ಮನ್ಸೂರ್ ಅಲಿಖಾನ್ ಒಡೆತನದ ಐಎಂಎ ಕಂಪನಿ, ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡು 4000 ಕೋಟಿ ರೂಪಾಯಿ ವಂಚಿಸಿತ್ತು. ಸದ್ಯ ಈಗ ಹಣ ಕಳೆದುಕೊಂಡ ಗ್ರಾಹಕರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಐಎಂಎ ಗ್ರಾಹಕರ ಅಕೌಂಟ್ ಗೆ ಸ್ವಲ್ಪ ಪ್ರಮಾಣದ ಹಣ ಜಮೆ ಮಾಡಲಾಗುತ್ತಿದೆ. ಹೀಗಾಗಿ ನೊಂದ ಗ್ರಾಹಕರೊಬ್ಬರು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಮೈಸೂರಿನಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಧರಣಿ ನಡೆಸಲು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘ ನಿರ್ಧಾರ ಮಾಡಿದೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೃಹತ್ ಧರಣಿ ನಡೆಯಲಿದ್ದು ಧರಣಿ ಬಳಿಕ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲಾಗುತ್ತೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಹಾಸನದಲ್ಲಿರುವ ಹಾಸನಾಂಬ ದೇಗುಲಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳು ಡಿಕೆ ಡಿಕೆ ಎಂದು ಘೋಷಣೆ ಕೂಗಿದರು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರತ್ತ ಕೈ ಬೀಸಿ ದೇಗುಲದೊಳಗೆ ಪ್ರವೇಶಿಸಿದರು. ಅಲ್ಲಿ ಶಿವಕುಮಾರ್ ಅವರು ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ.
ರಾಜ್ಯದಲ್ಲಿ ಆಪರೇಷನ್ ಹಸ್ತ ಮುಂದುವರಿದಿದ್ದು, ಜೆಡಿಎಸ್ನ ಇಬ್ಬರು ಮಾಜಿ ಶಾಸಕರಿಗೆ ಗಾಳ ಹಾಕಿದೆ. ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್ ಹಾಗೂ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿ ಶಂಕರ್ ಅವರು ನವೆಂಬರ್ 15 ರಂದು ಕಾಂಗ್ರೆಸ್ ಸೇರ್ಪಡೆಗೆ ನಿರ್ಧಾರ ಮಾಡಲಾಗಿದೆ. ಹಲವು ದಿನಗಳಿಂದ ಪಕ್ಷ ಸೇರ್ಪಡೆ ಮಾತುಕತೆ ನಡೆಯುತ್ತಿತ್ತು. ಅಂತಿಮವಾಗಿ ಕಾಂಗ್ರೆಸ್ ಸೇರ್ಪಡೆಗೆ ಇಬ್ಬರು ಮಾಜಿ ಶಾಸಕರು ನಿರ್ಧಾರ ಮಾಡಿದ್ದಾರೆ.
ಹಾಸನ ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಮಳೆ ನಡುವೆಯೂ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆಯುತ್ತಿದ್ದಾರೆ. ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಹಾಸನ : ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರು ಹಾಸನಾಂಬೆ ದೇವಿ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಈಗಷ್ಟೇ ಕೆಲವು ಕಡೆ ಮಳೆಯಾಗುತ್ತಿದೆ. ರೈತ ನೆಮ್ಮದೆಯಾಗಿದ್ದರೆ ಇಡೀ ದೇಶ ಸಮೃದ್ದಿಯಾಗಿರುತ್ತದೆ. ಲೋಕಸಭಾ ಚುನಾವಣೆ ಬರುತ್ತಿದೆ. ದೇಶದ ರಕ್ಷಣೆಗಾಗಿ ಮತ್ತೊಮ್ಮೆ ಮೋದಿಯವರು ಪ್ರಧಾನಿ ಆಗಬೇಕು ಅನ್ನೋದು ನಮ್ಮಅಪೇಕ್ಷೆ. ಮೋದಿಯವರಿಗೆ ಆಯುರ್, ಆರೋಗ್ಯ ಕೊಡಲಿ ಎಂದು ದೇವಿಯಲ್ಲಿ ಬೇಡಿದ್ದೇನೆ. ಮುಂದಿನ ಐದು ವರ್ಷ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಸಚಿವ ಸಂಪುಟ ಸಭೆ ಮುಗಿಸಿ ವಿಧಾನಸೌಧದಿಂದ ಸಿಎಂ ಸಿದ್ದರಾಮಯ್ಯ ತೆರಳಿದರು. ಈ ವೇಳೆ ಯಡಿಯೂರಪ್ಪ ಬರ ಪ್ರವಾಸದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, “ಯಡಿಯೂರಪ್ಪ ಪ್ರಧಾನಿ ಭೇಟಿ ಮಾಡೋಕೆ ಹೇಳು” ಅಂತ ಹೇಳಿ ಹೊರಟು ಹೋದರು.
