವರ್ಷದ ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆಗೆ ಸಿದ್ಧತೆ ನಡೆಯುತ್ತಿದೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ದಾವಣಗೆರೆ: ದಾಂಡಿಯಾ ನೃತ್ಯ ಮಾಡುವ ಮೂಲಕ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಸಖತ್ ಸ್ಟೇಪ್ ಹಾಕಿದ್ದಾರೆ. ಭಾವಸಾರ ಕ್ಷತ್ರಿಯ ಸಮಾಜದಿಂದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಾಂಡಿಯಾಕ್ಕೆ ಹೆಜ್ಜೆ ಹಾಕಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆಯ ಯಶಸ್ಸು ಬಿಜೆಪಿಯವರ ನಿದ್ದೆಗೆಡಿಸಿರುವುದರಲ್ಲಿ ಎರಡು ಮಾತಿಲ್ಲ, ಶಕ್ತಿ ಯೋಜನೆಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಶಕ್ತಿ ಯೋಜನೆ ಇನ್ನೊಂದು ತಿಂಗಳಿಗೆ ನಿಲ್ಲಲಿದೆ ಎಂದು ಬಡಬಡಾಯಿಸುತ್ತಿರುವ ಬಿಜೆಪಿಯವರೇ, ಶಕ್ತಿ ಯೋಜನೆ ಅನುಷ್ಠಾನವೇ ಆಗುವುದಿಲ್ಲ, ಸಾರಿಗೆ ಸಂಸ್ಥೆಗಳು ದಿವಾಳಿಯಾಗಲಿವೆ ಎಂದು ಬೊಬ್ಬೆ ಇಡುತ್ತಿದ್ದವರು ಇಂದು ಈಗಾಗಲೇ ರೂ.2000 ಕೋಟಿ ವೆಚ್ಚವಾಗಿದೆ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಖಾಲಿಯಾಗುತ್ತಿದೆ ಎನ್ನುತ್ತಿದ್ದಾರೆ. ಬಜೆಟ್ ನಲ್ಲಿ ಮೀಸಲಿಟ್ಟಿರುವ ಹಣವನ್ನು ಹೆಚ್ಚಿಸಿ ಸಾರಿಗೆ ಸಂಸ್ಥೆಗಳಿಗೆ ಹಣ ನೀಡುವ ಜವಾಬ್ದಾರಿ ನಮ್ಮದಿದೆ ಎಂದಿದ್ದಾರೆ.
ಶಕ್ತಿ ಯೋಜನೆಯ ಯಶಸ್ಸು ಬಿಜೆಪಿಯವರ ನಿದ್ದೆಗೆಡಿಸಿರುವುದರಲ್ಲಿ ಎರಡು ಮಾತಿಲ್ಲ
ಶಕ್ತಿ ಯೋಜನೆಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು.
ಶಕ್ತಿ ಯೋಜನೆ ಇನ್ನೊಂದು ತಿಂಗಳಿಗೆ ನಿಲ್ಲಲಿದೆ ಎಂದು ಬಡಬಡಾಯಿಸುತ್ತಿರುವ ಬಿಜೆಪಿಯವರೇ..
ಶಕ್ತಿ ಯೋಜನೆ ಅನುಷ್ಠಾನವೇ ಆಗುವುದಿಲ್ಲ, ಸಾರಿಗೆ ಸಂಸ್ಥೆಗಳು ದಿವಾಳಿಯಾಗಲಿವೆ… https://t.co/hJskl7peiu
— Karnataka Congress (@INCKarnataka) October 29, 2023
ಯಾದಗಿರಿ: ಕೆಇಎ ಪರೀಕ್ಷೆ ವೇಳೆ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನ ಆರೋಪಿಗಳನ್ನು ಯಾದಗಿರಿ ಎಸ್ ಪಿ ಜಿ.ಸಂಗೀತ ಅವರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಏಳು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಡಿವೈಸ್ ಬಳಕೆ ಮಾಡಿ ಪರೀಕ್ಷೆ ಬರೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಅಧಿಕಾರಿಗಳ ಒಂದು ತಂಡ ಮಾಡಿ ಕಾರ್ಯ ಪ್ರವೃತರಾಗಿದ್ದೆವೆ. 9 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವೆ ಎಂದರು.
