Karnataka Breaking News Updates: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಇಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಿದ್ದಂತೆ ವಿಜಯೇಂದ್ರ ಬೆಂಬಲಿಗರು ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಮೇಲೆ ಕಣ್ಣಿಟಿದ್ದಾರೆ. ಇನ್ನೊಂದೆಡೆ, ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮನೆಯ ದೀಪಾಲಂಕಾರಕ್ಕೆ ಬೀದಿದೀಪಾಗಳ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಕುಮಾರಸ್ವಾಮಿ ಅವರ ಟೀಕೆಗಳನ್ನು ಎದುರಿಸಿದ ಕಾಂಗ್ರೆಸ್ (Congress) ನಾಯಕರ ಕೈಗೆ ಅಸ್ತ್ರ ಸಿಕ್ಕಿದಂತಾಗಿದೆ. ಬೆಂಗಳೂರಿನ ಜೆಡಿಎಸ್ (JDS) ಕಚೇರಿಯ ಗೋಡೆಗಳಿಗೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂಬ ಪೋಸ್ಟರ್ಗಳನ್ನು ಅಂಟಿಸಿ ವ್ಯಂಗ್ಯವಾಡಲಾಗುತ್ತಿದೆ. ಬೆಂಗಳೂರಿನ ಬನಶಂಕರಿ ಕಾಂಪ್ಲೆಕ್ಸ್ ಸುತ್ತಮುತ್ತ ಇಂದು ಜೆಸಿಬಿ ಮೂಲಕ ಅನಧಿಕೃತವಾಗಿ ರಸ್ತೆ ಬದಿ ಹಾಕಿರುವ ಅಂಗಡಿಗಳ ತೆರವು ಕಾರ್ಯ ನಡೆಯಲಿದೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಾಸಕ ವಿಜಯೇಂದ್ರ ಯಡಿಯೂರಪ್ಪ ನಾಳೆ ಸಂಜೆ 6.00 ಗಂಟೆಗೆ ಐ.ಟಿ.ಸಿ. ಗಾರ್ಡೇನಿಯ ಹೋಟೆಲ್‍ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಯನ್ನು ಕರೆದಿದ್ದು, ಈ ಸಭೆಯಲ್ಲಿ ಕೇಂದ್ರದ ವೀಕ್ಷಕರು ಭಾಗವಹಿಸಲಿದ್ದಾರೆ.
ವಿಶೇಷ ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ಕ್ಯಾಬಿನೆಟ್ ಅಸಮಾಧಾನ ವ್ಯಕ್ತವಾಗಿದೆ. ಕಳೆದ 5 ವರ್ಷಗಳಲ್ಲಿ 172 ಪ್ರಕರಣಗಳಲ್ಲಿ ಈವರೆಗೆ ಪ್ರಾಥಮಿಕ ತನಿಖೆ ಆಗಿಲ್ಲ. ಅದಿರು ಮೌಲ್ಯ ಮಾಪನ ವರದಿ ಕೂಡ ಇದುವರೆಗೆ ಸರಿಯಾಗಿ ಸಲ್ಲಿಕೆ ಆಗಿಲ್ಲ. ವಿಶೇಷ ತನಿಖಾ ತಂಡದ ಅವಧಿ ಇನ್ನೂ 8 ತಿಂಗಳ ವಿಸ್ತರಣೆ ಮಾಡಲಾಗಿದೆ. ತ್ವರಿತಗತಿಯಲ್ಲಿ ತನಿಖಾ ವರದಿ ನೀಡುವಂತೆ ಸಚಿವ ಸಂಪುಟ ಸೂಚನೆ ಮಾಡಲಾಗಿದೆ.
ನಗರಾಭಿವೃದ್ಧಿ ಇಲಾಖೆಯಿಂದ ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ 4ಜಿ ಎಕ್ಸೆಂಪ್ಶನ್ ಮಾಡಲಾಗಿದೆ. 188 ನಗರಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ. ಇದಕ್ಕಾಗಿ 154 ಕೋಟಿ ರೂ. ನೀಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಚೀಲಗಳ ಖರೀದಿಗೆ 76 ಕೋಟಿ ರೂ. ಅನುದಾನ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಬಿಳಿ ಜೋಳ, ರಾಗಿ ಖರೀದಿ ಸಂಗ್ರಹಕ್ಕೆ 80 ಲಕ್ಷ ಗೋಣಿ ಚೀಲಗಳ ಹಂತ ಹಂತವಾಗಿ ಖರೀದಿಗೆ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ.