ವಿಜಯಪುರ: ಬರಗಾಲದ ನಡುವೆ ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಸಂಜೆ ಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಮೆಕ್ಕೆ ಜೋಳಗಳ ಕೃಷಿಗೆ ಹಾನಿಯಾಗಿದೆ. ಕಳ್ಳಕವಟಗಿ, ಘೋಣಸಗಿ ಹಾಗೂ ಇತರೆ ಗ್ರಾಮಗಳಲ್ಲಿ ಮೆಕ್ಕ ಜೋಳ ಹಾನಿಯಾಗಿದ್ದು, ಬರದ ಮಧ್ಯೆ ಬೆಳೆದಿದ್ದ ಮೆಕ್ಕೆಜೋಳ ಹಾನಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ರೈತರು ಒತ್ತಾಯಿಸಿದ್ದಾರೆ.
ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿ ಪಕ್ಷಕ್ಕೆ ಸೆಳೆಯುವಾಗ ಜಾಮೂನು ಕೊಡ್ತಾರೆ, ನಂತರ ವಿಷ ಕೊಡುತ್ತಾರೆ.. ಇದನ್ನು ಬಿಜೆಪಿಯವರೇ ಹೇಳಿದ್ದು. ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು! ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಸತ್ಯ ವಲಸಿಗರಿಗೆ ಅರಿವಾಗಿದೆ, ಮುಂದೆ ಕುಮಾರಸ್ವಾಮಿಯವರಿಗೂ ಅರಿವಾಗಲಿದೆ.. ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿ ಪಕ್ಷಕ್ಕೆ ಸೆಳೆಯುವಾಗ ಜಾಮೂನು ಕೊಡ್ತಾರೆ, ನಂತರ ವಿಷ ಕೊಡುತ್ತಾರೆ..
ಇದನ್ನು ಬಿಜೆಪಿಯವರೇ ಹೇಳಿದ್ದು.ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು!
ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಸತ್ಯ ವಲಸಿಗರಿಗೆ ಅರಿವಾಗಿದೆ, ಮುಂದೆ…
— Karnataka Congress (@INCKarnataka) November 9, 2023
ವಿದ್ಯಾರ್ಥಿ ವೇತನ ಬಿಡುಗಡೆಮಾಡದ ರಾಜ್ಯ ಸರ್ಕಾರದ ವಿರುದ್ಧ ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಡಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲಾಗಿದೆ. ಆದರೂ ಸರ್ಕಾರ ವೇತನ ಬಿಡುಗಡೆಗೊಳಿಸಿಲ್ಲ. ಬಡ, ರೈತರ ಮಕ್ಕಳ ವಿದ್ಯಾಭ್ಯಾಸ ಕಸಿದುಕೊಳ್ಳುವ ಯತ್ನ ನಡೆಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಲಾಯಿತು. ಬಳಿಕ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಎಬಿವಿಪಿ ಮನವಿ ಸಲ್ಲಿಸಿತು.
ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಬರ ಅಧ್ಯಯನ ಪ್ರವಾಸ ವೇಳೆ ಬಿಜೆಪಿ ನಾಯಕರು ಪರಸ್ಪರ ಕೈಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ. ಬಿಜೆಪಿ ಎಂಎಲ್ಸಿ ಆ.ದೇವೇಗೌಡ, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಜಯರಾಂ ನಡುವೆ ವೈಯಕ್ತಿಕ ವಿಚಾರವಾಗಿ ಗಲಾಟೆ ನಡೆದಿದ್ದು, ಕೋಟ ಶ್ರೀನಿವಾಸ ಪೂಜಾರಿ ಎದುರೇ ಬೈದಾಡಿಕೊಂಡಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಜಗಳ ಬಿಡಿಸಿದ್ದಾರೆ.