ಬೆಂಗಳೂರು: ರಾಜೋತ್ಸವ ಪ್ರಶಸ್ತಿ ಆಯ್ಕೆ ವಿಚಾರ ‘ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಂಡಗಿ ಭಾಗಿಯಾಗಿದ್ದಾರೆ.
ಮೈಸೂರು: ಕಬ್ಬಿಗೆ ಹೆಚ್ಚುವರಿ ದರ 10 ದಿನಗಳಲ್ಲಿ ಬೆಳೆಗಾರರಿಗೆ ಕೊಡಬೇಕು. ಇಲ್ಲದಿದ್ರೆ ಸಿಎಂ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. 220 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಬರಗಾಲದ ಸಂಕಷ್ಟದ ಸಮಯದಲ್ಲಿ ನೆರವು ಕಾರ್ಯ ಆರಂಭವಾಗಿಲ್ಲ. ಬೆಳೆ ನಷ್ಟ ಪರಿಹಾರ ನೀಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ನ.6, 7ರಂದು ರಾಷ್ಟ್ರೀಯ ರೈತ ಸಂಸತ್ ಅಧಿವೇಶನ ನಡೆಯಲಿದೆ.
ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕೆಂದು ಚರ್ಚಿಸಲಾಗುತ್ತೆ ಎಂದರು.
ಉಡುಪಿ: ಕಾಂಗ್ರೆಸ್ ಸರ್ಕಾರದಲ್ಲಿ ರಾಷ್ಟ್ರೀಯ ಚಿಂತಕರಿಗೆ ಕಿರುಕುಳ ಆರೋಪ ‘ರಾಜ್ಯದಲ್ಲಿ ನಾವು ಬಿಜೆಪಿಯವರನ್ನು ಕೇಳಿಕೊಂಡು ಆಡಳಿತ ಮಾಡ್ತಿಲ್ಲ ಎಂದು ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ರಾಜ್ಯದ ಹಿತದೃಷ್ಟಿಯಿಂದ ಒಳ್ಳೆ ಸಲಹೆ ಕೊಟ್ಟರೆ ಪರಿಗಣಿಸಬಹುದು. ಟೀಕೆ ಮಾಡುವುದು ಬಿಡಿ, ರಾಜ್ಯದ ಹಿತ ದೃಷ್ಟಿಯಿಂದ ಸಲಹೆ ಕೊಡಿ ಎಂದಿದ್ದಾರೆ.
ಉಡುಪಿ: ಕೇರಳದಲ್ಲಿ ಅವಳಿ ಬಾಂಬ್ ಸ್ಫೋಟದಲ್ಲಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿ ಭಾಗ ಹಾಗೂ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮವಾಗಿ ಗಮನ ಇರಿಸಲಾಗಿದೆ. ತೀವ್ರ ನಿಗಾ ಇರಿಸುವಂತೆ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಹುಬ್ಬಳ್ಳಿ: ವಿಜಯ ದಶಮಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ನಿಂದ ಪಥಸಂಚಲನ ಆರಂಭವಾಗಿದೆ. ನಗರದ ನೆಹರೂ ಮೈದಾನದಿಂದ ಆರಂಭವಾದ ಪಥಸಂಚಲನ ದುರ್ಗದ ಬೈಲ್ ಮಾರ್ಗವಾಗಿ ಮತ್ತೆ ನೆಹರೂ ಮೈದಾನಕ್ಕೆ ಸೇರಲಿದೆ. ಪಥ ಸಂಚಲನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ವಿವಿಧ ನಾಯಕರು ಭಾಗಿಯಾಗಿದ್ದಾರೆ.
