ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಹಿಂಗಾರು ಕೈ ಹಿಡಿಯುವ ಆಶಾಭಾವನೆ ಮೂಡಿದೆ. ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ (ನ.06) ಸಂಜೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಅಂಡರ್ಪಾಸ್ಗಳಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಭಾರಿ ಮಳೆಯಾಗುತ್ತಿದ್ದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಬಿಬಿಎಂಪಿಯ ವಾರ್ ರೂಂಗೆ ಧಿಡೀರನೆ ಭೇಟಿ ನೀಡಿದ್ದರು. ಇನ್ನು ರಾಜ್ಯ ರಾಜಕಾಣರದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಬರ ಅಧ್ಯಯನ ಕೈಗೊಂಡಿದ್ದಾರೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣ ಅಪ್ಡೇಟ್ಸ್ ಇಲ್ಲಿದೆ…
ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿ ಪ್ರಕರಣದಲ್ಲಿ ಐವರು ಜಲಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ನಡೆದಿದೆ. ಕೃಷ್ಣಪ್ಪ, ಚಂದ್ರಪ್ಪ(61), ಧನಂಜಯ್ಯ(55), ಬಾಬು, ಜಯಣ್ಣ ಮೃತ ರ್ದುದೈವಿಗಳು. ಮೃತರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೈದಾಳ ನಿವಾಸಿಗಳಾಗಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಚಂದ್ರಪ್ಪಗೆ ಸೇರಿದ ಕಾರು ಇದಾಗಿದೆ. ಮೈಸೂರಿನಿಂದ ತಿಪಟೂರಿಗೆ ಹಿಂದಿರುಗುವಾಗ ಈ ದುರಂತ ನಡೆದಿದೆ.
ಮೈಸೂರು: ಚಾಮುಂಡಿ ಬೆಟ್ಟಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ್ದು, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಇನ್ನು ಯತ್ನಾಳ್‌ಗೆ ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.
ಹಾಸನ: ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ವೈದ್ಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಹಾಸನ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯಲ್ಲಿ ವೈದ್ಯರ ಹುದ್ದೆ ಖಾಲಿ ಕುರಿತು ಪ್ರಶ್ನೆಗೆ ಉತ್ತರಿಸದ ಸಿಎಂ ‘ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಭರ್ತಿಗೆ ಮಾಡಿಕೊಳ್ಳುವುದಾಗಿ ಹೇಳಿದರು. ಜೊತೆಗೆ ಬಹಳ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ, ಯಾವುದೇ ಅಧಿಕಾರಿಗಳು ಕೂಡ ತಮ್ಮ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದರು.
ಬೆಂಗಳೂರು: ರಾಜಾಧಾನಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಿವಾನಂದ್ ಸರ್ಕಲ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಒಂದು ಗಂಟೆಯಿಂದ ಬರೊಬ್ಬರಿ ಎರಡು ಕಿಲೋಮೀಟರ್ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ.
ಹಾಸನ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕಾಫಿ ಬೆಳೆಗಾರರಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಹೌದು, ಪೆಂಡಿಂಗ್ ವಿದ್ಯುತ್ ಬಿಲ್ ದರದ ಅಸಲು ಕಟ್ಟಿದರೆ, ಬಡ್ಡಿ ಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಕಾಫಿ ಬೆಳೆಗಾರರಿಗೆ ನೀಡಿರುವ ವಿದ್ಯುತ್ ಬಿಲ್ ಬಡ್ಡಿ ಅಥವಾ ಅಸಲು ಮನ್ನಾ ಮಾಡಲು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದ್ದರು. ಜೊತೆಗೆ ಕಾಫಿ ತೋಟದ ಬಿಲ್ ಪೆಂಡಿಂಗ್ಗೆ ಮನೆಯ ಕರೆಂಟ್ ಕಟ್ ಮಾಡಿದ್ದಾರೆ ಎಂದಿದ್ದರು. ಈ ಹಿನ್ನಲೆ ಮನೆಯ ಕರೆಂಟ್ ಕಟ್ ಮಾಡದಿರಲು ಸೂಚನೆ ನೀಡಿದ್ದಾರೆ.