ಅಕ್ರಮ ಕೋವಿಡ್ ಟೆಸ್ಟ್ ಮೂಲಕ ನೂರಾರು ಕೋಟಿ ಅವ್ಯವಹಾರ ಆರೋಪ ಸಂಬಂಧ ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಐಸಿಎಂಆರ್ಗೆ ಆಮ್ ಆದ್ಮಿ ಪಕ್ಷ ದೂರು ನೀಡಿದೆ. ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯಗೆ ಪತ್ರದ ಮೂಲಕ ಎಎಪಿ ದೂರು ನೀಡಿದೆ. ಕಿದ್ವಾಯಿ ಗ್ರಂಥಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ. ರಾಮಚಂದ್ರ ಹಾಗೂ ಬಿಎಂಸಿ ಸಂಸ್ಥೆಯ ಮಾಲೀಕ ಎಸ್.ಪಿ. ರಕ್ಷಿತ್ ಮೇಲೆ ಕೂಡಾ ದೂರು ನೀಡಿದೆ. ಅಲ್ಲದೆ, ಕೂಡಲೇ ಕಿದ್ವಾಯಿ ಸ್ಮಾರಕ ಗ್ರಂಥಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಆರೋಪಿತ ಬಿಎಂಸಿ ಸಂಸ್ಥೆಯ ನಡುವಿನ ಒಪ್ಪಂದ ಪತ್ರ ರದ್ದುಗೊಳಿಸಬೇಕು. ಹಗರಣದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪ್ರಭಾವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ತಪ್ಪಿತಸ್ಥರ ಆಸ್ತಿ ಮುಟ್ಟುಗೋಲನ್ನು ಹಾಕಿಕೊಳ್ಳುವ ಮೂಲಕ ಅಕ್ರಮ ನೂರಾರು ಕೋಟಿ ರೂಪಾಯಿಗಳನ್ನು ವಸೂಲು ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ಕಿಯೋನಿಕ್ಸ್ ಅವ್ಯವಹಾರದ ಬಗ್ಗೆ ನಾವು ತನಿಖೆ ಮಾಡಿಸುತ್ತೇವೆ. ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಪ್ರತಿಯೊಂದು ಕಾನೂನು ಪ್ರಕಾರವೇ ಮಾಡಲು ಹೊರಟಿದ್ದೇವೆ.ಎಜಿ ರಿಪೋರ್ಟ್ ಪ್ರಕಾರ 500 ಕೋಟಿ ಅವ್ಯವಹಾರ ನಡೆದಿದೆ. ಪೇಮೆಂಟ್ ಮಾಡಿ ಅಂತಾ ಬಿಜೆಪಿ ಹೇಳೋದು ಇದಕ್ಕೇನಾ? ಪರಿಶೀಲನೆ ಮಾಡದೆ ನಾವು ಬಿಲ್ ಕೊಡಬೇಕಾ? ನಮ್ಮದು ಆಳುವ ಸರ್ಕಾರ ಅಲ್ಲ, ಆಲಿಸುವ ಸರ್ಕಾರ. ತನಿಖೆಯಲ್ಲಿ ಅಕ್ರಮ ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೆಇಎ ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ತಪ್ಪಿಸಿಕೊಂಡಿರುವ ಆರ್ಡಿ ಪಾಟೀಲ್ ಕುರಿತು ಮಾತನಾಡಿದ ಮಾಜಿ ಗೃಹಸಚಿವ, ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಎಲ್ಲಾ ಪರೀಕ್ಷೆಗಳಲ್ಲೂ ಆರ್.ಡಿ.ಪಾಟೀಲ್ ಅಕ್ರಮ ಮಾಡಿದ್ದಾನೆ. ನಮ್ಮ ಸರ್ಕಾರ ಇದ್ದಾಗ ಹೆಡೆಮುರಿ ಕಟ್ಟಿ ಅರೆಸ್ಟ್ ಮಾಡಿದ್ದೆವು. ಬಳಿಕ ಜಾಮೀನಿನ ಮೇಲೆ ಆರ್.ಡಿ.ಪಾಟೀಲ್ ಹೊರ ಬಂದಿದ್ದ. ಈಗ R.D.ಪಾಟೀಲ್ ತಪ್ಪಿಸಿಕೊಂಡು ಹೋಗಲು ಬಿಟ್ಟಿದ್ಯಾರು? ಪೊಲೀಸರ ಕೈವಾಡವಿಲ್ಲದೆ ಆತ ತಪ್ಪಿಸಿಕೊಂಡು ಹೋಗಲು ಆಗಲ್ಲ. ಆರ್.ಡಿ.ಪಾಟೀಲ್ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ನಿಂತಿದ್ದಾರೆ. ಪರೀಕ್ಷಾ ಕೇಂದ್ರ ಸೆಲೆಕ್ಟ್ ಮಾಡುವುದು ಸಹ ಆರ್.ಡಿ.ಪಾಟೀಲ್. ಇಂತಹ ವ್ಯಕ್ತಿಗಳಿಗೆ ರಕ್ಷಣೆ ಕೊಡುವುದು ಕಾಂಗ್ರೆಸ್ ಸರ್ಕಾರದವರು. ಪೊಲೀಸರ ವಿರುದ್ಧವೂ ತನಿಖೆ ಮಾಡಲಿ ಎಂದರು.