ಧಾರವಾಡ: ಅಣ್ಣಿಗೇರಿ ತಾಲೂಕಿನ ಶೆಲವಡಿ ಗ್ರಾಮದಲ್ಲಿ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಜೋಶಿ ಅವರು ‘ 5 ಕೆಜಿ ಅಕ್ಕಿ ಮೋದಿ ಸಾಹೇಬ್ರು ಕೊಡ್ತೀದಾರೆ, ಹತ್ತು ಕೆಜಿ ಕೊಡ್ತೀನಿ ಅಂದವರು ಕೊಡ್ತಿಲ್ಲ. ದೇಶದಲ್ಲಿ ರಾಜ್ಯದಲ್ಲಿ ಕರೆಂಟ್ ಇದ್ರು ಕಟ್ ಮಾಡುತ್ತಿದ್ದಾರೆ. ಇವರು ಮಾಹಾ ಸುಳ್ಳರು ದಗಾಕೋರರು ಎಂದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಶೆಲವಡಿ ಗ್ರಾಮದಲ್ಲಿ ಬೃಹತ್ ಆರೋಗ್ಯ ಶಿಬಿರಕ್ಕೆ ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಿದರು. ಕ್ಷಮತಾ ಸೇವಾ ಸಂಘ, ಭಾರತೀಯ ವೈದ್ಯಕೀಯ ಸಂಘದ ಆಯೋಗದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರ ಇದಾಗಿದೆ. ಕಾರ್ಯಕ್ರಮದಲ್ಲಿ ಗುರುಶಾಂತೇಶ್ವರ ಸ್ವಾಮೀಜಿ,ವಿಧಾನ ಪರಿಷತ್ ಸದಸ್ಯ ಸಂಕನೂರ ಭಾಗಿಯಾಗಿದ್ದರು.
ಬಾಗಲಕೋಟೆ: ನಗರದಲ್ಲಿ ಆಕರ್ಷಕ ಆರ್.ಎಸ್ ಎಸ್ ಪಥಸಂಚಲನ 4 ಗಂಟೆಗೆ ಶುರುವಾಗಿದೆ. ಬಿವ್ಹಿವ್ಹಿ ಮೈದಾನದಿಂದ ಆರಂಭವಾದ ಪಥಸಂಚಲನ, ಬಸವೇಶ್ವರ ವೃತ್ತ, ಎಂಜಿ ರಸ್ತೆ ವಲ್ಲಭಭಾಯಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿದೆ.
ಪಥಸಂಚಲನದಲ್ಲಿ ಸಾವಿರಾರು ಗಣವೇಷಧಾರಿಗಳು ಭಾಗಿಯಾಗಿದ್ದಾರೆ. 5.30 ಕ್ಕೆ ಆರ್ ಎಸ್ ಎಸ್ ಸಹಪ್ರಾಂತ ಪ್ರಚಾರಕ ಶ್ರೀನಿವಾಸಜಿ ಅವರಿಂದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಮುಖ್ಯಭಾಷಣ ಏರ್ಪಡಿಸಲಾಗಿದೆ.
ಉತ್ತರ ಕನ್ನಡ: ಸಿಎಂ ಬದಲಾವಣೆ ವಿಚಾರ ‘ಮುಖ್ಯಮಂತ್ರಿ ಖುರ್ಚಿ ಭದ್ರವಾಗಿದೆ ಎಂದು ಅಂಕೋಲಾದಲ್ಲಿ ಮಾಜಿ ಸಚಿವ, ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಹೇಳಿದರು. ‘ಈಗಲೇ ಅಲ್ಲಿ ಇಲ್ಲಿ ಅಸಂಬದ್ಧ ಹೇಳಿಕೆ ಕೊಡುವುದನ್ನ ನಿಲ್ಲಿಸಿ. ರಾಜ್ಯದ ಏಳಿಗೆ, ಅಭಿವೃದ್ಧಿ ಬಯಸುವಂತೆ ಆರ್.ವಿ ದೇಶಪಾಂಡೆ ಕಿವಿಮಾತು ನೀಡಿದ್ದಾರೆ.
ಹಾವೇರಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರದ ಒಳಗೂ ಮತ್ತು ಹೊರಗು ನಾನು ಹೋರಾಟ ಮಾಡುತ್ತೆನೆ. ಬಿಜೆಪಿ ಸರ್ಕಾರ ಇದ್ದಾಗ ಬೇರೆ, ಈಗ ಬೇರೆ ಎಂದು ಏನ್ ಇಲ್ಲ. ಅಂದು ಇಂದು ನಾನು ಪಂಚಮಸಾಲಿ ಪರವಾಗಿದ್ದೆನೆ. ಇವತ್ತಿಗೂ ನಾನು ಪಂಚಮಸಾಲಿ ಹೋರಾಟದ ಪರವಾಗಿದ್ದೆನೆ ಎಂದರು.