ಮಂಡ್ಯ: ಜಿಲ್ಲೆಯ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಈಗಾಗಲೇ ನಾಲೆಗೆ ಬಿದ್ದಿದ್ದ ಸ್ವಿಫ್ಟ್ ಕಾರನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಹೌದು, ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮದ ಬಳಿ ಈ ದುರಂತ ನಡೆದಿದ್ದು, ವಿಸಿ ನಾಲೆಯಿಂದ ಕಾರು ಹೊರ ತೆಗೆಯಲು ಕಾರ್ಯಾಚರಣೆ ಶುರುವಾಗಿದೆ. ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗ: ಬಿಸಿಯೂಟ, ಪೌಷ್ಟಿಕ ಆಹಾರ ನೀಡದಿದ್ದಕ್ಕೆ ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಹಾಸನ: ಜಿಲ್ಲೆಯಲ್ಲಿ 44 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ, ಈ ಬಗ್ಗೆ ಡಿಸಿ, ಜಿ.ಪಂ. ಸಿಇಒ ಪರಿಶೀಲನೆ ಮಾಡಬೇಕುಬ ಎಂದು ಸಿಎಂ ಸಿದ್ದರಾಮಯ್ಯ ಅವರು ಹಾಸನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು. ಸರ್ಕಾರ ಹಣ ಕೊಡಲು ತಯಾರಿರುವಾಗ ನೀವು ಅದನ್ನು ಗಮನಿಸಬೇಕು. ಗೃಹಜ್ಯೋತಿ ಯೋಜನೆಗೂ 63 ಸಾವಿರ ಗ್ರಾಹಕರ ನೋಂದಣಿ ಆಗಬೇಕು. ಎಲ್ಲವನ್ನೂ ಗಮನಿಸಿ ಅವರು ಅರ್ಹರಿದ್ದರೆ ಮಾಡಿ ಇಲ್ಲವಾದರೆ ಕೈಬಿಡಿ ಎಂದರು.
ಕಲಬುರಗಿ: ಪರೀಕ್ಷಾ ಅಕ್ರಮಗಳ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೌದು, ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ‘3 ಕೇಸ್‌ಗಳಲ್ಲೂ ಆರ್.ಡಿ.ಪಾಟೀಲ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಹಾಸನ: ಜೆಡಿಎಸ್ನ ಎಲ್ಲಾ ಶಾಸಕರು ಒಟ್ಟಾಗಿದ್ದೇವೆ, ಕಾಂಗ್ರೆಸ್ನ ಆಪರೇಷನ್ ಹಸ್ತ ಯಾವುದೇ ಫಲ ಕೊಡುವುದಿಲ್ಲ ಎಂದು ಹಾಸನದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಬರದ ವಿಚಾರವನ್ನು ಡೈವರ್ಟ್ ಮಾಡಲು ಈ ರೀತಿಯಾದ ಹೇಳುತ್ತಿದ್ದಾರೆ. ಬರದಿಂದ ಜನ ಕಂಗಾಲಾಗಿದ್ದಾರೆ, ಆ ಬಗ್ಗೆ ಕಾಂಗ್ರೆಸ್ಗೆ ಚಿಂತೆ ಇಲ್ಲ ಎಂದರು.
ಕೊಪ್ಪಳ: ಸಿದ್ದರಾಮಯ್ಯ ಲೂಟಿಕೋರ, ಅವರನ್ನು ನನಗೆ ಹೋಲಿಸಬೇಡಿ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಕೆ.ಎಸ್.ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಸಿದ್ದರಾಮಯ್ಯ ಮಂಗ ಹಾರಿದಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಮತ್ತೊಂದು ಪಾರ್ಟಿಗೆ ಹಾರಿ ಹೋಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಈಶ್ವರಪ್ಪ ಮಂಗನಿಗೆ ಹೋಲಿಸಿದ್ದಾರೆ.