ಬರ ಪರಿಹಾರ ಕಾರ್ಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕೇಂದ್ರದಿಂದ ಇದುವರೆಗೆ ಯಾವುದೇ ಅನುದಾನ ಬಂದಿಲ್ಲ. ಈ ಬಗ್ಗೆ ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಿಡಿಎನ ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಅವರಿಗೆ ಹಂಚಿಕೆ ಆಗಿದ್ದ ಬಿಡಿಎ ಸೈಟ್ ಮಾರಾಟಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಸೋಮಣ್ಣ, ಬಸವರಾಜ ಬೊಮ್ಮಾಯಿ ನಾವೆಲ್ಲ ಒಟ್ಟಿಗೆ ಇದ್ದವರು. ವೈಯಕ್ತಿಕವಾಗಿ ಪ್ರೀತಿ ಇದೆ, ಆದರೆ ರಾಜಕೀಯವಾಗಿ ಬೇರೆ ಇದೆ ಎಂದು ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೊಮ್ಮಾಯಿ ತಂದೆ ರಾಜಕೀಯವಾಗಿ ನನಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ.
ಬೆಂಗಳೂರು: ರಾಜಭವನಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಭೇಟಿ ನೀಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜೊತೆ ಮಾತುಕತೆ ಮಾಡಿದ್ದಾರೆ.
ಎಲ್ಲರ ಒಪ್ಪಿಗೆ ಪಡೆದು ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮನೆಮನೆಗೆ ತಲುಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ಮುನಿಸ್ವಾಮಿ ಹೇಳಿದ್ದಾರೆ. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಧ್ಯಕ್ಷರಾಗಿರುವುದು ಸಂತೋಷ. ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿರುವುದರಿಂದ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಕೆಲ ಸೆಕೆಂಡ್ ಲೈನ್ ನಾಯಕರನ್ನು ಅವರ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಸೇರ್ಪಡೆ ಕಾರ್ಯಕ್ರಮ ಎಂದು ಹೇಳುತಿದ್ದಾರೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ಮುನಿಸ್ವಾಮಿ ಹೇಳಿದ್ದಾರೆ.
ಯತೀಂದ್ರ ಮಾತನಾಡಿದ್ದು ಸಿಎಸ್‌ಆರ್ ಫಂಡ್ ಬಗ್ಗೆ ಎಂದಿದ್ದ ಸಿಎಂ ಸಿದ್ದರಾಮಯ್ಯ ಇದೀಗ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಯತೀಂದ್ರ ವಿಡಿಯೋ ಆರೋಪಕ್ಕೆ ಸಾಕ್ಷಿ ಸಮೇತ ಹೆಚ್‌ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
ಪಕ್ಷದ ಹಿರಿಯರು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ಆಶ್ಚರ್ಯ ಸಂಗತಿ ಅಂತಾ ಭಾವಿಸುವೆ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಯಾರು ಏನೇ ಟೀಕೆ, ಆರೋಪ ಮಾಡಿದರೂ ತಲೆಕೆಡಿಸಿಕೊಳ್ಳಬಾರದು. ಬಸವಣ್ಣನವರು ಹೇಳಿದಂತೆ ಯಾರಾದರೂ ನಿಂದಿಸಿದರೆ ಖುಷಿಪಡಬೇಕು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜನಪರ ಕೆಲಸಗಳತ್ತ ಗಮನ ಹರಿಸಬೇಕು ಎಂದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಹೊಸದಾಗಿ ಮತ್ತೊಂದು ಟೋಲ್ ಪ್ಲಾಜಾ ಆರಂಭವಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಹೊಸ ಟೋಲ್ ಆರಂಭಗೊಳ್ಳಲಿದ್ದು, ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್ ಬರೆ ಎಳೆಯಲಿದೆ.
ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡಿದ್ದು ತಪ್ಪು ಅಲ್ವಾ? ಇದನ್ನು ಮುಚ್ಚಿಕೊಳ್ಳಲು ಯತೀಂದ್ರ ವಿಡಿಯೋ ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಯತೀಂದ್ರ ಎಲ್ಲಿಯಾದರೂ ವರ್ಗಾವಣೆ ವಿಚಾರ ಮಾತಾಡಿದ್ದಾರಾ? ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆಗಾಗಿ ಹಣ ಪಡೆದಿಲ್ಲ. ಹಣ ಪಡೆದಿದ್ದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದರು.