ಜಾತಿ ಗಣತಿ ವರದಿ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಅದರ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ ಎಂದಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ಎನ್. ಮಂಜುಶ್ರೀ ನೇಮಕಗೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರಿಗೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.
ಬೆಂಗಳೂರು: ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ ಪ್ರಯತ್ನ ವಿಚಾರವಾಗಿ ಮಾತನಾಡಿದ ಸಂಸದ ಡಿಕೆ ಸುರೇಶ್, ಬಿಜೆಪಿಗೆ ಆಪರೇಷನ್ ಬಿಟ್ಟರೆ ಬೇರೆ ಏನಾದರೂ ಗೊತ್ತಿದೆಯಾ? ಜನರಿಗೆ ಏನು ಬೇಕೋ ಅದನ್ನು ಮಾಡುವುದು ಬಿಜೆಪಿಗೆ ಗೊತ್ತಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಇವತ್ತು ಕೆಲಸ ಇಲ್ಲದೆ ಕೂತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರಿಗೆ ಆಘಾತ ಆಗಿದೆ. ಆಘಾತ ತಪ್ಪಿಸಿಕೊಳ್ಳಲು ಆಪರೇಷನ್ ಕಮಲದ ಹೆಸರು ಹೇಳುತ್ತಿದ್ದಾರೆ ಎಂದರು. ವಿಪಕ್ಷ ನಾಯಕರು ಇದ್ದಾರೋ ಇಲ್ವೋ ಅವರಿಗೆ ಬಿಟ್ಟಿದ್ದು. ಆದರೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು ನಮ್ಮ ತಟ್ಟೆಯಲ್ಲಿ ಜಿರಳೆ ಹುಡಿಕಿದೇ ನಾವೇನು ಮಾಡಲು ಆಗುತ್ತದೆ ಎಂದರು.
ಚುನಾವಣಾ ರಾಜಕೀಯದಿಂದ ಡಿ.ವಿ.ಸದಾನಂದಗೌಡ ನಿವೃತ್ತಿ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಸದಾನಂದಗೌಡ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಂಸದ ಡಿ.ವಿ.ಸದಾನಂದಗೌಡಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಪಕ್ಷದ ಕೆಲಸಗಳಲ್ಲಿ ಸಕ್ರಿಯರಾಗಿ ಇರಲು ಹೈಕಮಾಂಡ್ ಹೇಳಿದೆ. ಚುನಾವಣೆಗೆ ನಿಲ್ಲದಂತೆ ಸದಾನಂದಗೌಡಗೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿಸಿದರು.
ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ. ವಿಧಾನಸೌಧ ಅಥವಾ ಫ್ರೀಡಂಪಾರ್ಕ್ನಲ್ಲಿ ಸತ್ಯಾಗ್ರಹ ಮಾಡ್ತೇನೆ. ನಾಳೆ ಸತ್ಯಾಗ್ರಹದ ದಿನಾಂಕ ನಿಗದಿ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಭೀಕರ ಬರದಿಂದ ಕಂಗಾಲಾದ ರೈತರಿಗೆ ಗದಗ ಜಿಲ್ಲಾಡಳಿತ ಶಾಕ್ ಕೊಟ್ಟಿದೆ. ಸರ್ಕಾರದಿಂದ ಬೆಳೆ ವಿಮೆ ಹಣ ಬಂದ್ರೂ ರೈತರಿಗೆ ನೀಡದೆ ಸಾಯಿಸುತ್ತಿದೆ. ಫಸಲು ಭೀಮಾ ಯೋಜನೆಯಡಿ 35 ಕೋಟಿ ರೂ. ಬಿಡುಗಡೆ ಆಗಿತ್ತು. ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಜಿಲ್ಲಾಡಳಿತದಿಂದ ಬರೆ. ರಾಜ್ಯದಲ್ಲೇ ಗದಗ ಜಿಲ್ಲೆಗೆ ಅತಿಹೆಚ್ಚು 35 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ ಎನ್ನುವಂತಾಗಿದೆ ರೈತರ ಸ್ಥಿತಿ. ಬಿಡುಗಡೆಯಾಗಿ ತಿಂಗಳಾದ್ರೂ ರೈತರ ಖಾತೆಗೆ ಹಣ ಬಂದಿಲ್ಲ. ಗದಗ ಜಿಲ್ಲಾಡಳಿತದ ವಿರುದ್ಧ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದಲ್ಲಿ ಇರುವುದು ಅಸಮರ್ಥ ಸರ್ಕಾರ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ. ಬರ ಇದ್ದರೂ ಯಾವುದೇ ಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿಲ್ಲ. ಗ್ಯಾರಂಟಿ ಯೋಜನೆಯ ಜಾಹೀರಾತಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 