ಹಾಸನ: ಇಂದು ಸಿಎಂ ಸಿದ್ದರಾಮಯ್ಯ ಅವರು ನಗರದ ಹೊಯ್ಸಳ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೋಂಡಿದ್ದಾರೆ. ಈ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ‘ ಸಿದ್ದರಾಮಯ್ಯ ಅವರನ್ನ ನಾಸ್ತಿಕರು ಅಂತಾರೆ, ರೇವಣ್ಣ ಅವರನ್ನು ದೊಡ್ಡ ಆಸ್ತಿಕರು ಎನ್ನುತ್ತಾರೆ.
ಆದರೆ, ಆಸ್ತಿಕರು ನಾಸ್ತಿಕರ ನಡುವೆ ಸಮನ್ಚಯ ಕಾಪಾಡುವಂತಾ ಬುದ್ದಿವಂತಿಕೆ ಇರುವುದು ಸಿಎಂ ಸಿದ್ದರಾಮಯ್ಯನವರಿಗೆ ಮಾತ್ರ ಎಂದರು.
ಕೊಪ್ಪಳ: ನಾನು ಹುಟ್ಟಿ ಬೆಳೆದಾಗಿನಿಂದ ಇಂತಹ ಭೀಕರ ಬರಗಾಲ ನೋಡಿರಲಿಲ್ಲ ಎಂದು ಜಿಲ್ಲೆಯ ಕುಷ್ಟಗಿಯಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದರು. ‘ಈ ಸರ್ಕಾರದ ಒಬ್ಪ ಮಂತ್ರಿಯೂ ರೈತರ ಗೋಳು ಕೇಳಿಲ್ಲ, ಎಲ್ಲಿಯೂ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು ಎಲ್ಲಾ ಕೆಲಸ ನಿಲ್ಲಿಸಬೇಕು. ಮೊದಲು ರೈತರ ಬಳಿ ಹೋಗಿ ಅವರಿಗೆ ಸಾಂತ್ವಾನ ಹೇಳುವ ಕೆಲಸ ಮಾಡಲಿ. ನಾನು ಅಮಿತ್ ಶಾ ಮತ್ತು ನಡ್ಡಾರನ್ನು ಭೇಟಿ ಮಾಡಿದ್ದೇನೆ. ರಾಜ್ಯಕ್ಕೆ ಪರಿಹಾರ ನೀಡಬೇಕು ಎಂದು ಕೇಳಿದ್ದೆೇನೆ ಎಂದರು.
ತುಮಕೂರು: ಸರ್ಕಾರ 5 ಗ್ಯಾರಂಟಿ ಯೋಜನೆ ಕೊಟ್ಟು ರಾಜ್ಯ ದಿವಾಳಿಯಾಗಿದೆ ಎಂದು ಜಿಲ್ಲೆಯ ಮಧುಗಿರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ‘ಗ್ಯಾರಂಟಿ ಯೋಜನೆಗಳಲ್ಲೂ ಮಹಿಳೆಯರಿಗೆ ಮೋಸ ಆಗಿದೆ. ಬರ ಹಿನ್ನೆಲೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೊರಟಗೆರೆ ಹಾಗೂ ಮಧುಗಿರಿಯಲ್ಲಿ ಬರ ಪರಿಶೀಲನೆ ಮಾಡಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಸರ್ಕಾರ ನಿಲ್ಲಿಸಿದೆ.
ಇಲ್ಲಿನ ಸ್ಥಿತಿಗತಿಯನ್ನು ಪ್ರಧಾನಿ ಮೋದಿಗೆ ಮನವರಿಕೆ ಮಾಡಿಸುತ್ತೇವೆ ಎಂದರು.