ಬೆಂಗಳೂರು ಗ್ರಾಮಾಂತರ: ಬಿಸಿಲಿನ ನಡುವೆ ಮಳೆರಾಯನ ಆಗಮನವಾಗಿದೆ. ಹೌದು, ಜಿಲ್ಲೆಯ ದೇವನಹಳ್ಳಿ ಪಟ್ಟಣದ ಸುತ್ತಾಮುತ್ತ ಅಕಾಲಿಕ ಮಳೆಯಾಗಿದ್ದು, ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಇನ್ನು ಬಿಸಿಲಿನಿಂದ ಕಂಗೆಟ್ಟಿದ್ದವರಿಗೆ ಮಳೆರಾಯನ ಆಗಮನದಿಂದ ಸಂತಸವಾಗಿದೆ.
ಮಂಡ್ಯ: ಸಿಎಂ ಬದಲಾವಣೆ ಹಾಗೂ ದಲಿತರಿಗೆ ಸಿಎಂ ಪಟ್ಟ ವಿಚಾರ ‘ಚರ್ಚೆ ಅನಾವಶ್ಯಕ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ. ‘ಇನ್ನು ಸರ್ಕಾರ ಬಂದು ಆರು ತಿಂಗಳಾಗಿಲ್ಲ, ಅವರ ಪಾರ್ಟಿ ಇದೆ. ಅವರು ಏನೋ ಮಾಡ್ಕೋತ್ತಾರೆ, ನಾವು ಅದನ್ನು ಚರ್ಚೆ ಮಾಡೋದು ಬೇಡ ಎಂದರು.
ಹಾವೇರಿ: ಕಾಂಗ್ರೆಸ್ ಸರ್ಕಾರದಿಂದ ಪಂಚಮಸಾಲಿ ಮೀಸಲಾತಿಗೆ ವೇಗ ಸಿಗುತ್ತಿಲ್ಲ ಎಂದು ಜಿಲ್ಲೆಯ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಕುರುಬ ಸಮಾಜದ ಮೀಸಲಾತಿಗೆ ಸಿಎಂ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಕುಂಚಿಟಗರಿಗೆ ಮೀಸಲಾತಿ ನೀಡಲು ಮುಂದಾಗಿದ್ದಾರೆ. ಆದರೆ, ಪಂಚಮಸಾಲಿ ಮತ್ತು ಮರಾಠ ಸಮಾಜಕ್ಕೆ ಮೀಸಲಾತಿ ನೀಡ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು
ಹಾವೇರಿ: ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ. ‘ಈ ಬಾರಿಯ ಚುನಾವಣೆಯಲ್ಲಿ ನನ್ನ ಬಗ್ಗೆ ಎನೆನೋ ಮಾತಾಡಿದ್ರು, 5 ಸಾವಿರ ರೂಪಾಯಿ ಕೊಟ್ಟು ಮತ ಪಡಿಯುತ್ತಿನಿ ಎಂದು ಹೇಳಿದ್ದರು. ಅವರೆಲ್ಲರ ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳದೆ ಚುನಾವಣೆ ಎದುರಿಸಿದೆ. ಜನ ತಕ್ಕ ಉತ್ತರ ಕೊಟ್ಟು, ನನ್ನ ಗೆಲ್ಲಿಸಿದ್ರು. ಈಗ ಅದರ ಬಗ್ಗೆ ಹೆಚ್ಚಿಗೆ ನಾನು ಮಾತಾಡೊಕೆ ಹೋಗಲ್ಲ ಎಂದರು.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಅರಣ್ಯ ಇಲಾಖೆ ಬೋನಿಗೆ ಎರಡೂವರೆ ವರ್ಷದ ಹೆಣ್ಣು ಚಿರತೆ ಬಿದ್ದಿದೆ. ಹಲವು ದಿನಗಳಿಂದ ಸಾಕು ಪ್ರಾಣಿಗಳ ಬೇಟೆಯಾಡುತ್ತಿದ್ದ ಚಿರತೆ ಸೆರೆಯಾಗಿದೆ. ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಸುತ್ತಮುತ್ತಲಿನ ಗ್ರಾಮಸ್ಥರು.