ನಿನ್ನೆ ಬಿ.ವೈ. ವಿಜಯೇಂದ್ರ ಪದಗ್ರಹಣಕ್ಕೆ ಗೈರಾಗಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಬೆಲ್ಲದ್ ಅಸಮಾಧಾನಗೊಂಡಿದ್ದಾರೆ.
ಸಿಎಂ ಪುತ್ರ ಯತೀಂದ್ರ ವೀಡಿಯೋ ವೈರಲ್ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾದ ಈ ರೀತಿ ಆರೋಪ ಸಹಜ. ಯಾವುದೇ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಕೇವಲ ಹಿಟ್ ಆ್ಯಂಡ್ ರನ್ ರೀತಿ ಆರೋಪಗಳು. ಯಾವುದೇ ಒಂದು ಭ್ರಷ್ಟಾಚಾರದ ಬಗ್ಗೆ ಆಧಾರ ಸಹಿತ ಆರೋಪ ಮಾಡುವ ಕೆಲಸಗಳಾಗುತ್ತಿಲ್ಲ. 40 ಕೋಟಿ ಹಣದ ಬಗ್ಗೆ ಬಿಜೆಪಿಯವರು ಆರೋಪ ಮಾಡಿದ್ದರು. ಅದರ ಬಗ್ಗೆ ಆಧಾರ ನೀಡಿ. ಕೇವಲ ಮಾದ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳಿಂದ ಆರೋಪ ಮಾಡುತ್ತಾರೆ. ಯತೀಂದ್ರ ಅವರ ವೀಡಿಯೋ ಪ್ರಕರಣದ ಬಗ್ಗೆ ಸುಖಾಸುಮ್ಮನೇ ಆರೋಪ ಮಾಡೋದು ಸರಿಯಲ್ಲ. ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋದು ಸ್ಷಷ್ಟವಾಗಿ ಆರೋಪ ಮಾಡಲಿ ಎಂದರು.
ವರ್ಗಾವಣೆ ಬಗ್ಗೆ ಸಿಎಂ ಪುತ್ರ ಯತೀಂದ್ರ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಯಾವ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೋ ಗೊತ್ತಿಲ್ಲ. ಇದಕ್ಕೆ ಸ್ಪಷ್ಟೀಕರಣ ಕೊಡಬೇಕಾಗತ್ತೆ, ಯಾವ ಸಂದರ್ಭದಲ್ಲಿ ಮಾತನಾಡಿದ್ದು ಏನು ಅಂತ ಇದರಲ್ಲಿ ಎಷ್ಟು ರಿಯಾಲಿಟಿ ಇದೆ ನೋಡಬೇಕು. ನಂತರ ಸಂಬಂಧ ಪಟ್ಟವರು ಸ್ವಷ್ಟನೆ ಕೊಡುತ್ತಾರೆ. ಕುಮಾರಸ್ವಾಮಿಯವರ ಆರೋಪಕ್ಕೆ ನಾನು ಉತ್ತರ ಕೊಡಲು ಆಗಲ್ಲ. ಸಂಬಂಧ ಪಟ್ಟವರು ಅದಕ್ಕೆ ಸ್ಪಷ್ಟೀಕರಣ ಕೊಡಬೇಕಾಗುತ್ತದೆ. ಅದು ನನ್ನ ಇಲಾಖೆ ಅಲ್ಲ ನನಗೆ ಸಂಬಂಧಪಟ್ಟ ವಿಚಾರ ಇಲ್ಲ ಎಂದರು.
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಮಠಕ್ಕೆ ಬಿ.ವೈ. ವಿಜಯೇಂದ್ರ ಭೇಟಿ ನೀಡಿದ್ದಾರೆ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಗಳನ್ನ ಭೇಟಿಯಾಗಿ ಆಶಿರ್ವಾದ ಪಡೆದಿದ್ದಾರೆ. ಸ್ಥಳೀಯ ಮುಖಂಡರು ವಿಜಯೇಂದ್ರರನ್ನ ಅದ್ದೂರಿಯಾಗಿ ಸ್ವಾಗತ ಮಾಡಿದರು.
ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಆದರೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಪರ ಹೆಚ್.ಡಿ.ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ. ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಅಧಿಕಾರ ಇದ್ದಾಗ ಕೆಲಸ ಮಾಡಬೇಕೆಂದು ಹೇಳ್ತಾರೆ, ಇದು ತಪ್ಪಾ? ಯತೀಂದ್ರ ಶಾಸಕರಾಗಿದ್ದರು, ಕೆಲಸ ಆಗಬೇಕೆಂದು ಹೇಳಿರಬಹುದು. ಯತೀಂದ್ರ ಮುಖ್ಯಮಂತ್ರಿ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದೆಕ್ಕಲ್ಲಾ ನಾನು ಸಣ್ಣದಾಗಿ ಮಾತನಾಡಲು ಹೋಗಲ್ಲ. ಹೆಚ್ಡಿಡಿ PWD ಸಚಿವರಾಗಿದ್ದಾಗ ನಾನು ಅವರ ಕ್ಷೇತ್ರ ನೋಡಿಕೊಳ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತಾಡಿರುತ್ತಾರೆ ಎಂದು ಹಾಸನದಲ್ಲಿ ಯತೀಂದ್ರ ಪರ JDS ಶಾಸಕ ಹೆಚ್.ಡಿ.ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ.
ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಮಾಜಿ ಶಾಸಕ ಡಾ.ಯತೀಂದ್ರಗೆ ಫೋನ್ ಕರೆ ಮಾಡಿದ್ದು ಯಾರು? ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ? ವಿವೇಕಾನಂದ ಯಾರು?, ನಾಲ್ಕೈದು ಲಿಸ್ಟ್ ಕೊಟ್ಟಿದ್ದು ಏನು? ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಫೋನ್ ಮಾಡಿ ಕೇಳಿದ್ಯಾರು? ಅದು ಸಿಎಂ ಪರಿಹಾರ ನಿಧಿಯ ಹೆಸರುಗಳು? ಒಬ್ಬ ಮುಖ್ಯಮಂತ್ರಿ ಫೋನ್ ಮಾಡಿ ಲಿಸ್ಟ್ ಬಗ್ಗೆ ಮಾತಾಡುತ್ತಾರೆ. ಯಾರು ಮಹದೇವ?, ಯಾರು ಲೇಬರ್ ಇನ್ಸ್ಪೆಕ್ಟರ್ ಅವನು? ಆರ್.ಮಹದೇವ್ ಅವರದ್ದು ವಿಶೇಷ ಕರ್ತವ್ಯ ಏನು? ಸಾರ್ವಜನಿಕವಾಗಿ ಈ ರೀತಿಯಾದರೆ 4 ಗೋಡೆ ಮಧ್ಯೆ ಇನ್ನೇನು ಆಗುತ್ತಿದೆ? ಸಿಎಂ ಕೆಲಸ ಅಂದರೆ ಮಗನಿಗೆ ಫೋನ್ ಮಾಡಿ ಕೇಳಬಹುದಾ? ಸಾರ್ವಜನಿಕರ ಹಣ ಲೂಟಿ ಮಾಡಿ ಎಂದು ಅಧಿಕಾರ ಕೊಟ್ಟಿದ್ದಾರಾ? ಫೋನ್ ಮಾಡಿ ಹೇಳಿದ್ದಾರಲ್ಲ ಅದರ ದಾಖಲೆ ಬಿಡುಗಡೆ ಮಾಡಿ. ಯಾವ ಶಾಲೆಗಳ ಸಿಎಸ್‌ಆರ್ ಫಂಡ್ ಅಂತಾ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಯತೀಂದ್ರ ಅವರು ಮಾತನಾಡಿದ್ದು ಸಿಎಸ್‌ಆರ್ ಫಂಡ್ ಬಗ್ಗೆ ಎಂದು ಸಿಎಂ ಮತ್ತು ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ತಿರುಗೇಟು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯದ CSR ಫಂಡಿದ್ದೋ? ವರುಣ ಕ್ಷೇತ್ರದ್ದೋ? ಎಂದು ಕೇಳಿದ್ದಾರೆ. ಸಿಎಸ್‌ಆರ್ ಫಂಡ್ ಆಗಿದ್ದರೆ ವರುಣ ಕ್ಷೇತ್ರದ ಬಿಇಓ ಕಳಿಸಿರಬೇಕಲ್ಲ. ಮೈಸೂರು ಡಿಡಿಪಿಐ ಲಿಸ್ಟ್ ಇರಬೇಕಲ್ಲ ಹೊರಗೆ ಇಡಿ ಅದನ್ನ. ಪಾಪ ಸಿಎಂ ಕಚೇರಿಗೆ ಬಂದು ಅದನ್ನ ಮಗನಿಗೆ ಕೇಳಿಕೊಂಡು ಮಾಡಬೇಕಾ? ಇಷ್ಟು ಭಂಡತನ ಬೇಡ. ಹಿಂದೆ ನಿಮ್ಮ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈಗ ಹಳೆಯ ಸಿದ್ದರಾಮಯ್ಯ ಅಲ್ಲ ಅಂತ ನಿಮ್ಮವರೇ ಹೇಳುತ್ತಿದ್ದಾರೆ ಎಂದರು.