ಹಾಸನ: ಅಸಮಾನತೆಯನ್ನು ಹೋಗಲಾಡಿಸಲು ಕಾಂಗ್ರೆಸ್ ಪ್ರಯತ್ನ ಮಾಡಿದೆ ಎಂದು ಹಾಸನದ ಎಸ್ಎಂಕೆ ನಗರದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಎಲ್ಲರಿಗೂ ಆರ್ಥಿಕ ಸಮಾನತೆ ಬಂದರೆ ಜಾತಿ ಅಸಮಾನತೆ ಹೋಗುತ್ತೆ. ಎಲ್ಲಾ ಜಾತಿಯ ಬಡವರನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಜಾರಿ ಮಾಡಲಾಗಿದೆ ಎಂದರು.
ಹಾಸನ: ಸಂಜೆ 6 ಗಂಟೆಗೆ ಹೆಚ್ಡಿಕೆ ನೇತೃತ್ವದಲ್ಲಿ JDS ಶಾಸಕಾಂಗ ಪಕ್ಷದ ಸಭೆಯನ್ನು ಹಾಸನ(Hassan)ದ ಖಾಸಗಿ ರೆಸಾರ್ಟ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ನಡೆಯುವ ಸಭೆ ಇದಾಗಿದ್ದು, ಶಾಸಕರ ಜೊತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಚರ್ಚಿಸಲಿದ್ದಾರೆ. ಈ ಹಿನ್ನಲೆ ಈಗಾಗಲೇ ಕುಮಾರಸ್ವಾಮಿ ಅವರು ರೆಸಾರ್ಟ್ಗೆ ಆಗಮಿಸಿದ್ದಾರೆ.
ಹಾಸನ: ಸ್ವಾಗತ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಗರಂ ಆದ ಘಟನೆ ನಡೆದಿದೆ. ಹೌದು, ಕಾರ್ಯಕ್ರಮಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಇನ್ನಿತರ ಶಾಸಕರುಗಳು ಗೈರಾಗಿದ್ದರು. ಈ ವೇಳೆ ಅವರ ಅನುಪಸ್ಥಿತಿಯಲ್ಲೂ ಅವರಿಗೆ ಸ್ವಾಗತ ಎಂದು ನಿರೂಪಕ ಹೇಳಿದ್ದ.
ಈ ಹಿನ್ನಲೆ ಇಲ್ಲಿ ಹಾಜರಿರುವವರಿಗೆ ಸ್ವಾಗತ ಕೋರು ಎಂದು ಸಿಎಂ ಗರಂ ಆಗಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಯಾತ್ರಾಸ್ಥಳ ಮುರುಗಮಲ್ಲದಲ್ಲಿ ಮಗುವೊಂದು ಕಿಡ್ನ್ಯಾಪ್ ಆಗಿತ್ತು. ಈ ಕುರಿತು ಟಿವಿ9 ವರದಿ ಮಾಡಿದ್ದ ಬೆನ್ನಲ್ಲೇ ಇದೀಗ ಮಗು ಪತ್ತೆಯಾಗಿದೆಯೆಂದು ಮಗುವಿನ ತಂದೆ ಜಬಿವುಲ್ಲಾ ಮಾಹಿತಿ ನೀಡಿದ್ದು, ಟಿವಿ9 ಗೆ ಧನ್ಯವಾದ ತಿಳಿಸಿದ್ದಾರೆ.
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಿದ್ಧ ಹಾಸನಾಂಬೆ ದರ್ಶನ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಕೆಎನ್ ರಾಜಣ್ಣ, ಶಾಸಕ ಶಿವಲಿಂಗೇಗೌಡ ಸಾಥ್ ನೀಡಿದರು. ಹಾಸನಾಂಬೆ ದರ್ಶನದ ಬಳಿಕ ಸಿಎಂ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ.