ಊಟ ಸಿಗದಿದ್ರೂ ಪರವಾಗಿಲ್ಲ, ಜನರಿಗೆ ನ್ಯಾಯ ತುಂಬಾ ಅಗತ್ಯ. ಪೊಲೀಸರು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ಹಹಿಸಬೇಕು ಎಂದು ಮಂಗಳೂರಿನ ಪಿಲಿಕುಳದಲ್ಲಿ ನಡೆಯುತ್ತಿರುವ ಪೊಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಹೇಳಿದರು. ಪೊಲೀಸ್ ಇಲಾಖೆಯಲ್ಲಿ ಶೇ.90ರಷ್ಟು ಒಳ್ಳೆಯ ಪೊಲೀಸರಿದ್ದಾರೆ. ಶೇಕಡಾ 10ರಷ್ಟು ಮಾತ್ರ ಕೆಟ್ಟ ಪೊಲೀಸರಿದ್ದಾರೆ. ಅಂತಹ ಸಿಬ್ಬಂದಿಯಿಂದ ಒಳ್ಳೆಯ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.
ಬರಗಾಲ ಹಾಗೂ ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ನಂದಗೇರಿ ಗ್ರಾಮದಲ್ಲಿ ನಡೆದಿದೆ. ನಂದಗೇರಿ ಗ್ರಾಮದ ಸಿದ್ದನಗೌಡ ಬಿರಾದಾರ್(32) ಆತ್ಮಹತ್ಯಗೆ ಶರಣಾದ ರೈತ. ಖಾಸಗಿ ವ್ಯಕ್ತಿಗಳ ಬಳಿ 6ಲಕ್ಷ ರೂಪಾಯಿ ಸಾಲ ಮಾಡಿದ್ದ ಸಿದ್ದನಗೌಡ ಮಾಡಿದ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ನೀಟ್ ಪರೀಕ್ಷೆ ಮೋದಿ ಮಾಡಿರುವ ಕಾರಣಕ್ಕೆ ವಿರೋಧಿಸುತ್ತಾರೆ. ಮೋದಿ ಏನು ಮಾಡಿದ್ರು ವಿರೋಧಿಸುವ ಮಾನಸಿಕತೆ ಅವರಿಗಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಮಹದಾಯಿ ಹಿಡಿದು ಎಲ್ಲ ವಿಷಯದಲ್ಲಿ ಕಾಂಗ್ರೆಸ್ನಿಂದ ಅನ್ಯಾಯ ಆಗಿದೆ. ಸೋನಿಯಾ ಗಾಂಧಿ ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಅಂದಿದ್ರು. ರಾಜ್ಯದಲ್ಲಿ ಯಾವುದೋ ಕಾರಣಕ್ಕೆ ಜನ ನಮ್ಮನ್ನು ಸೋಲಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿರಬಹುದು. ರಾಷ್ಟ್ರಮಟ್ಟದಲ್ಲಿ ನಿಮಗೆ ನಾಯಕತ್ವ ಇಲ್ಲ. ಮೂರನೇ ಬಾರಿಯೂ ಕಾಂಗ್ರೆಸ್ ಪಕ್ಷದ ಸ್ಥಿತಿ ಹಾಗೇ ಆಗಲಿದೆ ಎಂದರು
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ತಂಬಾಕು ಮಂಡಳಿಯ ಅಧಿಕಾರಿಯಿಂದ ರೈತನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ರೈತನ ಮೇಲೆ ಶೂನಿಂದ ಹಲ್ಲೆಗೆ ಯತ್ನಿಸಲಾಗಿದೆ. ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರೈತ ಕೃಷ್ಣಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ. ಪ್ಲಾಟ್‌ಫಾತಂ 62ನೇ ಅಧೀಕ್ಷಕ ಬ್ರಿಜ್ ಭೂಷಣ್ ಎಂಬುವರಿಂದ ಹಲ್ಲೆ ನಡೆದಿದೆ.