ಮೈಸೂರು: ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡುತ್ತಾ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಶಾಸಕ ಡಾ.ಅಶ್ವತ್ಥ ನಾರಾಯಣ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಶ್ವಥ್ ನಾರಾಯಣ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗುತ್ತಿದೆ. ಹುಚ್ಚ ಅಶ್ವತ್ಥ ನಾರಾಯಣ್ ಎಂಬ ಪ್ಲೇ ಕಾರ್ಡ್ ಹಿಡಿಯಲಾಗಿದೆ. ಅಶ್ವಥ್ ನಾರಾಯಣ್ ರವರು ಡಾ ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ವರ್ಗಾವಣೆ ದಂಧೆ ಇರುವುದು ಬಿಜೆಪಿಯಲ್ಲಿ. ಕಾಂಗ್ರೆಸ್ ಆಗಲಿ ಯತೀಂದ್ರ ಸಿದ್ದರಾಮಯ್ಯರಾಗಲಿ ಯಾವುದೇ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ. ಅಶ್ವಥ್ ನಾರಾಯಣ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು ಅದು ಸಿಗಲಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡಿದರೆ ವಿಪಕ್ಷ ನಾಯಕನನ್ನಾಗಿ ಮಾಡುತ್ತಾರೆ ಎಂದು ಲೋಕೇಶ್ ಪಿಯಾ ಹೇಳಿದರು.
ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ವಿಡಿಯೋ ವೈರಲ್ ವಿಚಾರವಾಗಿ ತೀರ್ಥಹಳ್ಳಿಯಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಏನು ಮಾತನಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ಆಗಬೇಕು. ಯಾರ ಜೊತೆ ಮಾತನಾಡಿದ್ದಾರೆ. ಯಾರಿಗೆ ನಿರ್ದೇಶನ ಕೊಡ್ತಿದ್ದಾರೆ ಅಂತಾ ತನಿಖೆ ಆಗಬೇಕು. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರಿಗೆ ಹಕ್ಕು ಇದೆ. ಅವರ ಮಗ ಅದರಲ್ಲಿ ಮೂಗು ತೂರಿಸಿದ್ದಾರೆ ಅಂದರೆ ರಾಜ್ಯದ ಜನರ ಅರಿವಿಗೆ ಬರಬೇಕು. ಈ ಬಗ್ಗೆ ತನಿಖೆ ಆಗಬೇಕು. ಏನಾಗಿದೆ ಅಂತಾ ಸಿದ್ದರಾಮಯ್ಯ ರಾಜ್ಯದ ಜನರಿಗೆ ತಿಳಿಸಬೇಕು. ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳು ಆದರೂ ಸಿದ್ದರಾಮಯ್ಯ ಅಭಿವೃದ್ಧಿಗೆ 6 ಪೈಸೆ ಕೊಡಲಿಲ್ಲ. ಆರು ತಿಂಗಳಲ್ಲಿ ಇಷ್ಟು ಕೆಟ್ಟ ಹೆಸರು ತೆಗೆದುಕೊಂಡ ಇನ್ನೊಂದು ಸರಕಾರ ಇಲ್ಲ. 136 ಸೀಟ್ ಬಂದಿದೆ ತಾವು ಏನು ಮಾಡಿದರೂ ನಡೆಯುತ್ತದೆ ಅಂತಾ ನಡೆಸಿದರೆ ಖಂಡಿತವಾಗಿ ಆಗುವುದಿಲ್ಲ. ಬಿಜೆಪಿ ಸರಕಾರ ಇದ್ದಾಗ 40% ಸರಕಾರ ಅಂತಾ ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದರು. ಈಗ ಇವರು ಮಾಡುತ್ತಿರುವುದು ಏನು? ತೀವ್ರವಾದ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲದರಲ್ಲು ಮೂಗು ತೂರಿಸೋದು
ಆಡಳಿತದ ವೈಖರಿಯೇ ಇಲ್ಲ. ಖಂಡಿತವಾಗಿ ಇದು ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು. ನಿಜವಾದರೆ ಇದು ಸರಕಾರ ತಲೆ ತಗ್ಗಿಸುವ ವಿಚಾರ ಎಂದರು.
ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಆರ್. ಅಶೋಕ, ಯತೀಂದ್ರ ಬೆಳವಣಿಗೆ ಇವತ್ತಿಂದಲ್ಲ. ಸರ್ಕಾರ ಬಂದಾಗಿಲಿನಿಂದ ಸಿಎಂ ಅಧಿಕಾರವನ್ನು ಯತೀಂದ್ರ ಚಲಾಯಿಸುತ್ತಿರುವುದು ಜಗಜ್ಜಾಹೀರಾಗಿದೆ. ಈಗ ಬಂದಿರುವ ವೀಡಿಯೋ 10ನೇಯದ್ದೋ 15ನೇಯದ್ದೋ ಇರಬೇಕು. ಕಾಂಗ್ರೆಸ್ ಅಂದರೆ ಈ ರೀತಿ ದಂಧೆ ಮಾಡುವುದರಲ್ಲಿ ಎಕ್ಸ್ಪರ್ಟ್. ವೀಡಿಯೋ ಬಗ್ಗೆ ತನಿಖೆಯಾಗಬೇಕು, ಸಿಎಂ ರಾಜೀನಾಮೆ ಕೊಡಬೇಕು. ಏನು ಆದೇಶ ಮಾಡುತ್ತಾರೋ ಅದನ್ನು 100% ಫಾಲೋ ಮಾಡಲ್ಲ. ವರ್ಗಾವಣೆ ಮಾಡಬಾರದು ಅಂತಾ ಆದೇಶ ಮಾಡುತ್ತಾರೆ, ಆದರೆ ಸಾವಿರಾರು ವರ್ಗಾವಣೆ ಮಾಡಿದ್ದಾರೆ. ದಿನನಿತ್ಯ ಇದೇ ದಂಧೆ ಆಗಿಬಿಟ್ಟಿದೆ ಎಂದರು.
ವಿಜಯಪುರ: ಬಿಜೆಪಿ ಹಾಗೂ ಜೆಡಿಎಸ್ನಿಂದ ಮಾಜಿ ಶಾಸಕರು ಹಾಗೂ ಮುಖಂಡರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ಬಿಜೆಪಿಯಿಂದ ಹಾಗೂ ಜೆಡಿಎಸ್ನಿಂದಲೂ ಕಾಂಗ್ರೆಸ್ಗೆ ಬರುತ್ತಾರೆ. ಕಾದುನೋಡಿ ಲೋಕಸಭಾ ಚುನಾವಣೆ ವೇಳೆಗೆ ಎಲ್ಲಾ ಸ್ವಚ್ಛವಾಗುರುತ್ತದೆ ಎಂದರು. ಬಹಳಷ್ಟು ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದಾಗ ಅಂಕಿ ಸಂಖ್ಯೆ ಬಗ್ಗೆ ಮಾಹಿತಿ ನೀಡಿ ಎಂದು ಮಾಧ್ಯಮದವರು ಕೇಳಿದರು. ಇದಕ್ಕೆ ಎಂಬಿ ಪಾಟೀಲರು, ಬಹಳಷ್ಟು ಜನರು ಎಂದು ಹೇಳುತ್ತೇವೆ ಎಷ್ಟು ಬೇಕಾದಷ್ಟು ಬರೆದುಕೊಳ್ಳಿ ಎಂದರು.
ಚಿತ್ರದುರ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಜಿಲ್ಲೆಯ ಹಿರಿಯೂರಿಗೆ ಆಗಮಿಸಿದ್ದಾರೆ. ಈ ವೇಳೆ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ವಿಜಯೇಂದ್ರರಿಗೆ ಅದ್ದೂರಿ ಸ್ವಾಗತ ಕೋರಿದರು. ಬೃಹತ್ ಹೂವಿನ ಹಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇಂದು ಜಿಲ್ಲಾ ಪ್ರವಾಸ ಕೈಗೊಂಡಿರುವ ವಿಜಯೇಂದ್ರ, ಹಲವು ಮಠಗಳಿಗೆ ಭೇಟಿ ನೀಡಲಿದ್ದಾರೆ.
ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಯತೀಂದ್ರ ವಿಚಾರದ ಬಗ್ಗೆ ಮಾಹಿತಿ ಗೊತ್ತಿಲ್ಲ. ಎಲ್ಲಾ ಸರ್ಕಾರಗಳಲ್ಲೂ ವರ್ಗಾವಣೆಗಳು ನಡೆಯುವುದು ಸಹಜ. ಕುಮಾರಸ್ವಾಮಿ ಆರೋಪದಂತೆ ವರ್ಗಾವಣೆ ದಂಧೆ ಅನ್ನೋದು ನಡೆಯುತ್ತಿಲ್ಲ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
ಲಿಸ್ಟ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ನನಗೆ ಆ ಬಗ್ಗೆ ಗೊತ್ತಿಲ್ಲ, ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡುತ್ತೇನೆ. ವಿಡಿಯೋ ಮಾಧ್ಯಮದವರದ್ದು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ. ಈ ಹಿಂದೆ ನಂದೇ ಧ್ವನಿಯನ್ನು ಮಹಾರಾಷ್ಟ್ರದ ಒಬ್ಬ ಮಿಮಿಕ್ರಿ ಮಾಡಿದ್ದ. ಆಗ ಆತನನ್ನು ಅರೆಸ್ಟ್ ಮಾಡಿಸಿದ್ದೆವು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ, ಬದಲಾವಣೆ ಮಾಡಬಹುದು ಎಂದರು.
ನಾನು ನೀಡಿದ ಲಿಸ್ಟ್ನದ್ದು ಮಾತ್ರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಯತೀಂದ್ರ ಸಿದ್ದರಾಮಯ್ಯ ಸೂಚಿಸಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ. ಡಾ.ಯತೀಂದ್ರ ಒಬ್ಬ ಮಾಜಿ ಎಂಎಲ್‌ಎ, ಖಾಲಿ ಮನುಷ್ಯ ಅಲ್ಲ. ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧಿಸಿದ್ದರಿಂದ ಅವರು ನಿಲ್ಲಲು ಆಗಿಲ್ಲ. ಮೈಸೂರು ಜಿಲ್ಲೆ, ಪಕ್ಷದಲ್ಲಿ ಡಾ.ಯತೀಂದ್ರ ಪ್ರಮುಖ ನಾಯಕ. ಮಾಜಿ ಶಾಸಕರು ಕೆಲಸ ಮಾಡುವುದನ್ನು ತಪ್ಪು ಅನ್ನೋಕೆ ಆಗುತ್ತಾ? ವಿಡಿಯೋದಲ್ಲಿ ಯಾವ ವಿಚಾರದ ಬಗ್ಗೆ ಅವರು ಹೇಳಿದರೋ ಗೊತ್ತಿಲ್ಲ. ಯಾರು ಆ ವಿಡಿಯೋ ಕಟ್ ಆ್ಯಂಡ್ ಪೇಸ್ಟ್ ಮಾಡಿದರೋ ಗೊತ್ತಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಕಟ್ ಆ್ಯಂಡ್ ಪೇಸ್ಟ್ ಮಾಡುತ್ತಾರೆ. ಮಾತಾಡಿದ ರೀತಿ ಬೇರೆ ಇರುತ್ತೆ, ತೋರಿಸುವುದೇ ಬೇರೆ ಇರುತ್ತದೆ. ಯತೀಂದ್ರ ಸಾರ್ವಜನಿಕ ಸೇವೆಯಲ್ಲಿ ಇರೋದು ಅಪರಾಧವಲ್ಲ. ವರುಣ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ, ತಪ್ಪೇನಿದೆ? ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆ ಗಮನಕ್ಕೆ ತಂದರೆ ತಪ್ಪೇನು? ಎಂದು ಕೇಳಿದರು.