ಬೆಳಗಾವಿ: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಅಧಿಕೃತ ದಿನಾಂಕವನ್ನ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಅನೌಪಚಾರಿಕವಾಗಿ ಡಿಸೆಂಬರ್ 4 ರಿಂದ ಅಧಿವೇಶನ ನಡೆಯಲಿದೆ. ಆದರೆ ಸರ್ಕಾರದಿಂದ ಈವರೆಗೂ ಅಧಿಕೃತವಾಗಿ ದಿನಾಂಕ ನಮಗೆ ತಿಳಿಸಿಲ್ಲ. ಅಧಿವೇಶನ ಅರ್ಥಪೂರ್ಣ ಆಗಬೇಕು ಅಂದರೇ ಪ್ರತಿಭಟನೆ ಕಡಿಮೆ ಆಗಬೇಕು. ನಮ್ಮ ಶಾಸಕರಲ್ಲಿ ಬೆಳಗಾವಿ ಅಧಿವೇಶನ ಅಂದರೇ ಪ್ರತಿಭಟನೆ ಅಂತಾ ಆಗಿದೆ. ಹೀಗಾಗಿ ಪ್ರತಿಭಟನೆಗಳು ಕಡಿಮೆ ಆಗಬೇಕು. ಹೀಗಾಗಿ ರೈತರ ಸಮಸ್ಯೆ ನಿವಾರಿಸುವಂತೆ ಸಂಬಂಧಿಸಿದ ಸಚಿವರಿಗೆ ಹೇಳುತ್ತೇವೆ ಎಂದು ಸುವರ್ಣವಿಧಾನಸೌಧಲ್ಲಿ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಹೇಳಿದರು.
ವಿಜಯಪುರ: ನನ್ನ ಕ್ಷೇತ್ರದ ಗ್ರಾಮಗಳಿಗೆ ನೀರು ಬಿಡದಿದ್ದರೆ ರಾಜೀನಾಮೆ ನೀಡುವೆ ಎಂದು ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಜಿಲ್ಲೆಯ ಒಂದಷ್ಟು ಸಮಸ್ಯೆ ಇದೆ, ಬಗೆಹರಿಸಿಕೊಳ್ಳುತ್ತೇವೆ. ರಾಜಕೀಯವಾಗಿ ಎಲ್ಲಾ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಬೆಳಗಾವಿಯಲ್ಲಿ ಸಮಸ್ಯೆ ಇತ್ತು. ಈಗಲೂ ಸಮಸ್ಯೆ ಇದ್ದೇ ಇದೆ ಎಂದು
ಲೋಕೋಪಯೋಗಿ ಸಚಿವ ಸತೀಶ್ ಹೇಳಿದರು.
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಂದ ಬರ ಅಧ್ಯಯನ ಪ್ರವಾಸ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಕೇಂದ್ರವೇ ಅಧ್ಯಯನ ಮಾಡಿದೆ, ಇವರೇನು ಅಧ್ಯಯನ ಮಾಡುತ್ತಾರೆ? ನಾವು ಕೂಡ ಬರ ಅಧ್ಯಯನ ಮಾಡಿದ್ದೀವಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಕೇಂದ್ರ ತಂಡ ಅಧ್ಯಯನ ಮಾಡಿ ಹೋಗಿದೆ, ಆದರೆ ವರದಿ ನೀಡಿಲ್ಲ. ಮೊದಲು ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಅನುದಾನ ಕೊಡಿಸಲಿ. ಬರ ಅಧ್ಯಯನ ಮಾಡಬಾರದು ಅಂತಾ ನಾವು ಹೇಳಲು ಹೋಗಲ್ಲ. ಕೇಂದ್ರ ಸರ್ಕಾರದ ಬಳಿ 17,900 ಕೋಟಿ ರೂ. ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ, ಅದನ್ನ ಮೊದಲು ಕೊಡಿಸಲಿ. ಬಿಜೆಪಿಯ 25 ಸಂಸದರಿದ್ದಾರಲ್ಲ ಚರ್ಚಿಸಿ ಅನುದಾನ ಕೊಡಿಸಲಿ. ನಮ್ಮ ಸಚಿವರ ಭೇಟಿಗೆ ಕೇಂದ್ರ ಸರ್ಕಾರ ಸಮಯವನ್ನೇ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಬೆಂಗಳೂರು: ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬರ ಅಧ್ಯಯನ ನಡೆಸಿದ್ದು ಕೇಂದ್ರ ಸರ್ಕಾರದ ತಂಡ. ವೈಜ್ಞಾನಿಕವಾಗಿ ಮಾಡಿಲ್ಲವೆಂದು ಕೇಂದ್ರ ಸರ್ಕಾರವನ್ನೇ ಬೈಯ್ಯಲಿ ಎಂದು ಹೇಳಿದರು.