ನಟ ಪುನೀತ್ ರಾಜ್ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಪುನೀತ್ ರಾಜ್ಕುಮಾರ್ ಸಮಾಧಿಗೆ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ಮಕ್ಕಳಿಂದ ಪುನೀತ್ ಸಮಾಧಿಗೆ ನಮನ. ರಾಘವೇಂದ್ರ ರಾಜ್ಕುಮಾರ್, ಪುತ್ರ ಯುವರಾಜ್ಕುಮಾರ್, ಅಕ್ಕ ಪೂರ್ಣಿಮಾ, ಮಗಳು ಧನ್ಯಾ ರಾಮ್ಕುಮಾರ್ರಿಂದ ನಮನ ಸಲ್ಲಿಸಲಾಯಿತು. ಪುನೀತ್ಗೆ ಇಷ್ಟವಾಗಿದ್ದ ಆಹಾರ ಪದಾರ್ಥ ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದೆ. ವೀಣಾ ಎಂಬುವವರು ಬಿಎಂಟಿಸಿ ಬಸ್ಗೆ ಬಲಿಯಾಗಿದ್ದಾರೆ. ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯ ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ ರಸ್ತೆ ದಾಟುವಾಗ ಮಹಿಳೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ವೀಣಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ರಾಮಲಿಂಗಾಪುರ ಗ್ರಾಮದ ಬಳಿ ಕಾರು ಕೆರೆಗೆ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ನಿಯಂತ್ರಣ ಕಳೆದುಕೊಂಡು ಕೆರೆಗೆ ಕಾರು ಬಿದ್ದು ಘಟನೆ ಸಂಭವಿಸಿದೆ. ಮಾವ, ಅತ್ತೆ, ಪತ್ನಿ ಮೃತಪಟ್ಟಿದ್ದು, ಗಂಡ ಪ್ರವೀಣ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪ್ರವೀಣ್ ಪತ್ನಿ ಯಮುನಾ, ಮಾವ ದೊಡ್ಡಣ್ಣ, ಅತ್ತೆ ಸಣ್ಣಮ್ಮ ಸಾವು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಧ್ವಜ ಸ್ತಂಭ ನೆಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟಿದ್ದಾರೆ. ರಾಜ್ಯೋತ್ಸವದ ಹಿನ್ನೆಲೆ ಬಸ್ ನಿಲ್ದಾಣದ ಮುಂದೆ ಧ್ವಜಸ್ಥಂಬ ನೆಡುವ ವೇಳೆ ದುರ್ಘಟನೆ ಸಂಭವಿಸಿದೆ. ಪ್ರಜ್ವಲ್ ಚನ್ನಗೌಡ ಮುನೇಪ್ಪನವರ(18) ಮೃತ ದುರ್ದೈವಿ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದು ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ ಆಚರಿಸಲು ಎಂಇಎಸ್ ನಿರ್ಧಾರ ಮಾಡಿದೆ. ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಪ್ರತಿನಿಧಿ ಕಳಿಸೋದಾಗಿ ಸಿಎಂ ಶಿಂಧೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಎರಡು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿಎಸ್ಎಫ್ ಸಿಬ್ಬಂದಿ ಸುಧಾಕರ್, ಯುಟ್ಯೂಬರ್ ಗಣಿ ಸಾವು. ಕೆಲಸ ಮುಗಿಸಿ BSF ಕಾಂಪೌಂಡ್ನಿಂದ ಸುಧಾಕರ್ ಅವರು ಹೊರ ಬರುತ್ತಿದ್ದರು. ಈ ವೇಳೆ ಸುಧಾಕರ್ ಬೈಕ್ಗೆ ಮತ್ತೊಬ್ಬ ಬುಲೆಟ್ ಸವಾರ ಡಿಕ್ಕಿಹೊಡೆದಿದ್ದಾನೆ.
ಬುಲೆಟ್ ಸವಾರನ ಡಿಕ್ಕಿಯಿಂದಾಗಿ ಸವಾರ ಸುಧಾಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ಸವಾರ ಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Published On - 8:09 am, Sun, 29 October 23