41,630 ಹೆಕ್ಟೇರ್ ಭತ್ತ ಒಣಗಿ ಹೋಗಿದೆ. ಬರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ 192 ಕೋಟಿ ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರ ಈ ಬಾರಿ ಪರಿಹಾರ ಮೊತ್ತವನ್ನೂ ಕಡಿತಗೊಳಿಸಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ರೌಂಡ್ಸ್ ಹಾಕಿ ಸ್ಥಗಿತಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ. ಹೊಸಕೆರೆಹಳ್ಳಿ ಭಾಗದಲ್ಲಿ ಸ್ಥಗಿತಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ. ಬಿಎಸ್ವೈಗೆ ಶಾಸಕರಾದ ಅಶ್ವತ್ಥ್ ನಾರಾಯಣ, ಮುನಿರತ್ನ ಸಾಥ್ ನೀಡಿದರು.
ಕೃಷಿ ಭೂಮಿಗೆ ಖಾತಾ ಪೋಡಿ ಮಾಡಿಕೊಡಲು $28 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹದೇವಪುರ ಆರ್ಐ ವಸಂತ್ ಅವರು ಬೆಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರ್ಐ ವಸಂತ್ ಅವರು ಈಗಾಗಲೇ 3.5 ಲಕ್ಷ ಹಣ, 4 ಲಕ್ಷದ ಚೆಕ್ ಪಡೆದಿದ್ದಾರೆ. ನಿನ್ನೆ ಸಂಜೆ 4 ಲಕ್ಷ ರೂ. ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ವಸಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ವಸಂತ್ ಮನೆಯಲ್ಲಿದ್ದ 9 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ತುಮಕೂರು ತಾಲೂಕಿನ ಕೋರಾ ಬಳಿಯ ರಾ.ಹೆ.48ರಲ್ಲಿ ಕ್ರೂಸರ್ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಗಂಗಾವತಿ ಮೂಲದ ಶಂಕರ್(35), ಸತೀಶ್(40) ಮೃತರು. ಅಪಘಾತದಲ್ಲಿ ಮತ್ತೋರ್ವನಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ಗೆ ಕೂದಲು ಸಿಲುಕಿ ಮಹಿಳೆ ಮೃತಪಟ್ಟಿದ್ದಾರೆ. ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ 33 ವರ್ಷದ ಶ್ವೇತಾ ಮೃತ ದುರ್ದೈವಿ. ಗ್ರೈಂಡರ್ಗೆ ಜಡೆ ಸಿಲುಕಿ ಮಹಿಳೆಯ ತಲೆ ಕಟ್ ಆಗಿದೆ. ಇನ್ನುಳಿದವರು ಗ್ರೈಂಡರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹರುವನಹಳ್ಳಿ ಗ್ರಾಮದ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದೆ. ದುಷ್ಕರ್ಮಿಗಳು ಜೋಳದ ಹೊಲದ ಸುತ್ತಲೂ ತಂತಿ ಅಳವಡಿಸಿದ್ದರು. ವಿದ್ಯುತ್ ತಂತಿ ಸ್ಪರ್ಶಿಸಿ 24 ವರ್ಷದ ಗಂಡು ಆನೆ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಡಿಸಿಎಫ್ ಯಶಪಾಲ್ ಕ್ಷೀರಸಾಗರ, ಎಸಿಎಫ್ ವೀರೇಶ್ ಭೇಟಿ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ ಹಿನ್ನಲೆ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ್ ರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. ಜೇಷ್ಠತೆ ಇಲ್ಲದ ಅರ್ಜಿಗಳ ಪರಿಗಣನೆ ಹೆಚ್ಚುವರಿ ಮೊತ್ತ ಸಹಾಯಧನ ಪಾವತಿ ಮಾಡಿದ ಆರೋಪ ರಮೇಶ್ ಮೇಲಿದೆ. ಕಾರ್ಮಿಕ ಆಯುಕ್ತರ ಕಚೇರಿ ನೀಡಿದ ವರದಿ ಅನ್ವಯ ಸರ್ಕಾರ ಅಮಾನತು ಮಾಡಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಯೊಬ್ಬರಿಗೆ 9 ಸಾವಿರ ಬದಲು 90 ಸಾವಿರ ಜಮೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೆಲ ಸಂಘಟನೆಯವರು ಸಚಿವ ಸಂತೋಷ್ ಲಾಡ್ ಗೆ ಮನವಿ ಸಹ ಸಲ್ಲಿಸಿದ್ದಾರೆ.