ಬೆಂಗಳೂರು: ಕೆಇಎ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ನಾಪತ್ತೆ ವಿಚಾರ ವಿಚಾರ ಏನು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆರ್.ಡಿ.ಪಾಟೀಲ್ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಂಗಳೂರು: ಸರ್ಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ. ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರ್ಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು. ಈಗ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ. ನಮ್ಮೆಲ್ಲಾ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಬೆಳಗಾವಿ: ಚಳಿಗಾಲ ಅಧಿವೇಶನ ದಿನಾಂಕ ಇಂದು (ನ.07) ಘೋಷಣೆಯಾಗಲಿದೆ. ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ತೆರಳಲಿದ್ದಾರೆ. ಇಬ್ಬರು ಸಭಾಪತಿಗಳು ಸಭೆ ನಡೆಸಿ ನಂತರ ದಿನಾಂಕ ಘೋಷಣೆ ಮಾಡಲಿದ್ದಾರೆ. ಚಳಿಗಾಲದ ಹಿನ್ನೆಲೆ ಸುವರ್ಣ ವಿಧಾನಸೌಧದ ಉಭಯ ಸದನಗಳನ್ನು, ಸಚಿವಾಲಯದ ಕಚೇರಿಗಳನ್ನು ಪರಿಶೀಲನೆ ಮಾಡಲಿದ್ದಾರೆ. ಬಳಿಕ ಡಿಸಿ ನಿತೇಶ್ ಪಾಟೀಲ್ ನೇತೃತ್ವದ 10 ಕಮಿಟಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮೈಕ್, ಲೈಟಿಂಗ್, ನೀರು, ಊಟ, ವಸತಿ, ವಾಹನ, ಪೊಲೀಸ್ ಭದ್ರತೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸುವರ್ಣ ಸೌಧದಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ.