ಮೈಸೂರು ಮಹಾನಗರ ಪಾಲಿಕೆ ಸದಸ್ಯರ ಅವಧಿ ಇಂದು ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ವಾರ್ಡ್ ಸ್ವಚ್ಚತಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರ ಕಾರ್ಮಿಕರನ್ನು ವಾರ್ಡ್ ನಂಬರ್ 22 ರ ಮಹಾನಗರ ಪಾಲಿಕೆ ಸದಸ್ಯೆ ನಮ್ರತಾ ರಮೇಶ್ ಅವರು ಸನ್ಮಾನ ಮಾಡಿದರು. ತಮ್ಮ ಮನೆಯ ಬಳಿ ಕರೆದು ಶಾಲು ಹೊದಿಸಿ, ಹಾರ ಹಾಕಿ ಸಿಹಿತಿಂಡಿಯ ಜೊತೆಗೆ ತಲಾ ಐದು ಸಾವಿರ ಗೌರವ ಧನ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಬೆಂಗಳೂರಿನ ರಾಜಾಜಿನಗರ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿನ ಡ್ರೈಫ್ರೂಟ್ಸ್ ಅಂಗಡಿಗಳು ಮತ್ತು ಅವುಗಳ ಮಾಲೀಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಒಂಟಿ ಸಲಗೆ ಸೆರೆಯಾಗಿದೆ. ಕಿಲ್ಲರ್ ಒಂಟಿ ಸಲಗ ಬದಲು ಮತ್ತೊಂದು ಒಂಟಿ ಸಲಗ ಸೆರೆಯಾಗಿದೆ. ಏಳು ಸಾಕಾನೆಗಳನ್ನು ಬಳಸಿಕೊಂಡು ಈ ಆನೆಯನ್ನು ಸೆರೆ ಹಿಡಿಯಲಾಗಿದೆ. ಇಬ್ಬರನ್ನ ಬಲಿ ಪಡೆದಿದ್ದ ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.
ಬೆಂಗಳೂರು: ನಗರದ ಬನಶಂಕರಿಯಲ್ಲಿಂದು ಅನಧಿಕೃತ ಬೀದಿ ಬದಿ ಅಂಗಡಿಗಳ ತೆರವು ಕಾರ್ಯಾಚರಣೆ ಬೆಳಿಗ್ಗೆ 9 ಗಂಟೆಯ ನಂತರ ಆರಂಭವಾಗಲಿದೆ. ಬನಶಂಕರಿ ಕಾಂಪ್ಲೆಕ್ಸ್ ಸುತ್ತಮುತ್ತ ನಡೆಯಲಿರುವ ಕಾರ್ಯಾಚರಣೆ ಇದಾಗಿದೆ. ಈಗಾಗಲೇ ಅಧಿಕಾರಿಗಳು ಲಿಸ್ಟ್ ತಯಾರಿಸಿದ್ದಾರೆ. ಮಾರ್ಷಲ್ಸ್ ಸೂಪರ್ ವೈಸರ್ ಸೋಮಶೇಖರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. ನೋಟಿಸ್ ನೀಡಿದರೂ ಅಂಗಡಿ ತೆರವು ಮಾಡದ ಹಿನ್ನಲೆ ಅಂಗಡಿಗಳ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.
ಮೈಸೂರು: ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಅಲಂಕರಿಸುತ್ತಿದ್ದಂತೆ ಆಕ್ಟಿವ್ ಆದ ಬೆಂಬಲಿಗರು ಪ್ರಮುಖ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಾಗಿ ಹಾಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ರಾಜೇಂದ್ರ ಮತ್ತು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಕೌಟಿಲ್ಯ ರಘು ಅವರ ನಡುವೆ ಪೈಪೋಟಿ ಆರಂಭವಾಗಿದೆ. ಇದೇ ರೀತಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಹುದ್ದೆಗಳಿಗೂ ಪೈಪೋಟಿ ಏರ್ಪಟ್ಟಿದೆ. ರಾಜ್ಯಾಧ್ಯಕ್ಷರ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಪದಾಧಿಕಾರಿಗಳ ನೇಮಕ ಕೂಡ ಆಗಲಿದೆ. ಸದ್ಯ ನಗರಧ್ಯಕ್ಷರಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿರುವ ಟಿ ಎಸ್ ಶ್ರೀವತ್ಸ ಸ್ಥಾನ ತುಂಬಲು ತೆರೆ ಮರೆಯಲ್ಲಿ ಹಲವರಿಂದ ಪೈಪೋಟಿ ನಡೆಯುತ್ತಿದೆ. ಒಟ್ಟಾರೆಯಾಗಿ, ಮೈಸೂರು ಜಿಲ್ಲೆಯಲ್ಲಿ ಪ್ರತ್ಯೇಕ ಅಭಿಮಾನಿಗಳ ಪಡೆಯನ್ನೇ ಹೊಂದಿರುವ ವಿಜಯೇಂದ್ರ ಅವರು ತಮ್ಮ ತಂಡದೊಂದಿಗೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಮಾಲ್ ನಡೆಸಲು ತಯಾರಿ ನಡೆಸುತ್ತಿದ್ದಾರೆ.
Published On - 8:09 am, Thu, 16 November 23