ರಾಜ್ಯಪಾಲ ಗೆಹ್ಲೋಟ್ ಭಾಗಿಯಾಗಿದ್ದ ಸಮಾರಂಭದಲ್ಲೇ ಕಳ್ಳತನ ನಡೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಅಜಿತಾ ಎಂಬುವರ ಪರ್ಸ್ ಅನ್ನು ಕಳ್ಳ ಕದ್ದೊಯ್ದಿದ್ದಾನೆ. ಪಾರ್ಸ್ನಲ್ಲಿ 10 ಸಾವಿರ ಹಣ, ವಜ್ರದ ಕಿವಿಯೋಲೆಗಳಿದ್ದವು ಎಂದು ತಿಳಿದು ಬಂದಿದೆ. ಕಳ್ಳನ ಕೈಚಳಕ ಹೋಟೆಲ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸರ್ವೆ ಮೂಲಕ ಜನರ ನಾಡಿಮಿಡಿತ ತಿಳಿಯಲು ಬಿಜೆಪಿ ಮುಂದಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಥಿತಿಗತಿ ತಿಳಿಯಲು ಮಾಸಿಕ ಸರ್ವೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಖಾಸಗಿ ಸಂಸ್ಥೆಯ ಮೂಲಕ ಸರ್ವೆಗೆ ನಡೆಸಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ಪ್ರತಿಯೊಂದು ಜಿಲ್ಲೆಗೂ ಖಾಸಗಿ ಸರ್ವೆ ಟೀಂ ರವಾನೆ ಮಾಡಲಾಗಿದ್ದು ಪ್ರತಿ ತಿಂಗಳ 3ನೇ ವಾರದ ಬಳಿಕ ಸರ್ವೆ ವರದಿ ತಿಳಿಸಲು ಸೂಚನೆ ನೀಡಲಾಗಿದೆ.
ಕೆಇಎ ಪರೀಕ್ಷೆ ಅಕ್ರಮದ ಆರೋಪಿ R.D.ಪಾಟೀಲ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಕಲಬುರಗಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ. ಈ ಹಿಂದೆ ಕಲಬುರಗಿ ಜಿಲ್ಲಾ 1ನೇ ಸತ್ರ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ರುದ್ರಗೌಡ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದ. ಹೊರಗಡೆ ಇದ್ದುಕೊಂಡೇ ಜಾಮೀನು ಪಡೆಯಲು ಯತ್ನಿಸುತ್ತಿದ್ದಾನೆ. ಇಂದು ಜಾಮೀನು ಸಿಗದಿದ್ರೆ ಕೋರ್ಟ್ಗೆ ರುದ್ರಗೌಡ ಶರಣಾಗುವ ಸಾಧ್ಯತೆ ಇದೆ.
ಮನ್ಸೂರ್ ಅಲಿಖಾನ್ ಒಡೆತನದ ಐಎಂಎ ಕಂಪನಿ, ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಜನರಿಗೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡು 4000 ಕೋಟಿ ರೂಪಾಯಿ ವಂಚಿಸಿತ್ತು. ಸದ್ಯ ಈಗ ಹಣ ಕಳೆದುಕೊಂಡ ಗ್ರಾಹಕರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಐಎಂಎ ಗ್ರಾಹಕರ ಅಕೌಂಟ್ ಗೆ ಸ್ವಲ್ಪ ಪ್ರಮಾಣದ ಹಣ ಜಮೆ ಮಾಡಲಾಗುತ್ತಿದೆ. ಹೀಗಾಗಿ ನೊಂದ ಗ್ರಾಹಕರೊಬ್ಬರು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
Published On - 8:03 am, Thu, 9 November 23