ಬೆಂಗಳೂರು: ನಗರದಲ್ಲಿ ತಡರಾತ್ರಿ ಸುರಿದ ಮಳೆಯಿಂದ ಸಹಕಾರ ನಗರದ ಜೆ.ಬ್ಲಾಕ್ನ ಮನೆಗಳಿಗೆ ನೀರು ನುಗ್ಗಿದೆ. ಸಹಕಾರ ನಗರದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಹಕಾರ ನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಪರ ಸಚಿವ ಸಂತೋಷ್ ಲಾಡ್ ಬ್ಯಾಟ್ ಬೀಸಿದ್ದಾರೆ. ಸಂತೋಷ್ ಲಾಡ್ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದು, ಶಾಸಕ ಕೋನರೆಡ್ಡಿ ಜೊತೆ ಚರ್ಚೆ ವೇಳೆ ನಾನು ಜಿ ಪರಮೇಶ್ವರ ಕಡೆಯವರು ಎಂದಿದ್ದಾರೆ. ನೀವು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾವು ಹೋಮ್ ಮಿನಿಸ್ಟರ್ ಕಡೆಯವರು ಎಂದು ಎರಡು ಬಾರಿ ಉಚ್ಛರಿಸಿದರು. ಇದೇ ವೇಳೆ ನಾನು ಸಿಎಂ ಶಾಸಕ ಎಂದು ಕೋನರೆಡ್ಡಿ ಕಿಚಾಯಿಸಿದರು. ನೀವು ಯಾವ ಸಿಎಂ ಎಂದು ಸಚಿವ ಸಂತೋಷ್ ಲಾಡ್ ಕಾಲೆಳೆದರು. ಹೋಮ್ ಮಿನಿಸ್ಟರ್ ಇದ್ದಲ್ಲೇ ಸಿಎಂ ಎಂದು ಸಂತೋಷ್ ಲಾಡ್ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ರಾತ್ರಿ ಸುರಿದ ಮಳೆಯಿಂದ ಜಿಟಿ ಮಾಲ್ ಹಿಂಭಾಗದ ರಸ್ತೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನೊಂದಿಗೆ ರಾಜಕಾಲುವೆಯ ನೀರು ಸಹ ಮನೆಗೆ ನುಗ್ಗಿದೆ. ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ತಡೆಗೋಡೆ ತೆಗೆದು ಕಾಮಗಾರಿ ಮಾಡಿದ್ದರು. ತಡೆಗೋಡೆ ಒಡೆದು ಮತ್ತೆ ಆಗೇ ಬಿಟ್ಟಿ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಯಲಹಂಕ-ಜಕ್ಕೂರು ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಯಲಹಂಕ-ಜಕ್ಕೂರು ಪ್ರದೇಶದಲ್ಲಿ 113.50 ಮಿಲಿ ಮೀಟರ್ , ಹಂಪಿ ನಗರದ ವ್ಯಾಪ್ತಿಯಲ್ಲಿ 86 ಮಿಲಿ ಮೀಟರ್, ನಾಗಪುರ ಬಡಾವಣೆಯಲ್ಲಿ 82.50 ಮಿಲಿ ಮೀಟರ್, ನಂದಿನಿ ಲೇಔಟ್ನಲ್ಲಿ 70.60 ಮಿ.ಮೀ., ನಾಗೇನಹಳ್ಳಿ 71 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ ವ್ಯಾಪ್ತಿಯಲ್ಲಿ 69.50 ಮಿಲಿ ಮೀಟರ್, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ವ್ಯಾಪ್ತಿಯಲ್ಲಿ 68 ಮಿಲಿ ಮೀಟರ್, ಕೊಟ್ಟಿಗೆಪಾಳ್ಯ 64 ಮಿ.ಮೀ., ಅಗ್ರಹಾರದಾಸರಹಳ್ಳಿ 64 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ನಗರದಲ್ಲಿ ಸುರಿದ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಧಾರಾಕಾರ ಮಳೆಯಿಂದ ನಗರದಲ್ಲಿ ನಾಲ್ಕು ಮರಗಳು ಧರೆಗೆ ಉರುಳಿವೆ. ಬೆಂಗಳೂರು ಪೂರ್ವ ವಲಯ-1, ಮಹದೇವಪುರ ವಲಯ-1, ಬೆಂಗಳೂರು ದಕ್ಷಿಣ ವಲಯದಲ್ಲಿ 2 ಮರಗಳು ಧರೆಗುರುಳಿವೆ. ಏಳು ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಬಂದಿತ್ತು.
ಬೆಂಗಳೂರು: ನಗರದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಗುಡುಗು ಗಾಳಿ ಸಹಿತ ಮೂರು ದಿನಗಳ ಕಾಲ ಭಾರಿ ಮಳೆಯಾಗುತ್ತದೆ ಎಂದು ಹೇಳಿದೆ. ತಗ್ಗುಪ್ರದೇಶದಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.
Published On - 8:01 am, Tue, 7 November 23